ಸೋಮವಾರ, ಮಾರ್ಚ್ 1, 2021
30 °C
ಬಡವರಿಗೆ ಸಾಗುವಳಿ ಪತ್ರ ನೀಡಲು ವಿವಿಧ ಸಂಘಟನೆಗಳ ಕಾರ್ಯಕರ್ತರ ಒತ್ತಾಯ

ಉಪವಾಸ ಸತ್ಯಾಗ್ರಹ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪವಾಸ ಸತ್ಯಾಗ್ರಹ ಅಂತ್ಯ

ಆನೇಕಲ್ : ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿದ್ದು ನಮೂನೆ ೫೦ ಮತ್ತು 53 ಸಲ್ಲಿಸಿರುವ ಬಡರೈತರಿಗೆ ಸಾಗುವಳಿ ಪತ್ರ ನೀಡಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ವತಿಯಿಂದ ಮೂರು ದಿನಗಳಿಂದ ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹ ಶನಿವಾರ ಅಂತ್ಯಗೊಂಡಿತು.ತಹಶೀಲ್ದಾರ್ ಅನಿಲ್‌ಕುಮಾರ್ ಅವರು ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವುದಾಗಿ ಭರವಸೆ ನೀಡಿ ಪ್ರತಿಭಟನಾಕಾರರಿಗೆ ಹಣ್ಣಿನ ರಸ ನೀಡುವ ಮೂಲಕ ಧರಣಿಯನ್ನು ಮುಕ್ತಾಯಗೊಳಿಸಿದರು.ಅಖಿಲ ಭಾರತ ಜೈ ಮದಗ್ನಿ ಸಾತ್ವಿಕರ ರಕ್ಷಣಾ ಸೇನೆ, ಕರ್ನಾಟಕ ಭೂಹೀನರ ಮತ್ತು ವಸತಿ ಹೀನರ ರಕ್ಷಣಾ ಸೇನೆ, ಪ್ರಜಾ ವಿಮೋಚನಾ ಚಳವಳಿ (ಮಾನವತವಾದ), ಬಹುಜನ ಸಮಾಜ ಪಕ್ಷ ಸಂಘಟನೆಗಳ ಸಹಯೋಗದಲ್ಲಿ ಸಾಗುವಳಿ ಪತ್ರ ನೀಡಬೇಕು ಎಂದು ಒತ್ತಾಯಿಸಿ ಮೂರು ದಿನಗಳಿಂದ ನಿರಂತರವಾಗಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಶನಿವಾರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲ್ಲೂಕು ಕಚೇರಿಯ ಮುಂದೆ ರಸ್ತೆ ತಡೆ ನಡೆಸಲಾಯಿತು.ಜೈ ಜಮದಗ್ನಿ ಸಾತ್ವಿಕರ ರಕ್ಷಣಾ ಸೇನೆಯ ಸಂಸ್ಥಾಪಕ ಸಿ.ತೋಪಯ್ಯ ಮಾತನಾಡಿ ತಾಲ್ಲೂಕಿನಲ್ಲಿ 694 ಮಂದಿ ಅರ್ಜಿದಾರರಿಗೆ ಭೂಮಂಜೂರಾತಿ ಸಮಿತಿ ಜಮೀನು ಮಂಜೂರು ಮಾಡಲು ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ. ಆದರೆ ಹಕ್ಕುಪತ್ರ ನೀಡಲು ಅಧಿಕಾರಿಗಳು ಮೀನಾಮೇಷ ಎಣಿಸಿ ಮೇಲಾಧಿಕಾರಿಗಳಿಂದ ಸ್ಪಷ್ಟೀಕರಣ ಮತ್ತಿತರ ಸಬೂಬುಗಳನ್ನು ಹೇಳುತ್ತಾ ಫೈಲುಗಳನ್ನು ಓಡಾಡಿಸುತ್ತಿದ್ದಾರೆ. ನಿಯಮಾನುಸಾರ ಮಂಜೂರು ಮಾಡಿರುವ ಅರ್ಜಿಗಳನ್ನು ವಿಲೇ ಮಾಡುತ್ತಿಲ್ಲ. ಬೆಂಗಳೂರು ನಗರ ದಿಂದ ೧೮ ಕಿ.ಮೀ. ಮಿತಿ ಹಾಕಿ ಯಾವುದೇ ಜಮೀನುಗಳನ್ನು ಮಂಜೂರು ಮಾಡುತ್ತಿಲ್ಲ. ಇಂತಹ ಅರ್ಜಿಗಳು ಸಹ ೭ ಸಾವಿರ ಬಾಕಿ ಉಳಿದಿವೆ.

ಇವುಗಳನ್ನು ಸಹ ವಿಲೇ ಮಾಡಿ ಬಡಜನರಿಗೆ ಭೂಮಿ ಹಕ್ಕು ನೀಡುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಈ ಸಮಸ್ಯೆಯ ಬಗ್ಗೆ ಸ್ಥಳೀಯ ಶಾಸಕರು ಯಾವುದೇ ಕಾಳಜಿ ತೋರುತ್ತಿಲ್ಲ. ಕೂಡಲೇ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರಾಜೀನಾಮೆ ನೀಡಬೇಕು. ಎಂದು ಒತ್ತಾಯಿಸಿದರು.ತಹಶೀಲ್ದಾರ್ ಅನಿಲ್‌ಕುಮಾರ್ ಮನವಿ ಸ್ವೀಕರಿಸಿ ಮಾತನಾಡಿ ಬೆಳಗಾವಿ ಅಧಿವೇಶನದ ನಂತರ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗುವುದು. ಭೂಮಂಜೂರಾತಿ ಸಭೆಯನ್ನು ಕರೆದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಹಾಗಾಗಿ ಉಪವಾಸ ಹಿಂಪಡೆಯಬೇಕು ಎಂದು ಮನವಿ ಮಾಡಿದರು.ಮನವಿಗೆ ಒಪ್ಪಿದ ಪ್ರತಿಭಟನಾಕಾರರು ಹಣ್ಣಿನ ರಸ ಸ್ವೀಕರಿಸುವ ಮೂಲಕ ಮೂರು ದಿನಗಳ ಅಹೋರಾತ್ರಿ ಧರಣಿಯನ್ನು ಮುಕ್ತಾಯ ಮಾಡಿದರು.ಭೂಹೀನರ ಮತ್ತು ವಸತಿ ಹೀನರ ರಕ್ಷಣಾ ಸೇನೆಯ ಅಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ಪ್ರಜಾ ವಿಮೋಚನಾ ಚಳವಳಿ (ಮಾನವತವಾದ) ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆದೂರು ಪ್ರಕಾಶ್, ಬಿಎಸ್‌ಪಿ ತಾಲ್ಲೂಕು ಅಧ್ಯಕ್ಷ ಮುದ್ದುಕೃಷ್ಣ, ತಮ್ಮನಾಯಕನಹಳ್ಳಿ ಆನಂದ್, ಹೊಂಪಲಘಟ್ಟ ರವಿ, ಬಿಜೆಪಿ ತಾಲ್ಲೂಕು ಮಾಜಿ ಅಧ್ಯಕ್ಷ ಕೆ.ಜಯಣ್ಣ, ಕಾಂಗ್ರೆಸ್ ಮಹಿಳಾ ವಿಭಾಗದ ಪದ್ಮ, ಮುಖಂಡರಾದ ಮುನಿತಿಮ್ಮಯ್ಯ, ಶೆಟ್ಟಪ್ಪ, ಸಿ.ಎಲ್.ಅರುಣ್, ಮುನಿಯಲ್ಲಪ್ಪ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.