ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ

7
ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಇಂದು: ಅಧ್ಯಕ್ಷ ಸ್ಥಾನಕ್ಕೆ ಮಹದೇವಮ್ಮ?

ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ

Published:
Updated:

ರಾಯಚೂರು: ರಾಯಚೂರು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸೆ. 6ರಂದು ನಡೆಯಲಿದೆ. ಇದಕ್ಕಾಗಿ ಚುನಾವಣಾಧಿಕಾರಿಗಳು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ.ಏತನ್ಮಧ್ಯೆ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ ಎಂದು ತಿಳಿದಿದೆ.ಮಂಗಳೂರಿನ ಮಹಾನಗರ ಪಾಲಿಕೆ ಅಬ್ದುಲ್ ಎಂಬುವವರು ಅಧ್ಯಕ್ಷ-ಉಪಾಧ್ಯಕ್ಷ ಪಟ್ಟಿ ಮೀಸಲಾತಿ  ಪಟ್ಟಿ ಘೋಷಣೆ ಪ್ರಶ್ನಿಸಿ ತಡೆಯಾಜ್ಞೆ ನೀಡಲು ಮೊರೆ ಹೋಗಿದ್ದರು. ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕೊಡದೇ ಚುನಾವಣೆ ದಿನಾಂಕ ನಿಗದಿಪಡಿಸಿ ಘೋಷಣೆ ಮಾಡಲಾಗಿದೆ ಎಂದು ಪ್ರಶ್ನಿಸಿದ್ದರು.ವಿಚಾರಣೆ ನಡೆಸಿದ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ತಿಳಿದಿದೆ.ಚುನಾವಣಾಧಿಕಾರಿಗಳ ಹೇಳಿಕೆ: ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಬಗ್ಗೆ ಈವರೆಗೂ ಯಾವುದೇ ರೀತಿ ಅಧಿಕೃತ ಮಾಹಿತಿ ಬಂದಿಲ್ಲ(ರಾತ್ರಿ 9.15ರವರೆಗೆ). ಈಗಾಗಲೇ ಚುನಾವಣೆ ದಿನಾಂಕ ಘೋಷಣೆ ಮಾಡಿದಂತೆ ಸೆ. 6ರಂದು ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಯಚೂರು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಮಂಜುಶ್ರೀ `ಪ್ರಜಾವಾಣಿ'ಗೆ ತಿಳಿಸಿದರು.ಸೆ.6ರಂದು ಬೆಳಿಗ್ಗೆ 10ರಿಂದ 11 ಗಂಟೆಯವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುವುದು. 1 ಗಂಟೆಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಹೇಳಿದರು.ಮೀಸಲಾತಿ: ನಗರಸಭೆ ಅಧ್ಯಕ್ಷ ಸ್ಥಾನ `ಎಸ್‌ಟಿ', ಉಪಾಧ್ಯಕ್ಷ ಸ್ಥಾನ ಬಿಸಿಎಂ(ಅ)ಗೆ ನಿಗದಿಗೊಂಡಿದೆ. ನಗರಸಭೆಯ 35 ಸದಸ್ಯರಲ್ಲಿ ಒಬ್ಬರೇ ಒಬ್ಬರು ಎಸ್‌ಟಿ ಸದಸ್ಯರಿದ್ದಾರೆ. ವಾರ್ಡ್ ನಂಬರ್ 6ರ ಸದಸ್ಯೆ ಮಹದೇವಮ್ಮ ಒಬ್ಬರೇ ಎಸ್‌ಟಿ ಸದಸ್ಯರಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಅವರು ಅವಿರೋಧವಾಗಿ ಆಯ್ಕೆಗೊಳ್ಳುವ ನಿರೀಕ್ಷೆ ಇದೆ.ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯ ಪಾಳೆಯದಲ್ಲಿ ಪೈಪೋಟಿ ಹೆಚ್ಚಿದೆ. 22ನೇ ವಾರ್ಡ್ ಸದಸ್ಯೆ ಪದ್ಮಾ ಜಿಂದಪ್ಪ ಹಾಗೂ 15ನೇ ವಾರ್ಡ್ ಸದಸ್ಯೆ ಕಮಲ್‌ಬಿ ಅವರು ಉಪಾಧ್ಯಕ್ಷ ಸ್ಥಾನ ಗಿಟ್ಟಿಸಲು ಪ್ರಯತ್ನ ನಡೆಸಿದ್ದಾರೆ ಎಂದು ನಗರಸಭೆ ಸದಸ್ಯ ವಲಯದಲ್ಲಿ ಮಾತುಗಳು ಕೇಳಿ ಬಂದಿವೆ.ಬಲಾಬಲ: ನಗರಸಭೆ 35 ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್ 14, ಜೆಡಿಎಸ್ 9, ಬಿಜೆಪಿ 7 ಸದಸ್ಯರಿದ್ದಾರೆ.  5 ಜನ ಪಕ್ಷೇತರ ಸದಸ್ಯರಿದ್ದಾರೆ. ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಬಿಜೆಪಿ 7 ಜನ ಸದಸ್ಯರು ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಂತಿದ್ದಾರೆ ಎಂದು ತಿಳಿದಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಪಾಪಾರೆಡ್ಡಿ ಅವರು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ಪಾಪಾರೆಡ್ಡಿ ಬೆಂಬಲಿಗರೆನ್ನಲಾದ 7 ಜನರು ಕಾಂಗ್ರೆಸ್‌ಗೆ ನೆರವಾಗುವ ಲಕ್ಷಣ ಇವೆ ಎಂಬ ಮಾತು ಕೇಳಿ ಬರುತ್ತಿದೆ. 9 ಸದಸ್ಯ ಬಲ ಹೊಂದಿರುವ ಜೆಡಿಎಸ್ ಮತ್ತು ಪಕ್ಷೇತರ 5 ಸದಸ್ಯರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.ಬಿಜೆಪಿ ಅಧ್ಯಕ್ಷರ ಹೇಳಿಕೆ: ಪಕ್ಷದ ಸದಸ್ಯರಿಗೆ ವಿಪ್ ಜಾರಿ ಮಾಡಲಾಗುವುದು. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವ ಪ್ರಶ್ನೆ ಇಲ್ಲ. ಮೀಸಲಾತಿ ನಿಗದಿ ಪ್ರಕಾರ ಬಿಜೆಪಿ 7 ಸದಸ್ಯರಲ್ಲಿ ಆ ಪಂಗಡಕ್ಕೆ ಸೇರಿದ ಸದಸ್ಯರಿಲ್ಲ. ಹೀಗಾಗಿ ಪಕ್ಷೇತರರು ಅಥವಾ ಇನ್ಯಾರಾದರೂ ಆಸಕ್ತಿವಹಿಸಿದರೆ ಪಕ್ಷ ಚಿಂತನೆ ಮಾಡಿ ಬೆಂಬಲ ಸೂಚಿಸಲಿದೆ ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಬಸನಗೌಡ ಬ್ಯಾಗವಾಟ `ಪ್ರಜಾವಾಣಿ'ಗೆ ತಿಳಿಸಿದರು.ಕಾಂಗ್ರೆಸ್ ಸಭೆ: ಕಾಂಗ್ರೆಸ್ ಪಕ್ಷದ ಮುಖಂಡರು ರಾತ್ರಿ ನಗರಸಭೆಯಲ್ಲಿನ ಪಕ್ಷದ ಸದಸ್ಯರ ಸಭೆ ಕರೆದು ಚರ್ಚೆ ನಡೆಸಿದರು. ಒಮ್ಮತ ನಿರ್ಧಾರ ಕೈಗೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry