ಉಪಾಹಾರಕ್ಕೆ ಬಿಜೆಪಿ ಶಾಸಕರಿಗೆ ಬಿಎಸ್‌ವೈ ಆಹ್ವಾನ

7

ಉಪಾಹಾರಕ್ಕೆ ಬಿಜೆಪಿ ಶಾಸಕರಿಗೆ ಬಿಎಸ್‌ವೈ ಆಹ್ವಾನ

Published:
Updated:

ಸುವರ್ಣ ವಿಧಾನಸೌಧ (ಬೆಳಗಾವಿ): ಹಾವೇರಿ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯ ಜನರನ್ನು ಸೇರಿಸುವ ಉದ್ದೇಶದಿಂದ ಯಡಿಯೂರಪ್ಪ ಅವರು ಈ ಭಾಗದ ತಮ್ಮ ಬೆಂಬಲಿಗ ಬಿಜೆಪಿ ಮುಖಂಡರ ಸಭೆಯನ್ನು ಶುಕ್ರವಾರ ಬೆಳಗಾವಿಯಲ್ಲಿ ಕರೆದಿದ್ದಾರೆ. ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿರುವ ಶಾಸಕರು ಮತ್ತು ಸಚಿವರು ಕೂಡ ಈ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.ಶುಕ್ರವಾರ ಬೆಳಿಗ್ಗೆ ಬೆಳಗಾವಿಗೆ ಬರುವ ಯಡಿಯೂರಪ್ಪ ಅವರು ಬಿಜೆಪಿ ಶಾಸಕರನ್ನು ಉಪಾಹಾರಕ್ಕೆ ಆಹ್ವಾನಿಸಿದ್ದಾರೆ. ಹಾವೇರಿ ಸಮಾವೇಶ ಯಶಸ್ಸಿಗೆ ಪರೋಕ್ಷವಾಗಿ ಹೇಗೆ ಸಹಕರಿಸಬೇಕು ಎಂಬುದರ ಬಗ್ಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಬಿಜೆಪಿ ಶಾಸಕರು ಸಮಾವೇಶದ ವೇದಿಕೆಗೆ ಬರುವುದು ಬೇಡ ಎಂದು ಅವರೇ ಹೇಳಿದ್ದಾರೆ. ಆದರೆ, ಅಂದು ಬೆಳಿಗ್ಗೆ ತಮ್ಮ ಬೆಂಬಲಿಗ ಸಚಿವರು ಮತ್ತು ಶಾಸಕರಿಗೆ ವಿಧಾನ  ಪರಿಷತ್ ಸದಸ್ಯ ಶಿವರಾಜ್ ಸಜ್ಜನ್ ಅವರ ಹಾವೇರಿ ನಿವಾಸಕ್ಕೆ ಉಪಾಹಾರಕ್ಕೆ ಬರಬೇಕು ಎನ್ನುವ ಸಂದೇಶ ರವಾನಿಸಿದ್ದಾರೆ. ಇವರ ನಿವಾಸದಲ್ಲಿ 40- 50 ಮಂದಿ ಶಾಸಕರು ಸೇರಿದರೆ ಅದೇ ದೊಡ್ಡ ಯಶಸ್ಸು ಆಗಲಿದೆ ಎನ್ನುವುದು ಯಡಿಯೂರಪ್ಪ ಅವರ ಯೋಚನೆ. ಇದಕ್ಕೆ ಪೂರಕವಾಗಿ ಅವರ ಬೆಂಬಲಿಗರು ಶಾಸಕರನ್ನು ಆಹ್ವಾನಿಸಲು ಆರಂಭಿಸಿದ್ದಾರೆ.ಯಡಿಯೂರಪ್ಪ ಅವರ ಈ ತೀರ್ಮಾನದ ಹಿಂದೆ ಎರಡು ರೀತಿಯ ಸಂದೇಶ ನೀಡುವ ಉದ್ದೇಶ ಇದೆ ಎನ್ನಲಾಗಿದೆ. ತಮಗೆ ಹೆಚ್ಚಿನ ಸಂಖ್ಯೆಯ ಶಾಸಕರ ಬೆಂಬಲ ಇದೆ ಎಂಬ ಸಂದೇಶವನ್ನು ಇಡೀ ರಾಜ್ಯಕ್ಕೆ ನೀಡುವುದು. ಜಗದೀಶ ಶೆಟ್ಟರ್ ಸರ್ಕಾರವನ್ನು ಪದಚ್ಯುತಗೊಳಿಸುವ ಉದ್ದೇಶ ತಮಗೆ ಇಲ್ಲ ಎಂಬುದನ್ನು ತೋರ್ಪಡಿಸುವುದು.ಬಿಜೆಪಿ ಪ್ರತಿ ತಂತ್ರ: ಯಡಿಯೂರಪ್ಪ ಏನೇ ತಂತ್ರ ರೂಪಿಸಿದರೂ ಅದಕ್ಕೆ ಪ್ರತಿತಂತ್ರ ರೂಪಿಸಲು ಬಿಜೆಪಿ ಸಿದ್ಧತೆ ನಡೆಸಿದೆ.ಕೆಜೆಪಿ ಸಮಾವೇಶಕ್ಕೆ ಹೋಗದೆ, ಕೇವಲ ಶಿವರಾಜ್ ಸಜ್ಜನ್ ಅವರ ನಿವಾಸಕ್ಕೆ ಉಪಾಹಾರಕ್ಕೆ ಹೋದರೂ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಸಜ್ಜನ್ ಅವರ ನಿವಾಸಕ್ಕೆ ಹೋದರೂ ಕೆಜೆಪಿ ಸಮಾವೇಶಕ್ಕೆ ಹೋದಂತೆಯೇ. ಅಂತಹವರ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆ ಸದಾನಂದ ಗೌಡ ಸೇರಿದಂತೆ ಇತರರು ದೆಹಲಿಯಲ್ಲಿ ನಡೆಯುವ ಪ್ರಮುಖರ ಸಭೆಯಲ್ಲಿ ಆಗ್ರಹಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry