ಉಪ್ಪಳದಲ್ಲಿ ದಲಿತರಿಗೆ ಬಹಿಷ್ಕಾರಕ್ಕೆ ಖಂಡನೆ:ಡಿಎಸ್‌ಎಸ್ ಧರಣಿ ಸತ್ಯಾಗ್ರಹ

ಬುಧವಾರ, ಜೂಲೈ 24, 2019
27 °C

ಉಪ್ಪಳದಲ್ಲಿ ದಲಿತರಿಗೆ ಬಹಿಷ್ಕಾರಕ್ಕೆ ಖಂಡನೆ:ಡಿಎಸ್‌ಎಸ್ ಧರಣಿ ಸತ್ಯಾಗ್ರಹ

Published:
Updated:

ಸಿಂಧನೂರು: ತಾಲ್ಲೂಕಿನ ಉಪ್ಪಳ ಗ್ರಾಮದಲ್ಲಿ ಸವರ್ಣಿಯರು ಅಸ್ಪೃಶ್ಯತೆಯನ್ನು ಆಚರಿಸಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವುದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರು ಬುಧವಾರ ಸಮಾಜ ಕಲ್ಯಾಣಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.ಗ್ರಾಮದಲ್ಲಿನ ದಲಿತರ ಮೇಲೆ ಸವರ್ಣಿಯವರು ಕಳೆದ ಹಲವು ವರ್ಷಗಳಿಂದ ಜಾತಿ ನಿಂದನೆ, ದೌರ್ಜನ್ಯದಂದಹ ಕೃತ್ಯಗಳನ್ನು ಎಸಗುತ್ತಿದ್ದಾರೆ. ಅದರಂತೆ ಈಚೆಗೆ ದಲಿತ ವ್ಯಕ್ತಿ ಗ್ರಾಮದ ಹೊಟೇಲ್‌ಗೆ ಹೋಗಿ ಟೀ ಕೊಡುವಂತೆ ಕೇಳಿದಾಗ ಆತನಿಗೆ ಜಾತಿ ನಿಂದನೆ ಮಾಡಿದ್ದಾರೆ.ಅಲ್ಲದೆ ಸವರ್ಣಿಯರು ಸಭೆ ಸೇರಿ ದಲಿತರಿಗೆ ಸಾರ್ವಜನಿಕ ಸ್ಥಳಗಳಾದ ದೇವಸ್ಥಾನ, ಹೊಟೇಲ್, ಕ್ಷೌರದ ಅಂಗಡಿ ಪ್ರವೇಶ ನಿಷೇಧಿಸಿದ್ದಾರೆ. ಕುಡಿಯಲು ನೀರು, ಅಗತ್ಯ ಕಿರಾಣಿ ವಸ್ತುಗಳು, ದುಡಿಯಲು ಕೆಲಸ ನಿರಾಕರಿಸುವ ಮೂಲಕ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಕಾರಣ ಇವೆಲ್ಲದರಿಂದ ದಲಿತರನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾನೂನು ಕ್ರಮ ಜರುಗಿಸುವಂತೆ ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಅಶೋಕ ನಂಜಲದಿನ್ನಿ ಒತ್ತಾಯಿಸಿದರು.ಗ್ರಾಮದ ದಲಿತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು, ಸಾಮಾಜಿಕ ಬಹಿಷ್ಕಾರ ವಿಧಿಸಿದ ಸವರ್ಣಿಯರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು, ಗ್ರಾಮದ ದಲಿತ ಕೇರಿಯನ್ನು ಸ್ಥಳಾಂತರಗೊಳಿಸಿ ಸೂಕ್ತ ಪುನರ್ವಸತಿ ಕಲ್ಪಿಸಬೇಕು, ದಲಿತರು ಹೈನುಗಾರಿಕೆ ಮಾಡಲು ಸಾಲ ಮಂಜೂರು ಮಾಡಬೇಕು, ವಸತಿ ನಿವೇಶ, ಉದ್ಯೋಗ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.ಸಮಿತಿಯ ತಾಲ್ಲೂಕು ಅಧ್ಯಕ್ಷ ಬಸವರಾಜ ಕಂದಗಲ್, ಕಾರ್ಯದರ್ಶಿ ಬಸವರಾಜ ಬುಕ್ಕನಹಟ್ಟಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮರಿಸ್ವಾಮಿ ಪೂಜಾರಿ, ಉಪ್ಪಳ ಗ್ರಾಮ ಘಟಕದ ಗೌರವಾಧ್ಯಕ್ಷ ಹುಲಿಗಯ್ಯ ಉಪ್ಪಳ, ಅಧ್ಯಕ್ಷ ದೊಡ್ಡಹುಲಿಗಯ್ಯ, ಕಾರ್ಯದರ್ಶಿ ಯಲ್ಲಪ್ಪ ಮತ್ತಿತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry