`ಉಪ್ಪಿಟ್ಟು ಫೇವರಿಟ್ಟು'

7

`ಉಪ್ಪಿಟ್ಟು ಫೇವರಿಟ್ಟು'

Published:
Updated:

ಅಮ್ಮ ಒತ್ತಾಯ ಮಾಡಿದರೆ ಮಾತ್ರ ನಾಲ್ಕು ತುತ್ತು ಊಟ ಮಾಡುತ್ತಾರಂತೆ ಈ ನೀಳಕಾಯದ ಸುಂದರಿ. ಹೆಸರು ಮೈತ್ರಿಯಾ.

`ಅದೇಕೋ ನನಗೆ ಊಟದ ಮೇಲೆ ವ್ಯಾಮೋಹ ಇಲ್ಲ. ಅದೇ ನನ್ನ ಮೈಕಟ್ಟು ನಿರ್ವಹಣೆಯಲ್ಲಿ ನೆರವಾಗುತ್ತಿರಬಹುದು' ಎಂದು ನುಡಿಮುತ್ತು ಉದುರಿಸುವ ಈ ಸಹಜ ಸುಂದರಿಗೆ ಉಪ್ಪಿಟ್ಟು ಫೇವರಿಟ್ಟು.



`ಮಧ್ಯರಾತ್ರಿಯಲ್ಲಿ ಎಬ್ಬಿಸಿ ಕೊಟ್ಟರೂ ಉಪ್ಪಿಟ್ಟು ತಿಂದು ಮಲಗುವೆ. ಕೆಲವರಿಗೆ ಅದನ್ನು ಕಂಡರೆ ವಾಕರಿಕೆ. ಅದ್ಯಾಕೋ ಗೊತ್ತಿಲ್ಲ ನನಗಂತೂ ಉಪ್ಪಿಟ್ಟು ಇಷ್ಟ' ಎನ್ನುತ್ತಾರವರು. `ಸೂರ್ಯ ದಿ ಗ್ರೇಟ್' ಅವರ ಮೊದಲ ಚಿತ್ರ. ನಾಯಕಿಯಾಗಿಯೇ ಬಣ್ಣ ಹಚ್ಚಬೇಕು ಎಂಬ ನಿರ್ಧಾರಕ್ಕೆ ಬದ್ಧವಾಗಿ ಚೂಸಿಯಾಗಿರುವ ಅವರು ಇದೀಗ `ಟೋಪಿವಾಲಾ' ಚಿತ್ರದ ಎರಡನೇ ನಾಯಕಿಯ ಸ್ಥಾನ ತುಂಬಿದ್ದಾರೆ. 5.8 ಅಡಿ ಎತ್ತರದ ಮೈತ್ರಿಯಾ ಮಾಡೆಲಿಂಗ್ ಲೋಕದಲ್ಲೂ ಸುತ್ತುತ್ತಿದ್ದಾರೆ. ಬಳಕುವ ಬಳ್ಳಿಯಂತೆ ಇರುವ ಅವರಿಗೆ ತಮ್ಮ ಚೆಲುವಿನ ಬಗ್ಗೆ ಹೆಮ್ಮೆ. ಯಾಕೆಂದರೆ ಅತಿಯಾಗಿ ತಿನ್ನಲು ಅವರ ಮನಸ್ಸು ಒಲ್ಲದು. ಅತಿಯಾಗಿ ದಂಡಿಸಲು ಅವರ ದೇಹ ಬಿಡದು. ಇಷ್ಟು ಸಲೀಸಾಗಿ ಯೋಗ್ಯ ಮೈಕಟ್ಟು ನಿರ್ವಹಿಸುತ್ತಿರುವ ಮೈತ್ರಿಯಾ ಅದೃಷ್ಟವಂತೆ. 



`ಜಂಕ್‌ಫುಡ್, ಎಣ್ಣೆಯಲ್ಲಿ ಕರಿದ ಆಹಾರಗಳು ತಿನ್ನಲು ಇಷ್ಟವಾಗುವುದೇ ಇಲ್ಲ. ಇನ್ನು ನಿಯಂತ್ರಿಸಲು ಹೇಗೆ ಸಾಧ್ಯ?' ಎಂದು ಪ್ರಶ್ನಿಸುವ ಈ ಜಾಣೆ ಪ್ರತಿದಿನ ಚಪಾತಿ- ಬೆಂಡೆಕಾಯಿ ಪಲ್ಯ ತಿನ್ನುತ್ತಾರಂತೆ. ಜೊತೆಗೆ ರಾಗಿಮುದ್ದೆ ಅವರ ಮೆಚ್ಚಿನ ಆಹಾರ. ಯಾಕೆಂದರೆ ಅವರೂರು ಮಂಡ್ಯದ ನಾಗಮಂಗಲ. ಏನನ್ನೇ ತಿಂದರೂ ಮಿತವಾಗಿ ತಿನ್ನುವ ಮೈತ್ರಿಯಾಗೆ ಊಟ ನಿಯಂತ್ರಣ ಕಷ್ಟ ಎನಿಸಿಲ್ಲ.



`ನಮ್ಮದು ಮಾಂಸಾಹಾರ ಪದ್ಧತಿ ರೂಢಿಯಲ್ಲಿರುವ ಕುಟುಂಬ. ಕೆಲವೊಮ್ಮೆ ಮಾಂಸಾಹಾರ ಸೇವಿಸಬೇಕಾದ ಸಂದರ್ಭ ಬರುತ್ತದೆ. ಆಗ ನಾನು ಮಾರನೇ ದಿನ ಕಡಿಮೆ ಆಹಾರ ತಿಂದು ಸರಿದೂಗಿಸುತ್ತೇನೆ' ಎನ್ನುತ್ತಾರೆ.



ಕಟ್ಟುಮಸ್ತು ದೇಹ ಹೊಂದಿರುವ ಅವರು ಕಟ್ಟುನಿಟ್ಟು ವ್ಯಾಯಾಮ ರೂಢಿಸಿಕೊಂಡವರಲ್ಲ. `ನಾನು ಪ್ರತಿದಿನ ಮನೆಯಲ್ಲಿಯೇ ಅರ್ಧ ಗಂಟೆ ಥ್ರೆಡ್‌ಮಿಲ್ ಮೇಲೆ ಓಡ್ತೀನಿ. ಸೂರ್ಯ ನಮಸ್ಕಾರ ಮಾಡ್ತೀನಿ. ಅದು ಬಿಟ್ಟರೆ ಬೇರೆ ಯಾವ ವ್ಯಾಯಾಮವನ್ನೂ ಮಾಡುವುದಿಲ್ಲ. ಜಿಮ್ ಕಡೆ ತಿರುಗಿ ಕೂಡ ನೋಡಲ್ಲ. ಯಾಕೆಂದರೆ ಈಗ ರೂಢಿಸಿಕೊಂಡಿರುವುದಕ್ಕಿಂತ ಕೊಂಚ ಹೆಚ್ಚು ವ್ಯಾಯಾಮ ಮಾಡಿದರೂ ತೆಳ್ಳಗಾಗಿ ಬಿಡ್ತೀನಿ. ನನ್ನ ದೇಹ ಪ್ರಕೃತಿಯೇ ಹಾಗೆ. ಸಣ್ಣಗಾದರೆ ನನ್ನ ಕೆನ್ನೆಗಳು ಒಳಗೆ ಹೋಗಿ ಬಿಡುತ್ತವೆ. ನಾನು ಚೆನ್ನಾಗಿ ಕಾಣಲ್ಲ' ಎಂದು ನುಡಿಯುತ್ತಾರೆ. ಹೀಗೆ ಅತಿಯಾಗಿ ದೇಹ ದಂಡಿಸದೆ ಮೋಹಕ ಮೈಮಾಟದ ಒಡತಿಯಾಗಿದ್ದಾರೆ ಮೈತ್ರಿಯಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry