ಮಂಗಳವಾರ, ಏಪ್ರಿಲ್ 20, 2021
31 °C

ಉಪ್ಪಿನಂಗಡಿ-ಕಡಬ ರಸ್ತೆ ಡಾಂಬರೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡಬ (ಉಪ್ಪಿನಂಗಡಿ): ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಸ್ತೆ 45 ವರ್ಷಗಳ ಬಳಿಕ ಮರು ಡಾಂಬರೀಕರಣಗೊಂಡು ವ್ಯವಸ್ಥಿತ ರಸ್ತೆ ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ಧವಾಗುತ್ತಿದೆ.  ರಸ್ತೆ ಈ ತಿಂಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ. ಈ ಭಾಗದ ಜನತೆಯ ನಾಲ್ಕು ದಶಕಗಳ ಬೇಡಿಕೆ ಈಡೇರಿದೆ. ಈ ಮೂಲಕ ನಾಗರಿಕರಲ್ಲಿ, ವಾಹನ ಚಾಲಕ-ಮಾಲಿಕರಲ್ಲಿ ಸಂತಸದ ನಗೆ ಬೀರತೊಡಗಿದೆ. ಎರಡೂವರೆ ವರ್ಷದ ಹಿಂದೆ ಆರಂಭಗೊಂಡ ಮೊದಲ ಹಂತದಲ್ಲಿ ಕೆಮ್ಮಾರದಿಂದ-ನೆಕ್ಕರೆವರೆಗೆ ರೂ. 9.5 ಕೋಟಿ ಮೊತ್ತದ ಕೆಲಸ ನಡೆದಿತ್ತು. ಬಳಿಕ ನೆಕ್ಕರೆ-ಮರ್ಧಾಳ ವರೆಗೆ16 ಕಿ.ಮೀಗೆ ರೂ.16 ಕೋಟಿ. ಹೀಗೆ ಒಟ್ಟು 29 ಕಿಮೀ ರಸ್ತೆಗೆ  25.5 ಕೋಟಿ ರೂಪಾಯಿ ಕಾಮಗಾರಿಯನ್ನು ಪವಿತ್ರ ಕನ್‌ಸ್ಟ್ರಕ್ಷನ್‌ನ ಬಲರಾಜ್ ಗುತ್ತಿಗೆ ವಹಿಸಿಕೊಂಡು ನಿರ್ವಹಿಸುತ್ತಿದ್ದಾರೆ. ಉಳಿದಂತೆ ಮರ್ಧಾಳದಿಂದ ಕೈಕಂಬ 12 ಕಿ.ಮೀ ರಸ್ತೆಯನ್ನು ರೂ.4.95 ಕೋಟಿ ವೆಚ್ಚದಲ್ಲಿ ಗುತ್ತಿಗೆದಾರ ಹರೀಶ್ ಕುಮಾರ್ ವಹಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ.  ಮುಖ್ಯಮಂತ್ರಿಯಿಂದ ಉದ್ಘಾಟನೆ?:  ರಸ್ತೆ ಕಾಮಗಾರಿ ಮಾರ್ಚ್ ಅಂತ್ಯದ ವೇಳೆಗೆ ಮುಗಿಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸಾವಯವ ಕೃಷಿ ವೀಕ್ಷಣೆಗೆ ಬರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಂದಲೇ ರಸ್ತೆ ಯನ್ನು ಉದ್ಘಾಟಿಸಲಾಗುವುದು ಎಂದು ಸುಳ್ಯ ವಿಧಾನಸಭಾ ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯ ದರ್ಶಿ ಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

 ನಿರಂತರ ಹೋರಾಟದ ಫಲ:  ರಸ್ತೆಯ ಮರು ಡಾಂಬರಿಕರಣಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ರಸ್ತೆ ತಡೆ ನಿರ್ಮಿಸಿ ಹಲವಾರು ಭಾರಿ ಪ್ರತಿಭಟನೆ ನಡೆಸಿದ್ದವು. ಸಂಪೂರ್ಣ ಡಾಂಬರೀಕರಣ ಆಗುವ ಮೂಲಕ ಹೋರಾಟಕ್ಕೆ ಫಲ ದೊರೆತಿದೆ ಎಂದು ಸಂಘ ಸಂಸ್ಥೆ ಪದಾಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. 1966ರಿಂದೀಚೆಗೆ ರಸ್ತೆ 3.75 ಮೀಟರ್ ಆಗಲ ಇದ್ದುದು ಕ್ರಮೇಣ ಅದು ಎದ್ದುಹೋಗಿ ರಸ್ತೆ ಹೊಂಡಮಯವಾಗಿತ್ತು. ಇದೀಗ ಮರುಡಾಂಬರಿಕರಣ ಆಗುವಾಗ 5.5 ಮೀಟರ್ ಅಗಲಕ್ಕೆ ವಿಸ್ತರಣೆ ಆಗಿದೆ. ಒಟ್ಟಿನಲ್ಲಿ ರಸ್ತೆ ಕಾಮಗಾರಿ ಉತ್ತಮವಾಗಿ ಮತ್ತು ಸುಂದರವಾಗಿ ಆಗಿದೆ ಎಂಬ ಮೆಚ್ಚುಗೆಯ ಮಾತು ಕೇಳಿಬರುತ್ತಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.