ಬುಧವಾರ, ಡಿಸೆಂಬರ್ 11, 2019
20 °C

ಉಪ್ಪಿನ ಹೊಸ ರುಚಿ...

Published:
Updated:
ಉಪ್ಪಿನ ಹೊಸ ರುಚಿ...

ಇಂದಿಗೂ ಗಾಂಧಿನಗರ `ಓಂ~ ಸಿನಿಮಾದ ಗುಂಗಿನಿಂದ ಹೊರಬಂದಿಲ್ಲ. ಅದಕ್ಕೆ ಸಾಕ್ಷಿ ವರ್ಷಕ್ಕೆ ನಾಲ್ಕಾದರೂ ಲಾಂಗು, ಮಚ್ಚು ಆಧಾರಿತ ಚಿತ್ರಗಳು ಬಿಡುಗಡೆಯಾಗುತ್ತಿರುವುದು. ತಮ್ಮ ಒಂದು ಸಿನಿಮಾದಿಂದ ಅಂಥ ಗಾಢ ಪ್ರಭಾವ ಬೀರಿದವರು ನಿರ್ದೇಶಕ, ನಟ ಉಪೇಂದ್ರ. ಕಳೆದ ವರ್ಷ `ಸೂಪರ್~ ಸಿನಿಮಾ ನಿರ್ದೇಶಿಸಿ ಪ್ರಶಂಸೆ ಪಡೆದುಕೊಂಡ ಉಪೇಂದ್ರ ಇದೀಗ `ಆರಕ್ಷಕ~ ಸಿನಿಮಾದಲ್ಲಿ ತಮ್ಮ `ಗೆಟಪ್~ ಬದಲಾವಣೆ ಮಾಡಿಕೊಂಡು ನಟಿಸಿದ್ದಾರೆ. ಚಿತ್ರ ಜ.26ರಂದು ತೆರೆ ಕಂಡಿದೆ.

`ಆರಕ್ಷಕ~ ಸಿನಿಮಾ ಬಗ್ಗೆ ನಿರೀಕ್ಷೆ ಹೇಗಿದೆ?

ಇದೊಂದು ಡೌಟ್‌ಫುಲ್ ಸಿನಿಮಾ. ಸ್ಕ್ರೀನ್‌ಪ್ಲೇ ಕೇಳಿದಾಗ ಥ್ರಿಲ್ ಆಗಿತ್ತು. ಆದರೆ ಚಿತ್ರೀಕರಣದಲ್ಲಿ ಪ್ರತೀ ದಿನ ಗೊಂದಲವಾಗುತ್ತಿತ್ತು. ನಿರ್ದೇಶಕ ಪಿ.ವಾಸು ತುಂಬಾ ಸ್ಪಷ್ಟವಾಗಿ ತಮ್ಮ ಸ್ಕ್ರಿಪ್ಟನ್ನು ರೂಪಿಸಿದ್ದರು. ಚಿತ್ರ ನೋಡಿದಾಗ ಅವರಿಗೆ `ಹ್ಯಾಟ್ಸ್‌ಆಫ್~ ಹೇಳಬೇಕೆನಿಸಿತು. ಕತೆ ತುಂಬಾ ಟೈಟಾಗಿದೆ. ಎಂಥ ಬುದ್ಧಿವಂತರಿಗೂ ಚಿತ್ರ ಒಂದೇ ಬಾರಿಗೆ ಅರ್ಥವಾಗಲ್ಲ.

`ಕಠಾರಿ ವೀರ ಸುರಸುಂದರಾಗಿ~ ಸಿನಿಮಾ `ಜಗದೇಕವೀರುಡು ಅತಿಲೋಕ ಸುಂದರಿ~ ರೀಮೇಕ್ ಎನ್ನಲಾಗುತ್ತಿದೆ?

ಇಲ್ಲ. `ಜಗದೇಕವೀರುಡು ಅತಿಲೋಕ ಸುಂದರಿ~ ಅಥವಾ `ಯಮದೊಂಗ~ ಇದ್ಯಾವ ಚಿತ್ರಗಳ ರೀಮೇಕೂ ಅಲ್ಲ. ಅದು ನಿರ್ಮಾಪಕ ಮುನಿರತ್ನ ಅವರ ಕತೆ. ಹಾಲಿವುಡ್‌ನ `ಅವತಾರ್~ ಮತ್ತು ಬಾಲಿವುಡ್‌ನ `ಛೋಟಾ ಚೇತನ್~ ಎರಡರ ತಂತ್ರಜ್ಞಾನವನ್ನೂ ಅದರಲ್ಲಿ ಬಳಸಲಾಗುತ್ತಿದೆ.

ನಿಮ್ಮ ಮುಂದಿನ ನಿರ್ದೇಶನದ ಚಿತ್ರ ಯಾವಾಗ?

ಈ ವರ್ಷ ಒಪ್ಪಿಕೊಂಡ ಚಿತ್ರಗಳನ್ನು ಮುಗಿಸಬೇಕಿದೆ. ಸದ್ಯಕ್ಕೆ `ಟೋಪಿವಾಲಾ~ ಚಿತ್ರಕ್ಕೆ ಚಿತ್ರಕತೆ ತಯಾರು ಮಾಡುತ್ತಿರುವೆ. 

`ಸೂಪರ್~ ಸಿನಿಮಾ ತೆಲುಗಿಗೆ ಡಬ್ ಆಗಿತ್ತು. ಅಲ್ಲಿ  ಪ್ರತಿಕ್ರಿಯೆ ಹೇಗಿತ್ತು?

ಸೂಪರ್ ಆಗಿತ್ತು.

`ಕನ್ಯಾದಾನಂ~ ನಂತರ ನೀವು ತೆಲುಗಿನಲ್ಲಿ ನಟಿಸಲಿಲ್ಲವೇಕೆ?

ಕನ್ನಡ ಮತ್ತು ತೆಲುಗು ಎರಡೂ ಕಡೆ ನನಗೆ ನಿಭಾಯಿಸಲು ಆಗಲ್ಲ.

ಈಚೆಗೆ ಗಾಯಕನಾಗಿಯೂ ಹೆಸರು ಮಾಡುತ್ತಿದ್ದೀರಿ?

ನನ್ನದು ದಪ್ಪ ದನಿ. `ರಫ್~ ಆಗಿದೆ. ಅದು ಒಳ್ಳೆ ದನಿಯಲ್ಲದಿದ್ದರೂ ಕೆಲವು ಹಾಡುಗಳಿಗೆ ಹೊಂದಾಣಿಕೆಯಾಗುವುದರಿಂದ ಹಾಡಲು ಕರೀತಾರೆ. ಕೆಟ್ಟ ದನಿಗೂ ಕೆಲವೊಮ್ಮೆ ಬೇಡಿಕೆ ಬರುತ್ತದೆ ನೋಡಿ. (ನಗು)

ದಕ್ಷಿಣ ಕನ್ನಡದವರಾಗಿ ಕನ್ನಡ ಸಿನಿಮಾಗಳಲ್ಲಿ ಮಂಗಳೂರು ಮಾತನ್ನು ಹಾಸ್ಯಾಸ್ಪದ ಮಾಡಿರುವ ಬಗ್ಗೆ ನಿಮಗೇನು ಅನಿಸುತ್ತದೆ?

`ಬುದ್ಧಿವಂತ~ ಚಿತ್ರದಲ್ಲಿ ನಾಯಕನ ಬಾಯಿಂದ ಮಂಗಳೂರು ಶೈಲಿ ಬಳಸಲಾಯಿತು. ಆದರೂ ಮಂಗಳೂರು ಮಾತು ಸಿನಿಮಾಗಳಲ್ಲಿ ಹಾಸ್ಯಾಸ್ಪದವಾಗಿಯೇ ಉಳಿದಿದೆ. ಆ ವಿಚಾರದಲ್ಲಿ ಗಂಭೀರವಾಗಿ ಕೆಲಸ ಮಾಡುವಾಸೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯವನಾಗಿ ಆ ಜವಾಬ್ದಾರಿ ಖಂಡಿತ ಇದೆ.

ಪ್ರತಿಕ್ರಿಯಿಸಿ (+)