ಉಪ್ಪು-ಸಿಹಿ ನೀರಿನ ವಿನಿಮಯ ಬೆಸೆದ ಬಾಂಧವ್ಯ

ಗುರುವಾರ , ಜೂಲೈ 18, 2019
24 °C

ಉಪ್ಪು-ಸಿಹಿ ನೀರಿನ ವಿನಿಮಯ ಬೆಸೆದ ಬಾಂಧವ್ಯ

Published:
Updated:

ಕೋಲಾರ: ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಪ್ರತಿಭಟನೆ, ಧರಣಿ ನಡೆಸುವುದು ಸಾಮಾನ್ಯ. ಕೊಳವೆಬಾವಿ ಕೊರೆಸಬೇಕು, ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂಬುದು ಎಲ್ಲರ ಆಗ್ರಹ. ಆದರೆ, ತಾಲ್ಲೂಕಿನ ಕುಂಬಾರಹಳ್ಳಿ ಮತ್ತು ಕೂತಾಂಡಹಳ್ಳಿ ಗ್ರಾಮಸ್ಥರ ನಡುವಿನ ಸೌಹಾರ್ದ ಸಂಬಂಧ ಇಂಥ ಪ್ರತಿಭಟನೆಗಳಿಗೆ ಕಡಿವಾಣ ಹಾಕಿದೆ ಎಂಬುದೇ ಇಲ್ಲಿನ ವಿಶೇಷ.ತಾಲ್ಲೂಕಿನ ಕೂತಾಂಡಹಳ್ಳಿಯಲ್ಲಿ ಇರುವುದು ಒಂದೇ ಕೊಳವೆಬಾವಿ. ಅದರಲ್ಲಿ ಬರುವುದು ಉಪ್ಪು ನೀರು. ಈ ಗ್ರಾಮದಲ್ಲಿ ಎಲ್ಲೇ ಕೊಳವೆಬಾವಿ ಕೊರೆದರೂ ಉಪ್ಪು ನೀರೇ ಕಂಡುಬರುತ್ತದೆ. ಹೀಗಾಗಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಸದಾ ಇದ್ದದ್ದೇ. ಕೆಲವು ತಿಂಗಳ ಹಿಂದೆ ಆವರಿಸಿದ್ದ ಬರಗಾಲದಲ್ಲಂತೂ ಅವರ ಪಾಡು ಹೇಳತೀರದಾಗಿತ್ತು.ಪ್ರತಿಭಟನೆ ನಡೆಸಿ ಕೊಳವೆಬಾವಿ ಕೊರೆಸಿದರೂ ಪ್ರಯೋಜನವಾಗುತ್ತಿರಲಿಲ್ಲ. ಹೀಗಾಗಿ ಅವರು ಸುಮಾರು ಎರಡೂವರೆ ಕಿ.ಮೀ ದೂರದ ಕುಂಬಾರಹಳ್ಳಿ ಕಡೆಗೆ ಖಾಲಿ ಬಿಂದಿಗೆ, ಕ್ಯಾನುಗಳನ್ನು ಹಿಡಿದು ಸಾಗಿದ್ದರು. ಏಕೆಂದರೆ ಅಲ್ಲಿ ಸಿಹಿ ನೀರಿತ್ತು; ಆದರೆ ನೀರಿನ ಕೊರತೆ ಅಲ್ಲಿಯೂ ಇತ್ತು.

ಸಿಹಿ ನೀರುಳ್ಳ ಕುಂಬಾರಹಳ್ಳಿ ಜನ ಕೂತಾಂಡಹಳ್ಳಿಯ ಜನಕ್ಕೆ ನೀರು ಕೊಡಲಾರೆವು ಎಂದೇನೂ ಹೇಳಲಿಲ್ಲ.ಬದಲಿಗೆ ಅವರು ನಿಮ್ಮೂರಿನಿಂದ ಬರುವಾಗ ಖಾಲಿ ಬಿಂದಿಗೆ, ಕ್ಯಾನುಗಳೊಂದಿಗೆ ಬರುವ ಬದಲು ನಿಮ್ಮ ಹಳ್ಳಿಯ ಉಪ್ಪು ನೀರನ್ನೇ ತನ್ನಿ ಎಂದರು. ದಿನಬಳಕೆಗೆ ನೀರಿನ ಕೊರತೆ ಕೊಂಚ ಕಡಿಮೆಯಾಗುತ್ತದೆ ಎಂಬುದು ಅವರ ನಿರೀಕ್ಷೆ. ಕುಡಿಯಲು ನೀರು ಸಿಕ್ಕರೆ ಸಾಕು ಎಂಬುದು ಕೂತಾಂಡಹಳ್ಳಿ ಜನರ ಆಸೆ.ಹೀಗಾಗಿ ಅವರುಆಗುವುದಿಲ್ಲ ಎನ್ನಲಿಲ್ಲ. ಕುಂಬಾರಹಳ್ಳಿಗೆ ಹೋಗುವಾಗ ಅವರು ಉಪ್ಪು ನೀರನ್ನು ಕೊಂಡೊಯ್ಯುತ್ತಿದ್ದರು. ಬರುವಾಗ ಅವೇ ಬಿಂದಿಗೆ, ಕ್ಯಾನುಗಳಲ್ಲಿ ಸಿಹಿನೀರನ್ನು ತರುತ್ತಿದ್ದರು! ಎರಡು-ಮೂರು ದಿನಕ್ಕೊಮ್ಮೆ ಈ ಉಪ್ಪು-ಸಿಹಿ ನೀರಿನ ಕೊಳ್ಳು-ಕೊಡುವಿಕೆ ನಡೆಯುತ್ತಿತ್ತು. ಮಾರ್ಜೇನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರುವ ಗ್ರಾಮದಲ್ಲಿ ಸುಮಾರು 103 ಮನೆ,  575 ಮತದಾರರು ಮತ್ತು 850-900 ಜನಸಂಖ್ಯೆ ಇದೆ. ಎರಡು-ಮೂರು ತಿಂಗಳ ಬರಗಾಲದ ಅವಧಿಯಲ್ಲಿ ಕೂತಾಂಡಹಳ್ಳಿ ಜನ ಉಪ್ಪು ನೀರು ಕೊಟ್ಟು ಸಿಹಿ ನೀರನ್ನು ತರುತ್ತಿದ್ದರು. ಕೆಲವು ದಿನಗಳಿಂದ ಈ ಪರಿಪಾಠ ನಿಂತಿತ್ತು. ಉಪ್ಪು ನೀರು ಕೊಡದಿದ್ದರೂ ಕುಂಬಾರಹಳ್ಳಿಯಲ್ಲಿ ಸಿಹಿ ನೀರು ಸಿಗುತ್ತಿತ್ತು. ಮಳೆಗಾಲ ಶುರುವಾದರೆ ಈ ಕಡೆಯಿಂದ ನೀರು ಸಾಗಿಸುವುದು ತಪ್ಪುತ್ತದೆ ಎಂಬ ಗ್ರಾಮಸ್ಥರ ನಿರೀಕ್ಷೆ ಹುಸಿಯಾಗಿದೆ. ಮಳೆ ವಿಳಂಬವಾಗಿರುವುದರಿಂದ ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿ ಅವರಿಗೆ ಕುಂಬಾರಹಳ್ಳಿಯಲ್ಲಿ ಸಿಹಿ ನೀರು ಕೊಡಲು ಜನ ಹಿಂದೇಟು ಹಾಕುತ್ತಿದ್ದಾರೆ.`ಮಳೆ ಆಗಾಗ ಸುರಿದಿದ್ದರಿಂದ ಉಪ್ಪು ನೀರು ಕೊಡದೆ ಸಿಹಿ ನೀರು ತರುತ್ತಿದ್ದೆವು. ಈಗ ಕುಂಬಾರಹಳ್ಳಿಯಲ್ಲಿ ಇರುವ ಕೊಳವೆಬಾವಿಯಲ್ಲೂ ನೀರು ಕಡಿಮೆಯಾಗಿದೆ. ಗ್ರಾಮದ ಕೆಲವರು ಖಾಲಿ ಕ್ಯಾನು, ಬಿಂದಿಗೆಗಳೊಂದಿಗೆ ಹೋದಾಗ ಸಿಹಿ ನೀರು ಕೊಟ್ಟರು. ನಾವು ಹೋದಾಗ ಉಪ್ಪು ನೀರು ತನ್ನಿ, ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿದೆ ಎಂದರು. ಹೀಗಾಗಿ ನಾಳೆಯಿಂದ ಮತ್ತೆ ಇಲ್ಲಿಂದ ನೀರು ಸಾಗಿಸಬೇಕು~ ಎಂದು ಗ್ರಾಮದ ಚಂದ್ರಶೇಖರ್, ಮಂಜುನಾಥ್, ವೆಂಕಟೇಶಗೌಡ, ಅಮರೇಶ ತಿಳಿಸಿದರು.ಗ್ರಾಮಕ್ಕೆ ಭೇಟಿ ನೀಡಿದ `ಪ್ರಜಾವಾಣಿ~ಯೊಡನೆ ಮಾತನಾಡಿದ ಅವರು, ಎರಡು ವರ್ಷದಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ನಮ್ಮ ಹಳ್ಳಿಯಲ್ಲಿ ಕೊಳವೆ ಬಾವಿಗಳನ್ನು ಎಲ್ಲಿ ಕೊರೆದರೂ ಉಪ್ಪುನೀರು ಸಿಗುತ್ತದೆ. ಕುಡಿಯಲು ಆಗುವುದಿಲ್ಲ. ಕೆಲ ತಿಂಗಳ ಹಿಂದೆ ಕೂಡ ಅನಿವಾರ್ಯವಾಗಿ ಅದೇ ನೀರನ್ನು ಕುಡಿಯುತ್ತಿದ್ದೆವು. ಇನ್ನು ಸಾಧ್ಯವಿಲ್ಲ ಎಂಬ ಸನ್ನಿವೇಶ ಎದುರಾದಾಗ ನಾವು ಕುಂಬಾರಹಳ್ಳಿಯಿಂದ ಸಿಹಿ ನೀರು ತರಲಾರಂಭಿಸದೆವು ಎಂದು ಹೇಳಿದರು.ಇಲ್ಲಿಂದ ಉಪ್ಪು ನೀರನ್ನು ಕುಂಬಾರಹಳ್ಳಿಯ ಸಿಹಿನೀರಿನ ಟ್ಯಾಂಕ್ ಬಳಿಗೆ ಒಯ್ಯುತ್ತೇವೆ. ಅಲ್ಲಿ ಸಿಹಿ ನೀರು ಸಂಗ್ರಹಿಸಲು ನಿಂತ ಆ ಗ್ರಾಮದ ಯಾರೇ ಆಗಲಿ ಅವರಿಗೆ ಕೊಡುತ್ತೇವೆ. ಅವರು ನಮಗೆ ಸಿಹಿನೀರು ಕೊಡುತ್ತಾರೆ ಎನ್ನುತ್ತಾರೆ.ನಮ್ಮ ಗ್ರಾಮದಲ್ಲಿ ಇರುವ ಒಂದು ಕೊಳವೆಬಾವಿ ನೀರನ್ನು ಕುಂಟೆಯ ಪ್ರವೇಶದ್ವಾರದ ಬಳಿ ಅಳವಡಿಸಿರುವ ಎರಡು ನಲ್ಲಿ ಮೂಲಕ ಹರಿಸುವ ವ್ಯವಸ್ಥೆ ಮಾಡಲಾಗಿದೆ. ಗ್ರಾಮದ ಎಲ್ಲರೂ ಅಲ್ಲಿಗೇ ಬಂದು ನೀರು ಸಂಗ್ರಹಿಸುತ್ತಾರೆ. ಯಾವ ಮನೆಗೂ ಪ್ರತ್ಯೇಕ ನಲ್ಲಿ ವ್ಯವಸ್ಥೆ ಇಲ್ಲ.ನೀರು ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ನಲ್ಲಿಗಳನ್ನು ಕುಂಟೆ ಸಮೀಪದಲ್ಲೆ ಅಳವಡಿಸಲಾಗಿದೆ. ನೀರು ಸಂಗ್ರಹಿಸುವಾಗ ಹೊರಚೆಲ್ಲುವ ನೀರು ಕುಂಟೆ ಸೇರುತ್ತದೆ. ಅದನ್ನೆ ಜಾನುವಾರುಗಳಿಗೆ ಕೊಡುತ್ತೇವೆ ಎಂದರು.ಪ್ರತಿಭಟನೆ ಇಲ್ಲ: ಕುಡಿಯುವ ನೀರಿಗಾಗಿ ಈ ಗ್ರಾಮದ ಮಂದಿ ಇದುವರೆಗೂ ಒಂದೇ ಒಂದು ಪ್ರತಿಭಟನೆಯನ್ನೂ ಮಾಡಿಲ್ಲ. ಕುಂಬಾರಹಳ್ಳಿಯಿಂದ ಸಿಹಿನೀರು ಸಿಗುತ್ತಿರುವಾಗ ಪ್ರತಿಭಟನೆ ಅಗತ್ಯವಿಲ್ಲ ಎನ್ನುತ್ತಾರೆ. ಕುಂಬಾರಹಳ್ಳಿಯ ಸಿಹಿ ನೀರು ಮತ್ತು ಕೂತಾಂಡಹಳ್ಳಿಯ ಉಪ್ಪು ನೀರು ಎರಡೂ ಗ್ರಾಮಗಳ ನಡುವೆ ಸೌಹಾರ್ದವನ್ನು ಕಾಪಾಡುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry