ಉಪ್ಪೂರಿನಲ್ಲಿ ರಂಜಿಸಿದ ಕೆಸರು ಗದ್ದೆ ಓಟ

7

ಉಪ್ಪೂರಿನಲ್ಲಿ ರಂಜಿಸಿದ ಕೆಸರು ಗದ್ದೆ ಓಟ

Published:
Updated:

ಬ್ರಹ್ಮಾವರ: ಇಂದಿನ ಆಧುನಿಕ ಯುಗದಲ್ಲಿ ಗ್ರಾಮೀಣ ಕ್ರೀಡೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ.

ಬ್ಯಾಟ್, ಬಾಲ್‌ಗಳು ಗ್ರಾಮೀಣ ಕ್ರೀಡೆಗಳ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಗ್ರಾಮದ ಜನರು ತಮ್ಮ ಬೇಸರದ ಹೊತ್ತು ನೀಗಿಸಲು ತಾವೇ ಸೃಷ್ಟಿಸಿದ ಕೆಸರುಗದ್ದೆ ಓಟ, ಕುಂಟೆ ಬಿಲ್ಲೆ, ಮರಕೋತಿ ಆಟ ಮುಂತಾದ ಆಟಗಳಲ್ಲಿ ಇಂದು ನಿರಾಸಕ್ತಿ ತೋರಿಸುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ಉಪ್ಪೂರಿನ ಸಾರ್ವಜನಿಕ ಶಾರದೋತ್ಸವ ಸಮಿತಿ ಭಾನುವಾರ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಕ್ರೀಡೆಗಳ ಮಹತ್ವವನ್ನು ತಿಳಿಸಿಕೊಟ್ಟಿದೆ.ಗ್ರಾಮದ ಜನತೆಗಾಗಿ ಪುರುಷರು, ಮಹಿಳೆಯರು, ಚಿಕ್ಕಮಕ್ಕಳಿಗಾಗಿ ಹಗ್ಗಜಗ್ಗಾಟ, ಗೋಣಿಚೀಲ ಓಟ, ಹಿಮ್ಮುಖ ಓಟ, ರಂಗೋಲಿ ಸ್ಪರ್ಧೆ, ಲಿಂಬೆ ಹಣ್ಣು ಚಮಚದಲ್ಲಿ ಹಿಡಿದುಕೊಂಡು ನಡೆಯುವುದು, ಒಂಟಿ ಕಾಲು ಓಟ, ಮಡಲು ನೇಯುವುದು ಮುಂತಾದ ಅನೇಕ ಕ್ರೀಡಾಚಟುವಟಿಕೆಗಳನ್ನು ಹಮ್ಮಿಕೊಂಡು ರಜಾದಿನವನ್ನು ವಿಶಿಷ್ಟವಾಗಿ ಕಳೆಯುವಂತೆ ಮಾಡಿದರು.ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೆ, ಪಂಚಾಯಿತಿ ಅಧ್ಯಕ್ಷರಿಂದ ಹಿಡಿದು ಸದಸ್ಯರವರೆಗೆ ಮತ್ತು ಸರ್ಕಾರಿ ಕೆಲಸಕ್ಕೆ ಹೋಗುವ ಮಂದಿಯಿಂದ ಹಿಡಿದು ಕೂಲಿ ಮಾಡುವವರು ಹೀಗೆ ನೂರಕ್ಕೂ ಹೆಚ್ಚು ಗ್ರಾಮಸ್ಥರು ಇಡೀ ದಿನ ಕೆಸರು ಗದ್ದೆಯಲ್ಲಿ ಕುಣಿದು ಕುಪ್ಪಳಿಸಿದರು. ಮಹಿಳೆಯರೂ ನಾವೇನು ಪುರುಷರಿಗೆ ಕಡಿಮೆ ಎಂದು ತಾವೂ ಎಲ್ಲಾ ಆಟದಲ್ಲಿ ಭಾಗವಹಿಸಿ ತಮ್ಮ ಬಾಲ್ಯದ ದಿನಗಳನ್ನು ಮತ್ತೆ ನೆನೆದರು. ಒಟ್ಟಾರೆ ಉಪ್ಪೂರಿನ ಮಂದಿ ಭಾನುವಾರ ಇಡೀ ದಿನ ವಿವಿಧ ಗ್ರಾಮೀಣ ಆಟಗಳಲ್ಲಿ ತಲ್ಲೆನರಾಗಿ ಮುಂದಿನ ಪೀಳಿಗೆಯ ಮಕ್ಕಳಿಗೆ ಇಂತಹ ಆಟಗಳನ್ನು ನೆನಪಿಸಿಕೊಟ್ಟದ್ದು ವಿಶೇಷವಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry