ಉ.ಪ್ರ ವಿಧಾನಸಭೆ: ಜಂಟಿ ಅಧಿವೇಶನದಲ್ಲಿ ಗದ್ದಲ

7

ಉ.ಪ್ರ ವಿಧಾನಸಭೆ: ಜಂಟಿ ಅಧಿವೇಶನದಲ್ಲಿ ಗದ್ದಲ

Published:
Updated:
ಉ.ಪ್ರ ವಿಧಾನಸಭೆ: ಜಂಟಿ ಅಧಿವೇಶನದಲ್ಲಿ ಗದ್ದಲ

ಲಖನೌ (ಐಎನ್ಎಸ್): ಉತ್ತರ ಪ್ರದೇಶ ವಿಧಾನಸಭೆಯ ಜಂಟಿ ಅಧಿವೇಶನವು ಸೋಮವಾರ ಅಕ್ಷರಶಃ ಗದ್ದಲದ ಗೂಡಾಯಿತು.

ಆಡಳಿತ ಪಕ್ಷವಾದ ಸಮಾಜವಾದಿ ಪಕ್ಷದ ಶಾಸಕರು ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಶಾಸಕರ ನಡುವೆ ಬಿರುಸಿನ ಮಾತಿನ ಚಕಮಕಿ ನಡೆಯುವುದರೊಂದಿಗೆ ಬಿಎಸ್ ಪಿ ಶಾಸಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಜಂಟಿ ಅಧಿವೇಶನದ ಕಲಾಪಕ್ಕೆ ಅಡ್ಡಿ ಪಡಿಸಿದರು.

ರಾಜ್ಯಪಾಲ ಬಿ.ಎಲ್. ಜೋಷಿ ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಂತೆ ಬಿಎಸ್ ಪಿ ಶಾಸಕರು ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದರು. ಜತೆಗೆ ಭಾಷಣದ ಪ್ರತಿಗಳನ್ನು ಹರಿದು ಹಾಕಿ ಸ್ಪೀಕರ್ ಆಸನದತ್ತ ಧಾವಿಸಿ, ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸಿದರು.

 

~ರಾಜ್ಯಪಾಲರು ಕೇವಲ 2 ನಿಮಿಷ ಮಾತ್ರ ಮಾತನಾಡಬೇಕು~ ಎಂದು ವಿರೋಧ ಪಕ್ಷದ ಶಾಸಕರು ಆಗ್ರಹ ಪಡಿಸಿದರು. ಇದರಿಂದಾಗಿ ರಾಜ್ಯಪಾಲರು ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಘಟನೆ ನಡೆಯಿತು.

ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಅವರ ಸಮಾಜವಾದಿ ಸರ್ಕಾರವು ~ವರ್ಗಾವಣೆಯ ಉದ್ಯಮ~ ವಾಗಿದ್ದು, ಅದು ವರ್ಗಾವಣೆ ಮಾಡುವುದರಲ್ಲೇ ಕಾಲ ಕಳೆಯುತ್ತಿದೆ ಎಂದು ಆರೋಪಿಸಿದರು.

~ರಾಜ್ಯದಲ್ಲಿ ಕಾನೂನು ವ್ಯವಸ್ಥೆಯು ಸಂಪೂರ್ಣವಾಗಿ ಹಾಳಾಗಿದೆ. ಈ ಸರ್ಕಾರವು ಜನರಿಗೆ ಸರಿಯಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುತ್ತಿಲ್ಲ~ ಎಂದು ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ಅಪ್ತ ಬಿಎಸ್ ಪಿ ಶಾಸಕ ಸ್ವಾಮಿ ಪ್ರಸಾದ್ ಮೌರ್ಯ ಅವರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಇದೇ ಸಂದರ್ಭದಲ್ಲಿ ಆಡಳಿತಾರೂಢ ಮತ್ತು ವಿರೋಧ ಪಕ್ಷದ ಶಾಸಕರು ಒಬ್ಬರ ಮೇಲೆ ಒಬ್ಬರು ಆರೋಪಗಳನ್ನು ಮಾಡುತ್ತ ಸದನದಲ್ಲಿ ಕುರ್ಚಿಗಳನ್ನು ಎಸೆದಾಡಿದರು. ಇದರಿಂದಾಗಿ ಸದನವು ಕೆಲವು ಸಮಯ ಅಕ್ಷರಶಃ ಗದ್ದಲದ ಗೂಡಾಗಿ ಮಾರ್ಪಾಡಾಗಿತ್ತು.

ಈ ಸರ್ಕಾರವು ರೈತರ ಪರವಾಗಿಲ್ಲ. ಅಧಿಕಾರಿಗಳ ವರ್ಗಾವಣೆಯಲ್ಲೆಯೇ ಕಾಲಹರಣ ಮಾಡುತ್ತಿದೆ. ಜನಪರ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿರೋಧ ಪಕ್ಷದ ಶಾಸಕರು ಭಿತ್ತಿಚಿತ್ರಗಳನ್ನು ಹಿಡಿದು ಪ್ರತಿಭಟಿಸಿದರು.

ಸದನದ ಇಡೀ ಕಲಾಪವು ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರ ಗದ್ದಲ, ಪ್ರತಿಭಟನೆಗಳಿಂದ ಮುಳುಗಿತ್ತು. ಇದರಿಂದಾಗಿ ಸ್ಪೀಕರ್ ಮಾತಾ ಪ್ರಸಾದ್ ಪಾಂಡೆ ಅವರು ಸದನದ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry