ಉ.ಪ್ರ: ಶೇ 64 ಮತದಾನ

7

ಉ.ಪ್ರ: ಶೇ 64 ಮತದಾನ

Published:
Updated:

ಲಖನೌ (ಪಿಟಿಐ): ತೀವ್ರ ಕಾವೇರಿದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಬುಧವಾರ ಶೇ 62ರಿಂದ 64 ಮತದಾರರು ತಮ್ಮ ಮತಗಳನ್ನು ಚಲಾಯಿಸಿದ್ದಾರೆ.ಬೆಳಿಗ್ಗೆ ಮಂದಗತಿಯಲ್ಲಿದ್ದ ಮತದಾನವು ಮಧ್ಯಾಹ್ನದ ನಂತರ ವಾತಾವರಣ ತಿಳಿಯಾದ ಕಾರಣ ಚುರುಕುಗೊಂಡಿತು. ಮಳೆ ನಿಂತ ಬಳಿಕ ಮತದಾರರು ಸರದಿಯಲ್ಲಿ ನಿಂತು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದರು. 70 ಲಕ್ಷ ಮಹಿಳೆಯರು ಸೇರಿದಂತೆ ಸುಮಾರು 1.7 ಕೋಟಿ ಮತದಾರರು ಮತ ಚಲಾಯಿಸಿದರು ಎಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಉಮೇಶ್ ಸಿನ್ಹಾ ಅವರು ಸಂಜೆ ಸುದ್ದಿಗಾರರಿಗೆ ತಿಳಿಸಿದರು.ಮತದಾನವು ಸೀತಾಪುರ, ಬಾರಾಬಂಕಿ, ಫರೀದಾಬಾದ್, ಅಂಬೇಡ್ಕರ್‌ನಗರ, ಬಹ್ರೇಚ್, ಶ್ರವಾಸ್ತಿ, ಬಲರಾಂಪುರ, ಗೊಂಡಾ, ಸಿದ್ಧಾರ್ಥನಗರ ಹಾಗೂ ಬಸ್ತಿ ಮುಂತಾದ 10 ಜಿಲ್ಲೆಗಳ ಸುಮಾರು 55 ಕ್ಷೇತ್ರಗಳಲ್ಲಿ ಬಿಗಿ ಭದ್ರತೆಯೊಂದಿಗೆ ನಡೆಯಿತು. ಕೆಲವೆಡೆ ಮತದಾನ ಬಹಿಷ್ಕಾರ, ಮತಯಂತ್ರ ಕೈಕೊಟ್ಟ ದೂರುಗಳ ಹೊರತಾಗಿ ಯಾವುದೇ ಕಹಿ ಘಟನೆ ನಡೆದಿಲ್ಲ. ಅಭ್ಯರ್ಥಿಗಳಲ್ಲಿ 796 ಪುರುಷರು, 65 ಮಹಿಳೆಯರು ಸೇರಿದ್ದಾರೆ.403 ಸದಸ್ಯ ಬಲದ ವಿಧಾನಸಭೆಯ ಮೊದಲ ಹಂತದ ಚುನಾವಣೆಗೆ ಸ್ಪರ್ಧಿಸಿದವರಲ್ಲಿ ಇಬ್ಬರು ಸಚಿವರು, 31 ಶಾಸಕರು ಹಾಗೂ 15 ಮಾಜಿ ಸಚಿವರ ಹಣೆಬರಹ ನಿರ್ಧಾರವಾಗಲಿದೆ. ಎಲ್ಲ ಹಂತಗಳಲ್ಲೂ ಆಡಳಿತಾರೂಢ ಮಾಯಾವತಿಯವರ ಬಿಎಸ್‌ಪಿ ವಿರೋಧಿ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಎಸ್‌ಪಿಯಿಂದ ಪ್ರಬಲ ಸ್ಪರ್ಧೆಯನ್ನು ಎದುರಿಸುತ್ತಿದೆ. ಉಳಿದ ಕ್ಷೇತ್ರಗಳಲ್ಲಿ ಫೆಬ್ರುವರಿ 11, 15, 19, 23, 28 ಹಾಗೂ ಮಾ.3ರಂದು ಮತದಾನ ನಡೆಯಲಿದ್ದು, ಮಾ. 6ರಂದು ಮತ ಎಣಿಕೆ ನಡೆಯುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry