ಭಾನುವಾರ, ಜೂನ್ 13, 2021
23 °C

ಉಪ ಅಂಚೆ ಕಚೇರಿಯನ್ನು ಪ್ರಾರಂಭಿಸಿ

ನೊಂದ ನಿವಾಸಿಗಳು Updated:

ಅಕ್ಷರ ಗಾತ್ರ : | |

ಉಪ ಅಂಚೆ ಕಚೇರಿಯನ್ನು ಪ್ರಾರಂಭಿಸಿ

ಟೆಲಿಕಾಂ ಇಲಾಖೆಯ ನಿವೃತ್ತ ನೌಕರನಾದ ನಾನು ಪಟ್ಟೇಗಾರ ಪಾಳ್ಯದಲ್ಲಿ ವಾಸವಾಗಿರುತ್ತೇನೆ. ನನ್ನಂತೆ ಬೇರೆ ಬೇರೆ ಇಲಾಖೆಯ ನಿವೃತ್ತ ನೌಕರರಾದ ಹಿರಿಯ ನಾಗರಿಕರು ಇಲ್ಲಿ ವಾಸವಾಗಿರುತ್ತಾರೆ. ವಿಜಯನಗರದ ಮುಖ್ಯ ಅಂಚೆ ಕಚೇರಿಯೇ ಹತ್ತಿರದ ಕಚೇರಿಯಾಗಿದೆ.

 

ಪ್ರತಿ ತಿಂಗಳೂ ನಿವೃತ್ತ ವೇತನವನ್ನು ಪಡೆಯಲು ಇಲ್ಲಿಂದ ಒಂದು ಕಿಲೋಮೀಟರ್ ದೂರವಿರುವ ಮೂಡಲಪಾಳ್ಯ ಸರ್ಕಲ್‌ವರೆಗೆ ನಡೆದು ಬರಬೇಕು. ಅಲ್ಲಿಂದ ಮುಂದೆ ಆಟೊ ಅಥವಾ ನಗರ ಸಾರಿಗೆಯಲ್ಲಿ ಸಂಚರಿಸಬೇಕು.

 

ವಿಜಯನಗರದ ಸಾರಿಗೆ ನಿಲ್ದಾಣದಿಂದ ಮುಖ್ಯ ಅಂಚೆ ಕಚೇರಿಗೆ ಬರುವಾಗ  ರಸ್ತೆಯನ್ನು ದಾಟುವುದೂ ಪ್ರಯಾಸದ ಕೆಲಸವಾಗಿರುತ್ತದೆ. ಪಟ್ಟೇಗರಪಾಳ್ಯ, ಮೂಡಲಪಾಳ್ಯ ಮತ್ತು ಶ್ರಿನಿವಾಸನಗರದ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಒಂದು ಉಪ ಅಂಚೆ ಕಚೇರಿಯನ್ನು ಪ್ರಾರಂಭಿಸಬೇಕೆಂದು ಅಂಚೆ ಇಲಾಖೆಯ ಅಧಿಕಾರಿಗಳಲ್ಲಿ ವಿನಂತಿಸುತ್ತೇನೆ.

 -ಎಂ.ಎಸ್. ವೆಂಕಟೇಶ್ಅಂಡರ್‌ಪಾಸ್ ನಿರ್ಮಿಸಿ


ಕಂಠೀರವ ಕ್ರೀಡಾಂಗಣ ನಗರದ ಹೃದಯ ಭಾಗದಲ್ಲಿದ್ದರೂ ಹಲವಾರು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಮಕ್ಕಳ ಕ್ರೀಡಾ ಕೂಟ, ಹಿರಿಯರ ಮತ್ತು ವಿಕಲಚೇತನರ ಕ್ರೀಡಾಸ್ಪರ್ಧೆಗಳು, ಬ್ಯಾಸ್ಕೆಟ್‌ಬಾಲ್, ವಾಲಿಬಾಲ್, ಕಬ್ಬಡಿ ಪಂದ್ಯಾವಳಿಗಳ ಜತೆಗೆ ಒಳಾಂಗಣ ಕ್ರೀಡಾಂಗಣದಲ್ಲಿ ಒಂದಲ್ಲ ಒಂದು ಪ್ರದರ್ಶನಗಳು ನಡೆಯುತ್ತಲೇ ಇರುತ್ತವೆ. ಭಾಗವಹಿಸುವ ಸ್ಪರ್ಧಿಗಳಿಗೆ ಇಲ್ಲಿ ವಸತಿ ಸೌಕರ್ಯವನ್ನೂ ಕಲ್ಪಿಸಲಾಗುತ್ತದೆ.ಆದರೆ ಕ್ರೀಡಾಪಟುಗಳಿಗೆ ಹಾಗೂ ವೀಕ್ಷಕರಿಗೆ ಅಗತ್ಯವಾಗಿ ಬೇಕಾದ ನೀರು, ಕಾಫಿ, ತಿಂಡಿ, ಲೇಖನ ಸಾಮಗ್ರಿಗಳು, ಔಷಧಿಗಳು ಮಾತ್ರವಲ್ಲದೆ ಸಾರಿಗೆ ವಾಹನ, ಆಟೊ ಮುಂತಾದವುಗಳಿಗೆ ರಸ್ತೆಯನ್ನು ದಾಟಿ ಸಂಪಂಗಿರಾಮನಗರದ ಕಡೆಯೇ ಬರಬೇಕು. ಉಳಿದ ಕಡೆ ಕ್ರೀಡಾಪಟುಗಳಿಗೆ ಬೇಕಾದ ವಸ್ತುಗಳು ಏನೂ ಸಿಗುವುದಿಲ್ಲ.ಸಂಪಂಗಿರಾಮನಗರದ ಕಡೆ ಇರುವ ರಸ್ತೆ ಏಕಮುಖ ಸಂಚಾರವಾಗಿದ್ದು ರಸ್ತೆಯನ್ನು ದಾಟಲು ಹರಸಾಹಸ ಮಾಡಬೇಕಾಗುತ್ತದೆ. ಸಂಬಂಧಪಟ್ಟವರು ಕೂಡಲೇ ಇದಕ್ಕೆ ಸ್ಪಂದಿಸಿ ಕಂಠೀರವ ಕ್ರೀಡಾಂಗಣದಿಂದ ಸಂಪಂಗಿರಾಮನಗರದ ಕಡೆಗೆ ಒಂದು ಸುರಂಗಮಾರ್ಗವನ್ನು ನಿರ್ಮಿಸಿದರೆ ಕ್ರೀಡಾಪಟುಗಳಿಗೆ ಅನುಕೂಲವಾಗುತ್ತದೆ.

 -ಯಮಲೂರು ಎಂ. ವೆಂಕಟಪ್ಪ , ಹಿರಿಯ ಕ್ರೀಡಾಪಟುಚೇಂಬರ್ ಸರಿಪಡಿಸಿ


ವಿವೇಕನಗರದ 115ನೇ ವಾರ್ಡ್‌ನ ಈಜೀಪುರ ಮುಖ್ಯ ರಸ್ತೆಯ 1ನೇ ಕ್ರಾಸ್‌ನಲ್ಲಿರುವ ರಸ್ತೆಯ ಚೇಂಬರ್‌ಗಳು ಕಟ್ಟಿ ತ್ಯಾಜ್ಯ ನೀರು ರಸ್ತೆ, ಮನೆಗಳ ಮುಂದೆ ಹಾಗೂ ಟ್ರಾನ್ಸ್‌ಫಾರ‌್ಮರ್‌ನ ಮುಂಭಾಗದಲ್ಲಿರುವ ರಸ್ತೆಯಲ್ಲಿ ಹರಿಯುತ್ತಿದೆ.  ಇದನ್ನು ಆಗಾಗ ಸರಿಪಡಿಸಿದರೂ ತಿಂಗಳಿಗೊಮ್ಮೆಯಾದರೂ ಚೇಂಬರ್‌ಗಳನ್ನು ಸ್ವಚ್ಛಗೊಳಿಸಬೇಕು.ಇಲ್ಲದೆ ಹೋದರೆ ಯಥಾಪ್ರಕಾರ ಯಾವಾಗಲು ಈ ತೊಂದರೆ ತಪ್ಪಿದ್ದಲ್ಲ. ಈ ರಸ್ತೆಗೆ ದೊಡ್ಡ ಪೈಪುಗಳನ್ನು ಅಳವಡಿಸಿದರೆ ಮಾತ್ರ ಈ ರೀತಿಯ  ತೊಂದರೆ ತಪ್ಪುತ್ತದೆ. ಈ ಕುರಿತು ಈಗಾಗಲೇ ಹಲವಾರು ಸಲ ಮನವಿಯನ್ನು ಸಲ್ಲಿಸಿದರೂ, ಯಾವ ಅಧಿಕಾರಿಗಳೂ ಸ್ಪಂದಿಸಿಲ್ಲ.  ಬೇಸಿಗೆಯಲ್ಲಿಯೇ ಈ ಕಾಮಗಾರಿ ಮುಗಿಸಿದರೆ ಇಲ್ಲಿಯ ವಾಸಿಗಳಿಗೆ ಅನುಕೂಲವಾಗುತ್ತದೆ. ಚೇಂಬರ್ ಕಟ್ಟಿಕೊಂಡಿರುವುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಲು ಕೋರುತ್ತೇನೆ.

 -ಎಲ್.ಎನ್.ಆಟದ ಮೈದಾನ ಉಳಿಸಿ


ಬೆಂಗಳೂರು ನಗರದ ಕೆಂಪೇಗೌಡ ರಸ್ತೆಯ ಪಕ್ಕದಲ್ಲಿರುವ ಬನ್ನಪ್ಪ ಪಾರ್ಕ್ ಒಂದು ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳ. ಇದಕ್ಕೆ ಸೇರಿದಂತೆ ಇರುವ ದೊಡ್ಡ ಮೈದಾನದಲ್ಲಿ ಶಿಕ್ಷಣ ಇಲಾಖೆಯವರು ಸುಮಾರು 30 ವರ್ಷಗಳಿಂದಲೂ ಶಾಲಾ ಮಕ್ಕಳಿಗೆ ವಲಯ ಮಟ್ಟದ ಕ್ರೀಡಾ ಕೂಟವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಮೈದಾನದ ಸುತ್ತ ಸುಮಾರು 48 ಶಾಲೆಗಳಿವೆ. ಸುಮಾರು 40 ವರ್ಷಗಳಿಂದಲೂ ಮಕ್ಕಳಿಗೆ ಆಟದ ಮೈದಾನವಾಗಿ ಉಪಯೋಗಿಸುತ್ತಿದ್ದಾರೆ.ಆದರೆ ಇತ್ತೀಚೆಗೆ ಬೆಂಗಳೂರು ಜಲಮಂಡಲಿ ಈ ಮೈದಾನದ ಆವರಣದಲ್ಲಿ ಬಾರಿ ನೀರು ಶೇಖರಣೆ ಘಟಕವನ್ನು (ವಾಟರ್ ಟ್ಯಾಂಕ್) ನಿರ್ಮಿಸಲು ಯೋಜನೆ ಹಾಕಿಕೊಂಡಿರುವುದು ದುರ್ದೈವದ ಸಂಗತಿಯಾಗಿದೆ.ಈಗಾಗಲೆ ಇದೇ ಮೈದಾನದ ಸಮೀಪದಲ್ಲಿ ವಾಟರ್ ಟ್ಯಾಂಕ್ ಇದ್ದು ಈ ಟ್ಯಾಂಕ್‌ಗೆ ಸರಿಯಾಗಿ ನೀರು ಭರ್ತಿಯಾಗುತ್ತಿಲ್ಲ. ಹೀಗಿರುವಾಗ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನೂತನ ಟ್ಯಾಂಕ್ ನಿರ್ಮಾಣದ ಅವಶ್ಯಕತೆಯಾದರೂ ಏನಿದೆ? ನೂತನ ನೀರು ಶೇಖರಣ ಘಟಕ ನಿರ್ಮಾಣಕ್ಕೆ ಸುತ್ತಲಿನ ನಗರಿಕರ ಪ್ರಬಲ ವಿರೋಧದ ಮಧ್ಯೆಯು ಈ ಯೋಜನೆಯ ಅನುಷ್ಠಾನ ಕೈ ಬಿಟ್ಟಿರುವುದಿಲ್ಲ.ಇದೇ ಆಟದ ಮೈದಾನದಲ್ಲಿ ಖಾಸಗಿ ಹಾಗೂ ಪೊಲೀಸ್ ಇಲಾಖೆಯ ವಾಹನಗಳು ನಿಲ್ಲಿಸಿರುವುದರಿಂದ ಮಕ್ಕಳ ಆಟಕ್ಕೆ ತೊಂದರೆಯಾಗಿದೆ. ಈ ಮೈದಾನದಲ್ಲಿ ಯಾವ ಕಟ್ಟಡ ನಿರ್ಮಾಣಕ್ಕೂ ಅವಕಾಶ ಕೊಡದೆ ಮತ್ತು ವಾಹನಗಳನ್ನು ನಿಲ್ಲಿಸದಂತೆ ಕ್ರಮಕೈಗೊಳ್ಳಬೇಕು.  ಈ ಪ್ರದೇಶವನ್ನು ಆಟದ ಮೈದಾನವಾಗಿಯೇ ಉಳಿಸಿಕೊಡಲು ಸಂಬಂಧಿಸಿದ ವರಿಷ್ಠ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕು. 

 -ಲಕ್ಷ್ಮೀಪತಿ ಮಾವಳ್ಳಿಟಪ್ಪಾಲು ಪೆಟ್ಟಿಗೆ ಅಳವಡಿಸಿ


ರಾಜಾಜಿನಗರ 3ನೇ ಬ್ಲಾಕ್ 17ನೇ ಮೈನ್ ರಸ್ತೆಯಲ್ಲಿ ಅರಿಹಂತ್ ಟೆಲಿಕಾಂ ಅಂಗಡಿಯ ಪಕ್ಕದಲ್ಲಿ ಇದ್ದ ಟಪಾಲು ಪೆಟ್ಟಿಗೆ ನಾಪತ್ತೆಯಾಗಿ ವರ್ಷಗಳೇ ಉರುಳಿಹೋಗಿವೆ. ಪುನಃ ಅಳವಡಿಸುವಂತೆ ಅನೇಕ ಬಾರಿ ಕುಂದೊಕೊರತೆ ವಿಭಾಗದ ಮೂಲಕ ವಿನಂತಿ ಮಾಡಿಕೊಂಡರೂ ಯಾವ ಪ್ರಯೋಜನವೂ ಆಗಿಲ್ಲ. ಈಗಲಾದರೂ ಸಂಬಂಧಪಟ್ಟವರು ಗಮನಹರಿಸಿ.  ಸಮೀಪದಲ್ಲಿಯೇ ಟಪ್ಪಾಲು ಪೆಟ್ಟಿಗೆ ಅಳವಡಿಸಲು ಕೋರತ್ತೇವೆ.  

 -ಕೆ.ಜಿ.ಆರ್.ರಾವ್ಸಾರ್ವಜನಿಕ ವಾಚನಾಲಯ ಬೇಕು


ಬೆಂಗಳೂರು ನಗರದ ಬನ್ನೇರುಘಟ್ಟ ರಸ್ತೆಯ ಅರಕೆರೆ ಮೈಕೋ ಲೇ ಔಟ್‌ಗೆ ಸಾರ್ವಜನಿಕ ವಾಚನಾಲಯ ಹಾಗೂ ಗ್ರಂಥಾಲಯ ಬೇಕಿದೆ.  ಓಂಕಾರ್‌ನಗರ, ಬೃಂದಾವನ ಲೇಔಟ್, ಮಂಜುನಾಥ ಲೇಔಟ್, ಅರಕೆರೆ ಮೈಕೋ ಲೇಔಟ್ ನಿವಾಸಿಗಳಿಗೆ ಗ್ರಂಥಾಲಯದ ಸೌಲಭ್ಯವೇ ಇಲ್ಲದಂತಾಗಿದೆ. ದೂರದ ಜಯನಗರ, ಬನಶಂಕರಿ ಕಡೆಗೆ ಹೋಗುವ ಅನಿವಾರ್ಯ ಇದೆ.  ಈ ಬಡಾವಣೆಯಲ್ಲಿಯೂ ಒಂದು ಸಾರ್ವಜನಿಕ ವಾಚನಾಲಯ ಹಾಗೂ ಗ್ರಂಥಾಲಯವನ್ನು ತೆರೆಯಬೇಕೆಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಲ್ಲಿ ನನ್ನ ಮನವಿ.

 -ವಿ. ಹೇಮಂತ್‌ಕುಮಾರ್

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.