ಮಂಗಳವಾರ, ಜೂನ್ 15, 2021
25 °C

ಉಪ ಚುನಾವಣೆ ಗೆದ್ದಿದ್ದು ಅಭಿವೃದ್ಧಿಯಿಂದಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: `ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಉಪ ಚುನಾವಣೆಗಳನ್ನು ಗೆದ್ದಿದ್ದು ಹಣ, ಜಾತಿ ಬಲದಿಂದಲೇ ಹೊರತು, ಅಭಿವೃದ್ಧಿ ಕೆಲಸಗಳಿಂದಲ್ಲ~ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಇಲ್ಲಿ ಆರೋಪಿಸಿದರು.

ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಪ್ರಯುಕ್ತ ಮತಯಾಚನೆಗೆ ಆಗಮಿಸಿದ ಅವರು ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.`ಉಪ ಚುನಾವಣೆಗಳೆಲ್ಲ ಬಿಜೆಪಿಯ ಸೃಷ್ಟಿ. ಬಹಳಷ್ಟು ಚುನಾವಣೆಗಳು ಅವರ ಆಪರೇಷನ್ ಕಮಲದಿಂದಾಗಿಯೇ ಆದವು. ಆದರೆ ಈ ಬಾರಿಯ ಚುನಾವಣೆಯಲ್ಲಿ ಹಾಗೆ ಆಗಲು ಸಾಧ್ಯವಿಲ್ಲ. ಬಿಜೆಪಿಯ ಬಣ್ಣ ಬಯಲಾಗಿದೆ~ ಎಂದು ವಾಗ್ದಾಳಿ ನಡೆಸಿದರು.`ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿಯ ಮುಖ್ಯಮಂತ್ರಿ ಸೇರಿ 11 ಸಚಿವರು ರಾಜೀನಾಮೆ ನೀಡಿದ್ದಾರೆ. ಭ್ರಷ್ಟಾಚಾರದ ಆರೋಪ, ಅಕ್ರಮ ಗಣಿಗಾರಿಕೆ, ರೇಪ್, ಬ್ಲೂಫೀಲಂ ವೀಕ್ಷಣೆ, ಡಿನೋಟಿಫಿಕೇಷನ್ ಸೇರಿದಂತೆ ಸಾಲು ಸಾಳು ಹಗರಣಗಳು ನಡೆದಿವೆ. ರಾಜ್ಯದ ಇತಿಹಾಸದಲ್ಲಿಯೇ ಇಂಥದ್ದೊಂದು ಕೆಟ್ಟ, ಭ್ರಷ್ಟ ಸರ್ಕಾರವನ್ನು ಕಂಡಿರಲಿಲ್ಲ~ ಎಂದರು.`ಈ ಸರ್ಕಾರದ ನೈತಿಕತೆ ಪಾತಾಳಕ್ಕೆ ಕುಸಿದಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅನೇಕ ಇತಿಹಾಸ ಸೃಷ್ಟಿಸಿದರು. ಭಾರತೀಯ ಸಂಸ್ಕೃತಿಯ ಪ್ರತಿಪಾದಕರು ಎನ್ನುವ ಇವರ ಸಂಸ್ಕೃತಿಯ ಬಗ್ಗೆಯೇ ಈಗ ಚರ್ಚೆ ನಡೆಯುತ್ತಿದೆ~ ಎಂದು ಲೇವಡಿ ಮಾಡಿದ ಅವರು, `ರಾಜ್ಯದಲ್ಲಿ ಭ್ರಷ್ಟಾಚಾರವನ್ನಾದರೂ ಸಹಿಸಿಕೊಳ್ಳಬಹುದೇನೋ, ಆದರೆ ಈ ನಡತೆಗೆಟ್ಟ ಬಿಜೆಪಿ ಸಚಿವರ ವರ್ತನೆ ಮತ್ತು ಅದನ್ನು ಸಮರ್ಥಿಸಿಕೊಳ್ಳುವುದನ್ನು ಮಾತ್ರ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಇವರ ದುವರ್ತನೆಗಳನ್ನು ಪಕ್ಷದ ಮುಖಂಡರು ಸಮರ್ಥಿಸಿಕೊಳ್ಳುತ್ತಿರುವುದು ಅಕ್ಷ್ಯಮ್ಯ ಅಪರಾಧ~ ಎಂದು ಹೇಳಿದರು.`ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಮಾಡದ್ದನ್ನು ನಾವು ಮಾಡಿದೆವು ಎನ್ನುವ ಬಿಜೆಪಿ ಸರ್ಕಾರ ರಾಜ್ಯದಲ್ಲಿ 1 ಯುನಿಟ್ ವಿದ್ಯುತ್ತನ್ನೂ ಉತ್ಪಾದಿಸಿಲ್ಲ. ಬರಗಾಲ, ನೀರು, ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲೂ ಸರ್ಕಾರ ಹಿಂದೆ ಬಿದ್ದಿದೆ. ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿಯೂ ವಿಫಲವಾಗಿದೆ~ ಎಂದು ಅವರು ದೂರಿದರು.ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶ ಹೆಚ್ಚು: `ಉಡುಪಿ-ಚಿಕ್ಕಮಗಳೂರು ಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀಳದೇ ಇದ್ದರೂ, ಬಿಜೆಪಿ ಸರ್ಕಾರದ ಬಗ್ಗೆ ಜನರ ಅಭಿಪ್ರಾಯ ಏನಿದೆ ಎಂಬುದು ಅರಿವಾಗಲಿದೆ. ಫಲಿತಾಂಶ ಮುಂದಿನ ರಾಜಕೀಯಕ್ಕೂ ದಿಕ್ಸೂಚಿಯಾಗಲಿದೆ~ ಎಂದರು. ಶಾಸಕ ಅಭಯಚಂದ್ರ ಜೈನ್, ಮೊಯ್ದಿನ್ ಬಾವಾ, ಬಿ.ಕೆ.ಮೋಹನ್ ಮತ್ತಿತರರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.