ಶನಿವಾರ, ಮೇ 28, 2022
24 °C

ಉಪ ನೋಂದಣಾಧಿಕಾರಿ ಕಚೇರಿ ಸ್ಥಳಾಂತರ

ಪ್ರಜಾವಾಣಿ ವಾರ್ತೆ/ ಎಂ. ಮಹೇಶ Updated:

ಅಕ್ಷರ ಗಾತ್ರ : | |

ಉಪ ನೋಂದಣಾಧಿಕಾರಿ ಕಚೇರಿ ಸ್ಥಳಾಂತರ

ದಾವಣಗೆರೆ:  ಸಾರ್ವಜನಿಕರ ಪ್ರತಿಭಟನೆ ಹಾಗೂ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ, ನಗರದ ಹದಡಿ ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪ ನೋಂದಣಾಧಿಕಾರಿ ಕಚೇರಿಯನ್ನು ಸ್ಥಳಾಂತರಿಸಲು ನಿರ್ಧರಿಸಿದೆ. ಇದರೊಂದಿಗೆ `ಸಮೀಪದಲ್ಲಿ ಸರ್ಕಾರಿ ಸೇವೆ' ದೊರೆಯಬೇಕು ಎಂಬ ಕೂಗಿಗೆ ಕೊನೆಗೂ ಬೆಲೆ ದೊರೆತಂತಾಗಿದೆ.ನಗರದ ಹೃದಯ ಭಾಗದಲ್ಲಿದ್ದ ತಾಲ್ಲೂಕು ಕಚೇರಿಯ ಆವರಣದಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಕಾರ್ಯ ನಿರ್ವಹಿಸುತ್ತಿತ್ತು. ಈ ಕಚೇರಿಯನ್ನು ಏಕಾಏಕಿ ಹದಡಿ ರಸ್ತೆಯಲ್ಲಿರುವ ಕಟ್ಟಡವೊಂದಕ್ಕೆ ಕೆಲ ತಿಂಗಳ ಹಿಂದೆ ಸ್ಥಳಾಂತರಿಸಲಾಗಿತ್ತು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.`ಹಿಂದೆ ಅಧಿಕಾರದಲ್ಲಿದ್ದ ರಾಜಕಾರಣಿ ಯೊಬ್ಬರ ಸಂಬಂಧಿಕರಿಗೆ ಸೇರಿದ ಕಟ್ಟಡ ಇದಾಗಿದೆ. ಅವರಿಗೆ ಅನುಕೂಲ ಮಾಡಿಕೊಡಲು ಅಧಿಕಾರಿಗಳು ಏಕಾಏಕಿ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯಪಾಲರ ಹೆಸರಿನಲ್ಲಿ ನೋಂದಣಿ ಮಾಡದೇ ಅಕ್ರಮ ಎಸಗಲಾಗಿದೆ. ದೂರದಲ್ಲಿ ಕಚೇರಿ ಸ್ಥಾಪಿಸಿರುವುದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ಆಸ್ತಿ, ವಿವಾಹ ಮೊದಲಾದ ನೋಂದಣಿ ಮಾಡಿಸಲು ಬರುವವರು ಮಹಡಿಯಲ್ಲಿರುವ ಕಚೇರಿ ಹತ್ತಿ ಇಳಿಯಬೇಕಾಗುತ್ತದೆ.ಯಾವುದೇ ಸರ್ಕಾರಿ ಕಚೇರಿಯನ್ನು ನೆಲಮಹಡಿಯಲ್ಲಿ ಸ್ಥಾಪಿಸಲು ಆದ್ಯತೆ ನೀಡಬೇಕು; ನಗರದೊಳಗೆ ಇರುವ ಜಾಗ ಆಯ್ಕೆ ಮಾಡಬೇಕು. ಆದರೆ, ಇಲ್ಲಿ ಅದನ್ನು ಉಲ್ಲಂಘಿಸಲಾಗಿದೆ. ಮಹಡಿಯಲ್ಲಿ ಕಚೇರಿ ಇರುವುದರಿಂದ ವಯಸ್ಸಾದವರು, ಅಂಗವಿಕಲರು ಹತ್ತಿ, ಇಳಿಯುವುದಕ್ಕೆ ತೊಂದರೆಯಾಗುತ್ತದೆ' ಎಂಬ ಮಾತು ಸಾರ್ವಜನಿಕರಿಂದ ಕೇಳಿಬಂದಿತ್ತು. ಇದು, ಜಿಲ್ಲಾಡಳಿತವನ್ನು ಮುಜುಗರಕ್ಕೆ ಸಿಲುಕಿಸಿತ್ತು.`ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಾನೂ ಹೋಗಿ ಕಚೇರಿ ಪರಿಶೀಲಿಸಿದ್ದೇನೆ. ಮಹಡಿಯಲ್ಲಿ ಇರುವುದರಿಂದ ಜನರಿಗೆ ಅನಾನುಕೂಲ ಆಗಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಚೇರಿ ಸ್ಥಳಾಂತರಿಸಲು ನಿರ್ಧರಿಸಲಾಗಿದೆ' ಎಂದು ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ `ಪ್ರಜಾವಾಣಿ'ಗೆ ತಿಳಿಸಿದರು.`ಪಿ.ಬಿ.ರಸ್ತೆಯ ಬಳಿ ದೇವರಾಜ ಅರಸ್ ಬಡಾವಣೆ `ಎ' ಬ್ಲಾಕ್‌ನಲ್ಲಿ ಹೊಸದಾದ ಕಟ್ಟಡ ನೋಡಲಾಗಿದೆ. `ದೂಡಾ' ಹಿಂಭಾಗದಲ್ಲಿ ಈ ಕಟ್ಟಡವಿದೆ. ನೆಲಮಹಡಿಯಲ್ಲಿ ಇರುವುದರಿಂದ ಜನರಿಗೆ ಅನುಕೂಲ ಆಗುತ್ತದೆ. ಜಿಲ್ಲಾಡಳಿತ ಭವನ, ಪಾಲಿಕೆಗೂ ಕೊಂಚ ಸಮೀಪವಾದಂತಾಗುತ್ತದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡವದು. 20 ದಿನಗಳ ಹಿಂದೆ ನೋಡಿದಾಗ ಶೇ 80ರಷ್ಟು ಕಾಮಗಾರಿ ಮುಗಿದಿತ್ತು. ಶೀಘ್ರವೇ ಪೂರ್ಣಗೊಳಿಸಿಕೊಡುವಂತೆ ಕೇಳಿಕೊಂಡ್ದ್ದಿದೇವೆ.ಇದು ಪೂರ್ಣಗೊಂಡ ಕೂಡಲೇ ಉಪ ನೋಂದಣಾಧಿಕಾರಿ ಕಚೇರಿ ಸ್ಥಳಾಂತರಿಸಲಾಗುವುದು. ಪರಿಶೀಲನೆ ವೇಳೆ, ಹದಡಿ ರಸ್ತೆಗೆ ಕಚೇರಿ ಸ್ಥಳಾಂತರಿಸಿದ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ ಕೆಲ ಮುಖಂಡರು ಜತೆಗಿದ್ದರು. ಇಲ್ಲಿ ಕಚೇರಿ ಸ್ಥಾಪನೆ ಉತ್ತಮವಾಗುತ್ತದೆ ಎಂದು ಅನಿಸಿಕೆ ಹಂಚಿಕೊಂಡರು. ಇದರಿಂದ ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗಿದೆ' ಎಂದು ಮಾಹಿತಿ ನೀಡಿದರು.`ರೈತ ಭವನವನ್ನು ತಹಶೀಲ್ದಾರ್ ಕಚೇರಿಗೆ ನೀಡಲಾಗಿದ್ದು, ಜಾಗ ಸಾಲದಾಗಿದೆ. ಹೀಗಾಗಿ ಉಪ ನೋಂದ ಣಾಧಿಕಾರಿ ಕಚೇರಿಗೆ ಪರ್ಯಾಯ ಜಾಗ ಆಯ್ಕೆ ಮಾಡುವ ನಿರ್ಧಾರಕ್ಕೆ ಬರ ಲಾಯಿತು. ಉಪ ನೋಂದಣಾಧಿಕಾರಿ ಕಚೇರಿಗೆ ವಿಶಾಲವಾದ ಕಚೇರಿ ಅಗತ್ಯವಿದೆ' ಎಂದರು.`ತಾಲ್ಲೂಕು ಕಚೇರಿಯನ್ನು ನೂತನ ವಾಗಿ ನಿರ್ಮಿಸುವ ಉದ್ದೇಶದಿಂದ ಅಲ್ಲಿಂದ ನೋಂದಣಾಧಿಕಾರಿ ಕಚೇರಿ ಸ್ಥಳಾಂತರಿಸಲಾಗಿತ್ತು' ಎಂದು ಸ್ಪಷ್ಟಪಡಿಸಿದರು.`ಉಪ ನೋಂದಣಾಧಿಕಾರಿ ಕಚೇರಿ ಹಿಂದೆ ತಾಲ್ಲೂಕು ಕಚೇರಿ ಆವರಣ ದಲ್ಲಿತ್ತು. ಇದರಿಂದ, ಪಾಲಿಕೆಗೆ ಜಿಲ್ಲಾಧಿ ಕಾರಿ ಕಚೇರಿಗೆ ಸಮೀಪವಾಗಿತ್ತು. ಇದನ್ನು ಪರಿಗಣಿಸಿದೇ ಹದಡಿ ರಸ್ತೆಯ ಕಚೇರಿಗೆ `ಯಾರಿಗೋ' ಅನುಕೂಲ ಮಾಡಿಕೊಡಲು ಸ್ಥಳಾಂತರಿಸಲಾಗಿತ್ತು. ಊರೊಳಗಿದ್ದ ಕಚೇರಿಯನ್ನು ಊರ ಹೊರಗೆ ತೆಗೆದುಕೊಂಡು ಹೋಗುವುದು ಎಂದರೆ ಏನರ್ಥ? ನೋಂದಣಿ ಮಾಡಿಸು ವವರು ಪಾಲಿಕೆಗೆ ಮತ್ತು ಅಲ್ಲಿಗೆ ಹಲವು ಬಾರಿ ಅಲೆಯಬೇಕಾದ ಪ್ರಸಂಗ ಬಂದು, ಹಣ, ಶ್ರಮ, ಸಮಯ ವ್ಯರ್ಥ ವಾಗುತ್ತಿದೆ. ಇದನ್ನು ತಪ್ಪಿಸಬೇಕು. ಜನತಾ ಬಜಾರ್‌ಗೆ ಕಚೇರಿ ಸ್ಥಳಾಂತರಿ ಸಿದರೆ ಅನುಕೂಲ ಆಗುತ್ತದೆ ಎಂದು ಜಿಲ್ಲಾಡಳಿತಕ್ಕೆ ತಿಳಿಸಿದ್ದೆವು' ಎಂದು ನಗರಸಭೆ ಮಾಜಿ ಅಧ್ಯಕ್ಷ ಎಂ.ಜಿ. ತಿಪ್ಪೇಸ್ವಾಮಿ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.