ಉಪ ನೋಂದಣಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

7

ಉಪ ನೋಂದಣಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

Published:
Updated:

ಬೆಂಗಳೂರು: ನೋಂದಣಿ ಪ್ರಕ್ರಿಯೆಯಲ್ಲಿ ನಿರಂತರ ಭ್ರಷ್ಟಾಚಾರ ನಡೆಯುತ್ತಿರುವ ಮಾಹಿತಿ ಆಧಾರದಲ್ಲಿ ಶುಕ್ರವಾರ ಏಕಕಾಲಕ್ಕೆ ಐದು ಉಪ ನೋಂದಣಿ ಕಚೇರಿಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, ಇಬ್ಬರು ಉಪ ನೋಂದಣಿ ಅಧಿಕಾರಿಗಳು ಹಾಗೂ 14 ಮಧ್ಯವರ್ತಿಗಳನ್ನು ಬಂಧಿಸಿದ್ದಾರೆ.ಕಚೇರಿಯ ಒಳಗಡೆಯೇ ಖಾಸಗಿ ಮಧ್ಯವರ್ತಿಗಳನ್ನು ಬಿಟ್ಟುಕೊಂಡು ಭ್ರಷ್ಟಾಚಾರ ನಡೆಸುತ್ತಿದ್ದ ಆರೋಪದ ಮೇಲೆ ಕೆ.ಆರ್.ಪುರ ಉಪ ನೋಂದಣಿ ಅಧಿಕಾರಿ ಶಾಂತಮೂರ್ತಿ, ಕೆಂಗೇರಿ ಉಪ ನೋಂದಣಿ ಅಧಿಕಾರಿ  ಎನ್‌ಎ.ರಮೇಶ್ ಅವರನ್ನು ಬಂಧಿಸಲಾಗಿದೆ. ಕೆ.ಆರ್‌ಪುರ ಕಚೇರಿಯಲ್ಲಿ ಐದು ಮತ್ತು ಕೆಂಗೇರಿ ಕಚೇರಿಯಲ್ಲಿ ಇದ್ದ ಒಂಬತ್ತು ಮಧ್ಯವರ್ತಿಗಳನ್ನೂ ಬಂಧಿಸಲಾಗಿದೆ.ಕೆ.ಆರ್.ಪುರ, ಜಯನಗರ, ಜೆ.ಪಿ.ನಗರ, ದೇವನಹಳ್ಳಿ ಮತ್ತು ಕೆಂಗೇರಿ ಉಪ ನೋಂದಣಿ ಕಚೇರಿಗಳಲ್ಲಿ ನೋಂದಣಿ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ನಿರಂತರವಾಗಿ ಲಂಚ ಪಡೆಯುತ್ತಿರುವ ಬಗ್ಗೆ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್‌ಸತ್ಯನಾರಾಯಣರಾವ್ ಮಾಹಿತಿ ಕಲೆ ಹಾಕಿದ್ದರು.

ಶುಕ್ರವಾರ ದಿಢೀರ್ ದಾಳಿ ಮೂಲಕ ಈ ಕಚೇರಿಗಳಲ್ಲಿ ಶೋಧಕಾರ್ಯ ನಡೆಸುವಂತೆ ಆದೇಶಿಸಿದ್ದರು.ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್ ನೇತೃತ್ವದಲ್ಲಿ ಐದು ತಂಡಗಳಲ್ಲಿ ಮಧ್ಯಾಹ್ನ ಏಕಕಾಲಕ್ಕೆ ಐದು ಉಪ ನೋಂದಣಿ ಕಚೇರಿಗಳ ಮೇಲೆ ದಾಳಿ ನಡೆಯಿತು.ಡಿವೈಎಸ್‌ಪಿ ಎಸ್.ಗಿರೀಶ್ ನೇತೃತ್ವದ ತಂಡ ಕೆ.ಆರ್.ಪುರ ಉಪ ನೋಂದಣಿ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಿತು. ಅಲ್ಲಿ 79,000 ರೂಪಾಯಿ ಹೆಚ್ಚುವರಿ ಹಣ ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಶಾಂತಮೂರ್ತಿ ಮತ್ತು ಕಚೇರಿಯಲ್ಲೇ ಇದ್ದ ಐವರು ಮಧ್ಯವರ್ತಿಗಳನ್ನು ಬಂಧಿಸಲಾಗಿದೆ.

 

ಡಿವೈಎಸ್‌ಪಿ ಪ್ರಸನ್ನ ವಿ.ರಾಜು ನೇತೃತ್ವದ ತಂಡ ಕೆಂಗೇರಿ ಉಪ ನೋಂದಣಿ ಕಚೇರಿಯಲ್ಲಿ ಶೋಧ ನಡೆಸಿತು. ಕಚೇರಿಯಲ್ಲಿದ್ದ ಒಂಬತ್ತು ಮಧ್ಯವರ್ತಿಗಳ ಬಳಿ ರೂ 49,020 ಪತ್ತೆಯಾಯಿತು. ಈ ಕಚೇರಿಯಲ್ಲಿ ನೋಂದಣಿ ಶುಲ್ಕ ವಸೂಲಿ ವಿಭಾಗದಲ್ಲಿ ರೂ 1,325 ಕೊರತೆ ಕಂಡುಬಂತು. ಬಳಿಕ ತನಿಖಾ ತಂಡ ರಮೇಶ್ ಮತ್ತು ಮಧ್ಯವರ್ತಿಗಳನ್ನು ಬಂಧಿಸಿತು ಎಂದು ಎಸ್‌ಪಿ ಶಿವಶಂಕರ್ ತಿಳಿಸಿದರು.`ಎಲ್ಲ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಂ 7, 8, 13(1)ಡಿ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಪ್ರಾಥಮಿಕ ಹಂತದ ವಿಚಾರಣೆ ಬಳಿಕ ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು~ ಎಂದು ಅವರು ಮಾಹಿತಿ ನೀಡಿದರು.ಡಿವೈಎಸ್‌ಪಿ ಅಬ್ದುಲ್ ಅಹದ್ ನೇತೃತ್ವದ ತಂಡ ಜಯನಗರ ಉಪ ನೋಂದಣಿ ಕಚೇರಿಯಲ್ಲಿ ತಪಾಸಣೆ ನಡೆಸಿದ್ದು, ಇ.ಸಿ ಮತ್ತು ಫ್ರಾಂಕಿಂಗ್ ವಿಭಾಗದಲ್ಲಿ ರೂ 1,000 ಕೊರತೆ ಇತ್ತು. ಇನ್‌ಸ್ಪೆಕ್ಟರ್ ಕೆ.ರವಿಶಂಕರ್ ನೇತೃತ್ವದ ತಂಡ ಜೆ.ಪಿ.ನಗರ ಕಚೇರಿಯ ಮೇಲೆ ದಾಳಿ ನಡೆಸಿದ್ದು, ಲೋಕೇಶ್ ಎಂಬ ಸಿಬ್ಬಂದಿ ಬಳಿ ರೂ 500 ಮತ್ತು ನೋಂದಣಿ ಶುಲ್ಕ ವಸೂಲಿ ವಿಭಾಗದಲ್ಲಿ ರೂ 1,145 ಕೊರತೆ ಕಂಡುಬಂದಿದೆ. ಡಿವೈಎಸ್‌ಪಿ ಎಚ್.ಎಸ್.ಮಂಜುನಾಥ್ ನೇತೃತ್ವದ ತಂಡ ದೇವನಹಳ್ಳಿ ಕಚೇರಿಯಲ್ಲಿ ಶೋಧ ನಡೆಸಿದ್ದು, ಯಾವುದೇ ಅಕ್ರಮ ಕಂಡುಬಂದಿಲ್ಲ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.ಶುಲ್ಕ ವಸೂಲಿ ವಿಭಾಗಗಳಲ್ಲಿ ಕೊರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಜಯನಗರ ಮತ್ತು ಕೆ.ಪಿ.ನಗರ ಉಪ ನೋಂದಣಿ ಕಚೇರಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ನೋಂದಣಿ ಇಲಾಖೆ ಮುಖ್ಯಸ್ಥರಿಗೆ ವರದಿ ಸಲ್ಲಿಸಲು ತನಿಖಾ ತಂಡ ನಿರ್ಧರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry