ಉಪ ಬಂದೀಖಾನೆ ಪ್ರಾರಂಭಕ್ಕೆ ಹೈಕೋರ್ಟ್ ಆದೇಶ

7

ಉಪ ಬಂದೀಖಾನೆ ಪ್ರಾರಂಭಕ್ಕೆ ಹೈಕೋರ್ಟ್ ಆದೇಶ

Published:
Updated:

ಶಿರಸಿ: ನಗರದಲ್ಲಿರುವ ಉಪ ಬಂದೀಖಾನೆಯನ್ನು ಆದಷ್ಟು ಶೀಘ್ರ ಗರಿಷ್ಠ ಆರು ತಿಂಗಳ ಒಳಗೆ ಪುನಃ ಪ್ರಾರಂಭಿಸುವಂತೆ ಧಾರವಾಡದ ಹೈಕೋರ್ಟ್ ನ್ಯಾಯಪೀಠವು ಸರ್ಕಾರಕ್ಕೆ ಆದೇಶ ನೀಡಿದೆ.ಧಾರವಾಡ ಹೈಕೋರ್ಟ್ ನ್ಯಾಯಪೀಠ ನ್ಯಾಯಾಲಯದಲ್ಲಿ ಸ್ಥಳೀಯ ವಕೀಲ ಸಂಘದ ಅಧ್ಯಕ್ಷ ಎ.ರವೀಂದ್ರ ನಾಯ್ಕ ವಕೀಲರ ಸಂಘದ ಪರವಾಗಿ ರಿಟ್ ಅರ್ಜಿ ದಾಖಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರು ಉಪ ಬಂದೀಖಾನೆ ಪುನಃ ಪ್ರಾರಂಭಿಸಲು ಆದೇಶ ನೀಡಿದ್ದಾರೆ. ಈ ಕುರಿತು ರವೀಂದ್ರ ನಾಯ್ಕ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ರಿಟ್ ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕ ಹಾಗೂ ಜಿಲ್ಲಾಧಿಕಾರಿ ಅವರನ್ನು ಎದುರುದಾರರನ್ನಾಗಿ ಮಾಡಲಾಗಿತ್ತು.ಹಿಂದೆ ಅಸ್ತಿತ್ವದಲ್ಲಿದ್ದ ಉಪ ಬಂಧಿಖಾನೆಯನ್ನು 2005ರಲ್ಲಿ ದುರಸ್ತಿ ಕಾರಣ ನೀಡಿ ಸ್ಥಗಿತಗೊಳಿಸಲಾಗಿತ್ತು. ನಂತರ ಈ ಉಪ ಬಂದೀಖಾನೆ ಪುನಃ ಸ್ಥಾಪಿಸುವಂತೆ ಎಂಟು ವರ್ಷಗಳಿಂದ ವರ್ಷದಿಂದ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಶಿರಸಿಯಲ್ಲಿ ಉಪ ಬಂಧಿಖಾನೆ ಬಂದಾಗಿದ್ದರಿಂದ ಪ್ರಸ್ತುತ ಅಪರಾಧಿಗಳನ್ನು ಕಾರವಾರದ ಜೈಲಿಗೆ ಕರೆದೊಯ್ಯಬೇಕಾಗಿದೆ. ಇದರಿಂದ ಅನಗತ್ಯ ವೆಚ್ಚ ಹಾಗೂ ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ಕೆಲಸದ ಒತ್ತಡ ಉಂಟಾಗುತ್ತದೆ.ಈ ಹಿನ್ನೆಲೆಯಲ್ಲಿ ಉಪ ಬಂಧಿಖಾನೆ ಪುನಃ ಪ್ರಾರಂಭಿಸಲು ವಕೀಲರು ಹಿಂದಿನ ವರ್ಷ ಅ. 8ರಂದು ಸ್ಥಳೀಯ ನ್ಯಾಯಾಲಯದಿಂದ ಉಪವಿಭಾಗಾಧಿಕಾರಿ ಕಚೇರಿಗೆ ಮೆರವಣಿಗೆಯ ಮೂಲಕ ಮನವಿ ಸಲ್ಲಿಸಿ ಸರ್ಕಾರಕ್ಕೆ ಆಗ್ರಹಿಸಿರುವುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ವಕೀಲರ ಸಂಘದ ಪರವಾಗಿ ಹಿರಿಯ ವಕೀಲ ಎ.ಪಿ.ಹೆಗಡೆ ಜಾನ್ಮನೆ ವಾದ ಮಂಡಿಸಿದ್ದರು. ಹಿರಿಯ ವಕೀಲ ಎ.ಆರ್.ಹೆಗಡೆ ಹೂಡ್ಲಮನೆ ಸಂಘದ ಪರವಾಗಿ ಹಾಜರಾಗಿದ್ದರು.ಸ್ಥಳಕ್ಕೆ ಭೇಟಿ: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬಂಧಿಖಾನೆ ಇಲಾಖೆ ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು. ಸಂತಸ: ನ್ಯಾಯಾಲಯದ ಆದೇಶಕ್ಕೆ ವಕೀಲರ ಸಂಘದ ಉಪಾಧ್ಯಕ್ಷ ಸದಾನಂದ ಭಟ್ಟ, ಕಾರ್ಯದರ್ಶಿ ಶ್ರಿಪಾದ ನಾಯ್ಕ ಸಂತಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry