ಉಪ ಲೋಕಾಯುಕ್ತರ ನೇಮಕ ಪ್ರಶ್ನಿಸಿದ ಅರ್ಜಿ ವಿಚಾರಣೆ ಫೆ 27ಕ್ಕೆ

7

ಉಪ ಲೋಕಾಯುಕ್ತರ ನೇಮಕ ಪ್ರಶ್ನಿಸಿದ ಅರ್ಜಿ ವಿಚಾರಣೆ ಫೆ 27ಕ್ಕೆ

Published:
Updated:

ಬೆಂಗಳೂರು (ಪಿಟಿಐ): ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರನ್ನು ಉಪ ಲೋಕಾಯುಕ್ತರನ್ನಾಗಿ ಆಯ್ಕೆ ಮಾಡಿದ್ದನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಂಡಿದ್ದ ಕರ್ನಾಟಕ ಹೈ ಕೋರ್ಟ್, ಮುಂದಿನ ವಿಚಾರಣೆಯನ್ನು ಫೆ 27ಕ್ಕೆ ನಿಗದಿ ಮಾಡಿದೆ.

ಉಪ ಲೋಕಾಯುಕ್ತರಾಗಿ ಸರ್ಕಾರದಿಂದ ನಿಯುಕ್ತರಾಗಿ ಈಗಾಗಲೇ ಅಧಿಕಾರ ಸ್ವೀಕರಿಸಿರುವ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರ ನೇಮಕವನ್ನು ಪ್ರಶ್ನಿಸಿರುವ ಅರ್ಜಿಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಲು ತಮಗೆ ಕಾಲಾವಕಾಶಬೇಕೆಂದು ಸರ್ಕಾರದ ಅಡ್ವೊಕೇಟ್ ಜನರಲ್ ಎಸ್. ವಿಜಯ ಶಂಕರ್ ಅವರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎನ್. ಕುಮಾರ್ ಅವರ ನೇತೃತ್ವದ ಹೈಕೋರ್ಟ್ ಪೀಠ ವಿಚಾರಣೆಗೆ ಮುಂದಿನ ದಿನ ನಿಗದಿ ಮಾಡಿತು.

ಶುಕ್ರವಾರ ಅರ್ಜಿಗಳ ವಿಚಾರಣೆಯ ಆರಂಭದಲ್ಲಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸುವಂತೆ ನ್ಯಾಯಾಲಯ ಕೇಳಿದಾಗ, ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರು ಈಗಾಗಲೇ ಉಪ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು ತಿಳಿಸಿದರು.

ಅರ್ಜಿದಾರರಾದ ಎಂ.ಆನಂದ್ ಮತ್ತು ಜಾಣಗೆರೆ ಕೃಷ್ಣ ಅವರು, ತಮ್ಮ ಅರ್ಜಿಯಲ್ಲಿ ಉಪ ಲೋಕಾಯುಕ್ತರ ನೇಮಕ ಅಕ್ರಮ ಎಂದು ದೂರಿದ್ದಾರೆ.

ವಕೀಲರಾಗಿರುವ ಈ ಇಬ್ಬರು ಅರ್ಜಿದಾರರು, ತಮ್ಮ ಅರ್ಜಿಗಳಲ್ಲಿ ಲೋಕಾಯಕ್ತ ಕಾನೂನಿನ ಅನ್ವಯ ಸೆಕ್ಷನ್ 3 ಸಬ್ ಕ್ಲಾಜ್ 2ರ ಪ್ರಕಾರ ನಿವೃತ್ತ  ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರ ನೇಮಕ ಅಸಿಂಧು ಎಂದು ವಾದ ಮಂಡಿಸಿದ್ದಾರೆ.

ಕಾನೂನಿನ ಪ್ರಕಾರ, ಉಪ ಲೋಕಾಯುಕ್ತರ ಆಯ್ಕೆಯ ಮೊದಲು ಸರ್ಕಾರ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಸಲಹೆ ಪಡೆಯಬೇಕು, ಆದರೆ ಚಂದ್ರಶೇಖರಯ್ಯ ಅವರನ್ನು ಉಪಲೋಕಾಯುಕ್ತನ್ನಾಗಿ ಆಯ್ಕೆ ಮಾಡುವ ಸಂದರ್ಭದಲ್ಲಿ ಈ ಕ್ರಮ ಜರುಗಿಸಿಲ್ಲ ಎಂದು ಅವರು ಆಪಾದಿಸಿದ್ದಾರೆ.

ತಮ್ಮ ಸಲಹೆ ಪಡೆಯದೇ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರನ್ನು ಕಾನೂನಿನ ಅನ್ವಯ ಉಪಲೋಕಾಯಕ್ತರನ್ನಾಗಿ ಆಯ್ಕೆಮಾಡಿಲ್ಲ ಎಂದು ಹೇಳಿದ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಅವರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವಂತೆ ಈಚೆಗೆ ಸರ್ಕಾರಕ್ಕೆ ಸರ್ಕಾರಕ್ಕೆ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry