ಉಪ ಲೋಕಾಯುಕ್ತ ದಿಢೀರ್ ರಾಜೀನಾಮೆ

7

ಉಪ ಲೋಕಾಯುಕ್ತ ದಿಢೀರ್ ರಾಜೀನಾಮೆ

Published:
Updated:

ಬೆಂಗಳೂರು: ಎರಡು ತಿಂಗಳ ಹಿಂದಷ್ಟೇ ರಾಜ್ಯದ ಎರಡನೇ ಉಪ ಲೋಕಾಯುಕ್ತರಾಗಿ ನೇಮಕಗೊಂಡಿದ್ದ ನ್ಯಾಯಮೂರ್ತಿ ಆರ್.ಗುರುರಾಜನ್ ಬುಧವಾರ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ದಿಢೀರನೆ ಅವರು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದ್ದು, ರಾಜ್ಯಪಾಲರು ಇನ್ನೂ ಅಂಗೀಕರಿಸಿಲ್ಲ.ಗುರುರಾಜನ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಅನಾರೋಗ್ಯದ ಕಾರಣವನ್ನು ಉಲ್ಲೇಖಿಸಿದ್ದಾರೆ ಎಂದು ಗೊತ್ತಾಗಿದೆ. ಆದರೆ, ರಾಜೀನಾಮೆ ವಿಷಯವನ್ನು ಅವರು ರಹಸ್ಯವಾಗಿಯೇ ಇಟ್ಟಿದ್ದು, ಮಾಧ್ಯಮಗಳಿಂದ ದೂರಉಳಿದಿದ್ದಾರೆ.ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್ ಅವರ ರಾಜೀನಾಮೆಯಿಂದ ತೆರವಾಗಿರುವ ಲೋಕಾಯುಕ್ತ ಹುದ್ದೆಯನ್ನು ಭರ್ತಿ ಮಾಡಲು ಸರ್ಕಾರ ಕಸರತ್ತು ನಡೆಸುತ್ತಿದೆ. ಈ ಸಂದರ್ಭದಲ್ಲೇ ಎರಡನೇ ಉಪ ಲೋಕಾಯುಕ್ತರ ಹುದ್ದೆಯೂ ತೆರವಾಗಿದ್ದು, ಎರಡು ಹುದ್ದೆಗಳಿಗೆ ಅರ್ಹರನ್ನು ಹುಡುಕಬೇಕಾದ ಸವಾಲು ಸರ್ಕಾರಕ್ಕೆ ಎದುರಾಗಿದೆ. ಈಗ ಉಪ ಲೋಕಾಯುಕ್ತ ನ್ಯಾಯಮೂರ್ತಿ ಎಸ್.ಬಿ.ಮಜಗೆ ಅವರಷ್ಟೇ ಲೋಕಾಯುಕ್ತವನ್ನು ಮುನ್ನಡೆಸುವಂತಾಗಿದೆ.ಜುಲೈ ಅಂತ್ಯದಲ್ಲಿ ಗುರುರಾಜನ್ ಅವರನ್ನು ಎರಡನೇ ಉಪ ಲೋಕಾಯುಕ್ತರನ್ನಾಗಿ ಸರ್ಕಾರ ನೇಮಕ ಮಾಡಿತ್ತು. ಆಗಸ್ಟ್ ತಿಂಗಳಲ್ಲಿ ಅವರು ಅಧಿಕಾರ ಸ್ವೀಕರಿಸಿದ್ದರು. ತಾವು ಕಾನೂನಿನ ಮಿತಿಯಲ್ಲೇ ಕೆಲಸ ಮಾಡುವುದಾಗಿ ಮತ್ತು ಬಡವರಿಗೆ ನೆರವಾಗಲು ಶ್ರಮಿಸುವುದಾಗಿ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದ್ದರು.ನಿವೇಶನ ವಿವಾದದ ಕಾರಣದಿಂದ ಶಿವರಾಜ್ ಪಾಟೀಲ್ ಅವರು ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದ್ದ ಸಂದರ್ಭದಲ್ಲೇ ಗುರುರಾಜನ್ ಕೂಡ ಪದತ್ಯಾಗಕ್ಕೆ ಸಿದ್ಧರಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಬಗ್ಗೆ ಪ್ರಶ್ನಿಸಿದಾಗ, `ಅಂತಹ ಪ್ರಮೇಯ ಇಲ್ಲ~ ಎಂದು ತಳ್ಳಿಹಾಕಿದ್ದರು. ಆದರೆ, `ಈ ಬೆಳವಣಿಗೆಗಳಿಂದ ನೋವಾಗಿದೆ~ ಎಂದು ಹೇಳಿದ್ದರು.ಒಂದಕ್ಕಿಂತ ಹೆಚ್ಚು ನಿವೇಶನಗಳನ್ನು ಹೊಂದಿರುವ ಆರೋಪದಿಂದಲೇ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಟೀಕೆಯಿಂದ ಮುಕ್ತರಾಗಲು ಇಷ್ಟು ದಿನ ಪದತ್ಯಾಗದ ನಿರ್ಧಾರವನ್ನು ಮುಂದೂಡಿದ್ದರು ಎಂಬು ಮಾತು ಕೇಳಿಬಂದಿದೆ.ಗುರುರಾಜನ್ ಅವರೇ ಲೋಕಾಯುಕ್ತ ವೆಬ್‌ಸೈಟ್‌ನಲ್ಲಿ ಘೋಷಿಸಿಕೊಂಡಿರುವ ಪ್ರಕಾರ, ವಿವಾದಿತ ನ್ಯಾಯಾಂಗ ಇಲಾಖೆಯ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನ್ಯಾಯಾಂಗ ಬಡಾವಣೆಯಲ್ಲಿ ಅವರು ನಿವೇಶನ ಹೊಂದಿದ್ದಾರೆ. 2001ರಲ್ಲಿ 23 ಲಕ್ಷ ರೂಪಾಯಿ ಪಾವತಿಸಿ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಖರೀದಿಸಿದ್ದ ಅವರು, ಅಲ್ಲಿ ಕಟ್ಟಡವೊಂದನ್ನು ನಿರ್ಮಿಸಿದ್ದರು.ಅದಲ್ಲದೇ ಚಿತ್ರಾಪುರ ಗೃಹ ನಿರ್ಮಾಣ ಸಹಕಾರ ಸಂಘದ ವಸತಿ ಸಮುಚ್ಚಯದಲ್ಲಿ ಅಪಾರ್ಟ್‌ಮೆಂಟ್ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಇನ್ನೂ ಒಂದು ಅಪಾರ್ಟ್‌ಮೆಂಟ್ ಅವರ ಬಳಿ ಇದೆ.ಚಿತ್ರಾಪುರ ಗೃಹ ನಿರ್ಮಾಣ ಸಹಕಾರ ಸಂಘವು 99 ವರ್ಷಗಳ ಅವಧಿಯ ಗುತ್ತಿಗೆ ಆಧಾರದಲ್ಲಿ ವಸತಿ ಯೋಜನೆ ಕೈಗೊಂಡಿರುವುದರಿಂದ ಅಪಾರ್ಟ್‌ಮೆಂಟ್‌ನ ಒಡೆತನ ತಮ್ಮ ಬಳಿ ಇಲ್ಲ ಎಂದು ಅವರು ಪ್ರತಿಪಾದಿಸಿದ್ದರು.ಸದ್ಯ ಲೋಕಾಯುಕ್ತದಲ್ಲಿ ಲೋಕಾಯುಕ್ತ, ಎರಡನೇ ಉಪ ಲೋಕಾಯುಕ್ತ, ಡಿಐಜಿ ಹುದ್ದೆಗಳು ಖಾಲಿ ಇವೆ. ಸಂಸ್ಥೆಯ ರಿಜಿಸ್ಟ್ರಾರ್ ಹುದ್ದೆಯಲ್ಲಿದ್ದ ಎಂ.ಕೆ.ನಾಯರ್ ಮೂಲೆ ಅವರು ಇತ್ತೀಚೆಗಷ್ಟೇ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಸದಸ್ಯ ನ್ಯಾಯಾಧೀಶರಾಗಿ ವರ್ಗಾವಣೆ ಹೊಂದಿದ್ದು, ಬಿ.ಯೋಗಿನಾಥ್ ಅವರ ಸ್ಥಾನಕ್ಕೆ ಬಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry