ಶನಿವಾರ, ಮೇ 15, 2021
25 °C
ವಿಧಾನ ಮಂಡಲ ಕಲಾಪ

ಉಭಯ ಸದನಗಳಲ್ಲೂ ಗೋಡೆ ಗದ್ದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅರಣ್ಯ ಸಚಿವ ರಮಾನಾಥ ರೈ ಅವರ ಕಚೇರಿ ವಿಸ್ತರಣೆಗಾಗಿ ವಿಧಾನಸೌಧದಲ್ಲಿನ ಎರಡು ಕೋಣೆಗಳ (304, 305) ನಡುವಿನ ಗೋಡೆ ಕೆಡವಿದ ಪ್ರಕರಣ ವಿಧಾನಮಂಡಲದ ಉಭಯ ಸದನಗಳಲ್ಲಿ ಬುಧವಾರ ಪ್ರತಿಧ್ವನಿಸಿತು. ಪ್ರತಿಪಕ್ಷಗಳ ಸದಸ್ಯರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.ವಿಧಾನಸಭೆಯಲ್ಲಿ ಕೆಜೆಪಿಯ ಬಿ.ಎಸ್.ಯಡಿಯೂರಪ್ಪ ಮತ್ತು ವಿಧಾನ ಪರಿಷತ್ತಿನಲ್ಲಿ ಜೆಡಿಎಸ್ ನಾಯಕ ಎಂ.ಸಿ. ನಾಣಯ್ಯ ವಿಷಯ ಪ್ರಸ್ತಾಪಿಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಸಂತಾಪ ಸೂಚನೆ ನಂತರ ಯಡಿಯೂರಪ್ಪ ಮಾತನಾಡಿ, `ಕೆಂಗಲ್ ಹನುಮಂತಯ್ಯನವರು ಕಟ್ಟಿಸಿದ ಈ ಕಟ್ಟಡಕ್ಕೆ ಐತಿಹಾಸಿಕ ಮಹತ್ವ ಇದೆ. ತಮ್ಮ ಅನುಕೂಲಕ್ಕಾಗಿ ಗೋಡೆ ಒಡೆದಿರುವುದು ಅಕ್ಷಮ್ಯ ಅಪರಾಧ. ತಕ್ಷಣ ಈ ಹಿಂದೆ ಇದ್ದ ಹಾಗೆ ಗೋಡೆ ನಿರ್ಮಿಸಬೇಕು' ಎಂದು ಆಗ್ರಹಪಡಿಸಿದರು.`ಇದೊಂದು ಗಂಭೀರವಾದ ವಿಷಯ. ಇದನ್ನು ಸಚಿವರು ಹಗುರವಾಗಿ ತೆಗೆದುಕೊಳ್ಳಬಾರದು. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸಬೇಕು. ಗೋಡೆ ಒಡೆಯಲು ಕಾರಣರಾದ ಸಚಿವ ರೈ ಅವರಿಗೂ ಸರ್ಕಾರ ಎಚ್ಚರಿಕೆಯ ಸಂದೇಶ ನೀಡಬೇಕು' ಎಂದು ಅವರು ಒತ್ತಾಯಿಸಿದರು.ಇದೇ ವಿಷಯವನ್ನು ಬಿಜೆಪಿಯ ಆರ್.ಅಶೋಕ, ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ.ಟಿ.ರವಿ, ಡಿ.ಎನ್.ಜೀವರಾಜ್ ಸೇರಿದಂತೆ ಇತರರು ಕೂಡ ಪ್ರಸ್ತಾಪಿಸಿ, ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.ಪ್ರತಿಪಕ್ಷಗಳ ಸದಸ್ಯರ ಟೀಕೆಗೆ ಉತ್ತರ ನೀಡಲು ಸಚಿವ ರೈ ಮುಂದಾದರು. ಅದಕ್ಕೆ ಪ್ರತಿಪಕ್ಷ ಸದಸ್ಯರಿಂದ ವಿರೋಧ ವ್ಯಕ್ತವಾಯಿತು. ಯಡಿಯೂರಪ್ಪ ಮಾತನಾಡಿ, `ಅಪರಾಧಿ ಸ್ಥಾನದಲ್ಲಿರುವ ರೈ ಉತ್ತರ ನೀಡುವ ಅಗತ್ಯ ಇಲ್ಲ' ಎಂದು ಆಕ್ಷೇಪಿಸಿದರು.ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, `ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಡಿ.ಎಚ್.ಶಂಕರಮೂರ್ತಿ ಅವರು ಗೋಡೆ ಒಡೆಸಿದ ಉದಾಹರಣೆ ಇದೆ' ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದರು. ಇದಕ್ಕೂ ಪ್ರತಿಪಕ್ಷಗಳ ಸದಸ್ಯರಿಂದ ವಿರೋಧ ವ್ಯಕ್ತವಾಯಿತು. `ಇದು ಸರಿಯಾದ ಉತ್ತರ ಅಲ್ಲ' ಎಂದು ಟೀಕಿಸಿದರು.ತಪ್ಪು ಮಾಡಿಲ್ಲ: ಸಚಿವ ರೈ ಮಾತನಾಡಿ, `ಗೋಡೆ ಒಡೆದ ವಿಚಾರದಲ್ಲಿ ನನ್ನಿಂದ ಯಾವ ತಪ್ಪೂ ಆಗಿಲ್ಲ. ಕಚೇರಿ ಸಲುವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯವರು ಗೋಡೆ ಒಡೆದಿರಬಹುದು. ಇಷ್ಟಕ್ಕೂ ನಾನು ಇಂತಹದ್ದೇ ಕೊಠಡಿ ಬೇಕೆಂದು ಕೇಳಿರಲಿಲ್ಲ' ಎಂದು ಸ್ಪಷ್ಟಪಡಿಸಿದರು.`ಸಚಿವನಾದ ತಕ್ಷಣ ಕೊಠಡಿಯೊಂದನ್ನು ಗುರುತಿಸಿದ್ದೆ. ಆದರೆ, ನಾನು ತಿರುಪತಿಗೆ ಹೋಗಿ ಬರುವಷ್ಟರಲ್ಲಿ ಆ ಕೊಠಡಿಯಲ್ಲಿ ಬೇರೊಬ್ಬರು ಬಂದು ಕುಳಿತಿದ್ದರು. ಹೀಗಾಗಿ ಅಧಿಕಾರಿಗಳು ಬೇರೆ ಕೊಠಡಿಯನ್ನು ಹುಡುಕಿ, ಅಲ್ಲಿ ನನಗಾಗಿ ಸಿದ್ಧತೆ ಮಾಡುತ್ತಿದ್ದಾರೆ. ಅಧಿಕಾರಿಗಳಿಗೂ ಹೀಗೆಯೇ ಮಾಡಿ ಎಂದು ಹೇಳಿರಲಿಲ್ಲ. ವಾಸ್ತು ಕೂಡ ನಂಬುವುದಿಲ್ಲ' ಎಂದು ಅವರು ವಿವರಿಸಿದರು.ಈ ಕುರಿತು ಹೆಚ್ಚು ಚರ್ಚೆ ಅನಗತ್ಯ ಎಂದು ಹೇಳಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ಗೋಡೆ ಒಡೆಯಲು ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿದರು. ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, `ಹಿಂದೆ ವಿಧಾನಸೌಧ ಕಟ್ಟುವಾಗ ವಾಸ್ತು ಕಲ್ಪನೆ ಇರಲಿಲ್ಲ. ಇನ್ನು ಮುಂದೆ ಆ ಸಲುವಾಗಿ ನಡೆಯುವ ಬದಲಾವಣೆಗಳಿಗೆ ಅವಕಾಶ ನೀಡುವುದಿಲ್ಲ' ಎಂದು ಹೇಳಿದರು.ನಾಣಯ್ಯ ಆಕ್ರೋಶ: ಇದೇ ವಿಷಯವನ್ನು ಪರಿಷತ್ತಿನಲ್ಲಿ ಪ್ರಸ್ತಾಪಿಸಿದ ಜೆಡಿಎಸ್ ನಾಯಕ ಎಂ.ಸಿ. ನಾಣಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.`ಎರಡು ವರ್ಷಗಳ ಹಿಂದೆ ಆಗಿನ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಸಹ ಗೋಡೆ ಒಡೆಸಿದ್ದರು. ವಿಧಾನಸೌಧದ ಕಟ್ಟಡಕ್ಕೆ ಯಾವುದೇ ಧಕ್ಕೆ ತರಬಾರದು ಎಂಬ ಖಾಸಗಿ ಮಸೂದೆಯನ್ನು ನಾನು ಮಂಡಿಸಿದ್ದೆ. ಅದರ ಚರ್ಚೆಗೆ ಅವಕಾಶವೇ ಸಿಕ್ಕಿಲ್ಲ' ಎಂದು ತಿಳಿಸಿದರು.`ವಿನ್ಯಾಸದಲ್ಲಿ ಬದಲಾವಣೆ ತರುವ ನೆಪದಲ್ಲಿ ವಿಧಾನಸೌಧ ಒಡೆದು ಚೂರು, ಚೂರು ಮಾಡಲು ಹೊರಟಿದ್ದೀರಾ' ಎಂದು ಕೆಣಕಿದರು.

`ನಾಣಯ್ಯನವರು ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಲು ಈ ಹೇಳಿಕೆ ನೀಡುತ್ತಿದ್ದಾರೆ' ಎಂದು ಕಾಂಗ್ರೆಸ್ ಸದಸ್ಯ ಆರ್.ವಿ.ವೆಂಕಟೇಶ್ ಹೇಳಿದರು.

ಅವರ ಹೇಳಿಕೆಗೆ ವಿರೋಧ ಪಕ್ಷದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. `40 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಇರುವ ನನಗೆ ಅಂತಹ ಪ್ರಚಾರದ ಹುಚ್ಚು ಇಲ್ಲ' ಎಂದು ನಾಣಯ್ಯ ಕಿಡಿಕಾರಿದರು. ಬಳಿಕ ವೆಂಕಟೇಶ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದರು.`ಗೋಡೆ ಒಡೆಯಲು ಸಚಿವರು ಯಾವುದೇ ಆದೇಶ ಹೊರಡಿಸಿರಲಿಲ್ಲ. ಅಚಾತುರ್ಯದಿಂದ ಈ ಘಟನೆ ನಡೆದಿದೆ. ಕಟ್ಟಡದ ಘನತೆಗೆ ಧಕ್ಕೆ ಉಂಟಾಗುವ ಇಂತಹ ಕೆಲಸಗಳು ಮತ್ತೆ ನಡೆಯದಂತೆ ಎಚ್ಚರ ವಹಿಸಲಾಗುವುದು' ಎಂದು ಸಭಾನಾಯಕ ಎಸ್.ಆರ್. ಪಾಟೀಲ ಮತ್ತು ಸಚಿವ ದೇಶಪಾಂಡೆ ಸ್ಪಷ್ಟನೆ ನೀಡಿದರು.

ರೈ ಕೊಠಡಿಗೆ ಹಾರೆ: ಸಿಎಂ ಆಕ್ಷೇಪ

ನವದೆಹಲಿ:
ಅರಣ್ಯ ಸಚಿವ ರಮಾನಾಥ ರೈ ಅವರಿಗೆ ನೀಡಲಾಗಿರುವ ವಿಧಾನಸೌಧದ 3ನೇ ಮಹಡಿಯಲ್ಲಿನ ಎರಡು ಕೊಠಡಿಗಳ ನಡುವಿನ ಗೋಡೆಯನ್ನು ಒಡೆದು ಹಾಕಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾವುದೇ ಸಚಿವರ ಇಂತಹ ಕ್ರಮವನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.ಪ್ರಧಾನಿ ಕರೆದಿರುವ ಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಭೇಟಿ ನೀಡಿರುವ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ತಾವು ಈ ಸಂಬಂಧ ಸಚಿವ ರೈ ಜತೆ ಸಮಾಲೋಚನೆ ನಡೆಸುವುದಲ್ಲದೆ ಗೋಡೆ ಒಡೆದುಹಾಕಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ವಿವರಣೆ ಕೇಳಲಾಗುವುದು ಎಂದರು.ಸಚಿವಾಲಯದ ಕಟ್ಟಡವೂ ಸಹ ಪರಂಪರೆಯ ಭಾಗವಾಗಿದೆ. ಇಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲವೆ ನೆಲಸಮ ಕಾಮಗಾರಿಗಳಿಗೆ ಅವಕಾಶ ನೀಡದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.