ಗುರುವಾರ , ನವೆಂಬರ್ 21, 2019
21 °C
ಅಶೋಕ್ ಖೇಣಿ ನಾಮಪತ್ರ ವಿಚಾರಣೆಯಲ್ಲಿ ಆಸಕ್ತಿ ಕೆರಳಿಸಿದ ವಾದ

ಉಮೇದುವಾರಿಕೆ ಅನರ್ಹವಾಗುವುದೇ?

Published:
Updated:

ಬೀದರ್: ಸಂಸ್ಥೆ ಅಭಿವೃದ್ಧಿ ಕುರಿತಂತೆ ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡ ಆಧಾರದಲ್ಲಿ ಆ ಸಂಸ್ಥೆಗೆ ಸಂಬಂಧಿಸಿದವರನ್ನು 1951ರ ಜನಪ್ರತಿನಿಧಿ ಕಾಯ್ದೆ ನಿಯಮ 9ಎ ಅನುಸಾರ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸುವುದರಿಂದ ಅನರ್ಹಗೊಳಿಸಬಹುದೇ?ಈ ಪ್ರಶ್ನೆ ಶುಕ್ರವಾರ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ನೀಲಕಂಠ ಅವರ ಕಚೇರಿಯಲ್ಲಿ ವಾದ, ಪ್ರತಿವಾದಕ್ಕೆ ಸಾಕ್ಷಿಯಾಯಿತು.ಈ ಕ್ಷೇತ್ರದಲ್ಲಿ ಕರ್ನಾಟಕ ಮಕ್ಕಳ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಪಕ್ಷೇತರ ಅಭ್ಯರ್ಥಿ ಅಬ್ರಹಾಂ ಅವರು ತಕರಾರು ಅರ್ಜಿ ಸಲ್ಲಿಸಿದ್ದರು.ಖೇಣಿ ನೇತೃತ್ವದ ನೈಸ್ ಸಂಸ್ಥೆಯು ಸರ್ಕಾರ ಜೊತೆಗೆ ರಸ್ತೆ ಅಭಿವೃದ್ಧಿ ಕಾರ್ಯದ ಕುರಿತು ಒಪ್ಪಂದ ಮಾಡಿಕೊಂಡಿದೆ. ಈ ಆಧಾರದಲ್ಲಿ 1951ರ ಜನಪ್ರತಿನಿಧಿ ಕಾಯ್ದೆ 9ಎ ಅನುಸಾರ ಅವರ ಸ್ಪರ್ಧೆಯನ್ನು ಅನರ್ಹಗೊಳಿಸಬೇಕು ಎಂಬುದು ಆ ತಕರಾರು.ಇದಕ್ಕೆ ಉತ್ತರಿಸಿದ ಖೇಣಿ ಪರವಾದ ಹಿರಿಯ ವಕೀಲ ಎಸ್.ಎಂ.ಚಂದ್ರಶೇಖರ್ ಅವರು, `ಉಲ್ಲೇಖಿಸಿರುವ ಯೋಜನೆಯನ್ನು ಸರ್ಕಾರ ಕಾರ್ಯಗತಗೊಳಿಸುತ್ತಿಲ್ಲ; ಈ ಯೋಜನೆಯಲ್ಲಿ ಸರ್ಕಾರ ಯಾವುದೇ ಆಸಕ್ತಿಯೂ ಇಲ್ಲ' ಎಂದು ಪ್ರತಿಪಾದಿಸಿದರು.ಕಾಯ್ದೆಯ 9ಎ  ನಿಯಮದ ಪ್ರಕಾರ, ನಿರ್ದಿಷ್ಟ ಸರ್ಕಾರದ ಜೊತೆಗೆ ವ್ಯಕ್ತಿ ಒಪ್ಪಂದ ಮಾಡಿಕೊಂಡಿರಬೇಕು. ಈ ಯೋಜನೆಯಲ್ಲಿ ಖೇಣಿ ಅವರು ಸರ್ಕಾರದ ಜೊತಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಈ ಒಪ್ಪಂದ ಇರುವುದು ಕಂಪನಿ ಮತ್ತು ಸರ್ಕಾರದ ನಡುವೆ ಎಂದು ವಾದಿಸಿದರು.ಕಂಪನಿ ಕಾಯ್ದೆಯ ಪ್ರಕಾರ, ಕಂಪನಿಗೆ ಪ್ರತ್ಯೇಕ ಅಸ್ತಿತ್ವವಿದೆ. ಕಂಪೆನಿ ಮಾಲೀಕನಾಗಿ ಒಬ್ಬ ವ್ಯಕ್ತಿಯನ್ನು ಪರಿಗಣಿಸಲಾಗದು. ಕಂಪೆನಿ ವ್ಯವಸ್ಥಾಪಕ ನಿರ್ದೇಶಕನನ್ನೂ ಮಾಲೀಕ ಎಂದು ಪರಿಗಣಿಸಲಾಗದು ಎಂದು ವಾದಿಸಿದರು. ಪೂರಕವಾಗಿ ಸುಪ್ರೀಂ ಕೋರ್ಟ್‌ನ ಆದೇಶವನ್ನು (ಎಐಆರ್1971 ಎಸ್‌ಸಿ 1943) ಉಲ್ಲೇಖಿಸಿದರು.ಜನ ಪ್ರತಿನಿಧಿ ಕಾಯ್ದೆಯ 9ಎ ನಿಯಮದ ಅನುಸಾರ ಅಭ್ಯರ್ಥಿಯನ್ನು ಅನರ್ಹಗೊಳಿಸ ಬಹುದೇ ಎಂಬ ಪ್ರಶ್ನೆಗೆ ಪ್ರತಿಯಾಗಿ ಖೇಣಿ ಪರ ವಕೀಲರು ಮಾಂಗಿಲಾಲ್ ವಿರುದ್ಧ ಕೆ.ಆರ್. ಪವಾರ್ ಅಂಡ್ ಎಎನ್‌ಆರ್ (ಎಐಆರ್ 1971 ಎಸ್‌ಸಿ 1943) ಪ್ರಕರಣವನ್ನು ಉಲ್ಲೇಖಿಸಿದರು.ಅದರ ಪ್ರಕಾರ, 9ಎ ನಿಯಮ ಅನ್ವಯವಾಗಬೇಕಾದರೆ ನಿರ್ದಿಷ್ಟವಾಗಿ ವ್ಯಕ್ತಿ ಸೂಕ್ತ ಸರ್ಕಾರದ ಜೊತೆಗೆ ವಸ್ತುಗಳ ಪೂರೈಕೆ ಅಥವಾ ಯೋಜನೆಯನ್ನು ಕಾರ್ಯಗತಗೊಳಿಸುವುದರ ಸಂಬಂಧ ಒಪ್ಪಂದವನ್ನು ಮಾಡಿಕೊಂಡಿರಬೇಕು.ಅಂತಿಮವಾಗಿ, `ವ್ಯಕ್ತಿ ಪಾಲುದಾರ ಅಥವಾ ನಿರ್ದೇಶಕ ಮಂಡಳಿ ಸದಸ್ಯ ಆಗಿರುವ ಕಂಪೆನಿ ನಿರ್ದಿಷ್ಟ ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ ಎಂಬ  ಕಾರಣದಿಂದ ವ್ಯಕ್ತಿಯನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗದು. ಹೀಗಾಗಿ, ತಕರಾರನ್ನು ತಳ್ಳಿ ಹಾಕಲಾಗಿದೆ' ಎಂದು ಚುನಾವಣಾಧಿಕಾರಿಗಳು ಆದೇಶದಲ್ಲಿ ಹೇಳಿದರು.

ಪ್ರತಿಕ್ರಿಯಿಸಿ (+)