ಉರುಳಿಗೆ ಸಿಲುಕಿದ ಚಿರತೆ ರಕ್ಷಣೆ

7

ಉರುಳಿಗೆ ಸಿಲುಕಿದ ಚಿರತೆ ರಕ್ಷಣೆ

Published:
Updated:
ಉರುಳಿಗೆ ಸಿಲುಕಿದ ಚಿರತೆ ರಕ್ಷಣೆ

ಸೋಮವಾರಪೇಟೆ: ತೋಟದ ಬೇಲಿಯ ಉರುಳಿಗೆ ಸಿಲುಕಿಕೊಂಡ ಚಿರತೆಯನ್ನು ಅರಣ್ಯ ಇಲಾಖೆಯವರು ರಕ್ಷಿಸಿ ಆನೆಕಾಡು ಅರಣ್ಯಕ್ಕೆ ಬಿಟ್ಟ ಘಟನೆ ನಗರಕ್ಕೆ ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಮಾಲಂಬಿ ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ದೊಡ್ಡಮಳ್ತೆ ಗ್ರಾಮದ ಎಚ್.ಎ. ಕೃಷ್ಣಪ್ಪ ಎಂಬವರ ಕಾಫಿ ತೋಟದ ಬೇಲಿಗೆ ಕಾಡುಹಂದಿಗಾಗಿ ಯಾರೋ ಹಾಕಿದ್ದ ಉರುಳಿಗೆ 6 ವರ್ಷ ಪ್ರಾಯದ ಗಂಡು ಚಿರತೆಯೊಂದು ಸಿಲುಕಿಕೊಂಡು ಸಾಯುವ ಹಂತ ತಲುಪಿತ್ತು.ಚಿರತೆಯ ಸೊಂಟಕ್ಕೆ ಕೇಬಲ್ ಸುತ್ತಿಕೊಂಡ ಪರಿಣಾಮ ನರಳಾಡುತ್ತಿದ್ದಾಗ, ಅದೇ ಮಾರ್ಗವಾಗಿ ಬರುತ್ತಿದ್ದ ವ್ಯಕ್ತಿಯಬ್ಬರಿಗೆ ಕಂಡು ಬಂದಿದ್ದು, ಅವರು ಭಯಭೀತರಾಗಿ ಓಡಿ ಹಿರಿಕರ ಗ್ರಾಮದ ಗ್ರಾಮಸ್ಥರಿಗೆ ವಿಷಯ ತಿಳಿಸಿದರು.ಮಾಹಿತಿ ಪಡೆದ ಮಾಲೀಕ ತೋಟಕ್ಕೆ ಆಗಮಿಸಿ ನೋಡಿದಾಗ ಉರುಳಿಗೆ ಸಿಲುಕಿಕೊಂಡಿದ್ದ ಚಿರತೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಸುತ್ತಲೂ ಸೇರಿದ ಜನತೆಯನ್ನು ಬೆದರಿಸುತ್ತಿತ್ತು. ತಕ್ಷಣವೇ ಚಿರತೆ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಚಿರತೆಯ ಸೆರೆಗಾಗಿ ಅರಿವಳಿಕೆ ತಜ್ಞರು ಹುಣಸೂರಿನಿಂದ ಆಗಮಿಸಬೇಕಾಗಿದ್ದರಿಂದ ಮಧ್ಯಾಹ್ನ 12.30ರವರೆಗೂ ಕಾಯಬೇಕಾಯಿತು.ಅಷ್ಟರಲ್ಲಾಗಲೇ ವಿಷಯ ತಿಳಿದ ನೂರಾರು ಮಂದಿ ಸ್ಥಳಕ್ಕೆ ಬಂದರು. ನಡುನಡುವೆ ಚಿರತೆಯ ಘರ್ಜನೆ ನೆರೆದಿದ್ದವರನ್ನು ಓಡುವಂತೆ ಮಾಡುತ್ತಿತ್ತು. ಮಧ್ಯಾಹ್ನದ ವೇಳೆಗೆ ಆಗಮಿಸಿದ ಹುಣಸೂರು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಸಹಾಯಕ ನಿರ್ದೇಶಕ ಡಾ.ಉಮಾಶಂಕರ್, 2 ಅರಿವಳಿಕೆ ಚುಚ್ಚುಮದ್ದು ನೀಡಿ ಚಿರತೆ ಪ್ರಜ್ಞೆ ತಪ್ಪುವಂತೆ ಮಾಡಿದರು.

 

ನಂತರ ಗ್ರಾಮಸ್ಥರ ಸಹಕಾರದಿಂದ ಚಿರತೆಯನ್ನು ಬಲೆಯಲ್ಲಿ ಬಂಧಿಸಲಾಯಿತು. ಸೆರೆಸಿಕ್ಕ ಚಿರತೆಯನ್ನು ಒಂದೆರಡು ಗಂಟೆಯೊಳಗೆ ಅರಣ್ಯಕ್ಕೆ ಬಿಡಬೇಕಾದ್ದರಿಂದ ಕುಶಾಲನಗರ ಸಮೀಪದ ಆನೆಕಾಡು ಅರಣ್ಯಕ್ಕೆ ಬಿಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry