ಬುಧವಾರ, ಜೂನ್ 16, 2021
28 °C

ಉರುಳಿದ ಬಸ್: 15 ಮಂದಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉರುಳಿದ ಬಸ್: 15 ಮಂದಿಗೆ ಗಾಯ

ಗೋಣಿಕೊಪ್ಪಲು: ಕಣ್ಣೂರಿನಿಂದ ಮೈಸೂರಿಗೆ ತೆರಳುತ್ತಿದ್ದ ರಸ್ತೆ ಸಾರಿಗೆ ಬಸ್ ಗೋಣಿಕೊಪ್ಪಲಿನ ತಿತಿಮತಿ ಬಳಿ ಸೇತುವೆಯಿಂದ ಕೆಳಗುರುಳಿ 15ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಬುಧವಾರ ಸಂಜೆ ನಡೆದಿದೆ. 4 ಮಂದಿ ಪರಿಸ್ಥಿತಿ ಗಂಭೀರವಾಗಿದೆ. ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದ ವಿರಾಜಪೇಟೆ ನ್ಯಾಷನಲ್ ಇನ್ಷೂರೆನ್ಸ್ ಕಂಪನಿಯ ಮ್ಯಾನೇಜರ್ ಶಿವು ಮಾದಯ್ಯ, ಸಹೋದ್ಯೋಗಿ  ಕೃಷ್ಣಮೂರ್ತಿ, ಎಚ್.ಡಿ.ಕೋಟೆಯ ಗೋಪಾಲ ಬಿಳಿಕೆರೆಯ ಯೋಗಣ್ಣ ಅವರಿಗೆ ತಿತಿಮತಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯಲಾಯಿತು. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರೆಲ್ಲ ತಿತಿಮತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ತಿತಿಮತಿ ಪೊಲೀಸ್ ಠಾಣೆ ಬಳಿ ಇರುವ ಸೇತುವೆ ಬಳಿ ಬಸ್ ಚಲಿಸುತ್ತಿದ್ದಾಗ ರಸ್ತೆಯ ಹೊಂಡಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಬಸ್ ಸ್ಟಿಯರಿಂಗ್ ತುಂಡಾಗಿ  ನಿಯಂತ್ರಣಕ್ಕೆ ಸಿಗದೇ ಸೇತುವೆಯಿಂದ ಕೆಳಗೆ ಉರುಳಿತು ಎಂದು ಬಸ್ ಚಾಲಕ ರಫೀಕ್ ತಿಳಿಸಿದರು. ಕಿರು ಹೊಳೆಯಲ್ಲಿ ನೀರಿಲ್ಲದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.ಬ್ರಿಟಿಷರ ಕಾಲದ್ದಾದ ಈ ಸೇತುವೆ ಬಹಳ ತಗ್ಗಿನಲ್ಲಿದ್ದು ತುಂಬಾ ಕಿರಿದಾಗಿದೆ. ರಸ್ತೆಯೂ ತೀವ್ರ ಹೊಂಡ ಬಿದ್ದಿದೆ. ಕಳೆದ ವರ್ಷ ಇದೇ ಸೇತುವೆ ಮೇಲೆ ರಸ್ತೆ ಸಾರಿಗೆ ಬಸ್ ಅಪಘಾತಕ್ಕೀಡಾಗಿ ಪಕ್ಕದ ಮನೆಗೆ ನುಗ್ಗಿ ತೀವ್ರ ಹಾನಿಯಾಗಿತ್ತು.ಇದೇ ರೀತಿಯ ಅಪಘಾತ ಆಗಾಗ್ಗೆ ನಡೆಯುತ್ತಿದ್ದರೂ ಲೋಕೊಪಯೋಗಿ ಇಲಾಖೆ ಸೇತುವೆ  ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸೇತುವೆ ಮರು ನಿರ್ಮಾಣದ ಜರೂರಿನ ಬಗ್ಗೆ `ಪ್ರಜಾವಾಣಿ~ ಈ ಹಿಂದೆಯೇ ವಿಸ್ತೃತ ವರದಿ ಮಾಡಿತ್ತು. ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.