ಉರುಸ್: ಕುಟುಂಬ ಸಂಗಮ

7

ಉರುಸ್: ಕುಟುಂಬ ಸಂಗಮ

Published:
Updated:

ಗುಲ್ಬರ್ಗ:  ಧಾರ್ಮಿಕ ಸೌಹಾರ್ದ ಕೇಂದ್ರವಾದ ಇಲ್ಲಿನ ಐತಿಹಾಸಿಕ ದರ್ಗಾದಲ್ಲಿ ಖ್ವಾಜಾ ಬಂದೇ ನವಾಜ್ `ಉರುಸ್-ಇ-ಶರೀಫ್~ ಮಂಗಳವಾರದಿಂದ ಆರಂಭವಾಗಿದೆ.ಒಂದು ತಿಂಗಳ ಕಾಲ ನಡೆಯಲಿರುವ ಉರುಸ್‌ಗೆ ವಿದೇಶ ಹಾಗೂ ದೇಶದ ವಿವಿಧ ರಾಜ್ಯಗಳಿಂದ ಮುಸ್ಲಿಂರಷ್ಟೇ ಅಲ್ಲ, ಇತರ ಧರ್ಮಗಳ ಕುಟುಂಬಗಳು ಆಗಮಿಸಿವೆ. ಉರುಸ್ ನೆಪದಲ್ಲಿ ಎಲ್ಲರೂ ಒಂದೆಡೆ ಸೇರುವ `ಕುಟುಂಬಗಳ ಸಂಗಮ~ವಾಗಿ ಪರಿವರ್ತನೆ  ಗೊಳ್ಳುತ್ತಿದೆ.ಇಸ್ಲಾಂರಲ್ಲಿ ಇರುವ ಪಂಥಗಳಲ್ಲಿ ಸೂಫಿ ಕೂಡ ಒಂದು. ಸೂಫಿ ಪಂಥದಲ್ಲಿ ಪ್ರಾದೇಶಿಕತೆಯನ್ನು ಅಪ್ಪಿಕೊಂಡಿರುವುದರಿಂದ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಒತ್ತುಕೊಟ್ಟು ಜನಸಾಮಾನ್ಯರ ದೈನಂದಿನ ಚಟುವಟಿಕೆ ಹಾಗೂ ಬದುಕನ್ನು ಸ್ವೀಕರಿಸಿಕೊಂಡಿದೆ. ತನ್ನದೇ ಆದಂತಹ ಆಚಾರ-ವಿಚಾರಗಳನ್ನು ಒಳಗೊಂಡು, ಸ್ಥಳೀಯ ಮೌಲ್ಯಗಳಿಗೆ ಪ್ರಾಶಸ್ತ್ಯ ನೀಡಲಾಗುತ್ತದೆ. ಹೀಗೆಯೇ ಸೂಫಿ ಸಂತ ಖ್ವಾಜಾ ಬಂದೇ ನವಾಜ್ ಉರುಸ್ ಅನ್ನು ಸಹ ಇಲ್ಲಿ ಆಚರಿಸಲಾಗುತ್ತಿದೆ. ಅರ್ಥ:`ಉರುಸ್~ ಎಂದರೆ `ಮದುವೆ~ (ಭಕ್ತ-ದೇವರ ನಡುವಿನ ಆತ್ಮಾನುಸಂಧಾನ) ಎಂದು ಇಲ್ಲಿ ಅರ್ಥವಿದೆ. ಉರುಸ್ ಮೂರು ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ. ಈ  ಅವಧಿಯಲ್ಲಿ ಒಂದು ದಿನ `ಸಂದಲ್~ (ಗಂಧ), ಒಂದು ದಿನ ಚಿರಾಗ್(ಹಣತೆ ಅಥವಾ ದೀಪ), ಮತ್ತೊಂದು ದಿನ `ಜಿಯಾರಾತ್~ (ಗೋರಿಗಳಿಗೆ ಎಡೆ ಅರ್ಪಿಸುವುದು) ಅರ್ಪಿಸುವ ಮೂಲಕ ಆಚರಣೆ ಮಾಡಲಾಗುತ್ತದೆ.ಈ ಮೂರು ದಿನಗಳು ಬಹು ಮುಖ್ಯ. ಆದ್ದರಿಂದ ಜನರು ತಮ್ಮ ಊರುಗಳಿಂದ ಒಂದು ದಿನ ಮುಂಚಿತವಾಗಿ ಬಂದು ದರ್ಗಾದಲ್ಲಿ ನೆಲೆಸುತ್ತಾರೆ. ಈ ಮೂರು ದಿನಗಳ ಕಾಲ `ಅಲ್ಲಾಹು~ ಸನ್ನಿಧಿಯಲ್ಲಿ ಇದ್ದು ತಮ್ಮ ಹರಕೆಗಳನ್ನು  ಈಡೇರಿಸುತ್ತಾರೆ ಎಂಬುದು ಭಕ್ತರ ನಂಬಿಕೆ.`ನಾವು ಇಲ್ಲಿಗೆ ಬಂದು ನಾಲ್ಕು ದಿನವಾಯಿತು. ಈ ದಿನ ರಾತ್ರಿ ಇಲ್ಲಿಂದ ನಮ್ಮ ಊರಿಗೆ ತೆರುಳುತ್ತೇವೆ. ಸಂದಲ್‌ಗೂ ಮುಂಚೆ ಬಂದು ಇಲ್ಲಿ ನೆಲೆಸಿದ್ದೇವೆ. ನಾವು ಇ್ಲ್ಲಲಿಗೆ ಬರುವಾಗ ಮನೆಯಿಂದ ಅಡುಗೆಯ ಎಲ್ಲ ಸಾಮಗ್ರಿಗಳನ್ನು ತೆಗೆದುಕೊಂಡು ಬರುತ್ತೇವೆ.ಕೆಲವರು ಒಲೆ ಉರಿಸಿ ಅಡುಗೆ ಮಾಡಿದರೆ ಇನ್ನು ಕೆಲವರು ಸ್ಟವ್ ಬಳಸುತ್ತಾರೆ. ಇಲ್ಲಿ ಹಾಕಿರುವ ಶಾಮಿಯಾನದಲ್ಲಿಯೇ ನಮ್ಮ ವಸತಿ. ಮೂರು ದಿನಗಳಿಂದ ಬೇರೆ ಬೇರೆ ಜಾತಿ, ಧರ್ಮಗಳ ಜನರು ಈ ಶಾಮಿಯಾನದಡಿ ಯಾವುದೇ ಅಡ್ಡಿ ಆತಂಕಗಳಿಲ್ಲದೆ  ತಂಗಿದ್ದೇವೆ. ಬಾಬಾರ ಸನ್ನಿಧಿಯಲ್ಲಿ ಮೂರು ದಿನಗಳ ಕಾಲ ನೆಲೆಸುವುದೇ ನಮ್ಮ ಭಾಗ್ಯ~ ಎನ್ನುತ್ತಾರೆ ಮುಂಬೈಯಿಂದ ಬಂದ ಮುಖೇಶ್ ಸರ್‌ದೇಶಪಾಂಡೆ.ಹೈದರಾಬಾದ್‌ನ ರಜಿಯಾ ಭಾನು, ಕುಟುಂಬ ಸಮೇತರಾಗಿ ಬಂದು ಮೂರು ದಿನವಾಯಿತು.ಏಕತೆಯ ನೆಲೆವೀಡಾದ ಬಂದೇ ನವಾಜ್ ದರ್ಗಾಕ್ಕೆ ಬರುವುದರಿಂದ ವಿವಿಧ ಸಮುದಾಯದ ಪರಿಚಿತರು, ಇಲ್ಲಿರುವ ಕುಟುಂಬ ಸದಸ್ಯರೊಂದಿಗೆ ಬೆರೆಯುತ್ತೇವೆ. ಇದರಿಂದ ಮೇಲು- ಕೀಳು ಎಂಬ ಭಾವನೆ ಹೋಗುತ್ತದೆ. ನಮ್ಮಲ್ಲಿರುವ ಕಂದಕಗಳು ದೂರವಾಗುತ್ತದೆ~ ಎಂದು ಉರುಸ್‌ನಲ್ಲಿ ಬಾಂಧವ್ಯದ ಬೆಸುಗೆಯನ್ನು ವಿವರಿಸಿದರು.

`ಇಂದು ಮಕ್ಕಳಿಗೆ ಇಷ್ಟವಾದ ಸಾಮಗ್ರಿಗಳನ್ನು ಕೊಡಿಸಿ ಹೊರಡುವ ಸಿದ್ಧತೆ ನಡೆಸುತ್ತೇವೆ. ಇಲ್ಲಿ ಮಕ್ಕಳ ಆಟಿಕೆ, ಬಟ್ಟೆಬರೆ, ಪಾತ್ರೆ, ಮನೆ ಪರಿಕರಗಳು ಇತ್ಯಾದಿ ಜನಸಾಮಾನ್ಯರ ಕೈಗೆಟಕುವ ದರದಲ್ಲಿ ದೊರೆಯುತ್ತವೆ. ನಮ್ಮ ಊರಲ್ಲಿ ಸಿಗದ ಕೆಲವೊಂದು ಮನೆ ಬಳಕೆ ವಸ್ತುಗಳನ್ನು ಇಲ್ಲಿಂದಲೇ ತೆಗೆದುಕೊಂಡು ಹೋಗುತ್ತೇವೆ. ಎಲ್ಲದಕ್ಕೂ ಹೆಚ್ಚಾಗಿ ಅಲೂಮಿನಿಯಂ ಪಾತ್ರೆ (ಮುರಾದಾಬಾದ್ ಡಿಸೈನ್)ಗಳು ಸಿಗುವುದು ವಿಶೇಷ. ಮನೆ ಬಳಕೆಗೆ ಹಾಗೂ ಅಲಂಕಾರಕ್ಕೂ ಬಳಸಬಹುದಾದ್ದರಿಂದ ಕೊಂಡ್ಯೊಯುತ್ತೇವೆ~ ಎಂದು ಗೀತಾ ಸಂತಸ ವ್ಯಕ್ತಪಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry