ಉರ್ದು ಶಾಲೆ ಸ್ಥಿತಿ-ಗತಿ ಅಧ್ಯಯನಕ್ಕೆ ಸಮಿತಿ ಶೀಘ್ರ

7

ಉರ್ದು ಶಾಲೆ ಸ್ಥಿತಿ-ಗತಿ ಅಧ್ಯಯನಕ್ಕೆ ಸಮಿತಿ ಶೀಘ್ರ

Published:
Updated:

ಶಿರಸಿ: ರಾಜ್ಯದಲ್ಲಿರುವ ಉರ್ದು ಶಾಲೆಗಳ ಸ್ಥಿತಿಗತಿ ಅಧ್ಯಯನಕ್ಕೆ ಪ್ರತ್ಯೇಕವಾಗಿ ತಜ್ಞರ ಸಮಿತಿಯನ್ನು ಶೀಘ್ರದಲ್ಲೇ ನೇಮಕ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಇಲ್ಲಿ ತಿಳಿಸಿದರು.ತಾಲ್ಲೂಕಿನ ಇಸಳೂರಿನಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಅಲ್ಪಸಂಖ್ಯಾತ ಉರ್ದು ಭಾಷೆ ಶಾಲೆ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಉರ್ದು ಭಾಷಾ ಶಿಕ್ಷಣ ತಜ್ಞರು, ವಿಶ್ರಾಂತ ಕುಲಪತಿಗಳು, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಗಳ ಪ್ರಮುಖರು, ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿಗಳು, ಪಾಲಕರು, ಶಿಕ್ಷಕರು, ವಿದ್ಯಾರ್ಥಿ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ಸದ್ಯದಲ್ಲೇ ರಚಿಸಲಾಗುವುದು. ಮೂರು ತಿಂಗಳಿನ ಒಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಸಮಿತಿಗೆ ಸೂಚಿಸಲಾಗುತ್ತದೆ ಎಂದರು.ರಾಜ್ಯದಲ್ಲಿ ಒಟ್ಟು ಉರ್ದು ಮಾಧ್ಯಮದ 2,333 ಕಿರಿಯ ಪ್ರಾಥಮಿಕ, 2,341 ಹಿರಿಯ ಪ್ರಾಥಮಿಕ ಹಾಗೂ 485 ಪ್ರೌಢಶಾಲೆಗಳಿದ್ದು, 5.5 ಲಕ್ಷ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ಸರ್ಕಾರ ಈ ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದರೂ ಕೆಲವು ಕಡೆ ಮೂಲಸೌಲಭ್ಯಗಳ ಕೊರತೆ ಕಂಡುಬಂದಿದೆ.ಈ ಹಿನ್ನೆಲೆಯಲ್ಲಿ ಮೂಲಸೌಕರ್ಯ ಹೆಚ್ಚಳಕ್ಕೆ ಸಲಹೆ, ಶಿಕ್ಷಕರ ಸೇವಾ ಸಾಮರ್ಥ್ಯ ವೃದ್ಧಿಗೆ ಅಗತ್ಯವಿದ್ದರೆ ತರಬೇತಿ ಹಾಗೂ ಉರ್ದು ಮಾಧ್ಯಮ ವಿದ್ಯಾರ್ಥಿಗಳ ಉದ್ಯೋಗಾವಕಾಶಗಳ ಸಾಧ್ಯತೆ ಕುರಿತು ವಿಶೇಷ ಗಮನಹರಿಸಲಾಗುತ್ತದೆ. ಉರ್ದು ಮಾಧ್ಯಮ ಶಾಲೆಗಳ ಸಮಗ್ರ ಮಾಹಿತಿ ಸಂಗ್ರಹಿಸಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry