ಉಲ್ಕಾಪಾತ! (ಚಿತ್ರ: ತಾರೆ)

7

ಉಲ್ಕಾಪಾತ! (ಚಿತ್ರ: ತಾರೆ)

Published:
Updated:

ಸ್ಪಷ್ಟವಾದ ಉದ್ದೇಶ, ಗುರಿ, ಕಸುಬುದಾರಿಕೆ- ಇವ್ಯಾವುದರ ಲವಲೇಶವೂ ಇಲ್ಲದ ಚಿತ್ರ `ತಾರೆ~. ತಾವೂ ಒಂದು ಚಿತ್ರ ನಿರ್ದೇಶಿಸಬೇಕಷ್ಟೆ ಎಂಬ ಧೋರಣೆಯಿಂದ ಶಿವರಾಜ್ ಹೊಸಕೆರೆ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದಂತಿದೆ.ತ್ರಿಕೋನ ಪ್ರೇಮಕಥೆಯಂತೆ ಕಾಣುವ ಚಿತ್ರ ಕೊನೆಕೊನೆಗೆ ಚತುಷ್ಕೋನ ಪ್ರೇಮವಾಗುತ್ತದೆ. ನಟನ ಬೇಡಿಕೆಗೋ, ಅನುಕೂಲಕ್ಕೋ ಸೃಷ್ಟಿಯಾದ, ಅನಗತ್ಯ ವಾದ ಇನ್ನೊಂದು ಪಾತ್ರದ ಪರಿಣಾಮವಿದು. ಚಿತ್ರದಲ್ಲಿನ ಎರಡು ಪ್ರೇಮಗಳು ವಿಫಲವಾದರೆ ಒಂದು ಸಾವಿನಲ್ಲಿ ಪರ್ಯವಸಾನಗೊಳ್ಳುತ್ತದೆ. ನಾಯಕ ಕೊನೆಕೊನೆಗೆ ದಿಕ್ಕುತೋಚದೆ ಹುಚ್ಚನಂತೆ ವರ್ತಿಸತೊಡಗುತ್ತಾನೆ. ಅವನ ಸುತ್ತಲಿನ ಪಾತ್ರಗಳು ಕೂಡ ನಿಂತಲ್ಲೇ `ಏನಾಯ್ತೋ... ಏನಾಯ್ತೋ...~ ಎಂದು ಕೂಗುತ್ತಿರುತ್ತವೆ. ಹಾಗೆ ಕೂಗುತ್ತಾ ನಿಲ್ಲವವರಲ್ಲಿ ಕವಿ ದೊಡ್ಡರಂಗೇಗೌಡರು ಕೂಡ ಇದ್ದಾರೆ. ಪ್ರೇಕ್ಷಕನ ಸ್ಥಿತಿಯೂ ಅಷ್ಟು ಹೊತ್ತಿಗೆ ದಿಕ್ಕೆಟ್ಟಂತಾಗಿರುತ್ತದೆ.ಕುಗ್ರಾಮದಿಂದ ಕಷ್ಟಪಟ್ಟು ನಗರಕ್ಕೆ ಬಂದು ವಿದ್ಯೆ ಕಲಿತು ಹಳ್ಳಿಗೇ ಮರಳುವ ನಾಯಕ; ಕಾಲೇಜಿನಲ್ಲಿ ಅವನನ್ನು ನಾಗರಿಕನನ್ನಾಗಿ ಮಾಡಿ, ಪ್ರೀತಿಸುವ ಸಹಪಾಠಿಯ ಪ್ರೇಮದ ಕರೆಯೋಲೆಯ ತಿರಸ್ಕಾರ; ನಾಯಕ ಮೆಚ್ಚಿದ ಹಳ್ಳಿ ಹುಡುಗಿ ತನ್ನ ಶೀಲ ಉಳಿಸಿಕೊಳ್ಳಲು ಆತ್ಮಹತ್ಯೆ ಮಾಡಿಕೊಳ್ಳುವುದು; ಕೊನೆಗೆ ನಾಯಕ ಕಂಗಾಲು- ಇದು `ತಾರೆ~ ಚಿತ್ರದ ತಲೆಬುಡವಿಲ್ಲದ ಕಥಾಸಾರಾಂಶ.ಈ ಹಿಂದೆ ಅನೇಕ ನಿರ್ದೇಶಕರು ಮಾಡಿರುವ ಕೆಟ್ಟ ಕಾಲೇಜು ಪರಿಕಲ್ಪ ನೆಯೇ ಈ ನಿರ್ದೇಶಕರ ತಲೆಯಲ್ಲೂ ಹೊಳೆದಿದೆ. ಚೆಲ್ಲುಚೆಲ್ಲಾಗಿ ಆಡುವ ಉಪನ್ಯಾಸಕರು (ಕೆಲವು ದೃಶ್ಯಗಳಲ್ಲಂತೂ ವರ್ತನೆ ಸಭ್ಯತೆಯ ಎಲ್ಲೆ ಮೀರಿದೆ), ರೇಗಿಸುವುದರಲ್ಲೂ ಆತ್ಮವಿಶ್ವಾಸವಿಲ್ಲದ ಹುಡುಗರು, ಹಾಸ್ಯಾಸ್ಪದ ಮಾತುಗಳು, ಪಾಠದ ಚಿಂತೆಯೇ ಇಲ್ಲದ ಜೀವಗಳು ಕಾಲೇಜನ್ನು ತುಂಬಿಕೊಂಡಿವೆ. ಟೆನ್ನಿಸ್ ಕೃಷ್ಣ ಹಾಗೂ ರೇಖಾದಾಸ್ ಅಭಿನಯದ ನೂರನೇ ಚಿತ್ರ ಇದು ಎಂದೂ ಪೋಸ್ಟರ್‌ಗಳಲ್ಲಿ ಬರೆಯಲಾಗಿದೆ. ಆದರೆ, ಇಬ್ಬರೂ ನೆನಪಿನಲ್ಲಿಡಬಹುದಾದ ಯಾವುದೇ ಧನಾತ್ಮಕ ಅಂಶ ಈ ಚಿತ್ರದ ಅವರ ಪಾತ್ರಗಳಲ್ಲಿ ಇಲ್ಲ. ಕುಡುಕನ ಪಾತ್ರದಲ್ಲಿ ಕರಿಬಸವಯ್ಯ ಕೂಡ ನಿಯಂತ್ರಣ ತಪ್ಪಿದ್ದಾರೆ.

ನಾಯಕ ದಿಗಂತ್ ಅಭಿನಯಿಸುವ ಗೊಡವೆಗೇ ಹೋಗಿಲ್ಲ. ನಾಯಕಿಯರು (ಊರ್ವಶಿ ಹಾಗೂ ಸಂಜನಾ) ಕೂಡ ಚಿತ್ರದುದ್ದಕ್ಕೂ ಒಂದೇ ಭಾವದಲ್ಲಿ ಪ್ರಕಟಗೊಂಡಿದ್ದಾರೆ.ಹಾಡಿನ ಸಾಲು ಹಾಗೂ ಮಾತುಗಳನ್ನು ಸಂಗೀತ (ಸಿ.ಆರ್.ಬಾಬಿ) ಉಡುಗಿಸುತ್ತದೆ. ಕವಿ ದೊಡ್ಡರಂಗೇಗೌಡರು ಈ ಚಿತ್ರದಲ್ಲಿ ಮೇಷ್ಟರ ಪಾತ್ರ ನಿರ್ವಹಿಸಿದ್ದಾರೆ. ಅಭಿನಯ ಕಲೆ ಅವರಿಗೆ ಸಂಪೂರ್ಣ ಹೊರತಾದದ್ದು ಎಂಬುದಕ್ಕೆ ಕೆಲವು ಉದಾಹರಣೆಗಳೂ ಚಿತ್ರದಲ್ಲಿ ಉಂಟು. ಆರ್.ರಮೇಶ್ ಛಾಯಾಗ್ರಹಣ ಕೂಡ ಮೆಚ್ಚಬಹುದಾದ ಯಾವ ಛಾಪನ್ನೂ ಮೂಡಿಸಿಲ್ಲ.ಕಸುಬುದಾರಿಕೆ ಕೊರತೆ ಕುರಿತ ಚರ್ಚೆ ಕನ್ನಡ ಚಿತ್ರೋದ್ಯಮದ ಮಟ್ಟಿಗೆ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ತೆರೆಕಂಡಿರುವ `ತಾರೆ~ಯನ್ನು ನಿಸ್ಸಂಶಯ ವಾಗಿ `ಉಲ್ಕಾಪಾತ~ ಎನ್ನಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry