ಉಲ್ಬಣಿಸಿದ ವಾಂತಿ-ಭೇದಿ

7

ಉಲ್ಬಣಿಸಿದ ವಾಂತಿ-ಭೇದಿ

Published:
Updated:

ಯಾದಗಿರಿ: ತಾಲ್ಲೂಕಿನ ನಸಲವಾಯಿ ಗ್ರಾಮದಲ್ಲಿ ವಾಂತಿ-ಭೇದಿ ನಿಯಂತ್ರಣಕ್ಕೆ ಬಂದಿದ್ದು, ಇದೀಗ ಪಕ್ಕದ ಕಡೇಚೂರ ಗ್ರಾಮದಲ್ಲಿ ವಾಂತಿ-ಭೇದಿ ಉಲ್ಬಣಿಸಿದೆ.ಮಂಗಳವಾರ ವಾಂತಿ-ಭೇದಿ ಉಲ್ಬಣಗೊಂಡಿದ್ದು, ಬುಧವಾರ ಗ್ರಾಮದ ರಾಮಣ್ಣ ಮಣಿಗೇರಿ ಮಡಿವಾಳ ಎಂಬಾತ ಮೃತಟ್ಟಿದ್ದಾನೆ. ಕಾಲರಾದಿಂದ ಈ ವ್ಯಕ್ತಿ ಮೃತಪಟ್ಟಿರುವುದಾಗಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಪರೀಕ್ಷೆಯ ನಂತರ ನಿಖರವಾದ ಮಾಹಿತಿ ತಿಳಿಯುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಗ್ರಾಮದ 33 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಶಾಲೆಯನ್ನು ಚಿಕಿತ್ಸೆಗಾಗಿ ಬಳಕೆ ಮಾಡಿಕೊಳ್ಳಲಾಗಿದೆ.ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶರಣೀಕ್‌ಕುಮಾರ ದೋಖಾ, ಚಿಕಿತ್ಸೆಯ ಅನುಕೂಲತೆ ಕಲ್ಪಿಸಿಕೊಟ್ಟರು. 4 ರಿಂದ 5 ವರ್ಷಗಳ ಒಳಗಿನ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಗ್ರಾಮದ ಶಾಲೆಗಳಿಗೆ 2 ದಿನದ ರಜೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡುವ ಪ್ರಯತ್ನವನ್ನು ದೋಖಾ ಮಾಡಿದರು.ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮದಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಜಿಲ್ಲಾ, ತಾಲ್ಲೂಕು ಹಾಗೂ ಸ್ಥಳೀಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದ ತಿಳಿಸಿದರು. ಮಹಿಪಾಲರಡ್ಡಿ ದುಪ್ಪಲ್ಲಿ, ವೈದ್ಯಾಧಿಕಾರಿ ಡಾ. ದಿವಾಕರ ಮಳ್ಗೆ ಹಾಜರಿದ್ದರು.ಜಿಲ್ಲಾಧಿಕಾರಿ ಭೇಟಿ: ಕಡೇಚೂರು ಗ್ರಾಮಕ್ಕೆ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ವಂಶಿಕೃಷ್ಣ ಭೇಟಿ ನೀಡಿ, ವಾಂತಿ-ಭೇದಿಯಿಂದ ಬಳಲುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿದರು.ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣಗಳ ಕಂಡು ಬಂದಿರುವುದಿರಂದ ಮೆಡಿಕಲ್ ಕ್ಯಾಂಪ್ ಹಾಕಲಾಗಿದೆ  ಬಿಆರ್‌ಸಿ ಕಟ್ಟಡದಲ್ಲಿ  ನಾಲ್ವರು ವೈದ್ಯರನ್ನು ನಿಯೋಜನೆ ಮಾಡಲಾಗಿದೆ.ಔಷದೋಪಚಾರ ಲಭ್ಯವಿದ್ದು, ಸತತ ನಿಗಾ ಇಡಲಾಗಿದೆ. ಒಟ್ಟು 38 ಜನರಿಗೆ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಬುಧವಾರ ಸಂಜೆಯವರೆಗೆ  9 ಜನ ಕ್ಯಾಂಪ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಜಮಾದಾರ್‌ತಿಳಿಸಿದರು.ರೋಗಿಗಳ ರಕ್ತ ಮತ್ತು ವಾಂತಿ-ಭೇದಿಯ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸಿ ಸೂಕ್ತ ಕಾರಣ ಕಂಡು ಹಿಡಿಯಲು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ ಅವರಿಗೆ ಸೂಚಿಸಿದರು ಪರಿಸ್ಥಿತಿ ಹತೋಟಿಯಲ್ಲಿದ್ದರೂ, ಗ್ರಾಮದಲ್ಲಿ ಸ್ವಚ್ಫತೆ ಕಾಪಾಡುವ ಬಗ್ಗೆ ಮತ್ತು ನೀರನ್ನು ಕುದಿಸಿ ಕುಡಿಯುವ ಬಗ್ಗೆ ಅವಶ್ಯಕ ಜಾಗೃತಿ ಮೂಡಿಸಲು ಆಶಾ  ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯಿತಿ  ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry