ಸೋಮವಾರ, ಮೇ 17, 2021
28 °C

ಉಲ್ಲಾಸ್ ಕಶಲ್ಕರ್‌ಗೆ ಮನ್ಸೂರ್ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು :ಕೋಲ್ಕತ್ತದ ಖ್ಯಾತ ಸಂಗೀತಗಾರ ಪಂಡಿತ್ ಉಲ್ಲಾಸ್ ಕಶಲ್ಕರ್ ಅವರಿಗೆ `ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿ~ ನೀಡಿ ಗೌರವಿಸಲಾಯಿತು.  ಶನಿವಾರ ಬೆಂಗಳೂರು ಕಿಡ್ನಿ ಪ್ರತಿಷ್ಠಾನ ವತಿಯಿಂದ ಇಲ್ಲಿ ಆರಂಭವಾದ ಎರಡು ದಿನಗಳ `ಬಿಕೆಎಫ್ ಧ್ವನಿ- ಮನ್ಸೂರ್ ಸಂಗೀತೋತ್ಸವ~ದಲ್ಲಿ  ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್ ಅವರು ಕಶಲ್ಕರ್ ಅವರಿಗೆ 50 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಮನ್ಸೂರ್ ಅವರ ಕಂಚಿನ ಪುತ್ಥಳಿಯನ್ನು ನೀಡಿ ಆತ್ಮೀಯವಾಗಿ ಸನ್ಮಾನಿಸಿದರು.ಜೈರಾಜ್ ಮಾತನಾಡಿ, `ಈಗಿನ ಸಂದರ್ಭದಲ್ಲಿ ಶಾಸ್ತ್ರೀಯ ಸಂಗೀತದ ವಿವಿಧ ಪ್ರಕಾರಗಳು ಕುಸಿಯುತ್ತಿವೆ. ಇಂತಹ ಸಂದರ್ಭದಲ್ಲಿ ಸಂಗೀತದ ಜ್ಞಾನ ಕೇವಲ ಮೇಲ್ಜಾತಿಗಳಿಗೆ ಸೀಮಿತವಾಗಬಾರದು.ಏಕತಾನತೆಯನ್ನು ಮೀರಿ ಅದು ಎಲ್ಲರಿಗೂ ತಲುಪಬೇಕು. ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಪ್ರಕಾರಗಳು ಅಡೆ ತಡೆಯಿಲ್ಲದೆ ಪಸರಿಸಬೇಕು~ ಎಂದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಶಲ್ಕರ್, `ಹಿಂದೂಸ್ತಾನಿ ಸಂಗೀತಕ್ಕೆ ಕರ್ನಾಟಕ ಬಹುದೊಡ್ಡ ಕೊಡುಗೆ ನೀಡಿದೆ. ಇಂತಹ ಸ್ಥಳದಲ್ಲಿ ಸನ್ಮಾನ ಸ್ವೀಕರಿಸುತ್ತಿರುವುದು ಖುಷಿ ತಂದಿದೆ~ ಎಂದರು.`ಮನ್ಸೂರರು ಮತ್ತು ನನ್ನ ಗುರುಗಳಾದ ಗಜಾನನರಾವ್ ಜೋಷಿ ಇಬ್ಬರೂ ಒಬ್ಬರೇ ಗುರುಗಳ ಬಳಿ ಸಂಗೀತ ಕಲಿತಿದ್ದರು. ಮನ್ಸೂರರು ಕೂಡ ನನ್ನ ಗುರು ಸಮಾನರು~ ಎಂದು ಹೇಳಿದರು.ವಿದುಷಿ ಲಲಿತ್ ಜೆ. ರಾವ್, `ಬೇರೆ ಲ್ಲಿಯೂ ಕೇಳಲು ಸಾಧ್ಯವಿಲ್ಲದ ಸಂಗೀತ ಮನ್ಸೂರರ ಆಳದಲ್ಲಿತ್ತು. ಅವರು ತಮ್ಮ ಪುತ್ರ ಅಥವಾ ಶಿಷ್ಯರು ಲಭ್ಯವಿಲ್ಲದಿದ್ದಾಗ ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿ ದ್ದರು.ರಾಗ ಯಾವುದು ಎಂದು ಕೇಳಿದರೆ ಅದಕ್ಕೂ ಉತ್ತರ ನೀಡದೆ ಸುಮ್ಮನೆ ಹಾಡು ಎನ್ನುತ್ತಿದ್ದರು. ಅದು ನನ್ನೊಳಗೆ ಆತ್ಮವಿಶ್ವಾಸ ಹೆಚ್ಚಿಸಿತು~ ಎಂದರು.ಧ್ವನಿ ಸಂಗೀತೋತ್ಸವದ ಸಂಘಟನಾ ಸಮಿತಿಯ ಅಧ್ಯಕ್ಷ ಪಿ.ಶ್ರೀನಿವಾಸ್, ಪ್ರತಿಷ್ಠಾನದ ಟ್ರಸ್ಟಿ ಡಾ. ಪಿ.ಶ್ರೀರಾಮ್, ಮನ್ಸೂರರ ಪುತ್ರಿ ಲಕ್ಷ್ಮೀ ಪಾಟೀಲ್, ಟೆಕ್ಸಾಸ್ ಇನ್ಸ್‌ಟ್ರುಮೆಂಟ್ ಭಾರತೀಯ ಪ್ರತಿಷ್ಠಾನದ ಸಿಲ್ವಿಯಾ ಸುಬ್ಬಯ್ಯ, ಪತ್ರಕರ್ತ ಎಂ.ಕೆ. ಭಾಸ್ಕರ ರಾವ್ ಮತ್ತಿತರರು ಉಪಸ್ಥಿತರಿದ್ದರು.`ಅನಾಹತ ನಾದಕ್ಕೆ ಸಂದ ಅಜ್ಜ~


ಮನ್ಸೂರರ ಮೊಮ್ಮಗಳು ಸೀಮಾ ಪಾಟೀಲ್ ಮಾತನಾಡಿ,`ನಮ್ಮಜ್ಜ ಲಿಂಗಪೂಜಿ ಮಾಡೋ ಹೊತ್ತಿನಾಗ ದೇವರಿಗೆ ಸಂಗೀತದ `ಚೀಜ್~ ಅರ್ಪಣೆ ಮಾಡ್ತೀನಿ ಅಂತ ಹೇಳತಿದ್ದರು. ಆಹತ ರಾಗಾನ ಪ್ರತಿಯೊಬ್ಬರೂ ಕೇಳ್ತಾರ. ಆದರ ಅನಾಹತ ನಾದ ಸಂತರು, ಋಷಿಗಳಿಗೆ ಮಾತ್ರ. ಅನಾಹತ ರಾಗದಾಗ ಹಾಡ್ತ ಹಾಡ್ತ ನಮ್ಮಜ್ಜ ಅದೇ ನಾದಕ್ಕ ಸಂದರು~ ಎಂದು ಭಾವುಕರಾಗಿ ನುಡಿದರು.“ಪಂಡಿತ್ ಭೀಮಸೇನ ಜೋಷಿ ಅವರು ಅಜ್ಜನ ಬಗ್ಗೆ ಮಾತನಾಡ್ತ `ನಾವು ಜನಸಾಮಾನ್ಯರಿಗಾಗಿ ಹಾಡ್ತೇವಿ. ಆದರ ಮನ್ಸೂರರು ದೇವರಿಗೆ, ವಿಮರ್ಶಕರಿಗೆ ಹಾಡ್ತಾರ~ ಅನ್ನುತ್ತಿದ್ದರು. ಮರಾಠಿ ಸಾಹಿತಿ ಪು.ಲ. ದೇಶಪಾಂಡೆ ಅವರು `ಸಂಗೀತದಲ್ಲೇ ವಾಸ್ತವ್ಯ ಮಾಡಿದ ವ್ಯಕ್ತಿ ಮನ್ಸೂರ~ ಎಂದಿದ್ದಾರೆ. ವಚನ, ತತ್ವಪದಗಳನ್ನ ಹಿಂದೂಸ್ತಾನಿ ಸಂಗೀತದೊಳಗ ಹಾಡಿದ ಅಜ್ಜ, ಸವಾಲೊಂದನ್ನು ಸ್ವೀಕರಿಸಿ `ಪೋಗದಿರಲೋ ರಂಗ~ ಕೃತೀನ ಕರ್ನಾಟಕ ಸಂಗೀತದಲ್ಲಿ ಪ್ರಸ್ತುತ ಪಡಿಸಿದ್ದರು~ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.