ಶನಿವಾರ, ಏಪ್ರಿಲ್ 17, 2021
22 °C

ಉಳಿತಾಯ ಆರ್‌ಡಿ ಉಪಾಯ

ಯು.ಪಿ. ಪುರಾಣಿಕ್ Updated:

ಅಕ್ಷರ ಗಾತ್ರ : | |

ಹಣ ಉಳಿಸುವುದೂ ಒಂದು ಕಲೆ. `ಹೆಚ್ಚಿನ ವರಮಾನ ಇರುವವರು ಮಾತ್ರ ಹಣ ಉಳಿಸಬಹುದು, ಸಣ್ಣ ಉಳಿತಾಯದವರು ಹಣ ಉಳಿಸಲು ಸಾಧ್ಯವಿಲ್ಲ~ ಎನ್ನುವುದು ಹುಸಿಮಾತು. ಆರ್ಥಿಕವಾಗಿ ಹಿಂದುಳಿದ ಮಧ್ಯಮ ಹಾಗೂ ಬಡವರು ಭಾರತದ ಆರ್ಥಿಕ ಸಂಸ್ಥೆಗಳ ಅಡಿಪಾಯ ಎನ್ನುವುದು ಅಂಕಿ-ಅಂಶಗಳಿಂದ ಸಾಬೀತಾಗಿದೆ.ಈ ತತ್ವ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಅನ್ವಯವಾಗುತ್ತದೆ. ಪ್ರಾಣಿಗಳಲ್ಲಿ ಅತಿ ಸಣ್ಣದಾದ ಇರುವೆ ಮಳೆಗಾಲಕ್ಕೆಂದು ಆಹಾರ ಸಂಗ್ರಹಣೆ ಮಾಡುತ್ತದೆ. ಇದೇ ವೇಳೆ ಗಾತ್ರದಲ್ಲಿ ಬಹು ದೊಡ್ಡದಾದ ಆನೆ ಈ ಗೋಜಿಗೆ ಎಂದಿಗೂ ಹೋಗಲಾರದು!


___________________________________________________ಮನುಷ್ಯ ನಡೆದು ಬಂದ ದಾರಿ, ಗಳಿಸಿರುವ ಅಪಾರ ಅನುಭವ ಹಾಗೂ ಮಾಡಿರುವ ಸಾಧನೆಗಳು ಆತನ ಜೀವನದ ಮುಂದಿನ ಗುರಿ ಹಾಗೂ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸದಾ ಸ್ಪಂದಿಸುತ್ತವೆ. ಹೀಗೆ ಜೀವನದ ಸೋಪಾನದಲ್ಲಿ ಯಶಸ್ಸಿನ ಹೆಜ್ಜೆ ಇಡಬೇಕಾದರೆ `ಆಹಾರ~, `ಆರೋಗ್ಯ~ ಮತ್ತು `ಆರ್ಥಿಕ~ ಎಂಬ ಮೂರು ಬಗೆಯ ಶಿಸ್ತು ತಪ್ಪದೇ ಪರಿಪಾಲಿಸಬೇಕು. ಇಂಥ ಶಿಸ್ತು ಕಾಲಕಾಲಕ್ಕೆ ಪರಿಪಾಲಿಸಲು ಆರಂಭದಿಂದಲೇ ಸರಿಯಾದ ಯೋಜನೆ ಹಾಕಿಕೊಳ್ಳಬೇಕು, ಜತೆಗೆ ಅದರಂತೆ ನಡೆದುಕೊಳ್ಳಬೇಕು.ಮನುಷ್ಯ ಏನನ್ನೂ ಸಾಧಿಸಬಲ್ಲ. ಅಸಾಧ್ಯ ಎಂಬ ಶಬ್ದವನ್ನು ಭೇದಿಸಿದಲ್ಲಿ, ಭವಿಷ್ಯ ರೂಪಿಸಿಕೊಳ್ಳುವುದು ಸುಲಭ ಸಾಧ್ಯ. ಈ ಸಾಧನೆಗೆ ಸಮಯಪ್ರಜ್ಞೆ, ಉತ್ತಮ ಮನಸ್ಸು, ದೃಢಸಂಕಲ್ಪ ಹಾಗೂ ಸ್ವಲ್ಪಮಟ್ಟಿನ ತ್ಯಾಗಮಯ ಜೀವನ ಅವಶ್ಯ. ಮನುಷ್ಯ ಬದುಕಲು ತಿನ್ನಬೇಕು, ತಿನ್ನಲೇ ಬದುಕಬಾರದು. ಹಿತ-ಮಿತ ಆಹಾರ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಯಾವುದೇ ವ್ಯಕ್ತಿ ಆಹಾರ-ಆರೋಗ್ಯ ಎರಡೂ ಶಿಸ್ತನ್ನು ಅಕ್ಷರಶಃ ಪಾಲಿಸಿದಲ್ಲಿ ಮುಂದೆ ಆರ್ಥಿಕ ಶಿಸ್ತು ಆತನ ಜೀವನದಲ್ಲಿ ಅವಿಭಾಜ್ಯ ಅಂಗವಾಗಿ ರೂಪುಗೊಳ್ಳುತ್ತದೆ.ಎಲ್ಲಾ ವ್ಯಕ್ತಿಗಳಿಗೆ ಒಂದಲ್ಲಾ ಒಂದು ವ್ಯವಹಾರ ಇರುವುದು ಸಹಜ. ಆದರೆ ಹಣಕಾಸು ವ್ಯವಹಾರವನ್ನು ಹೊರತುಪಡಿಸಿದ ಇನ್ನೊಂದು ವ್ಯವಹಾರ ಇಲ್ಲದಿರುವುದು ಸೋಜಿಗ! ಬಲಾ ಬಲಗಳಲ್ಲಿ `ಹಣಬಲ~ಕ್ಕಿಂತ ಮಿಗಿಲಾದ ಬಲವಿಲ್ಲ. ದುಡಿಯಲು ಕಾಲಮಿತಿ ಇರುತ್ತದೆ. ಇಂದಿನ ಅಸ್ಥಿರತೆಯ ವಾತಾವರಣದಲ್ಲಿ ಹಾಗೂ ಸಾಮಾಜಿಕ ಭದ್ರತೆಯ ಅನುಪಸ್ಥಿತಿಯಲ್ಲಿ, `ಹಣ ಉಳಿಸಿ-ಹಣ ನಿಮ್ಮನ್ನು ಉಳಿಸುತ್ತದೆ~ ಎನ್ನುವ ಗಾದೆ ಸಾರ್ವಕಾಲಿಕ ಸತ್ಯ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.ಮಕ್ಕಳ ವಿದ್ಯಾಭ್ಯಾಸ, ಮದುವೆ, ಸ್ವಂತ ಮನೆ... ಹೀಗೆ ಬಹುಬಗೆ ಜವಾಬ್ದಾರಿಯ ವಿಚಾರಗಳು ಜೀವನದ ಸಂಜೆಯಲ್ಲಿ ಮಾನವನನ್ನು ಕಾಯುತ್ತಿರುತ್ತವೆ. ಜತೆಗೆ ಕಾಯಿಲೆ-ಕಸಾಲೆ, ಔಷಧೋಪಚಾರ ಹತ್ತು ಹಲವು ಖರ್ಚು ನಿಭಾಯಿಸಬೇಕಾಗುತ್ತದೆ. ಒಟ್ಟಿನಲ್ಲಿ ಇಳಿವಯಸ್ಸಿನ ಬಹುತೇಕ ಎಲ್ಲಾ ಸಮಸ್ಯೆಗಳಿಗೆ ಎಳೆವಯಸ್ಸಿನಲ್ಲಿ ಪಾಲಿಸಿಕೊಂಡು ಬಂದಿರುವ ಆರ್ಥಿಕ ಶಿಸ್ತು ಸಹಕಾರಿಯಾಗುತ್ತದೆ.

ಸಂಗ್ರಹಿಸಿಡುವ ತತ್ವ

ಹಣ ಉಳಿಸುವುದೂ ಒಂದು ಕಲೆ. `ಹೆಚ್ಚಿನ ವರಮಾನ ಇರುವವರು ಮಾತ್ರ ಹಣ ಉಳಿಸಬಹುದು, ಸಣ್ಣ ಉಳಿತಾಯದವರು ಹಣ ಉಳಿಸಲು ಸಾಧ್ಯವಿಲ್ಲ~ ಎನ್ನುವುದು ಹುಸಿಮಾತು. ಆರ್ಥಿಕವಾಗಿ ಹಿಂದುಳಿದ ಮಧ್ಯಮ, ಕೆಳವರ್ಗದವರು ದೇಶದ ಆರ್ಥಿಕ ಸಂಸ್ಥೆಗಳ ಅಡಿಪಾಯ ಎನ್ನುವುದು ಅಂಕಿ-ಅಂಶಗಳಿಂದ ಸಾಬೀತಾಗಿದೆ. ಈ ತತ್ವ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಅನ್ವಯವಾಗುತ್ತದೆ.ಪ್ರಾಣಿಗಳಲ್ಲಿ ಅತಿ ಸಣ್ಣದಾದ ಇರುವೆ ಮಳೆಗಾಲಕ್ಕೆಂದು ಆಹಾರ ಸಂಗ್ರಹಣೆ ಮಾಡುತ್ತದೆ. ಇದೇ ವೇಳೆ ಗಾತ್ರದಲ್ಲಿ ಬಹು ದೊಡ್ಡದಾದ ಆನೆ ಈ ಗೋಜಿಗೆ ಎಂದಿಗೂ ಹೋಗಲಾರದು!ಇಂದು ಪ್ರಪಂಚದ ಬಹುದೊಡ್ಡ ರಾಷ್ಟ್ರಗಳು `ಆರ್ಥಿಕ ಹಿಂಜರಿತ~ದಿಂದ ಬಳಲುತ್ತಿದ್ದರೂ, ಈ ಬಿಸಿ ವಾತಾವರಣ ಭಾರತದ ಮೇಲೆ ಹೆಚ್ಚಿನ ಪರಿಣಾಮ ಬೀರದಿರುವುದು ಇದಕ್ಕೆ ಇನ್ನೊಂದು ಉದಾಹರಣೆ. ಪರರಾಷ್ಟ್ರಗಳಲ್ಲಿ ಕೆಲವೇ ಗುಂಪುಗಳಲ್ಲಿ ಹಣದ ವ್ಯವಹಾರ ಕೇಂದ್ರಿಕೃತವಾಗಿರುವುದೇ (ಕಾನ್‌ಸಂಟ್ರೇಶನ್) ಇದಕ್ಕೆ ಮೂಲ ಕಾರಣ. ಭಾರತ ಹಳ್ಳಿಗಳಿಂದ ಕೂಡಿದ ಬಹುದೊಡ್ಡ ರಾಷ್ಟ್ರ. ಇಲ್ಲಿಯ ಹಂಚಿ ಹರಿದ (ಡಿಸ್ಟ್ರಿಬ್ಯೂಟೆಡ್) ಆರ್ಥಿಕ ವ್ಯವಸ್ಥೆಯು ದೇಶದ ಆರ್ಥಿಕ ಸಮತೋಲನವನ್ನು ಕಾಪಾಡಿಕೊಂಡು ಬರುವಲ್ಲಿ ಸಹಾಯಕವಾಗಿದೆ.ಮೇಲಿನ ಬಹಳಷ್ಟು ವಿಚಾರಗಳನ್ನು ಅವಲೋಕಿಸಿದಾಗ ಗಳಿಸುವುದಕ್ಕಿಂತ ಉಳಿಸುವುದು ಮುಖ್ಯ ಎನ್ನುವುದು ಸಾಬೀತಾಗಿದೆ. ಆದರೆ ಉಳಿಸಿರುವುದನ್ನು ಭದ್ರವಾಗಿ ಇರಿಸಿಕೊಳ್ಳುವುದು ಎಲ್ಲಕ್ಕೂ ಮುಖ್ಯ ಎನ್ನುವುದು ಹಲವರಿಗೆ ತಿಳಿದಿಲ್ಲ. ಭದ್ರತೆ, ದ್ರವ್ಯತೆ ಹಾಗೂ ಹೆಚ್ಚಿನ ವರಮಾನ ಎಂಬ ಮೂರು ತತ್ವಗಳು ಹೂಡಿಕೆಯಲ್ಲಿ ಹಾಸು ಹೊಕ್ಕಾಗಿರಬೇಕು, ಕಮಿಷನ್, ಉಡುಗೊರೆ ಹಾಗೂ `ಹಣ ದ್ವಿಗುಣ~ ಎಂಬ ಆಮಿಷ ತೋರಿಸಿದಾಗ ಎಂತಹ ಪರಿಣತನೂ ತಲ್ಲಣಗೊಳ್ಳುತ್ತಾನೆ.ಹಣ ಹೂಡುವಾಗ ಭದ್ರತೆಯ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ. ಹಣ ಹೂಡಲು ನೂರಾರು ದಾರಿಗಳಿವೆ, ಆದರೆ ಕೆಲವೊಂದು ಯೋಜನೆಗಳ ಸೆಳೆತ, ಆಕರ್ಷಣೆ ಹಾಗೂ ಮೋಹಕ ಶಕ್ತಿ, ಹೂಡಿಕೆದಾರರನ್ನು ದಿಗ್ಭ್ರಮೆಗೊಳಿಸುತ್ತವೆ.ಆರ್ಥಿಕವಾಗಿ ಹಿಂದುಳಿದ ಮಧ್ಯಮ ಹಾಗೂ ಕೆಳವರ್ಗದ ಜನರು ಕಂಟಕ ರಹಿತ ಹೂಡಿಕೆಯನ್ನೇ ಆರಿಸಿಕೊಳ್ಳಬೇಕು. ಇಂದಿನ ವಾತಾವರಣದಲ್ಲಿ ಭದ್ರತೆ, ದ್ರವ್ಯತೆ, ಹಾಗೂ ನಿಶ್ಚಿತ ವರಮಾನ ಬೇಕಾದಲ್ಲಿ ಜನಸಾಮಾನ್ಯರು ಬ್ಯಾಂಕುಗಳ ಮೊರೆ ಹೋಗುವುದೇ ಲೇಸು. ಬ್ಯಾಂಕಿನಲ್ಲಿ ಠೇವಣಿ ಇರಿಸುವಾಗ ಠೇವಣಿ ಮೇಲಿನ ಬಡ್ಡಿ ವಿಚಾರದಲ್ಲಿ ಗ್ರಾಹಕ ಹಾಗೂ ಬ್ಯಾಂಕಿನ ನಡುವೆ ಆಗಿರುವ ಒಪ್ಪಂದಕ್ಕಿಂತ ಠೇವಣಿ ಅವಧಿಯಲ್ಲಿ ಬಡ್ಡಿ ಕಡಿಮೆ ಮಾಡುವಂತಿಲ್ಲ.ಜತೆಗೆ ಅವಧಿಗೆ ಮುನ್ನ ಹಣ ಪಡೆಯುವ ಸವಲತ್ತು ಸದಾ ಗ್ರಾಹಕನಿಗೆ ಲಭ್ಯವಿರುತ್ತದೆ. ದರ್ಜಿಯು ದೇಹಕ್ಕೆ ತಕ್ಕಂತೆ ಬಟ್ಟೆ ಹೊಲಿಯುವಂತೆ, ಗ್ರಾಹಕರಿಗೆ ತಕ್ಕಂತೆ ಬ್ಯಾಂಕುಗಳಲ್ಲಿ ಚಾಲ್ತಿ ಖಾತೆ, ಉಳಿತಾಯ ಖಾತೆ, ಅವಧಿ ಠೇವಣಿ (ಆಗಾಗ ಬಡ್ಡಿ ಬರುವ ಅಥವಾ ಒಮ್ಮೆಲೇ ಬಡ್ಡಿಬರುವ) ಹಾಗೂ ಆವರ್ತಕ ಠೇವಣಿ (ರಿಕರಿಂಗ್ ಡಿಪಾಜಿಟ್) ಹೀಗೆ ಹಲವಾರು ಯೋಜನೆಗಳಿವೆ.ಈ ಎಲ್ಲಾ ಠೇವಣಿಗಳಲ್ಲಿ `ಆರ್.ಡಿ~ ತುಂಬಾ ಜನಪ್ರಿಯ ಯೋಜನೆ. ಕಂಪೆನಿ, ಪಾರ್ಟನರ್‌ಷಿಪ್, ಹಿಂದೂ ಅವಿಭಕ್ತ ಕುಟುಂಬ, ವೈಯಕ್ತಿಕ, ಮಹಿಳೆಯರು, ಅಪ್ರಾಪ್ತ ವಯಸ್ಕರು ಹೀಗೆ ಎಲ್ಲಾ ವರ್ಗ-ವಯಸ್ಸಿನ ಜನರಿಗೆ ಉಳಿತಾಯ ಮಾಡಲು `ಆರ್.ಡಿ~ ಒಂದು ವರದಾನ.

ಏನಿದು ಆರ್.ಡಿ?

`ರಿಕರಿಂಗ್ ಡಿಪಾಜಿಟ್~, ಇದನ್ನು ಕನ್ನಡದಲ್ಲಿ `ಆವರ್ತಕ ಠೇವಣಿ~ ಎಂದು ಸಂಭೋದಿಸಲಾಗಿದೆ. ಅವಧಿ ಠೇವಣಿ ಎಷ್ಟು ಸಾರಿ ಬೇಕಾದರೂ ಮಾಡಬಹುದು. ಆದರೆ ಒಮ್ಮೆ ಮಾಡಿದ ಠೇವಣಿಗೆ ಪುನಃ ಹಣ ಸೇರಿಸುವ ಯೋಜನೆ ಅಡಕವಾಗಿರುವುದಿಲ್ಲ.ರಿಕರಿಂಗ್ ಡಿಪಾಜಿಟ್ ಕೂಡಾ ಅವಧಿ ಠೇವಣಿಯಾಗಿದ್ದು ಈ ಯೋಜನೆ ಉಳಿದ ಅವಧಿ ಠೇವಣಿಗಳಿಂದ ಭಿನ್ನವಾಗಿದೆ. ಇದೊಂದು ಪುನರ್ಘಟಿಸುವ ಹಾಗೂ ಕ್ರಮಬದ್ಧ ಹೂಡಿಕೆ ಠೇವಣಿ ಯೋಜನೆ. `ಹನಿಗೂಡಿ ಹಳ್ಳ ತೆನೆಗೂಡಿ ಬಳ್ಳ~ ಎನ್ನುವ ಗಾದೆ ಮಾತು ಈ ಠೇವಣಿಯ ಭಾವಾರ್ಥ. ಈ ಠೇವಣಿಗೆ ಶತಮಾನದ ಚರಿತ್ರೆ ಇದೆ.ಆರ್.ಡಿ ಪ್ರತಿ ತಿಂಗಳೂ ತುಂಬುವ ಅವಧಿ ಠೇವಣಿ. ಒಂದರಿಂದ ಹತ್ತು ವರ್ಷಗಳ ಅವಧಿಗೆ ಖಾತೆ ಆರಂಭಿಸಬಹುದು. ಆರಂಭದಲ್ಲಿ ಕಟ್ಟಲು ನಿಶ್ಚಯಿಸಿದ ಮೊತ್ತದಲ್ಲಿ ಬದಲಾವಣೆ ಮಾಡದೆ, ಪ್ರತಿ ತಿಂಗಳೂ ಹಣ ತುಂಬುತ್ತಾ ಬರಬೇಕು. ಆರ್.ಡಿ ಒಂದು ಮಾಸಿಕ ಕಂತು.ನಗದು ರೂಪದಲ್ಲಿ ಅಥವಾ ವ್ಯಕ್ತಿಯ ಉಳಿತಾಯ ಖಾತೆಯಲ್ಲಿ ಸಾಕಷ್ಟು ಹಣ ಇರಿಸಿ, ಬ್ಯಾಂಕಿಗೆ ಸ್ಟ್ಯಾಂಡಿಂಗ್ ಇನ್‌ಸ್ಟ್ರಕ್ಷನ್ ನೀಡಿದಲ್ಲಿ ನಿಗದಿತ ತಾರೀಕಿನಂದು ಉಳಿತಾಯ ಖಾತೆಯಿಂದ ಆರ್.ಡಿ ಖಾತೆಗೆ ಹಣ ವರ್ಗಾವಣೆ ಆಗುವ `ಸ್ವಯಂ ಚಾಲಿತ~ ವ್ಯವಸ್ಥೆಯನ್ನು ಬ್ಯಾಂಕಿನವರು ಮಾಡುತ್ತಾರೆ. ಈ ಸೇವೆ ಶುಲ್ಕ ರಹಿತ. ಈ `ಆರ್‌ಡಿ~ಗೆ ಅವಧಿ ಠೇವಣಿ ಮಾದರಿಯಲ್ಲಿ, ಅವಧಿಗೆ ಅನುಗುಣವಾಗಿ ಬಡ್ಡಿದರ ವಿಧಿಸುತ್ತಾರೆ. ಪ್ರತಿ ತಿಂಗಳು ಕಟ್ಟಿದ ಹಣದ ಪ್ರಾಕ್ಟ್ ಹಾಕಿ(ಒಟ್ಟುಗೂಡಿಸಿ), ಮೂರು ತಿಂಗಳಿಗೊಮ್ಮೆ ಚಕ್ರಬಡ್ಡಿಯಲ್ಲಿ ಬಡ್ಡಿ ಲೆಕ್ಕಾಚಾರ ಮಾಡುತ್ತಾರೆ.ಠೇವಣಿದಾರ ಕಾರಣಾಂತರಗಳಿಂದ ತಿಂಗಳ ಕಂತು ತುಂಬಲು ಸಾಧ್ಯವಾಗದಿದ್ದಲ್ಲಿ ಎಷ್ಟು ತಿಂಗಳು ಹಾಗೆ ತುಂಬಲಿಲ್ಲ ಎನ್ನುವುದನ್ನು ಲೆಕ್ಕಹಾಕಿ, ಅಷ್ಟೂ ಮೊತ್ತ ಹಾಗೂ ದಂಡದ ಬಡ್ಡಿ ಸೇರಿಸಿ ಮತ್ತೆ ತುಂಬುವ ಅವಕಾಶವಿದೆ. ಅದೇ ರೀತಿ, ತಿಂಗಳ ಕಂತು ತುಂಬುತ್ತಾ ಬಂದು ಮುಂದಿನ ತಿಂಗಳುಗಳಲ್ಲಿ ತುಂಬಲಾಗದೇ ಇದ್ದರೆ, ಅಲ್ಲಿಯವರೆಗೆ ಕಟ್ಟಿದ ಹಣವನ್ನು ಉಳಿತಾಯ ಖಾತೆ ಲೆಕ್ಕದಲ್ಲಿ ಬಡ್ಡಿ ಸೇರಿಸಿ ವಾಪಸ್ ಪಡೆಯಬಹುದಾಗಿದೆ.ಒಬ್ಬರು ಎಷ್ಟು ಆರ್.ಡಿ. ಖಾತೆ ಬೇಕಾದರೂ ತೆರೆಯಬಹುದು. ಕನಿಷ್ಠ ರೂ. 100 ತುಂಬಬೇಕು. ಇಲ್ಲಿ ಗರಿಷ್ಠ ಮಿತಿ ಇರುವುದಿಲ್ಲ. ಒಮ್ಮೆ ರೂ. 100 ಆರ್.ಡಿ. ಮಾಡಿದಲ್ಲಿ ಮುಂದೆ ರೂ. 5 ಅಥವಾ ರೂ. 10ರ ಆವರ್ತನೆಯಲ್ಲಿ ಅಂದರೆ ರೂ. 105 ಅಥವಾ 110 ಹೀಗೆ ಆರಂಭಿಸಬಹುದಾಗಿದೆ.

ರೂ. 1000 ಆರ್.ಡಿ. 1ರಿಂದ 10 ವರ್ಷಗಳವರೆಗೆ ಶೇ 8.5, 8.75, 9, 9.25, 9.50, 9.75, 10ರ ಬಡ್ಡಿ ದರದಲ್ಲಿ ಅವಧಿ ಮುಗಿದ ನಂತರ ಒಟ್ಟು ಪಡೆಯಬಹುದಾದ ಮೊತ್ತವನ್ನು ಪುಟದ ಕೆಳಭಾಗದಲ್ಲಿ ಕೋಷ್ಟಕ ರೂಪದಲ್ಲಿ ನೀಡಲಾಗಿದೆ.ಗಮನಕ್ಕೆ: ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ಹೋಲಿಸಿದರೆ ಆರ್.ಡಿ. ಖಾತೆ ಬಡ್ಡಿದರದಲ್ಲಿ ಸ್ವಲ್ಪ ಹೆಚ್ಚು -ಕಡಿಮೆ ಇರುತ್ತದೆ. ಆರ್.ಬಿ.ಐ ಇತ್ತೀಚೆಗೆ ಪ್ರಕಟಿಸಿದ ಆರ್ಥಿಕ ನೀತಿಯಿಂದಾಗಿ ಮುಂಬರುವ ದಿನಗಳಲ್ಲಿ ಮಾಡುವ ಠೇವಣಿ ಮೇಲಿನ ಬಡ್ಡಿದರ ಸ್ವಲ್ಪ ಕಡಿಮೆಯಾಗುವ ಸಂದರ್ಭವಿದೆ.

ಆರ್.ಡಿ ಠೇವಣಿ ಪಾತ್ರ?

ಆರ್ಥಿಕ ಶಿಸ್ತು ಪರಿಪಾಲಿಸಲು ವ್ಯಕ್ತಿಯ ಆದಾಯಕ್ಕೆ ಅನುಗುಣವಾಗಿ ಪ್ರಾರಂಭದಿಂದಲೇ ಉಳಿತಾಯ ಯೋಜನೆ ರೂಪಿಸಿಕೊಳ್ಳಬೇಕು. ಇಂತಹ ಯೋಜನೆ ಯಶಸ್ಸುಗೊಳಿಸಲು ಆರ್.ಡಿ. ಠೇವಣಿಯಷ್ಟು ಪ್ರಯೋಜಕಾರಿಯಾದುದು ಬೇರೊಂದಿಲ್ಲ.ಆರ್ಥಿಕ ಶಿಸ್ತು ಪರಿಪಾಲಿಸಲು `ಅಲ್ಪಾವಧಿ, ಮಧ್ಯಾವಧಿ ಹಾಗೂ ದೀರ್ಘಾವಧಿ~ ಉಳಿತಾಯ ಯೋಜನೆ ಹಾಕಿಕೊಳ್ಳಬೇಕು. ಈ ಯೋಜನೆಗೆ ಅನುಗುಣವಾಗಿ ಮುಂದೆ ನಿಭಾಯಿಸುವ ಖರ್ಚು ಲೆಕ್ಕ ಹಾಕಿ ಆರ್.ಡಿ ಖಾತೆ ಆರಂಭಿಸಬೇಕು. ಪ್ರತಿ ವರ್ಷ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಖರ್ಚು ಬಂದೇ ಬರುತ್ತದೆ.ಉದಾಹರಣೆಗೆ; ಮಕ್ಕಳ ಶಾಲೆ ಶುಲ್ಕ, ಸಮವಸ್ತ್ರ ಖರೀದಿ ವೆಚ್ಚ ಇರುತ್ತದೆ. ಇಂಥ ಖರ್ಚುಗಳಿಗೆ ಸರಿಯಾಗಿ ಬೇರೆ ಬೇರೆ ಆರ್.ಡಿ ಖಾತೆ ತೆರೆದು ಹಣ ತುಂಬುತ್ತಾ ಬಂದಲ್ಲಿ ಭವಿಷ್ಯದ ದಿನಗಳು ನೆಮ್ಮದಿಯಿಂದ ಕೂಡಿರುತ್ತವೆ. ಸರಿಯಾದ ಯೋಜನೆ ರೂಪಿಸಿಕೊಳ್ಳದೇ ಇದ್ದಲ್ಲಿ ಅನಿರೀಕ್ಷಿತ ವೆಚ್ಚದ ಸಂದರ್ಭ ಎದುರಾದಾಗ ಯಾರೇ ಆದರೂ ಪರದಾಡುವಂತಾಗುತ್ತದೆ.ಮದುವೆ, ಮಕ್ಕಳ ಲಾಲನೆ-ಪಾಲನೆ, ಅವರ ವಿದ್ಯಾಭ್ಯಾಸ, ವಾಹನ ಖರೀದಿ, ಸ್ವಂತ ಮನೆ, ಬರುವುದು ಜೀವನದ ಸಂಧ್ಯಾ ಕಾಲದಲ್ಲಿ ಬರುವ ಖರ್ಚುಗಳನ್ನು ಎದುರಿಸಲು ದೀರ್ಘಾವಧಿ ಆರ್.ಡಿ ಸಹಾಯಕ. ಬಹಳಷ್ಟು ವ್ಯವಹಾರಸ್ತರು ಹೆಚ್ಚಿನ ಹಣದ ಅಗತ್ಯಗಳನ್ನು ಓವರ್ ಡ್ರಾಫ್ಟ್(ಒ.ಡಿ) ರೂಪದಲ್ಲಿ ಸರಿದೂಗಿಸಿಕೊಳ್ಳುತ್ತಾರೆ. ಈ ಸಾಲಕ್ಕೆ ಕಂತುಗಳು ಇರುವುದಿಲ್ಲವಾದರೂ ವರ್ಷದ ಕೊನೆಗೆ ತೀರಿಸಿ, ನವೀಕರಿಸಿಕೊಳ್ಳಬಹುದು.ಹೀಗೆ ಮುಂಗಡ ಪಡೆದ ವ್ಯಕ್ತಿಗಳು, ಸಾಲ ಮರುಪಾವತಿಸಲು ತಿಂಗಳಿಗೆ ಒಂದು ಮೊತ್ತ ನಿರ್ಧರಿಸಿ 1 ವರ್ಷ ಅವಧಿಗೆ ಆರ್.ಡಿ ಮಾಡಿದಲ್ಲಿ ಒ.ಡಿ. ಸವಲತ್ತು ಮತ್ತೆ ಪಡೆಯಲು ಅನುಕೂಲವಾಗುತ್ತದೆ. ಹಸ್ತದಲ್ಲಿ ಪ್ರಮುಖವಾಗಿ ಹೆಬ್ಬೆಟ್ಟು ಇರುವಂತೆ ಆರ್.ಡಿ ಠೇವಣಿ ಎಂಬುದು ಕಾಮಧೇನು ಹಾಗೂ ಕಲ್ಪವೃಕ್ಷದಂತೆ ಇರುವ ಉತ್ತಮ ಠೇವಣಿ ಯೋಜನೆ.ಆರ್.ಡಿ.ಗೆ ನೀಡುವ ಬಡ್ಡಿಗೆ ಬ್ಯಾಂಕಿನಲ್ಲಿ ಮೂಲದಲ್ಲಿಯೇ ಆದಾಯ ತೆರಿಗೆ ಕಡಿತ(ಟಿ.ಡಿ.ಎಸ್) ಇರುವುದಿಲ್ಲ. ಆದರೆ ಈ ಬಡ್ಡಿ ಮೊತ್ತವು ಆದಾಯ ತೆರಿಗೆಯಿಂದ ವಿನಾಯಿತಿಯನ್ನೇನೂ ಪಡೆದಿಲ್ಲ. ಪ್ರತಿ ವರ್ಷದ ಹಣದುಬ್ಬರದಿಂದಾಗಿ ದೀರ್ಘಾವಧಿ ಆರ್.ಡಿ ವಾಪಸ್ ಹಣ ಪಡೆಯುವಾಗ ವೈಯಕ್ತಿಕ ಆದಾಯ ತೆರಿಗೆ ಮಿತಿ ಕೂಡಾ ಹೆಚ್ಚಳವಾಗುವುದರಿಂದ ತೆರಿಗೆ ಮೇಲೆ ಹೆಚ್ಚಿನ ಪರಿಣಾಮ ಆಗಲಾರದು.ನಿವೃತ್ತಿ ನಂತರ ಪಿಂಚಣಿ ಅವಶ್ಯವೆ?

ವೃತ್ತಿ, ಪ್ರವೃತ್ತಿ ಹಾಗೂ ನಿವೃತ್ತಿ ಜೀವನದ ವಿವಿಧ ಹಂತಗಳು. ವೃತ್ತಿ ನಿರತರೆಲ್ಲರೂ ನಿವೃತ್ತಿ ಹೊಂದಲೇಬೇಕು. ಭಾರತದಲ್ಲಿ ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆ ಇಲ್ಲದೇ ಇರುವುದರಿಂದ ಜೀವನದ ಸಂಜೆಯನ್ನು ಹಾಯಾಗಿ ಕಳೆಯಲು ಸರಿಯಾದ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಸರ್ಕಾರಿ ನೌಕರಿಯಲ್ಲಿ ಕೂಡಾ 2006ರಿಂದ ಪಿಂಚಣಿ ಯೋಜನೆ ಹಿಂಪಡೆಯಲಾಗಿದೆ.ಈಗಿನ ಯುವಜನರು ನಾಳೆಯ ಬಗ್ಗೆ ಈಗಲೇ ಯೋಚಿಸಿದರೆ `ಸ್ವಯಂ ಪಿಂಚಣಿ~ ಯೋಜನೆ ರೂಪಿಸಿಕೊಳ್ಳಬಹುದು. ಪ್ರತಿ ತಿಂಗಳೂ ಕೇವಲ ರೂ. 3,000 ಆರ್.ಡಿ ತುಂಬುತ್ತಾ ಬಂದರೆ 30 ವರ್ಷಗಳ ವೃತ್ತಿ ಬದುಕು ಮುಗಿಸಿ ನಿವೃತ್ತಿಯಾದಾಗ ತಿಂಗಳಿಗೆ ಪಿಂಚಣಿ ರೂಪದಲ್ಲಿ ಬಡ್ಡಿ ರೂ. 50,000 ಪಡೆಯಬಹುದು. ಈ ಬಗ್ಗೆ ವೃತ್ತಿ ನಿರತ-ಸ್ವ ಉದ್ಯೋಗದಲ್ಲಿರುವ ಯುವಜನರು ಈ ಬಗ್ಗೆ ಆಲೋಚಿಸುವರೇ?ಗಮನಕ್ಕೆ: 30 ವರ್ಷಗಳಲ್ಲಿ ರೂ. 34,56,564 -14,19,417 + 5,82,636 = 54,58,617 ರೂ. 54.59 ಲಕ್ಷ ಬ್ಯಾಂಕಿನಲ್ಲಿ ಠೇವಣಿ ಇರಿಸಿ ರೂ. 50,000 ಬಡ್ಡಿ ಪಿಂಚಣಿ ರೂಪದಲ್ಲಿ ಪಡೆಯಿರಿ.ಪಿಂಚಣಿಗೆ 30 ವರ್ಷಗಳ ಸ್ವಯಂ ಯೋಜನೆ (2012-2042)

------------------------------------------------------

ಹೂಡುವ ಹಣ ಠೇವಣಿ ಎಷ್ಟು ನೀವು ಪಡೆಯುವ ಮೊತ್ತ ಎಲ್ಲಿಂದ

ರೂ. ಹೆಸರು ವರ್ಷಗಳಿಗೆ ರೂ. ಠೇವಣಿ ಬಡ್ಡಿ ದರ ಎಲ್ಲಿವರೆಗೆ

------------------------------------------------------

ರೂ. 3,000 ಆರ್.ಡಿ. 10 5,82,636 ಶೇ. 9 2012-22

------------------------------------------------------

ರೂ. 5,82,636 ಮರುಹೂಡಿಕೆ 10 14,19,417 ಶೇ. 9 2022-32

ಠೇವಣಿ

------------------------------------------------------

ರೂ. 14,19,417 ಮರುಹೂಡಿಕೆ 10 34,56,564 ಶೇ. 9 2032-42

ಠೇವಣಿ

------------------------------------------------------

ರೂ. 3,000 ಆರ್.ಡಿ. 10 5,82,636 ಶೇ. 9 2022-32

------------------------------------------------------

ರೂ. 5,82,636 ಮರುಹೂಡಿಕೆ 10 14,19,417 ಶೇ. 9 2032-42

ಠೇವಣಿ

------------------------------------------------------

ರೂ. 3,000 ಆರ್.ಡಿ. 10 5,82,636 ಶೇ. 9 2032-42

------------------------------------------------------ಆರ್.ಡಿ ಖಾತೆ ನೀಡಿದ ನೆಮ್ಮದಿ

`ನಾನು ಮೂಲತಃ ಪುತ್ತೂರಿನವನು. ಕರ್ನಾಟಕ ಸರ್ಕಾರದ ಪಿ.ಡಬ್ಲ್ಯು.ಡಿಯಲ್ಲಿ ಜೂನಿಯರ್ ಎಂಜಿನಿಯರ್ ಆಗಿ ದಾವಣಗೆರೆಯಲ್ಲಿ 1952ರಲ್ಲಿ ಕೆಲಸಕ್ಕೆ ಸೇರಿದೆ. ಸದ್ಯ ನಿವೃತ್ತನಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ಇಬ್ಬರು ಗಂಡುಮಕ್ಕಳಿದ್ದು, ಅವರಿಬ್ಬರೂ ಡಾಕ್ಟರ್ ಆಗಬೇಕು ಎನ್ನುವುದು ನನ್ನ ಹೆಂಡತಿಯ ಬಯಕೆಯಾಗಿತ್ತು.ಒಮ್ಮೆ ಈ ವಿಚಾರ ಸಿಂಡಿಕೇಟ್ ಬ್ಯಾಂಕಿನಲ್ಲಿ ವಿಚಾರಿಸಿದಾಗ ಆಗಿನ ಶಾಖಾ ವ್ಯವಸ್ಥಾಪಕರು ನನಗೆ ಎರಡೂ ಮಕ್ಕಳ ಹೆಸರಿನಲ್ಲಿ ರೂ. 2,000 ಆರ್.ಡಿ ಮಾಡಲು ಸಲಹೆ ನೀಡಿದರು. ಆಗಿನ್ನೂ ಮೊದಲ ಮಗನಿಗೆ 4, ಎರಡನೆಯವನಿಗೆ 2 ವರ್ಷವಾಗಿತ್ತು. ಇಬ್ಬರ ಹೆಸರಿನಲ್ಲಿಯೂ ಆರ್.ಡಿ. ಖಾತೆ ತೆರೆದು ಅವರಿಬ್ಬರೂ ಪಿ.ಯು.ಸಿ ಮುಗಿಸುವವರೆಗೂ ರೂ. 2,000 ಹಣ ತುಂಬುತ್ತಾ ಬಂದೆ.ನನ್ನ ಹಾಗೂ ಹೆಂಡತಿಯ ಆಸೆಯಂತೆ, ಮೊದಲ ಮಗ ಎಂಬಿಬಿಎಸ್ ಹಾಗೂ ಎರಡನೆಯ ಮಗ ಬಿಡಿಎಸ್ ಮುಗಿಸಿ ಎಂ.ಡಿ. ಹಾಗೂ ಎಂ.ಡಿ.ಎಸ್ ಮಾಡಿ ಬೆಂಗಳೂರಿನಲ್ಲಿ ಸುಖವಾಗಿದ್ದಾರೆ. ಮಕ್ಕಳ ಉನ್ನತ ವಿದ್ಯಾಭ್ಯಾಸದ ವೆಚ್ಚಕ್ಕೆ ಆರ್.ಡಿ ಖಾತೆ ತುಂಬಾ ನೆರವಾಯಿತು.

ರಾಮಚಂದ್ರ ಕಕ್ಕಿಲ್ಲಾಯ, ಪುತ್ತೂರುನಾನು ಮತ್ತು ನನ್ನ ಪತಿ ಬೆಂಗಳೂರಿನಲ್ಲಿ ಸ್ವಂತ ಮನೆಯಲ್ಲಿ ನೆಲೆಸಿದ್ದೇವೆ. ನಾನು ಕಾಲೇಜೊಂದರಲ್ಲಿ ಉಪನ್ಯಾಸಕಿ. ಪತಿ ಖಾಸಗಿ ಕಂಪೆನಿ ಉದ್ಯೋಗಿ. ನಾವು ಸಂಬಳವನ್ನೆಲ್ಲಾ ಹೇಗೋ ಖರ್ಚು ಮಾಡುತ್ತಿದ್ದೆವು. ಮನೆಗೆ ಸಮೀಪ ಎಸ್.ಬಿ.ಎಂ ಶಾಖೆ ಇದೆ. ಅಲ್ಲಿರುವ ಸ್ನೇಹಿತೆ ಶಂಕರಿ, ಆರ್.ಡಿ ಆರಂಭಿಸಲು ಸಲಹೆ ನೀಡಿದರು. ಇಬ್ಬರ ಹೆಸರಿನಲ್ಲಿಯೂ ಪ್ರತ್ಯೇಕ ಆರ್.ಡಿ ಖಾತೆ ಮಾಡಿ ಪ್ರತಿ ತಿಂಗಳೂ ರೂ. 3,500 ಪಾವತಿಸಿದೆವು.ಆರ್.ಡಿ ಅವಧಿ ಮುಗಿಯುತ್ತಲೇ ಆ ಹಣವನ್ನು ಮೂಲ ಬಂಡವಾಳವಾಗಿಟ್ಟು ಅದೇ ಬ್ಯಾಂಕಿನಲ್ಲಿ ಗೃಹ ಸಾಲ ಪಡೆದೆವು. ಕನಕಪುರ ರಸ್ತೆಯಲ್ಲಿ ಪ್ಲಾಟ್ ಖರೀದಿಸಿದೆವು. ಈಗ ಸ್ವಂತ ಮನೆಯಲ್ಲಿ ಸುಖವಾಗಿದ್ದೇವೆ. ನಿಜವಾಗಿ ಆರ್.ಡಿ ಆರಂಭಿಸಿದ್ದರಿಂದ ಸ್ವಂತ ಸೂರು ದೊರೆಯುವುದು ಸುಲಭವಾಯಿತು.ಪ್ರತಿ ವ್ಯಕ್ತಿಗೆ ಆರ್.ಡಿ ಜೀವನದ ಅಗತ್ಯವಾಗಬೇಕು. ಸಂಬಳದಿಂದ ನೇರವಾಗಿಯೇ ಕಡಿತವಾಗಿಯೇ ಆರ್‌ಡಿ ಖಾತೆ ಜಮಾ ಆಗುವಂತೆ ಮಾಡಿದರೆ ನಮಗೇ ಗೊತ್ತಾಗದಂತೆ ಒಂದು ದೊಡ್ಡ ಮೊತ್ತ ಬ್ಯಾಂಕಿನಲ್ಲಿ ಸೇರುತ್ತಾ ಬರುತ್ತದೆ. ಜತೆಗೆ ಬಡ್ಡಿಯೂ ಸೇರಿ ಊಹಿಸಲೂ ಆಗದಷ್ಟು ಹಣ ನಮ್ಮ ಕೈಸೇರಿ ಅಗತ್ಯಗಳಿಗೆ ಒದಗುತ್ತದೆ.

ಶಾರದಾ ಶ್ರೀನಿವಾಸ್, ಬನಶಂಕರಿ, ಬೆಂಗಳೂರು
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.