ಶುಕ್ರವಾರ, ಮೇ 14, 2021
31 °C

ಉಳಿತಾಯ ಬಜೆಟ್ ಮಂಡನೆ

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

ನರಸಿಂಹರಾಜಪುರ: ಪಟ್ಟಣ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ 2012-13 ನೇ ಸಾಲಿಗೆ ರೂ. 18.53ಲಕ್ಷ ಉಳಿತಾಯದ ಬಜೆಟ್ ಮಂಡಿಸಲಾಯಿತು.ಪ್ರಸಕ್ತ ಸಾಲಿನಲ್ಲಿ ಎಲ್ಲಾ ಮೂಲಗಳಿಂದ ಅಂದಾಜು ರೂ. 12.42 ಕೋಟಿ ಆದಾಯ ನಿರೀಕ್ಷಿಸಲಾಗಿದೆ.  ಪಟ್ಟಣ ಪಂಚಾಯಿತಿ ನಿಧಿಯಿಂದ ರೂ. 94ಲಕ್ಷ, ಸರ್ಕಾರದ ವಿವಿಧ ಅನುದಾನಗಳಿಂದ ರೂ. 8.40ಕೋಟಿ ಆದಾಯ ನಿರೀಕ್ಷಿಸಲಾಗಿದೆ.ರಸ್ತೆ ಅಭಿವೃದ್ಧಿ ಗೆ ರೂ.50ಲಕ್ಷ, ಚರಂಡಿಗಳ ಅಭಿವೃದ್ಧಿಗೆ ರೂ. 75 ಲಕ್ಷ, ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ರೂ. 1ಕೋಟಿ, ವೇತನಕ್ಕೆ ರೂ,50ಲಕ್ಷ, ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣ ಕಾರ್ಯಕ್ರಮಕ್ಕೆ ರೂ. 35ಲಕ್ಷ, ಇತರೆ ವರ್ಗದ ಕಲ್ಯಾಣ ಕಾರ್ಯಕ್ರಮಕ್ಕೆ ರೂ.10ಲಕ್ಷ ವೆಚ್ಚ ಮಾಡಲು ಉದ್ದೇಶಿಸಲಾಗಿದೆ ಎಂದು ಮುಖ್ಯಾಧಿಕಾರಿ ಶಂಕರಪ್ಪ ಸಭೆಗೆ ಮಾಹಿತಿ ನೀಡಿದರು.ಇತರೆ ವರ್ಗದವರ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕೆಂದು ಸದಸ್ಯರು ಒತ್ತಾಯಿಸಿದರು. ಇದಕ್ಕೆ ಸಭೆ ಒಪ್ಪಿಗೆ ಸೂಚಿಸಿತು. ಪಟ್ಟಣದಲ್ಲಿ ಕಳೆದ 40 ವರ್ಷಗಳಿಂದ ವಾಸವಾಗಿದ್ದು ಮನೆ ನಿರ್ಮಿಸಿಕೊಂಡಿರುವವರಿಗೆ ಮೂಲ ದಾಖಲೆಗಳಿಲ್ಲದಿರುವುದರಿಂದ ಅವರಿಗೆ ಬ್ಯಾಂಕಿನ ಸಾಲ ಸೌಲಭ್ಯ ದೊರೆಯುತ್ತಿಲ್ಲ ಎಂದು ಸದಸ್ಯರಾದ ಆಶೀಶ್‌ಕುಮಾರ್, ಸುಬಾನ್ ವಿಷಯ ಪ್ರಸ್ತಾಪಿಸಿದರು. ಈ ಬಗ್ಗೆ ಚರ್ಚೆ ನಡೆದು ಮೂಲ ನಿವಾಸಿಗಳಿಗೆ ಅವರು ವಾಸವಾಗಿರುವ ಬಗ್ಗೆ ಸೂಕ್ತ ದಾಖಲೆಗಳ ಆಧಾರದ ಮೇಲೆ ಪಟ್ಟಣ ಪಂಚಾಯಿತಿ ವತಿಯಿಂದ ನಿರ್ದಿಷ್ಟ ದರ ನಿಗದಿಮಾಡಿ  ಮಂಜೂರಾತಿ ಪತ್ರ ನೀಡಲು ಅವಕಾಶವಿದ್ದು, ಈ ಬಗ್ಗೆ ಸರ್ಕಾರದ ಒಪ್ಪಿಗೆ ಪಡೆಯಲು ಪತ್ರ ಬರೆಯಲು ಸಭೆ ನಿರ್ಧರಿಸಿತು.ಪಟ್ಟಣದ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲೂ ಕುಡಿಯುವ ನೀರಿನ ಸಮಸ್ಯೆಯಿದ್ದು, ಇದನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂದು ಎಲ್ಲಾ ಸದಸ್ಯರು ಒತ್ತಾಯಿಸಿದರು.ಪಟ್ಟಣ ಪಂಚಾಯಿತಿ ಸಭೆಯನ್ನು ನೇರ ಪ್ರಸಾರ ಮಾಡಲು ಖಾಸಗಿ ವಾಹಿನಿಯೊಂದಕ್ಕೆ ರೂ.75ಸಾವಿರ ಪಟ್ಟಣ ಪಂಚಾಯಿತಿಯಿಂದ ನೀಡಲಾಗಿದೆ. ಆದರೆ ಇದುವರೆಗೂ ಒಮ್ಮೆಯೂ ಸಹ ಸಭೆಯಲ್ಲಿನ ಚರ್ಚೆಗಳು ನೇರ ಪ್ರಸಾರವಾಗಿಲ್ಲ ಎಂದು ಸದಸ್ಯ ಸುಬಾನ್ ದೂರಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಮುಂದಿನ ಸಭೆಗಳನ್ನು ನೇರ ಪ್ರಸಾರ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಚರ್ಚೆ ಕೊನೆಗೊಳಿಸಲಾಯಿತು.ಹಳೇ ಮಂಡಗದ್ದೆ ಸರ್ಕಲ್‌ನ ಕೊನೆಯ ಭಾಗವಾದ ಭದ್ರಾ ಹಿನ್ನೀರಿನ ಸಮೀಪ ಇರುವ ಸ್ಥಳದಲ್ಲಿ ಚಿತಾಗಾರವನ್ನು ನಿರ್ಮಿಸುವಂತೆ ಸದಸ್ಯ ಆಶೀಶ್‌ಕುಮಾರ್ ಒತ್ತಾಯಿಸಿ ದರು. ಪಟ್ಟಣಕ್ಕೆ ಸುಸಜ್ಜಿತವಾದ ಸಕ್ಕಿಂಗ್‌ಯಂತ್ರ ಕೊಡುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲು ಸಭೆ ನಿರ್ಧರಿಸಿತು.ಸಭೆಯ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಸುರೇಶ್ ವಹಿಸಿದ್ದರು. ಪಟ್ಟಣ ಪಂಚಾ ಯಿತಿ ಉಪಾಧ್ಯಕ್ಷೆ ರತ್ನಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಿನಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.