ಉಳಿದ ಮೇಲೆ

7
ಕಥೆ

ಉಳಿದ ಮೇಲೆ

Published:
Updated:

ಸುಮಾರು ಎಪ್ಪತ್ತು ಅಡಿ ಎತ್ತರದ ಮರ ಅದು.  ಕಾಂಜೀರ ಮರ. ತೆಂಕಣದ ಗಾಳಿಗೆ ತಲೆ ಬಾಗಿ ಅದು ಮೃದುಲಳನ್ನು ಭಾವಪೂರ್ಣವಾಗಿ ನೋಡಿತು. ಅವಳು ಈ ಹಿಂದೆ ಭೇಟಿಯಾಗಿ ಎಷ್ಟು ದೀರ್ಘ ಸಮಯವಾಗಿತ್ತು. ಅದರ ನೀಳ ಕೊಂಬೆಗಳ ನಡುವಿಂದ ಇಣುಕುವ ಬೆಳ್ಳಗೆಂಪು ಆಕಾಶದ ತುಣುಕುಗಳು, ಅವಳತ್ತ ಹೊಳೆದು ನಕ್ಕವು. ತನ್ನ ಎಲೆಗಳ ನಡುವಿಂದ ಸೋಸಿ ಬಂದ ತಂಗಾಳಿಯ ಮೂಲಕ ಅದು ಅವಳನ್ನು ಸ್ವಾಗತಿಸಿತು.ಮೃದುಲ ತನ್ನ ಹಳೆಯ ಗೆಳೆಯನತ್ತ ಮುಗುಳ್ನಕ್ಕಳು. ಆ ಕಾಂಜೀರ ವೃಕ್ಷ ಅವಳನ್ನು ಸದಾ ಪುಟ್ಟ ಹುಡುಗಿಯ ಹಾಗೇ ನೋಡುತ್ತಿತ್ತು. ಅದು ಬಾಗಿ ಅವಳನ್ನು ದೃಷ್ಟಿಸಿದ ರೀತಿ ಮತ್ತು ಅದರ ನಗುವಿನಲ್ಲಿದ್ದ ತುಂಟತನದ ಛಾಯೆಗಳು ಅವಳನ್ನು ಅದು ಅತೀವವಾಗಿ ಪ್ರೀತಿಸಿದರೂ ಗಂಭೀರವಾಗಿ ತಗೊಳುವಷ್ಟು ಅವಳು ಬೆಳೆದಿಲ್ಲ ಎಂಬ ಅದರ ಮೂಲ ನಂಬಿಕೆಯ ಸೂಚನೆಗಳಾಗಿದ್ದವು! ಅದಕ್ಕಾಗಿ ಅವಳು ಅದನ್ನೇನು ದೂರುವವಳಾಗಿರಲಿಲ್ಲ. ಯಾಕೆಂದರೆ ಕೊನೇಪಕ್ಷ ಅವಳ ದುಪ್ಪಟ್ಟು ವಯಸ್ಸು ಅದಕ್ಕೆ. ಮೃದುಲಳಿಗೆ ಬರೀ ಇಪ್ಪತ್ತು ವರ್ಷ ಮತ್ತು ಕಾಂಜೀರಕ್ಕೆ ಆಗಲೇ ಎಂಬತ್ತು ತುಂಬಿತ್ತು.ಉಮಾಕಾಂತ ಬಾಬುವಿನ ಪೂರ್ವಿಕರ ಮನೆಗೆ ಅವಳು ಕಾಲಿಟ್ಟಿದ್ದು ನಲವತ್ತು ವರ್ಷಗಳ ಹಿಂದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಮರುದಿನ ಅವರ ಮದುವೆಯಾದದ್ದು. ಮದುವೆ ಅಂದರೆ ಹೇಳಿಕೊಳ್ಳುವಂತೇನೂ ಇರಲಿಲ್ಲ. ಅಲೀಪುರದ ರಿಜಿಸ್ತ್ರಿ ಆಫೀಸಿಗೆ ನಡೆದು ಹೋಗಿ ಇಬ್ಬರು ಸಾಕ್ಷಿಗಳ ಎದುರು ಸಹಿ ಮಾಡಿದ್ದೇ ಮದುವೆ. ಆ ನಂತರ ಚೌರಂಗಿಯ ಚೈನೀಸ್ ರೆಸ್ಟೋರಾಂಟ್‌ನಲ್ಲಿ ಭೋಜನ. ಅದು ಆ ಕಾಲದ ಮುಖಂಡರ ಪ್ರಕಾರ ಸಾಕಷ್ಟು ಅದ್ದೂರಿಯೇ. ಗಂಡು ಹೆಣ್ಣನ್ನೂ ಸೇರಿಸಿ ಒಟ್ಟು ಎಂಟು ಜನ ಇದ್ದರು. ಉಮಾಕಾಂತನ ಕುಟುಂಬದಿಂದಾಗಲೀ ಮೃದುಲಳ ಕುಟುಂಬದಿಂದಾಗಲೀ ಯಾರೂ ಇರಲಿಲ್ಲ.ಕೋಮುಗಲಭೆಯ ಮೊದಲ ಕಿಡಿಗಳು ಅದಾಗಲೇ ಕೆದರಿದ್ದವು. ಕಾಲದ ಈ ದೂರದ ಬಿಂದುವಲ್ಲಿ ನಿಂತು ನೋಡಿದರೂ ಆ ದಿನಗಳ ಘಟನೆಗಳನ್ನು ಸೃಷ್ಟವಾಗಿ ನೆನಪಿಸಿಕೊಳ್ಳಲು ಮೃದುಲಳಿಗೆ ಸಾಧ್ಯವಿರಲಿಲ್ಲ. ಸಾವಿರಾರು ಜನ ಸತ್ತರು. ಸಾವಿರಾರು ಜನ ಬೀದಿ ಪಾಲಾದರು. ಉಮಾಕಾಂತ ಮತ್ತು ಮೃದುಲ ಮುಂಜಾನೆಯಿಂದ ರಾತ್ರಿ ಎಷ್ಟೋ ಹೊತ್ತಿನ ತನಕ ನಿರಾಶ್ರಿತರ ಶಿಬಿರಗಳಲ್ಲಿ ಕೆಲಸ ಮಾಡುತ್ತಿದ್ದರು. ನಿರಾಶ್ರಿತರು ಅಲೆಯ ಮೇಲೆ ಅಲೆಯಂತೆ ಬರುತ್ತಿದ್ದ ಸೀಲ್‌ದಾ ರೈಲ್ವೆ ಸ್ಟೇಷನ್ನಿನ ಶಿಬಿರ ಅವರ ಕೇಂದ್ರವಾಗಿತ್ತು.

ತಾವೇನು ಸಹಾಯ ಮಾಡಿದರೂ ಅದರ ಪರಿಣಾಮ ಆ ದುರಂತ ಸನ್ನಿವೇಶದಲ್ಲಿ ಅತ್ಯಲ್ಪವಾದ್ದು ಎಂಬ ಭಾವನೆಯಿಂದ ಅವರು ಮಧ್ಯ ಕೊಲ್ಕತ್ತಾದ ತಮ್ಮ ಚಿಕ್ಕ ಕೋಣೆಗೆ ಬಂದು ವಿಪರೀತ ದಣಿವಿನಲ್ಲಿ ಹಾಸಿಗೆ ಸೇರುತ್ತಿದ್ದರು. ಅದು ಅವರ ಹನಿಮೂನ್ ಆಗಿತ್ತು!

ಸುಮಾರು ಎರಡು ವರ್ಷಗಳ ನಂತರ ಒಂದು ದಿನ ಉಮಾಕಾಂತ ಬಾಬು ಅವಳಿಗೆ ಹೇಳಿದ, ‘ನಮ್ಮ ಮನೆಗೆ ಹೋಗೋಣ’. ಮನೆ ಅಂದರೆ ಒರಿಸ್ಸಾದಲ್ಲಿ. ಉಮಾಕಾಂತ ಬಾಬುವಿನ ಮನೆ. ಮೃದುಲ ಬಂಗಾಳಿ.

ಆದರೆ ತನ್ನ ರಾಜ್ಯವನ್ನು ಬಿಡುವುದಕ್ಕೆ ಅವಳಿಗೆ ಯಾವ ರೀತಿಯ ಬೇಸರವೂ ಇರಲಿಲ್ಲ. ಒಬ್ಬ ಅಣ್ಣ ಮತ್ತು ಅತ್ತಿಗೆಯನ್ನು ಬಿಟ್ಟರೆ ಅವಳಿಗೆ ಸಂಬಂಧಿಗಳು ಎನ್ನುವವರು ಬೇರೆ ಯಾರೂ ಇರಲಿಲ್ಲ. ಅಣ್ಣನ ಇಷ್ಟಕ್ಕೆ ವಿರುದ್ಧವಾಗಿ ಒಬ್ಬ ಒಡಿಯಾನನ್ನು ಮದುವೆಯಾಗಿದ್ದಕ್ಕಾಗಿ ಅಣ್ಣ ಇವಳನ್ನು ಅಕ್ಷರಶಃ ರಂಡೆ ಎಂದು ಬೈದಿದ್ದ. ಅತ್ತಿಗೆ ‘ಬಸವಿ’ ಎಂದು ಕರೆದಿದ್ದಳು. ಉಮಾಕಾಂತ ಬಾಬುವಿಗೆ ಹೀಗೆ ಎರಡು ಬೇರೆ ಬೇರೆ ಪದ ಬಳಸಿದ್ದು ಅನಗತ್ಯವೆನ್ನಿಸಿತು.

‘ಅಲ್ಲ, ಎರಡರರ್ಥವೂ ಒಂದೇ; ಇಂಥ ಒಂದು ಸಣ್ಣ ವಿಚಾರದಲ್ಲೂ ಅವರಿಬ್ಬರ ನಡುವೆ ಸಹಮತವಿಲ್ಲ!’ ಎಂದು ಅವನು ಬಿದ್ದು ಬಿದ್ದು ನಕ್ಕ. ಮೃದುಲಳಿಗೆ ಅದು ಸೋಜಿಗವೆನಿಸಿತ್ತು. ಕೊಂಚ ಕಿರಿಕಿರಿಯೂ ಆಗದೆ ಇರಲಿಲ್ಲ. ಉಮಾಕಾಂತನ ತಂದೆ ನಿರಂಜನಬಾಬು ಕಟಕ್ ಮತ್ತು ಭುವನೇಶ್ವರದ ಮಧ್ಯೆ ಬಾರಂಗ್ ಎಂಬ ಹಳ್ಳಿಯಲ್ಲಿ ವಾಸವಿದ್ದರು. ಅವರು ಅಲ್ಲಿಯ ಜಮೀನ್ದಾರರು. ಹಳ್ಳಿಯ ಜನರ ದೃಷ್ಟಿಯಲ್ಲಿ ಶ್ರೀಮಂತರು. ನಿಜಕ್ಕೂ ದಾನವೆಂದು ಅವರು ಬಹಳಷ್ಟು ಹಣ ನೀಡುತ್ತಿದ್ದರು. ಹೆಚ್ಚು ಸರಿ ಅದು ಅಪಾತ್ರದಾನವೇ ಆಗಿರುತ್ತಿತ್ತು. ಅವರ ಈ ಉದಾತ್ತ ಕೊಡುಗೆಗಳ ನಂತರ ಹೆಚ್ಚೇನೂ ಉಳಿದಿರಲಿಲ್ಲ. ಅಷ್ಟಾಗಿಯೂ ಅವರು ಕೊರತೆಯೆಂಬುದಿಲ್ಲದೆ ಅನುಕೂಲವಾಗಿಯೇ ಇದ್ದರು.ನಿರಂಜನಬಾಬುವಿಗೆ ಒಂದು ಮಾತೂ ಹೇಳದೆ ಅವರ ಮಗ ಮೃದುಲಳನ್ನು ಮದುವೆಯಾಗಿದ್ದರೂ, ಅವರು ತಮ್ಮ ಸೊಸೆಯನ್ನು ಅತೀವ ಪ್ರೀತಿ ಆದರಗಳಿಂದ ಬರಮಾಡಿಕೊಂಡರು. ಮನೆಯಲ್ಲಿ ಹೆಣ್ಣಾಳು ಗಂಡಾಳು ಸೇರಿ ಅರ್ಧ ಡಜನ್ ಸೇವಕರಿದ್ದು, ಮೃದುಲಳಿಗೆ ಯಾವ ಕೆಲಸವೂ ಇರುತ್ತಿರಲಿಲ್ಲ. ಕ್ರಮೇಣ ಅವಳೂ ಅವಳ ಗಂಡ, ಮಾವನವರ ರೀತಿಯ ಒಂದು ಆರಾಮಾದ ಜೀವನಕ್ಕೆ ಒಗ್ಗಿಬಿಟ್ಟಳು. ಬಹಳ ಸಮಯವನ್ನು ಅವಳು ಪುಸ್ತಕ ಓದುತ್ತ, ರೇಡಿಯೊ ಸಂಗೀತ ಕೇಳುತ್ತ ಕಳೆಯತೊಡಗಿದಳು.

ಸಂಜೆ ವೇಳೆ ಅವಳ ಗಂಡ ಒಂದು ದಿಕ್ಕಿಗೆ ಮಾವ ಒಂದು ದಿಕ್ಕಿಗೆ ಗಾಳಿ ಸೇವನೆಗೆಂದು ಹೊರಡುತ್ತಿದ್ದರು. ಮೃದುಲ ಮೈದಾನದಲ್ಲಿ ಹಾಗೇ ಒಂದಷ್ಟು ಹೊತ್ತು ನಡೆದಾಡಿ ನಂತರ ಕಾಂಜೀರ ವೃಕ್ಷದ ಕೆಳಗೆ ಒಂದು ಬೆತ್ತದ ಕುರ್ಚಿ ಹಾಕಿಸಿಕೊಂಡು, ಪಶ್ಚಿಮದ ಆಕಾಶದಲ್ಲಿ ಸಂಜೆ ಸೂರ್ಯ ಕಡೆಗೊಂದು ಗಳಿಗೆ ಕುಂಕುಮ ವರ್ಣದಲ್ಲಿ ಬೆಳಗಿ ಮರೆಯಾಗಿ, ಕತ್ತಲಿಳಿಯುವವರೆಗೂ ಕೂತಿರುತ್ತಿದ್ದಳು. ಕಾಂಜೀರ ಮರದ ಎಲೆಗಳ ನಡುವಿಂದ ಆಕಾಶ ನೋಡುತ್ತ, ಮರದ ಕೊಂಬೆಗಳ ಮೇಲೆ ತಂಗಲು ಬರುವ ಹಕ್ಕಿಗಳ ಗದ್ದಲ ಕೇಳುತ್ತ, ಆ ಸುಂದರ ಸನ್ನಿವೇಶದಲ್ಲಿ ಸುಮ್ಮನೆ ಹಾಜರಿರುವ ಸ್ವಚ್ಛ ಸಂತೋಷಕ್ಕೆ ತನ್ನನ್ನು ತಾನು ಕೊಟ್ಟುಕೊಳ್ಳುತ್ತಿದ್ದಳು.

ಆ ಬೃಹತ್ ಮನೆಯ ಮೊದಲ ಮಹಡಿಯ ಮೇಲಿನ ತನ್ನ ಕೋಣೆಯಿಂದ ಅವಳು ಕಾಂಜೀರಂ ಮರವನ್ನು ಸದಾ ನೋಡುತ್ತಿರುತ್ತಿದ್ದಳು. ಅಂಥ ವೇಳೆ ಮರ ಅವಳನ್ನು ನಿರ್ಲಕ್ಷಿಸುತ್ತಿತ್ತು. ಆದರೆ ಅದರ ನೆರಳಲ್ಲಿ ಅವಳು ಕೂರಲು ಬಂದಾಗ ಮಾತ್ರ ಪೂರ್ತಿ ಸಂತೋಷಪಡುತ್ತಿತ್ತು. ತೆಂಕಣದ ತಂಗಾಳಿಗೆ ತಲೆಬಾಗಿಸಿ ಅವಳ ಮುಖದತ್ತ ಚೇಷ್ಟೆಮಾಡುವಂತೆ ಇಣುಕುತ್ತಿತ್ತು. ಅವಳೊಂದು ಪುಟ್ಟ ತುಂಟಿಯೇನೋ ಎನ್ನುವಂತೆ ತನ್ನ ಕೆಳಗಿನ ಟೊಂಗೆಗಳಿಂದ ಅವಳನ್ನು ಬಾಚಿ ಹಿಡಿಯಲು ಯತ್ನಿಸುತ್ತಿತ್ತು.

ಮುಸ್ಸಂಜೆಯಾಗುತ್ತಲೇ ಹಕ್ಕಿಗಳು ಗುಂಪುಗುಂಪಾಗಿ ಗದ್ದಲ ಮಾಡುತ್ತ ಅದರ ರೆಂಬೆಗಳಿಗೆ ಹಾರಿ ಬರುತ್ತಿದ್ದುದು ಕಾಂಜೀರ ಮರಕ್ಕೆ ಕಿರಿಕಿರಿಯನ್ನೇ ಉಂಟುಮಾಡುತ್ತಿತ್ತು. ಮೃದುಲಳೊಂದಿಗಿನ ಅದರ ಮೌನ ಸಂಭಾಷಣೆಗೆ ಇದರಿಂದ ಧಕ್ಕೆ ಬರುತ್ತಿತ್ತು. ಕೊಂಬೆಗಳನ್ನು ಜೋರಾಗಿ ಅಲ್ಲಾಡಿಸಿ ಅವುಗಳನ್ನು ಓಡಿಸಲು ಯತ್ನಿಸುತ್ತಿತ್ತು. ‘ಅಯ್ಯೋ , ಇರಲಿ ಬಿಡು. ಈ ಹೊತ್ತಲ್ಲಿ ಆ ಬಡಪಾಯಿಗಳು ಮತ್ತೆಲ್ಲಿ ಹೋಗುತ್ವೆ’ ಎನ್ನುತ್ತಿದ್ದಳು ಮೃದುಲ. ಮರ ಶಾಂತವಾಗುತ್ತಿತ್ತು.ದೊಡ್ಡ ಮನೆಯ ಹಿಂದಿದ್ದ ಔಟ್‌ಹೌಸಿಗೆ ಹೋಗುವ ಹಾವಿನಂತೆ ಡೊಂಕಾದ ಕಾಲುದಾರಿ ಮೃದುಲಳ ಕುರ್ಚಿಯ ಬದಿಗೆ ಕಾಂಜೀರದಿಂದ ಮೂರಡಿ ದೂರದಲ್ಲಿ ಹಾದುಹೋಗುತ್ತಿತ್ತು. ಆ ಔಟ್‌ಹೌಸ್‌ನಲ್ಲಿದ್ದವನು ವಾಚ್‌ಮನ್ ಅಕುಲಿ. ಆ ಆವರಣಕ್ಕೆ ಅಕುಲಿಯನ್ನು ವಾಚ್‌ಮನ್ ಮಾಡಿದ್ದ ತರ್ಕ ನಿಜಕ್ಕೂ ಅರ್ಥವಾಗುವಂತಿರಲಿಲ್ಲ. ಅವನು ಹೇಗಿದ್ದನೆಂದರೆ , ಸಾಧಾರಣ ಪರಿಸ್ಥಿತಿಯಲ್ಲಿ ಮೂರು ಅಥವಾ ನಾಲ್ಕು ಮಡಿಕೆ ಮಾಡಿ ಒಂದು ಮೂಲೆಯಲ್ಲಿದ್ದು, ಬೇಕಾದಾಗ ಮಾತ್ರ ಬಿಚ್ಚಿಕೊಳ್ಳುತ್ತಿದ್ದವನಂತೆ ಇದ್ದ.

ಅನಿರೀಕ್ಷಿತವಾಗಿ ಒದೆತ ಅಥವಾ ಕೆನ್ನೆಗೆ ತಪ್ಪಡಿ ತಿನ್ನುವವನಂತೆ ಅವನ ಕಣ್ಣುಗಳು ಸದಾ ಚುರುಕಾಗಿರುತ್ತಿದ್ದವು. ಅಂಬಾಲಿ ಆ ಕಡೆ ನಡೆದು ಹೋಗುವಾಗ ಕಾಂಜೀರ ಅಲ್ಲಾಡದೆ ಗಪ್ಪನೆ ಇರುತ್ತಿತ್ತು. ಅಕಸ್ಮಾತ್ ಅದು ಕೊಂಬೆಗಳನ್ನಾಡಿಸಿದರೆ ಅದರಿಂದ ಹುಟ್ಟುವ ಗಾಳಿ ಅಕುಲಿಯನ್ನು ಆಯ ತಪ್ಪಿಸುವ ಸಾಧ್ಯತೆ ಇತ್ತು. ಆದರೆ ಅವನ ಹೆಂಡತಿ ಅಂಬಾಲಿ ಮಾತ್ರ ಬೇರೆಯೇ. ಅವಳು ಎಂಥ ದಿಟ್ಟತನದಿಂದ ಓಡಾಡುತ್ತಿದ್ದಳೆಂದರೆ ನೋಡಿದವರು ಅವಳೇ ಆ ಸ್ಥಳದ ಮಾಲೀಕಳೇನೋ ಎನ್ನುವಂತೆ ಇರುತ್ತಿತ್ತು.

ಸಮೃದ್ಧವಾಗಿ ಬೆನ್ನಿನಿಂದ ಇಳಿದು, ಪುಟಿಯುವ ಪೃಷ್ಠದ ತನಕ ಇದ್ದ ಕೂದಲಿನ ಆಕೆ ಕಗ್ಗಪ್ಪಾಗಿದ್ದಳು. ಆ ಪ್ರಾಂತ್ಯದ ಸಾಧಾರಣ ಹೆಂಗಸರಿಗಿಂತ ಹೆಚ್ಚು ಎತ್ತರವಿದ್ದ ಆಕೆ ಕಟೆದ ವಿಗ್ರಹದಂತಿದ್ದಳು. ವಿಶಾಲವಾದ ಹೊಳೆಯುವ ಕಣ್ಣುಗಳು ಆಕೆಯದು. ಮೃದುಲಳೊಂದಿಗೆ ಮಾತಾಡಲು ಅವಳು ಕಾಲುಹಾದಿಯ ಮೇಲೆ ನಿಂತಾಗ ಅವಳ ಎದೆಯ ನೆರಳು ಮೃದುಲಳ ಮೇಲೆ ಬೀಳುತ್ತಿತ್ತು! ‘ಕುರ್ಚಿಯನ್ನ ಒಂದು ಒಂದೂವರೆ ಅಡಿ ಜರುಗಿಸಿಕೊಂಡರೆ ಹೇಗೆ?’ ಮೃದುಲ ತನ್ನಷ್ಟಕ್ಕೇ ತಮಾಷೆ ಮಾಡಿಕೊಳ್ಳುತ್ತಿದ್ದಳು.‘ಎಂಥ ಹೆಣ್ಣು ಇವಳು’, ಮೃದುಲ ಕಾಂಜೀರವನ್ನು ಕೇಳುತ್ತಿದ್ದಳು. ಕಾಂಜೀರ ಮೌನವಾಗಿರುತ್ತಿತ್ತು. ಮೃದುಲಳಿಗೆ ಆ ಮೌನ ಅರ್ಥವಾಗುತ್ತಿತ್ತು. ಮೃದುಲಳಿಗಿಂತ ಹೆಚ್ಚು ಕಾಲದಿಂದ ಅಂಬಾಲಿಯನ್ನು ನೋಡಿತ್ತು ಆ ಮರ. ‘ಸರಿಯಪ್ಪಾ, ನಿನಗೆ ಏನನ್ನೂ ಹೇಳಲು ಇಷ್ಟವಿರದಿದ್ದರೆ ಸರಿ ಬಿಡು’ ಮೃದುಲ ಪಿಸುಗುಡುತ್ತಿದ್ದಳು. ‘ಅಂಬಾಲಿಯೊಂದಿಗಿನ ನಿನ್ನ ಹಳೇ ಗೆಳೆತನವನ್ನು ಕಾಪಾಡಿಕೋಬೇಕು ಅಂತಿದ್ದರೆ ಹಾಗೇ ಆಗಲಿ. ಆದರೆ ನನಗೆಲ್ಲಾ ಗೊತ್ತು. ಇಲ್ಲಿ, ನಾನು ಕೂತಿರುವ ಈ ಜಾಗದಲ್ಲೇ ಹಲವರು ಅವಳ ಭೆಟ್ಟಿಗೆ ಬರುತ್ತಾರೆ.

ಅವರುಗಳು ಅವಳನ್ನು ತಬ್ಬಿ ಚುಂಬಿಸುವುದನ್ನು ನಾನು ಕಂಡಿದ್ದೇನೆ. ಎಷ್ಟುದಿನ ತಾನೆ ನೀನು ನಿಜವನ್ನು ಮರೆಮಾಚಬಲ್ಲೆ?’. ಅಂಥ ಸಂದರ್ಭಗಳಲ್ಲಿ ಮೃದುಲಳ ಸಿಡುಕು ಕಟಕಿಗಳನ್ನು ಎದುರಿಸಲಾರದೆ ಕಾಂಜೀರ ತನ್ನ ಕೊಂಬೆಗಳನ್ನು ರಭಸವಾಗಿ ಅಲ್ಲಾಡಿಸಿ ಎಲೆಗಳ ಭೋರೆಂಬ ಸದ್ದಿನಿಂದ ದೊಡ್ಡ ರಂಪ ಎಬ್ಬಿಸುತ್ತಿತ್ತು. ಬಹುಶಃ ಅಂಬಾಲಿಯ ಇಂಥ ರಾತ್ರಿ ಚಟುವಟಿಕೆಗಳ ಕಾರಣದಿಂದ ಇರಬೇಕು ಮೃದುಲ ಮರದಡಿಗೆ ಕೂರಲು ಉಮಾಕಾಂತನನ್ನು ಕರೆಯುತ್ತಿರಲಿಲ್ಲ. ಅಥವಾ ಅದೂ ಅಲ್ಲವೇನೋ. ಉಮಾಕಾಂತ ಬಾಬು ಸಂಜೆ ವೇಳೆ ವಾಕ್ ಹೋಗಿಬಿಡುತ್ತಿದ್ದನಾದ್ದರಿಂದ ಮೃದುಲಳಿಗೆ ಜೊತೆ ಕೊಡಲು ಸಿಗುತ್ತಿರಲಿಲ್ಲ. ಅಥವಾ ಕಾಂಜೀರದೊಂದಿಗಿನ ಆತ್ಮಸಂಗಾತದ ಗಳಿಗೆಗಳಲ್ಲಿ ಮೃದುಲಳಿಗೇ ಯಾವ ಜೊತೆಯೂ ಬೇಕಿರಲಿಲ್ಲವೇ ? ಒಂದು ದಿನ ಊಟದ ಹೊತ್ತಲ್ಲಿ ನಿರಂಜನ ಬಾಬು ಕೇಳಿದರು: ‘ಉಮ, ಎಷ್ಟು ದಿನ ಅಂತ ನೀನು ಇಲ್ಲಿ ಹೀಗೆ ಏನೂ ಮಾಡದೆ ಅಡ್ಡಾಡಿಕೊಂಡಿರೋಣ ಅಂತಿದೀಯ ? ಉಮಾಕಾಂತ ಉತ್ತರಿಸಲಿಲ್ಲ. ಆ ರಾತ್ರಿ ಮೃದುಲ ಮಾವನವರ ಪ್ರಶ್ನೆಯನ್ನು ನೆನಪಿಸಿದಾಗ ಉಮಾಕಾಂತ ಥಟ್ಟನೆ ಉತ್ತರವಿತ್ತ : ‘ಹೌದು, ಅಪ್ಪ ಇಲ್ಲಿ ಏನೂ ಮಾಡದೆ ಎಷ್ಟು ವರ್ಷದಿಂದ ಅಡ್ಡಾಡಿಕೊಂಡಿದಾರೋ, ಅಷ್ಟು ವರ್ಷ’. ಅವರಿಬ್ಬರೂ ನಗತೊಡಗಿದರು.

ನಿರಂಜನಬಾಬುವಿನ ಮಾತಿನ ಹಿಂದೆ ಯಾವ ಉದ್ದೇಶವಾಗಲೀ, ವ್ಯಂಗ್ಯವಾಗಲೀ ಇರಲಿಲ್ಲವೆಂಬುದು ಅವರಿಗೆ ಗೊತ್ತಿತ್ತು. ಹಾಗೇ ಉಮಾಕಾಂತನ ಮಾತೂ ಅಷ್ಟೇ ಸ್ವಚ್ಛವಾದ್ದಾಗಿತ್ತು. ಅಪ್ಪ-ಮಗ ಇಬ್ಬರೂ ಒಳ್ಳೇ ಗೆಳೆಯರಂತಿದ್ದರು. ‘ಹಾಗಾದರೆ ಭವಿಷ್ಯದ ನಿನ್ನ ಆಲೋಚನೆ ಏನು’ ಎಂದು ಮೃದುಲ ಕೇಳುವ ಹೊತ್ತಿಗೆ ಉಮಾಕಾಂತ ಗೊರಕೆ ಹೊಡೆಯುತ್ತಿದ್ದ.ಅದಾದ ಸ್ವಲ್ಪವೇ ಸಮಯದೊಳಗೆ ಉಮಾಕಾಂತ ಮೃದುಲಳಿಗೆ ಮನೆಬಿಡಲು ತಯಾರಾಗಲು ತಿಳಿಸಿದ. ಗಂಜಾಂ ಜಿಲ್ಲೆಯ ಬೆಹರಾಂಪುರದಲ್ಲಿ ಅವನಿಗೊಂದು ಮಾಸ್ತರಿಕೆ ಸಿಕ್ಕಿತ್ತು. ನಿರಂಜನ ಬಾಬುವಿಗೆ ಅದನ್ನು ಕೇಳಿ ನೋವಾಯಿತು. ಅದೇ ವೇಳೆ ಮಾಸ್ತರಿಕೆಯಂಥ ಒಂದು ಗೌರವದ ಕೆಲಸವನ್ನು ಮಗ ಹಿಡಿಯುವುದರ ಬಗ್ಗೆ ಸಂತೋಷವೂ ಆಯಿತು. ಮೃದುಲ ತನ್ನ ಪೆಟ್ಟಿಗೆಯನ್ನೆಲ್ಲ ಅಣಿಮಾಡಿಕೊಳ್ಳುತ್ತಿದ್ದಾಗ ಅವಳ ಕೊಠಡಿಗೆ ಬಂದು ನಿರಂಜನ ಬಾಬು ಮಾಸಲು ರೇಷ್ಮೆ ಬಟ್ಟೆಯಲ್ಲಿ ಸುತ್ತಿದ ಒಂದು ಗಂಟು ಕೊಟ್ಟು ‘ಬಿಚ್ಚಿ ನೋಡು’ ಎಂದರು. ಅದರೊಳಗೆ ಅನೇಕ ಚಿನ್ನಾಭರಣಗಳು ಮತ್ತು ಸುಮಾರು ಇಪ್ಪತ್ತು ಚಿನ್ನದ ಮೊಹರುಗಳು ಇದ್ದವು. ಒಟ್ಟಾರೆ ಅದೊಂದು ನಿಧಿಯೇ. ‘ಎಲ್ಲ ನಿಮ್ಮತ್ತೆಯದು’ ಎಂದರು ಆ ಹಿರಿಯರು.ಅವರು ಬೆಹರಾಂಪುರದಲ್ಲಿದ್ದಾಗಲೇ ಅವರಿಗೊಬ್ಬ ಮಗ ಸೀತಾಕಾಂತ ಹುಟ್ಟಿದ. ಅವನನ್ನು ಸೀತು ಎಂದು ಕರೆದರು. ಸೀತು ಹುಟ್ಟಿದ ಒಂದೇ ವಾರದಲ್ಲಿ ಉಮಾಕಾಂತನಿಗೆ ತಂದೆಯ ಅನಾರೋಗ್ಯದ ಸಂದೇಶ ಬಂತು. ಅವರು ಬಾರಂಗ ತಲುಪಿದ ಎರಡೇ ದಿನಕ್ಕೆ ನಿರಂಜನ ಬಾಬು ಗತಿಸಿದರು. ತಂದೆಯ ಸಂಸ್ಕಾರ ಇತ್ಯಾದಿ ಪೂರೈಸಿ ಉಮಾಕಾಂತ ಬೆಹರಾಂಪುರಕ್ಕೆ ಮರಳಿದ.ಕಾಲದ ಕಪ್ಪೆ ಹೇಗೆ ಜಿಗಿಯುತ್ತದೆ! ಈ ಅವಧಿಯಲ್ಲಿ ಮೃದುಲಳ ಜೀವನ ಸಂತೋಷ, ತೃಪ್ತಿಗಳಿಂದ ತುಂಬಿತ್ತು. ಉದ್ದಕ್ಕೂ ನಿರಾಯಾಸವಾಗಿ ಸಾಗಿದ ಬದುಕು ಅವಳದು. ಸೀತಾಕಾಂತ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ. ಮೂವತ್ತು ವರ್ಷವಾಗುವ ಹೊತ್ತಿಗೆ ಕೊಲ್ಕತಾದಲ್ಲಿ ಅವನೊಬ್ಬ ಆರ್ಕಿಟೆಕ್ಟ್ ಆಗಿ ಬೇರೂರಿದ್ದ. ಅನೇಕ ಎಂಜಿನಿಯರುಗಳನ್ನು ಕೆಲಸಕ್ಕಿಟ್ಟುಕೊಂಡ ಕಂಪೆನಿ ಅವನದಾಗಿತ್ತು. ಅವನಿನ್ನೂ ಬ್ರಹ್ಮಚಾರಿಯಾಗೇ ಉಳಿದಿದ್ದರ ಬಗ್ಗೆ ಮಾತ್ರ ಮೃದುಲಳಿಗೆ ದುಃಖವೆನಿಸುತ್ತಿತ್ತು.

ಸೀತು ತಾನಾಗೇ ಯಾರನ್ನಾದರೂ ನೋಡಿಕೊಂಡಿದ್ದರೆ ಬೇರೆ, ಉಳಿದಂತೆ ಅವಳ ಗಂಡ ನಿಂತು ಒಬ್ಬ ಸೂಕ್ತವಾದ ಕನ್ಯೆಯನ್ನು ತನ್ನ ಮಗನಿಗಾಗಿ ಹುಡುಕಿರಬೇಕಾಗಿತ್ತು. ಆದರೆ ಆ ಹುಡುಗನೇ ನೆದರಿಲ್ಲದವನಂತಿದ್ದ. ಮತ್ತು ಉಮಾಕಾಂತ ಈಚೀಚೆಗೆ ಅಧ್ಯಾತ್ಮದ ಕಡೆ ವಾಲಿಬಿಟ್ಟಿದ್ದ. ಅವನು ಋಷಿಕೇಶದ ಒಂದು ಆಶ್ರಮಕ್ಕೆ ಹೋಗಿ ಸೇರಿಬಿಟ್ಟಿದ್ದ. ಯಾವಾಗಲೋ ಒಮ್ಮೆ ಕೊಲ್ಕತಾಗೆ ಬಂದು, ಕುಟುಂಬದ ಜೊತೆ ಸ್ವಲ್ಪ ಸಮಯ ಕಳೆದು ಮತ್ತೆ ಆಶ್ರಮಕ್ಕೇ ಮರಳುತ್ತಿದ್ದ. ಮೃದುಲಳೂ ಆಗಾಗ್ಗೆ ಆಶ್ರಮಕ್ಕೆ ಹೋಗಿಬರುತ್ತಿದ್ದಳು. ಅಲ್ಲಿನ ವಾತಾವರಣ ಅವಳಿಗೆ ಹಿಡಿಸುತ್ತಿತ್ತು. ಆದರೆ ಅಲ್ಲೇ ಬಹಳ ದಿನ ಇದ್ದುಬಿಟ್ಟರೆ ಅವಳ ಬ್ರಹ್ಮಚಾರಿ ಮಗನನ್ನು ಯಾರು ನೋಡಿಕೊಳ್ಳುವುದು?ಒಮ್ಮೆ ಇದ್ದಕ್ಕಿದ್ದಂತೆ ಸೀತು ಬಾರಂಗ್‌ದ ತನ್ನ ತಂದೆಯ ಆಸ್ತಿಗಳ ಬಗ್ಗೆ ಮೃದುಲಳನ್ನು ಕೇಳಿದ : ‘ಯಾರು ನೋಡಿಕೋತಾರೆ ಆ ಜಾಗವನ್ನೆಲ್ಲ?’. ‘ಸದ್ಯ ದೇವರೇ, ಎಷ್ಟೋ ಯುಗದ ಹಿಂದೆಯೇ ಕೇಳಬೇಕಾಗಿದ್ದ ಪ್ರಶ್ನೆಯನ್ನ ನೀನು ಕೊನೆಗೂ ಕೇಳಿದೆ. ಅಕುಲಿ ಅಂತ ಒಬ್ಬ ಮತ್ತು ಅವನ ಹೆಂಡತಿ ಅಂಬಾಲಿ ಅಂತ ಬಲೇ ಜೋರು ಹೆಂಗಸು- ಅವರಿದ್ದಾರೆ ಅಲ್ಲಿ. ನಿನಗೆ ಸುಮಾರು ಹದಿನೈದು ವರ್ಷ ಆಗಿದ್ದಾಗ ನಿಮ್ಮಪ್ಪ ಮತ್ತು ನಾನು ಒಮ್ಮೆ ನಿನ್ನನ್ನ ಅಲ್ಲಿಗೆ ಕರೆದುಕೊಂಡು ಹೋಗಿದ್ದು ನೆನಪಿದೆ.

ನೀನು ಹಾಸ್ಟೆಲಲ್ಲಿದ್ದಾಗ ನಿಮ್ಮಪ್ಪ ಮತ್ತು ನಾನು ಅಲ್ಲಿಗೆ ಕೆಲವು ಸರಿ ಹೋಗಿಬಂದಿದೀವಿ. ಮನೆಯ ಕಟ್ಟಡ ಬಹಳ ಹಾಳಾಗಿತ್ತು, ನಿಮ್ಮಪ್ಪ ಅದನ್ನು ಮಾರಿಬಿಟ್ಟರು. ಕೊಂಡುಕೊಂಡವರು ಅದನ್ನು ಬಿಚ್ಚಿಸಿ ಮರಮಟ್ಟನ್ನೆಲ್ಲ ಸಾಗಿಸಿದರು. ಮನೆಯಲ್ಲಿದ್ದ ಕುರ್ಚಿ ಮೇಜನ್ನೆಲ್ಲ ಊರಿನ ಶಾಲೆಗೆ ಕೊಟ್ಟುಬಿಟ್ಟರು ನಿಮ್ಮಪ್ಪ. ಒಂದೆರಡು ವರ್ಷದ ಹಿಂದೆ ನಾನು ಹೋಗಿದ್ದಾಗ, ಅಕುಲಿ ಮತ್ತು ಅಂಬಾಲಿ ಆ ತೋಟ, ಮರಗಳನ್ನೆಲ್ಲ ಚೆನ್ನಾಗಿ ನೋಡಿಕೋತಿದಾರೆ ಅಂತ ನನಗನ್ನಿಸಿತು’.ಆ ಜಾಗದ ಚರಿತ್ರೆಯನ್ನೆಲ್ಲ ಹೇಳೀ ಮೃದುಲ ಮೌನ ತಾಳಿದಳು. ಸೀತುಗೆ ಏನಾದರೂ ಹೇಳುವುದಿದ್ದರೆ ಅವನೇ ಬಾಯಿಬಿಡಲಿ, ತಾನು ಏನನ್ನೂ ಸೂಚಿಸುವವಳಲ್ಲ ಎನ್ನುವಂತೆ. ‘ಅಮ್ಮಾ, ನಾನು ಯೋಚಿಸ್ತಾ ಇದೀನಿ’, ಒಂದು ಕ್ಷಣ ತಡೆದು ಸೀತು ಮುಂದುವರೆಸಿದ, ‘ಇಲ್ಲಿನ ವ್ಯವಹಾರಕ್ಕೆ ನಾನು ದಿನನಿತ್ಯ ಗಮನ ಕೊಡಬೇಕಾದ ಅಗತ್ಯ ಇಲ್ಲ. ವ್ಯವಹಾರ ಚೆನ್ನಾಗಿ ಬೇರೂರಿದೆ ಮತ್ತು ನಮ್ಮ ಜನ ಅದನ್ನೆಲ್ಲ ನೋಡಿಕೋಬಲ್ಲರು ಸಹ. ನಾನು ತಿಂಗಳಿಗೆ ಒಂದೋ ಎರಡೋ ಸರಿ ಬಂದು ಹೋದರೆ ಸಾಕು ಅನಿಸುತ್ತೆ.

ಈ ನಗರ ಜೀವನದಿಂದ ದೂರ ಹೋಗಬೇಕು ಅಂತ ನನಗೂ ಯಾವಾಗಿಂದಲೂ ಅನಿಸುತ್ತಿದೆ. ಯಾಕೆ ಬಾರಂಗ್‌ನಲ್ಲಿ ಒಂದು ಚೆನ್ನಾಗಿರೋ ಮನೆ ಕಟ್ಟಿಕೊಂಡು ನಾವು ಅಲ್ಲಿಗೆ ಹೊರಟು ಹೋಗಬಾರದು? ನಾನು ಓದೋದು ಬರೆಯೋದು ಕೂಡ ಬೇಕಾದಷ್ಟಿದೆ. ಒಂದು ಪುಸ್ತಕ ಬರೆಯೋ ಯೋಚನೇನೂ ಮಾಡಬಹುದು ನಾನು. ಆಮೇಲೆ ನೀನು ಆಗಾಗ್ಗೆ ಹೇಳುವ ನಿನ್ನ ಸಮಸ್ಯೆಯ ಬಗ್ಗೆಯೂ ನಾವು ನೋಡಿಕೋಬಹುದು.ಯಾವ ಸಮಸ್ಯೆನೋ -ಆದರೆ ಪ್ರಶ್ನೆ ತುಟಿ ದಾಟಿದ್ದೇ ಮೃದುಲಳಿಗೆ ಅರ್ಥವಾಯಿತು. ‘ಯಾರಾದರೂ ಮನಸ್ಸಲ್ಲಿದ್ದರೆ ಹೇಳೋ. ಯಾರು ಬೇಕಾದರೂ ಆಗಿರಲಿ, ನಿನ್ನ ಆಸೆ ಪೂರೈಸೋ ಜವಾಬ್ದಾರಿ ನನ್ನದು’. “ಹಾಗೇನಿಲ್ಲಮ್ಮ, ಯಾರೂ ಇಲ್ಲ. ಆ ಕೆಲಸ ನಿನಗೇ ಬಿಟ್ಟಿದ್ದು, ಅಂದರೆ ಗೊತ್ತಲ್ಲ, ವೀಟೋ ಮಾತ್ರ ನನ್ನದು’.ಆ ರೀತಿಯಾಗಿ ಕೊನೆಗೆ ಮೃದುಲ ಮತ್ತು ಸೀತು ಪುರಿ ಎಕ್ಸ್‌ಪ್ರೆಸ್ ಹಿಡಿದು ಬಾರಂಗ್‌ಗೆ ಪ್ರಯಾಣಿಸಿದರು. ಬಾರಂಗ್ ತಲುಪಿದಾಗ ಬೆಳಗಿನ ಜಾವ ಅವತ್ತೇ ಸೀತು ಮತ್ತು ಅವನ ಸಹಾಯಕರು ಜಮೀನನ್ನೆಲ್ಲ ಅಳೆದು ಹೊಸಮನೆಗೆ ಜಾಗ ನಿಗದಿಪಡಿಸಿದರು. ಆ ಜಮೀನಿನ ಹಿಂಬದಿಗೆ ಸರಿಯಾಗಿ ಹೆದ್ದಾರಿ ಬರುತ್ತದೆನ್ನುವ ಊಹೆಯಿದ್ದುದರಿಂದ ಹೊಸಮನೆಯನ್ನು ಸೀತು ಹಿಂದಿನ ಗೇಟಿಗೆ ಸುಮಾರು ಮೂವತ್ತು ಅಡಿ ಹತ್ತಿರಕ್ಕೆ ಒಂದು ಸಣ್ಣರಸ್ತೆಗೆ ಮುಖವಾಗುವಂತೆ ಕಟ್ಟಿಸುವುದೆಂದು ಅಂದುಕೊಂಡ. ಹೆದ್ದಾರಿಯ ಸಮೀಪ ಮನೆ ಕಟ್ಟದಿರು- ಹೀಗೆಂದು ಹೇಳಿದ್ದು ಭರ್ತೃಹರಿಯೋ?ಕಡೆಗೊಮ್ಮೆ ಮೃದುಲ ಇಲ್ಲಿ ವಾಸಿಸಲು ಬರುತ್ತಿದ್ದಾಳೆ ಎಂಬುದನ್ನು ಕಾಂಜೀರ ಮರ ಊಹಿಸಿರಬೇಕು. ಎಲೆಗಳ ಮೂಲಕ ಆರ್ಭಟಿಸಿ ಗಾಳಿಯಲ್ಲಿ ಕೊಂಬೆಗಳನ್ನಾಡಿಸಿ ಅವಳನ್ನು ಕರೆಯುವಂತೆ ಮಾಡಿತು. ನಂತರ ಇದ್ದಕ್ಕಿದ್ದಂತೆ ಅದು ಸ್ತಬ್ಧವಾಯಿತು. ಸೀತುವಿನ ಮೇಲ್ವಿಚಾರಣೆಯಲ್ಲಿ ಇಬ್ಬರು ಸಹಾಯಕರು ಒಂದು ದೊಡ್ಡ ಟೇಪು ಹಿಡಿದು ಕಾಂಜೀರದ ಬಳಿ ಅದರ ಕಾಂಡದಿಂದ ಎರಡು ಅಡಿ ದೂರಕ್ಕೆ ಒಂದು ಸಣ್ಣ ಗೂಟ ಹೊಡೆದರು. ಮೃದುಲ ಬೆತ್ತದ ಕುರ್ಚಿ ಹಾಕಿಕೊಂಡು ಕಾಂಜೀರದ ಜೊತೆ ಮಾತನಾಡುತ್ತಿದ್ದುದು ಸರಿಯಾಗಿ ಅದೇ ಜಾಗದಲ್ಲಿ. “ದೇವರೇ, ನನ್ನ ಕಾಂಜೀರ ಅಪಾಯದಲ್ಲಿದೆಯೇ? ಸೀತು ಕತ್ತೆತ್ತಿ ಮರವನ್ನು ಅಭಿಮಾನದಿಂದ ನೋಡುತ್ತಿದ್ದುದು ಅವಳಿಗೆ ಕಾಣಿಸಿತು. ‘ಎಂಥ ಮಜಬೂತಾದ ಹಳೇ ಮರ! ಆದರೆ ನಾವೇನೂ ಮಾಡೋಕಾಗಲ್ಲ ಅನಿಸುತ್ತೆ’.ಮೃದುಲಳ ಭಯ ಸಕಾರಣವೆಂಬುದು ಗೊತ್ತಾಯಿತು. ಕಾಂಜೀರ ಮತ್ತೆ ಅವಳೊಂದಿಗೆ ಹರಟಲು ಬಂದಾಗ ಮೃದುಲ ಮುಖ ತಪ್ಪಿಸಿದಳು. ಅದಕ್ಕೆ ಏನು ಹೇಳುವುದೆಂದು ಅವಳಿಗೆ ತಿಳಿಯಲಿಲ್ಲ. ಆ ರಾತ್ರಿಯ ಹೌರಾ ಎಕ್ಸ್‌ಪ್ರೆಸ್‌ಗೆ ಅವರು ಊರು ಬಿಟ್ಟರು. ಇನ್ನೊಂದೆರಡು ವಾರದಲ್ಲಿ ಮನೆಯ ವಿವರವಾದ ಯೋಜನೆಯೊಂದಿಗೆ ಮರಳಿ ಬಂದು ಕೆಲಸ ಶುರುಮಾಡಿಸಿಬಿಡುತ್ತೇನೆಂದು ಸೀತು ಹೇಳಿದ.ಮೃದುಲ ಮಹಾ ಸಂಕಷ್ಟಕ್ಕೆ ಸಿಕ್ಕಳು. ಅಡುಗೆ ಮನೆಯಲ್ಲಿ ಮೀನು ಹುರಿಯುವಾಗ ಬರುವ ಹಿಸ್ ಎಂಬ ಶಬ್ದ ಅವಳಿಗೆ ಅವಳ ಕಾಂಜೀರದ ಎಲೆಗಳ ಮರ್ಮರವನ್ನು ಮನಸ್ಸಿಗೆ ತರುತ್ತಿತ್ತು. ಕಿಟಕಿಯ ಸರಳಿನ ಮೂಲಕ ಆಕಾಶವನ್ನು ಕಂಡಾಗ ಅವಳ ನೆಚ್ಚಿನ ಮರದ ಕೊಂಬೆಗಳ ಮೂಲಕ ಇಣುಕುತ್ತಿದ್ದ ಆಕಾಶವೇ ಅವಳಿಗೆ ನೆನಪಾಗುತ್ತಿತ್ತು. ಕಾಂಜೀರ ಇಲ್ಲದೆ ಆ ಜಾಗದಲ್ಲಿ ಅವಳು ಹೇಗೆ ತಾನೆ ಇರಲು ಸಾಧ್ಯ ? ಯೋಚಿಸಿದಷ್ಟೂ ಅವಳು ದುಗುಡಗೊಂಡಳು. ಯಾವುದೇ ಪರಿಸ್ಥಿತಿಯಲ್ಲೂ ಆ ಮರಕ್ಕೆ ಕೊಡಲಿ ಹಾಕುವುದನ್ನು ತಾನು ಒಪ್ಪುವುದಿಲ್ಲ ಎಂಬುದನ್ನು ಸೀತುಗೆ ತಿಳಿಸಿಬಿಡಲು ಅವಳು ನಿರ್ಧರಿಸಿದಳು.ಅವತ್ತೇ ಊಟಕ್ಕೆ ಬಂದಾಗ ಸೀತು ತಾನು ದೆಹಲಿಗೆ ಹೊರಟಿರುವುದಾಗಿ ಹೇಳಿದ. ದೆಹಲಿಯಿಂದ ಭುವನೇಶ್ವರಕ್ಕೆ ಹೋಗಿ ಅಲ್ಲಿಂದ ಬಾರಂಗ್‌ಗೆ ಹೊರಟುಹೋಗುತ್ತಿದ್ದ. ಆ ಮನೆಯ ಕೆಲಸ ಶುರು ಮಾಡಿಸಿಯೇ ಅವನು ಕೋಲ್ಕತಾಗೆ ಮರಳುತ್ತಿದ್ದ. ಅವಸರದಲ್ಲಿದ್ದ ಮಗನ ಜೊತೆ ಕಾಂಜೀರದ ವಿಷಯವೆತ್ತುವುದು ಮೃದುಲಳಿಗೆ ಆಗಲಿಲ್ಲ. ಆದರೆ ಹಾಗೆಂದು ಅವಳೂ ಸುಮ್ಮನಿರಲಿಲ್ಲ. ಸೀತು ಬಾರಂಗ್‌ಗೆ ಹೋಗುವ ಮೊದಲೇ ಅವಳು ಅವನ ಕಂಪೆನಿಯ ಎಂಜಿನಿಯರ್‌ಗಳ ಜೊತೆ ತನ್ನ ಗಂಡನ ಮನೆಯನ್ನು ತಲುಪಿದಳು.

ಆಗಲೂ ಅವಳು ಕಾಂಜೀರದ ಬಳಿ ಹೋಗಲಿಲ್ಲ. ಅಪರಾಧಿ ಭಾವನೆ ಅವಳ ಎದೆಯೊತ್ತುತ್ತಿತ್ತು. ಸೀತುವಿನ ಎಂಜಿನಿಯರ್‌ಗಳೂ ಯಾವ ಸಣ್ಣ ಬದಲಾವಣೆಗೂ ಒಪ್ಪುವಂತಿರಲಿಲ್ಲ. ‘ಬಾಸ್ ಬಹಳ ದೊಡ್ಡ ಆರ್ಕಿಟೆಕ್ಟ್ ಆದರೂ ವಾಸ್ತು ಶಾಸ್ತ್ರದ ಬಗ್ಗೆಯೂ ಅವರಿಗೆ ಚೆನ್ನಾಗಿ ಗೊತ್ತು. ಅದನ್ನೆಲ್ಲ ನೋಡಿಯೇ ಅವರು ಮನೆಯ ಜಾಗದ ಬಗ್ಗೆ ನಿರ್ಧರಿಸಿದ್ದಾರೆ. ಏನನ್ನು ಬದಲಾಯಿಸಿದರೂ ಅವರಿಗೆ ರೇಗುತ್ತೆ’ ಎಂಜಿನಿಯರ್‌ಗಳು ತಮ್ಮೊಳಗೆ ಹೀಗೆ ಮಾತಾಡುವುದು ಅವಳ ಕಿವಿಗೆ ಬಿತ್ತು. ಅಂದರೆ ಪರಿಸ್ಥಿತಿ ತೀರ ಹದಗೆಟ್ಟು ಹೋಗಿತ್ತು.ಮೃದುಲಳಿಗೆ ಗೊಂದಲ ಮತ್ತು ದುಗುಡ ಉಂಟಾಯ್ತು. ಏನಂದರೂ ಮುಂದೆ ಆ ಮನೆಯಲ್ಲಿರಬೇಕಾದವನು ಸೀತು ಮತ್ತು ಅವನ ಸಂಸಾರ ತಾನೆ? ತಾನಿನ್ನು ಮಹಾ ಎಷ್ಟು ವರ್ಷ ಬದುಕಿರಬಹುದು? ಮತ್ಯಾಕೆ ಆ ಮರದ ಬಗ್ಗೆ ತಾನು ರಾಗ ಎಳೆಯಬೇಕು? ಸುಮ್ಮನೆ ಮಗನಿಗೆ ಬೇಸರ ಮಾಡಿದಂತಾಗುತ್ತೆ. ಬೇಡ, ತಾನಾಗೇ ವಿಷಯ ಎತ್ತುವುದು ಬೇಡ, ಆದರೆ ಸೀತುವೇ ಹೇಗೋ ಆ ವಿಷಯ ತಂದರೆ (ಸದ್ಯ ಹಾಗಾಗಲಿ!) ತನ್ನ ದೃಷ್ಟಿಯೇನೆಂಬುದನ್ನು ಹೇಳಿದರೆ ಆಯಿತು- ಎಂದುಕೊಂಡಳು.ಅವಳು ಕಾಂಜೀರದತ್ತ ನೋಡಿದಳು. ಅದರ ಚರ್ಯೆಯಲ್ಲಿ ಸ್ವಲ್ಪವೂ ದುಮ್ಮಾನವಿರಲಿಲ್ಲ. ಬದಲಿಗೆ ಅದು ಬಹಳ ಸುಮ್ಮಾನದಲ್ಲೇ ಇತ್ತು. ರೆಂಬೆಗಳು ರಭಸದಿಂದ ಅಲ್ಲಾಡುತ್ತಿದ್ದವು. ಎಲೆಗಳ ಮೂಲಕ ಆಕಾಶ ಎದ್ದು ಬಿದ್ದು ನಗುತ್ತಿತ್ತು. ಇಡೀ ಮರವೇ ‘ಕುಣಿದ್ಹಾಂಗ ರಾವಣಾ!’ ಎಂಬಂತಿತ್ತು. ಕಾಂಜೀರ ಬುಡಮೇಲಾಗಿ ಬಿದ್ದು ಹೋಗುತ್ತದೆಯೇ? ಇಲ್ಲ ಅದು ನಿಂತಲ್ಲೇ ಕೈ ಬೀಸಿ ಕರೆಯುತ್ತಿತ್ತು. “ಬಾ ಮುದ್ದು ಕುಟ್ಟಿ ಓಡಿ ಬಾ’! ಅವಳನ್ನು ಅದು ಕರೆಯುತ್ತಿದ್ದದ್ದು ಹಾಗೇ. ಮೃದುಲ ಮರದ ಬಳಿ ಸರಸರ ನಡೆದಳು.

ಸೀತುವಿನ ಹುಡುಗರು ನೆಟ್ಟ ಗೂಟಕ್ಕಾಗಿ ಹುಡುಕಿದಳು. ಅದರ ಸುಳಿವೇ ಇರಲಿಲ್ಲ. ಅದು ಮರದಿಂದ ಸುಮಾರು ಹದಿನೈದು ಅಡಿ ದೂರದಲ್ಲಿ ಕಂಡುಬಂತು. ಹೇಗೆ? ಅಂಬಾಲಿಯ ಮನೆಗೆ ಹೋಗುತ್ತಿದ್ದ ಕಾಲುಹಾದಿ ಕಾಂಜೀರ ಮರದಿಂದ ಅಷ್ಟು ದೂರ ಇತ್ತೇ ? ಕಾಂಜೀರ ಮರದಡಿಯಲ್ಲಿ ಬೆತ್ತದ ಕುರ್ಚಿಯಲ್ಲಿ ಕೂರುವಾಗ ಆ ಹಾದಿಯಾಗಿ ಬಂದ ಅಂಬಾಲಿ ತನ್ನೊಂದಿಗೆ ಮಾಡಾಡಲು ಒಂದು ನಿಮಿಷ ನಿಂತಾಗ ಅವಳ ಉಗ್ರ ಎದೆಯ ನೆರಳೂ ತನ್ನ ಮೇಲೆಯೇ ಬೀಳುತ್ತಿತ್ತಲ್ಲ.

ಈಗಂತೂ ಬೆಳಗ್ಗೆ ನೆರಳು ಇನ್ನೂ ಉದ್ದವಿರುವ ಹೊತ್ತು. ಆದರೂ ಮೃದುಲ ಅಲ್ಲಿ ಕಾಲುದಾರಿಯ ಮೇಲೆ ನಿಂತರೆ ಅವಳ ನೆರಳು ಕಾಂಜೀರಕ್ಕೆ ಇನ್ನೂ ಎಷ್ಟೋ ದೂರದಲ್ಲೇ ಬಿದ್ದಿತ್ತು. ಏನಾದರೂ ಆಗಲಿ, ಮೃದುಲಳ ಎದೆಯಿಂದ ಒಂದು ದೊಡ್ಡ ಭಾರ ಇಳಿದಂತಾಯ್ತು. ಅವಳ ಕಾಂಜೀರ ಸುರಕ್ಷಿತವಾಗಿತ್ತು. ಅವರು ಗೂಟ ನೆಟ್ಟಾಗ ಇವಳು ಹೇಗೋ ತಪ್ಪಾಗಿ ಬೇರೆ ಕೋನದಿಂದ ನೋಡಿರಬೇಕು. ಆದರೆ ಅವಳಿಗೆ ನೆನಪಿದ್ದಂತೆ ಅಲ್ಲೊಂದು ಸೀಬೆ ಮರ ಆಗ ಕಾಂಜೀರಕ್ಕೆ ಇಷ್ಟು ಹತ್ತಿರವಿದ್ದಿರಲಿಲ್ಲ.

ಅವಳಿಗೆ ಗೊಂದಲವಾದರೂ ತೀವ್ರ ಖುಷಿಯಾಗಿತ್ತು. ಅವಳು ಮತ್ತೆ ತನ್ನ ಕಾಂಜೀರದ ಅಡಿ ಕೂತು ತನ್ನ ಸಂಭಾಷಣೆಯನ್ನು ನಿರಂತರ ಮುಂದುವರೆಸಬಹುದು. ‘ಸೀತುವಿಗೆ ಒಂದು ಬೆತ್ತದ ಕುರ್ಚಿ ತಂದುಕೊಡಲು ಹೇಳಬೇಕು. ಆದರೆ ಈಗ ಎಷ್ಟೋ ವರ್ಷಗಳಾಗಿ ಹೋಗಿವೆ. ಅಂಬಾಲಿಯ ಮೊಲೆಗಳು ಜೋತು ಬಿದ್ದಿರಬೇಕು ---ನನ್ನೆದೆಯಂತೆಯೇ ಮೃದುಲ ತುಂಟತನದಲ್ಲಿ ಯೋಚಿಸಿದಳು. ಕಾಂಜೀರದ ಜೊತೆ ಒಡನಾಡಿದ ದಿನಗಳ ನೆನಪೇ ಅವಳ ಈ ಬಾಲಿಶ ಯೋಚನೆಯನ್ನು ಪ್ರಚೋದಿಸಿರಬೇಕು.

ಇದ್ದಕ್ಕಿದ್ದಂತೆ ಒಂದು ಸಣ್ಣ ಗಾಳಿಯೂ ಇಲ್ಲದೆ ಕಾಂಜೀರ ಒಂದು ರಾಶಿ ಎಲೆಯನ್ನು ಮೃದುಲಳ ಮೇಲೆ ಸುರಿಸಿತು. ಅವಳು ಕತ್ತೆತ್ತಿದಳು. ಕೆಳ ಕೊಂಬೆಗಳು ಅವಳತ್ತ ಬಾಗಿದಂತೆ ಕಂಡಿತು. ‘ನೀನು ನನ್ನನ್ನು ಲಘುವಾಗಿ ತಿಳಿದೆ, ನನ್ನ ಸಿಂಗಾರೀ! ಈಗ ನೋಡು, ನೀನು ಮತ್ತು ನಿನ್ನ ಮಗನನ್ನು ನಾನು ಹೇಗೆ ಯಾಮಾರಿಸಿದೆ’ ಕಾಂಜೀರ ಅವಳನ್ನು ಅಣಕಿಸುವಂತೆ ತೋರಿತು. ಸೀತುವಿನ ಕಾರು ಗೇಟಿನ ಬಳಿ ಬಂದಾಗ ಹೈಸ್ಕೂಲ್ ಹುಡುಗಿಯ ಚೈತನ್ಯದಿಂದ ಅವಳು ಅವನೆಡೆಗೆ ಸಾಗಿದಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry