ಉಳಿಸಿ ಮಾಡಹಾಗಲ

7

ಉಳಿಸಿ ಮಾಡಹಾಗಲ

Published:
Updated:
ಉಳಿಸಿ ಮಾಡಹಾಗಲ

`ಮಾಡಹಾಗಲ~ ಪಶ್ಚಿಮಘಟ್ಟದ ಅರಣ್ಯದ ಫಲವತ್ತಾದ ಮಣ್ಣಿನಲ್ಲಿ ಗಡ್ಡೆಯಿಂದ ಚಿಗುರಿ ಹಬ್ಬಿ ಕಾಯಿ ಬಿಡುವ ಒಂದು ತರಕಾರಿ ಸಸ್ಯ. ಈ ತರಕಾರಿಗೆ ಹತ್ತಾರು ಹೆಸರು. ಗೌಡ ಸಾರಸ್ವತರು `ಪಾಗಿಳ~ವೆಂದು ಕರೆಯುತ್ತಾರಲ್ಲದೆ, ಮಾರುಕಟ್ಟೆಯಲ್ಲಿ ಮುಖ್ಯ ಗಿರಾಕಿಗಳೂ ಕೂಡಾ. ಅವರ ಅಡುಗೆಯಲ್ಲಿ ಇದಕ್ಕೆ ಮುಖ್ಯ ಸ್ಥಾನ.

 

ಅವರು ಇದರ ಕಾಯಿ, ಹೂ, ಬೀಜ, ಗಡ್ಡೆಗಳಿಂದ ರುಚಿ ರುಚಿಯಾದ 30ಕ್ಕೂ ಹೆಚ್ಚು ಅಡುಗೆ ಮಾಡುವುದರಲ್ಲಿ ನಿಷ್ಣಾತರು. ಕಡ್ಲೆಹಿಟ್ಟಿನಲ್ಲಿ ಅದ್ದಿ ಕರಿದ ಪೋಡಿ, ಪ್ರೈ ರುಚಿ ತಿಂದವರೇ ಬಲ್ಲರು.ಶ್ರಾವಣ, ಅಷ್ಟಮಿ, ಚೌತಿ ಮುಂತಾದ ದಿನಗಳಲ್ಲಿ ಇದರ ಬೆಲೆ ಕಿಲೋಗೆ 200ರೂ ವರೆಗೂ ಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಮಾಜದ ಎಲ್ಲಾ ವರ್ಗದ ಜನರು ಇಷ್ಟಪಡುವ ಕಾರಣ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ. ಚಪ್ಪರದಲ್ಲಿ ಬೆಳೆಯುತ್ತಿರುವಾಗಲೆ ಗಿರಾಕಿ ಸಿದ್ಧವಾಗುತ್ತಿರುವುದು ಈ ತರಕಾರಿಗೊಂದು ಗರಿ.ಮಾಡಹಾಗಲ ತರಕಾರಿ ಎಕರೆಗಟ್ಟಲೆ ಮಾಡುವ ಕೃಷಿ ಅಲ್ಲ. ಕಣ್ಣಂಚಿನ ನಿಶ್ಚಿತ ಸ್ಥಳದಲ್ಲಿ ಬೆಳೆಯುವಂತದ್ದು. ಒಮ್ಮೆ ಬೀಜದಿಂದ ಬಳ್ಳಿಯಾದರೆ ನಂತರ ಗಡ್ಡೆಯಿಂದ ವರ್ಷ ವರ್ಷವೂ ಚಿಗುರು ಬಂದು ಕಾಯಿ ಬಿಡುತ್ತದೆ. ಈ ಗಡ್ಡೆ ಬಲು ಸೂಕ್ಷ್ಮ. ಸ್ವಲ್ಪ ಪೆಟ್ಟಾದರೂ ಕೊಳೆತು ಹೋಗುವುದೇ ಹೆಚ್ಚು.

ಆ ಕಾರಣದಿಂದ ಹಿಂದಿನ ಜನ ನಿಷಿದ್ಧ ಮಾಡಿದ್ದರು ಎಂದೆನ್ನಿಸುತ್ತದೆ (ಏಕೆಂದರೆ ಇದರ ಗಡ್ಡೆಯನ್ನು ನಾಟಿ ಮಾಡಿದರೆ ಗಡ್ಡೆ ನಾಟಿ ಮಾಡಿದವನ ತಲೆಯಷ್ಟು ಗಾತ್ರವಾದಾಗ ಆ ವ್ಯಕ್ತಿ ತಲೆಯೊಡೆದು ಸಾಯುತ್ತಾನೆಂದು ನಂಬುವ ಜನ ಇನ್ನೂ ಇದ್ದಾರೆ). ಈ ಕಾರಣದಿಂದ ಸಾಮಾನ್ಯ ಕೃಷಿಕರ‌್ಯಾರೂ ಈ ಬೆಳೆಯತ್ತ ಕಣ್ಣೆತ್ತಿಯೂ ನೋಡುವುದಿಲ್ಲ.ಅಡವಿ ನಾಶ, ಕಾಡ್ಗಿಚ್ಚು ಮನುಷ್ಯನ ಅತಿಯಾದ ಹಸ್ತಕ್ಷೇಪ, ಹೆಗ್ಗಣ, ಇಲಿ, ಹಂದಿ, ಮಂಗಗಳ ಕಾಟದಿಂದ ಬಹುಶಃ ಮಲೆನಾಡಿನಲ್ಲಿ ಈ ಬೆಳೆ ಪಳೆಯುಳಿಕೆಯಾಗಿದೆ ಎಂದೇ ಹೇಳಬಹುದು.ಪ್ರಾಣಿಗಳಂತೆ ಮಾಡಹಾಗಲ ಬಳ್ಳಿಯಲ್ಲೂ ಗಂಡು, ಹೆಣ್ಣು ಎಂದು ಬೇರೆ ಬೇರೆಯೇ ಇದೆ. ಹೆಣ್ಣು ಬಳ್ಳಿ ಮಿಡಿ ಕಚ್ಚಿ ಹೂ ಬಿಟ್ಟರೆ, ಗಂಡು ಬಳ್ಳಿ ಹೂವನ್ನಷ್ಟೆ ಬಿಡುತ್ತದೆ (ಸಾಮಾನ್ಯವಾಗಿ ತರಕಾರಿಯಲ್ಲಿ ಒಂದೇ ಬಳ್ಳಿಯಲ್ಲಿ ದ್ವಿಲಿಂಗಿ ಹೂಗಳು ಬಿಡುತ್ತವೆ). ಗಂಡು- ಹೆಣ್ಣು ಹೀಗೆ ಎರಡು ಬಳ್ಳಿಗಳಿದ್ದಲ್ಲಿ ಮಾತ್ರ ಕಾಯಿ ಕಟ್ಟುತ್ತವೆ. ಒಂದು ಇಲ್ಲದಿದ್ದರೂ ಬೆಳೆ ಬರೊಲ್ಲ.ಹತ್ತಾರು ವರ್ಷಗಳಿಂದ ಇದನ್ನು ಬೆಳೆದ ಅನುಭವದಿಂದ ಗಂಡು ಹೆಣ್ಣು ಹೂಗಳನ್ನು ಕೃತಕವಾಗಿ ಕೈಯಿಂದ ಪರಾಗಸ್ಪರ್ಶ ಮಾಡಿದ ಮೇಲೆ ಇಳುವರಿ ಶೇ 90 ರಷ್ಟಾಯಿತು.

ಹೀಗೆ ಮಾಡಬೇಕಾದರೆ ಬೆಳಗ್ಗೆ 8 ರಿಂದ 11ರ ಸಮಯ ಪ್ರಶಸ್ತ.

 

ಹೊಸ ಬಳ್ಳಿ ಮಾಡಬೇಕಾದರೆ ಬೀಜವನ್ನು ಮಾರ್ಚ್ ತಿಂಗಳಲ್ಲೇ ನಾಟಿ ಮಾಡಿದರೆ ಮಾತ್ರ ಮುಂದಿನ ವರ್ಷದಲ್ಲಿ ಮೊಳಕೆ ಒಡೆಯುತ್ತದೆ. ಅದು ನೂರು ಬಳ್ಳಿಗೆ ಶೇ 10 ಮಾತ್ರ ಹೆಣ್ಣಾದೀತು. ಉಳದದ್ದೆಲ್ಲಾ ನಿರುಪಯುಕ್ತ.ಉತ್ತಮ ಗೊಬ್ಬರ ಕೊಟ್ಟು ಉರುಮಡಿ ಕೃಷಿ ಮಾಡಿ ಚಪ್ಪರಕ್ಕೆ ಹಬ್ಬಿಸಿದಲ್ಲಿ ಆರಂಭಿಕ ವರ್ಷದಲ್ಲಿ ಒಂದು ಕಿಲೊದಷ್ಟು ಬೆಳೆ ಪಡೆಯಬಹುದು. ಮುಂದೆ ಗಡ್ಡೆ ದೊಡ್ಡದಾದಂತೆ 4-5 ಮೀಟರ್‌ನಷ್ಟು ಹಬ್ಬಿ 25 ಕಿಲೊ ವರೆಗೂ ಇಳುವರಿ ಬರುತ್ತದೆ.18 ರಿಂದ 23 ಸೆಂಟಿಗ್ರೇಡ್ ಉಷ್ಣತೆ ಇದ್ದರೆ  ಉತ್ತಮವಾಗಿ ಫಸಲು ಕೊಡುತ್ತದೆ. ಉಷ್ಣತೆ ಜಾಸ್ತಿಯಾದಂತೆ ಬಳ್ಳಿ ಸಾಯುತ್ತದೆ. ಆದರೆ ನೀರು ಸಿಂಪಡಿಸಿ ಕೃತಕವಾಗಿ ತಂಪಾದ ವಾತಾವರಣ ಸೃಷ್ಟಿಸಿದಲ್ಲಿ 6-7 ತಿಂಗಳ ನಿರಂತರವಾಗಿ ಫಸಲು ಪಡೆಯಬಹುದು.ಮಾಡಹಾಗಲ ಮಲೆನಾಡಿನ ಹಸಿರು ಬಂಗಾರ, ಉತ್ತಮ ಪೋಷಕಾಂಶ ಉಳ್ಳ ಸತ್ವಭರಿತ ಕಾಯಿಪಲ್ಲೆ. ಬಡವರ ವಯಾಗ್ರ ಎಂದೂ ಹೇಳಬಹುದು. ಆದರೆ ಇದೀಗ ಅವಸಾನದ ಅಂಚಿಗೆ ಸಾಗುತ್ತಿದೆ. ಮಲೆನಾಡಿನ ಗ್ರಾಹಕರಿಗೆ ದೂರದ ಕಲ್ಕತ್ತಾದಿಂದ ಹಳಸಿದ `ಪಾಗೀಶ~ ತಂದು ತಿನ್ನುವ ದುರ್ಗತಿ ಬಂದಿದೆ.ಆದರೆ ನಮ್ಮ ಮೌಢ್ಯದಿಂದ ಕಾಡು ತಳಿ ನಶಿಸಿ ಹೋಗದಿರಲೆಂದು, ಜನಸಾಮಾನ್ಯರಿಗೂ ಸುಲಭದಲ್ಲಿ ಕೈಗೆಟಕುವಂತಾಗಲೆಂದು, ಅನೇಕರು ಈ ಬೆಳೆ ಬಗ್ಗೆ ನಿರಂತರವಾಗಿ ಅರಿವನ್ನು ಮೂಡಿಸುತ್ತಾ ಬರುತ್ತಿದ್ದಾರೆ. ಅದು ಇಂದು ಫಲ ಕೊಡುವ ಹಂತಕ್ಕೆ ಬಂದಿರುವುದು ಸಂತಸದಾಯಕವಾಗಿದೆ.ಕಾಡಿನ ಅಪ್ಸರೆಗೆ ನಿಮ್ಮ ಮನೆಯಲ್ಲಿ, ಮನದಲ್ಲಿ, ಹೂದೋಟದಲ್ಲಿ, ಟೆರೇಸ್‌ನ ಕುಂಡದಲ್ಲಿ ಸ್ವಲ್ಪ ಜಾಗ ಕೊಟ್ಟು ಬೆಳೆಸಿ ಆಹಾರದಲ್ಲಿ ಬಳಸಿ ಶಾಪ ವಿಮೋಚನೆಗೊಳಿಸಿ ಎನ್ನುವುದು ಇಂದಿನ ಕರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry