ಉಳುವವನಿಗೆ ಭೂಮಿ ಪ್ರಕ್ರಿಯೆಗೆ ಮರುಜೀವ

ಭಾನುವಾರ, ಜೂಲೈ 21, 2019
21 °C

ಉಳುವವನಿಗೆ ಭೂಮಿ ಪ್ರಕ್ರಿಯೆಗೆ ಮರುಜೀವ

Published:
Updated:

ಮಡಿಕೇರಿ: ಅರವತ್ತರ ದಶಕದಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಕನಸು ಕಂಡಿದ್ದ ~ಉಳುವವನಿಗೆ ಭೂಮಿ~ ಕಲ್ಪನೆಗೆ ಈಗ ಪುನಃ ಕೊಡಗು  ಜಿಲ್ಲೆಯಲ್ಲಿ ಚಾಲನೆ ದೊರೆತಿದೆ. ಜೀವಮಾನವಿಡೀ ದುಡಿದ ಭೂಮಿಯ ಒಡೆತನ ತಮಗೆ ದೊರೆಯುತ್ತಿರುವುದಕ್ಕೆ ಗೇಣಿದಾರರು ಸಂತಸಗೊಂಡಿದ್ದಾರೆ. ಕಳೆದ  30-40 ವರ್ಷಗಳಿಂದ ಹಂಬಲಿಸುತ್ತಿದ್ದ ಒಡೆತನದ ತೃಪ್ತಿ ಭಾವ ಅವರ ಮೊಗದಲ್ಲಿ ನಲಿದಾಡುತ್ತಿದೆ.ಹತ್ತು ವರ್ಷಗಳಿಂದ ನಿಷ್ಕ್ರಿಯವಾಗಿದ್ದ ಜಿಲ್ಲೆಯ ಭೂನ್ಯಾಯ ಮಂಡಳಿಗಳು ಈಗ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಪುನಾರಚನೆಗೊಂಡಿದ್ದು,  ಗೇಣಿದಾರರಿಗೆ ಅಧಿಭೋಗದಾರಿಕೆ ಹಕ್ಕು ನೀಡುವಲ್ಲಿ ನಿರತವಾಗಿವೆ. ಜಿಲ್ಲೆಯಲ್ಲಿ ಭೂ ಒಡೆತನಕ್ಕೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಸಿಂಹಪಾಲು  ಸೋಮವಾರ ಪೇಟೆಯ ತಾಲ್ಲೂಕಿಗೆ ಸೇರಿವೆ.ಇವುಗಳಲ್ಲಿ 80 ಅರ್ಜಿಗಳ ಪೈಕಿ 13 ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ಸೋಮವಾರ ಪೇಟೆಯ ಭೂ ನ್ಯಾಯ ಮಂಡಳಿಯು ಗೇಣಿದಾರರಿಗೆ ಅವರು ಉಳುಮೆ ಮಾಡುತ್ತಿದ್ದ 40 ಎಕರೆಯಷ್ಟು ಭೂಮಿಯ ಒಡೆತನವನ್ನು ನೀಡಿದೆ. ಈ ಮೂಲಕ ~ಉಳುವವನಿಗೆ ಭೂಮಿ~ ಪರಿಕಲ್ಪನೆ ಮತ್ತೊಮ್ಮೆ ಸಾಕಾರಗೊಂಡಿದೆ.ಈ ಹಿಂದೆ ಭೂಮಾಲೀಕರಿಂದ ಗೇಣಿಗೆ ಜಮೀನು ಪಡೆದು ಕೃಷಿ ನಡೆಸುತ್ತಿದ್ದ ರೈತರು ತಾವು ಕೃಷಿ ಮಾಡುತ್ತಿದ್ದ ಜಮೀನಿನ ಹಕ್ಕು ಪಡೆಯಲು 1961ರ  ಕರ್ನಾಟಕ ಭೂ ಸುಧಾರಣಾ ಕಾಯಿದೆಯಡಿ (ಉಳುವವನೇ ಹೊಲದೊಡೆಯ) ಫಾರಂ ನಂ 1 ರಲ್ಲಿ ಡಿಕ್ಲರೇಷನ್ ಸಲ್ಲಿಸಿದ ಗೇಣಿದಾರರಿಗೆ ಆ ಜಮೀನಿನ ಅಧಿ ಭೋಗದಾರಿಕೆ ಹಕ್ಕು ನೀಡುವುದು ಈ ಭೂ ನ್ಯಾಯ ಮಂಡಳಿಯ ಜವಾಬ್ದಾರಿಯಾಗಿದೆ.ಅದರಂತೆ ಅರ್ಜಿ ಸಲ್ಲಿಸಿರುವ ಬಹುತೇಕ ಪ್ರಕರಣಗಳು ಜಿಲ್ಲೆಯಲ್ಲಿ ಇತ್ಯರ್ಥಗೊಂಡಿದ್ದರೂ, ಇತ್ತೀಚಿನ ಕೆಲವು ವರ್ಷಗಳಿಂದ ಈ ಭೂ ನ್ಯಾಯ ಮಂಡಳಿಯ ಕಲಾಪ ನಡೆಯದೇ ಹಲವಾರು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿದ್ದವು.ಮರುಜೀವ: ಇಂತಹ ಜನರಿಗೆ ಜೀವದಾನ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಸರ್ಕಾರ ಭೂ ನ್ಯಾಯ ಮಂಡಳಿಗಳಿಗೆ 2009ರಲ್ಲಿ ನಾಮ ನಿರ್ದೇಶನ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತಾದರೂ, ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಅಧಿಕಾರದಲ್ಲಿದ್ದ ಉಪ ವಿಭಾಗಾಧಿಕಾರಿಗಳು ಭೂ ನ್ಯಾಯ ಮಂಡಳಿಯ ಸಭೆಗಳನ್ನು ಕರೆಯದೆ ತಟಸ್ಥರಾಗಿದ್ದರು.ಆದರೆ, ಇದೀಗ ಉಪವಿಭಾಗಾಧಿಕಾರಿಯಾಗಿರುವ ಡಾ.ಎಂ. ಆರ್. ರವಿ, ಸರಕಾರದ ಆದೇಶ ಪಾಲಿಸುವ ಮೂಲಕ ಭೂ ನ್ಯಾಯ ಮಂಡಳಿಗಳಿಗೆ ಪುನರ್ ಚಾಲನೆ ನೀಡಿದ್ದಾರೆ. ಮೂರೂ ತಾಲ್ಲೂಕಿನಲ್ಲಿರುವ ಮಂಡಳಿಗಳ ಕಲಾಪ ಕೈಗೆತ್ತಿಕೊಂಡಿದ್ದಾರೆ.ತಾಲ್ಲೂಕಿನಲ್ಲಿರುವ ಬಹುತೇಕ ಪ್ರಕರಣಗಳು ಈ ಹಿಂದೆ ಭೂನ್ಯಾಯ ಮಂಡಳಿಯಲ್ಲಿ ವಿಚಾರಣೆಗೊಳಪಟ್ಟು ಆದೇಶವಾಗಿ ರಾಜ್ಯ ಉಚ್ಚ ನ್ಯಾಯಾಲಯಕ್ಕೆ  ಮೇಲ್ಮನವಿ ಸಲ್ಲಿಸಿದ್ದ ಪ್ರಕರಣಗಳಾಗಿವೆ. ಉಚ್ಚ ನ್ಯಾಯಾಲಯವು ಈ ಪ್ರಕರಣಗಳನ್ನು ಮರು ವಿಚಾರಣೆ ನಡೆಸುವಂತೆ ಕೆಲವು ವರ್ಷಗಳ ಹಿಂದೆಯೇ ಭೂನ್ಯಾಯ ಮಂಡಳಿಗೆ ನಿರ್ದೇಶನ ನೀಡಿತ್ತು.ಭೂ ಸುಧಾರಣಾ ಕಾಯಿದೆಯಡಿ ಸೋಮವಾರಪೇಟೆ ತಾಲ್ಲೂಕಿನ ಬಹುತೇಕ ಅರ್ಜಿಗಳು ಇತ್ಯರ್ಥಗೊಂಡಿದ್ದರೂ 1977ರ ~ಕೆಲವು ಇನಾಂ ಜಮೀನು ರದ್ಧತಿ ಕಾಯಿದೆ~ ಯಡಿ ಈ 80 ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿದ್ದವು. ಈ ಪ್ರಕರಣಗಳ ಪೈಕಿ ಬಹುತೇಕ ಪ್ರಕರಣಗಳು ಬೇಳೂರು ಮಠಕ್ಕೆ ಸೇರಿದ ಜಮೀನಿಗೆ ಸಂಬಂಧಿಸಿದವುಗಳಾಗಿವೆ.ಉಳಿದಂತೆ ವಿರಾಜಪೇಟೆ ತಾಲ್ಲೂಕಿನಲ್ಲಿ ಹಾಗೂ ಮಡಿಕೇರಿ ತಾಲ್ಲೂಕಿನಲ್ಲಿ ತಲಾ 4 ಪ್ರಕರಣಗಳು ಬಾಕಿ ಇದ್ದು, ವಿರಾಜಪೇಟೆ ತಾಲ್ಲೂಕಿನಲ್ಲಿ ಜೂನ್ ತಿಂಗಳಿನಿಂದ ಪ್ರತಿ ಗುರುವಾರ ಸಭೆ ಸೇರಿ ಈ ಅರ್ಜಿ ಇತ್ಯರ್ಥಪಡಿಸುವ ಉದ್ದೇಶ ಹೊಂದಲಾಗಿದೆ.ತಾಲ್ಲೂಕಿನಲ್ಲಿ ಅರಮೇರಿ ಕಳಂಚೇರಿ ಮಠಕ್ಕೆ ಸಂಬಂಧಿಸಿದ ಹಾಗೂ ಧನುಗಾಲದಲ್ಲಿರುವ ಗುರುಪುರ ಜಂಗಮ ಮಠಕ್ಕೆ ಸೇರಿದ ಜಮೀನಿಗೆ ಸಂಬಂಧಪಟ್ಟ ಜಮೀನುಗಳ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ. ವಿರಾಜಪೇಟೆ ತಾಲ್ಲೂಕಿಗೆ ಸಂಬಂಧಿಸಿದ ಎರಡು ಪ್ರಕರಣಗಳ ವಿಚಾರಣೆ ಇದೇ ತಿಂಗಳು ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry