ಉಳ್ಳವರ ಉತ್ಸವ; ಕಡೆಗಣನೆಗೆ ಒಳಗಾದ ಶ್ರೀಸಾಮಾನ್ಯ

7

ಉಳ್ಳವರ ಉತ್ಸವ; ಕಡೆಗಣನೆಗೆ ಒಳಗಾದ ಶ್ರೀಸಾಮಾನ್ಯ

Published:
Updated:

ಬೀದರ್: ಈಗ ನಡೆಯುತ್ತಿರುವ ‘ಬೀದರ್ ಉತ್ಸವ ಉಳ್ಳವರ ಮನರಂಜನೆಗಾಗಿ ನಡೆಯುತ್ತಿದೆಯೇ?’ ಎಂಬ ಪ್ರಶ್ನೆ ಹುಟ್ಟಿ ಅದಕ್ಕೆ ‘ಹೌದು’ ಎಂಬ ಉತ್ತರ ಕೇಳಿ ಬರುತ್ತಿದೆ. ಜಿಲ್ಲಾಡಳಿತವೇ ಇರುವ ಮತ್ತು ಇಲ್ಲದಿರುವವರ ನಡುವಿನ ‘ಅಂತರ’ ಎದ್ದು ಕಾಣುವಂತೆ ಮಾಡಿದೆ ಎಂಬುದು ಹಲವರ ಅಸಮಾಧಾನಕ್ಕೆ ಕಾರಣ.ಸಾವಿರಾರು ರೂಪಾಯಿ ನೀಡಿ ಗೋಲ್ಡ್, ಡೈಮಂಡ್, ಪ್ಲಾಟಿನಂ ಕಾರ್ಡ್ ಪಡೆದವರಿಗೆ ವಿಐಪಿ, ವಿವಿಐಪಿ ವ್ಯವಸ್ಥೆ. ಅದಕ್ಕೆ ಬದಲಾಗಿ ಶ್ರೀಸಾಮಾನ್ಯರು ಮಾತ್ರ ವೇದಿಕೆಯಿಂದ ನೂರಾರು ಅಡಿ ದೂರ ಕುಳಿತುಕೊಳ್ಳುವಂತಹ ಸ್ಥಿತಿ ಇದೆ. ಹಿಂದೆ ನಡೆದ ಉತ್ಸವಗಳಲ್ಲಿ ಸಾಮಾನ್ಯರನ್ನು ಗಮನದಲ್ಲಿ ಇಟ್ಟುಕೊಂಡು ಕೆಲವು ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿತ್ತು. ಈಗ ಅವೆಲ್ಲಕ್ಕೂ ತಿಲಾಂಜಲಿ ಹೇಳಲಾಗಿದೆ.ಹಿಂದೆ ಉತ್ಸವ ನಡೆಯುವ ದಿನಗಳಲ್ಲಿ ನಗರದ ಎಲ್ಲ ಹೋಟೆಲ್‌ಗಳಲ್ಲಿ ಕಡಿಮೆ ದರದಲ್ಲಿ ಊಟ ಮತ್ತು ಉಪಹಾರದ ವ್ಯವಸ್ಥೆ ಕಲ್ಪಿಸುವಂತೆ ಮನ ಒಲಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿತ್ತು. ಇದರಿಂದಾಗಿ ಕಡಿಮೆ ಹಣ ಕೈಯಲ್ಲಿ ಹಿಡಿದುಕೊಂಡು ಬರುವ ಸಾಮಾನ್ಯರು ಉತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದರು.ಹಿಂದೆ ‘ಮಕ್ಕಳ ಉತ್ಸವ’ದಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲೆಯ ಮಕ್ಕಳಿಗೂ ಭಾಗವಹಿಸಲು ಅವಕಾಶ ಇರುವಂತಹ ವ್ಯವಸ್ಥೆ ಇರುತ್ತಿತ್ತು. ಈ ಬಾರಿಯ ‘ಕಿಡ್ಸ್‌ಜೋನ್’ನಲ್ಲಿ ಪ್ರವೇಶಧನ ನೀಡುವ ಸಾಮರ್ಥ್ಯ ಇರುವವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇದೆ. ಇದರಿಂದಾಗಿ ಕೈಯಲ್ಲಿ ಕಾಸಿಲ್ಲದ, ನೂರಾರು ರೂಪಾಯಿ ಖರ್ಚು ಮಾಡಲು ಸಾಧ್ಯವಾಗದ ಜನ ‘ಉತ್ಸವ’ದಿಂದ ದೂರ ಉಳಿಯುವಂತಹ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಜಗನ್ನಾಥ ಕಮಲಾಪುರ.ಉತ್ಸವದ ಅಂಗವಾಗಿ ಕೋಟೆಯಲ್ಲಿ ಇರುವ ಬೊಮ್ಮಗೊಂಡೇಶ್ವರ ಕೆರೆಯಲ್ಲಿ ಬೋಟಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಹತ್ತು ರೂಪಾಯಿಗಳಷ್ಟು ಕಡಿಮೆ ಹಣ ನೀಡಿ ದೋಣಿಯಲ್ಲಿ ವಿಹರಿಸುತ್ತ ಐತಿಹಾಸಿಕ ಮಹತ್ವದ ಕೋಟೆ ಮತ್ತು ಅಲ್ಲಿನ ಸುಂದರ ತಾಣದ ಸವಿ ಅನುಭವಿಸುವ ಅವಕಾಶ ಇರುತ್ತಿತ್ತು. ಈ ಬಾರಿ ದೋಣಿ ವಿಹಾರಕ್ಕೆ ಕೊಕ್ಕೆ ಹಾಕಿರುವುದರಿಂದ ಸಾರ್ವಜನಿಕರು ಅಪರೂಪದ ಅವಕಾಶದಿಂದ ವಂಚಿತರಾಗುವಂತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry