ಶನಿವಾರ, ಮೇ 28, 2022
31 °C

ಉಳ್ಳವರ ಬಡಾವಣೆ ಅಭಿವೃದ್ಧಿಗೆ ಬಯಾಪ ಹಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ನಗರದ ವಿವಿಧ ರಸ್ತೆಗಳ ಅಭಿವೃದ್ಧಿಗಾಗಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ (ಬಯಾಪ)ದಿಂದ ನಗರಸಭೆಗೆ 7.4 ಕೋಟಿ ಮಂಜೂರಾಗಿದ್ದು ಇದರಲ್ಲಿ ನಗರಸಭೆ ಅಧ್ಯಕ್ಷರು ತಮ್ಮ ಹಾಗೂ ತಮಗೆ ಬೇಕಾದ ವಾರ್ಡ್‌ಗಳಲ್ಲಿ ಮಾತ್ರವೇ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾಯೋಜನೆ ರೂಪಿಸಿದ್ದಾರೆ ಎಂಬ ಸಂಗತಿ ತೀವ್ರ ಆಕ್ಷೇಪಕ್ಕೆ ಗುರಿಯಾಯಿತು.ನಗರಸಭೆಯಲ್ಲಿ ಶುಕ್ರವಾರ ನಡೆದ ವಿಶೇಷಸಭೆಯಲ್ಲಿ ಈ ಕುರಿತಂತೆ ಪ್ರಸ್ತಾಪಿಸಿದ ಸದಸ್ಯ ಚಂದ್ರಶೇಖರ್, ವಡ್ಡರಹಳ್ಳಿ ರವಿ, ಬಿ.ಜಿ.ಹೇಮಂತ ರಾಜು ಅವರು, `ಇದು ಸರಿಯಾದ ಕ್ರಮವಲ್ಲ. ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೇ ತಾರತಮ್ಯ ಮಾಡಲಾಗಿದೆ. ಈ ಬಗ್ಗೆ ಅಧ್ಯಕ್ಷರು ಸ್ಪಷ್ಟನೆ ನೀಡಬೇಕು~ ಎಂದು ಒತ್ತಾಯಿಸಿದರು. ನಗರಸಭೆಗೆ `ಬಯಾಪ~ದಿಂದ 7.4 ಕೋಟಿ ರೂಪಾಯಿ ಅನುದಾನ ಬಂದಿದೆ. ಇದರ ಕ್ರಿಯಾಯೋಜನೆ ರೂಪಿಸುವಲ್ಲಿ ನಗರದ ಇತರೇ ವಾರ್ಡ್‌ಗಳ ಸದಸ್ಯರಿಗೆ ಅನ್ಯಾಯ ಎಸಗಲಾಗಿದೆ. ಯೋಜನೆಯ ಅನುದಾನದ ಬಗ್ಗೆಯೇ ಗೊಂದಲಗಳಿವೆ. ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು.ಇದಕ್ಕೆ ಸ್ಪಷ್ಟನೆ ನೀಡಿದ ಅಧ್ಯಕ್ಷ ಎಂ.ಜಗದೀಶ್ ರೆಡ್ಡಿ, ಶಾಸಕರ ಉಸ್ತುವಾರಿಯಲ್ಲಿ `ಬಯಾಪ~ ಅನುದಾನ ಬಿಡುಗಡೆಯಾಗಿದೆ. ಯಾವ ವಾರ್ಡ್‌ಗಳಿಗೆ ಹಂಚಿಕೆ ಆಗಿದೆ ಎಂಬ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ಇರಲಿಲ್ಲ. ಅದು `ಬಯಾಪ~ ಸಭೆಯಲ್ಲೇ ತೀರ್ಮಾನವಾಗಿದೆ ಎಂದರು.ಇದಕ್ಕೆ ಆಕ್ಷೇಪಿಸಿದ ಸದಸ್ಯರು, ಅಧ್ಯಕ್ಷ ಹಾಗೂ ಪೌರಯುಕ್ತ ಬಯಾಪ ಸದಸ್ಯರಾಗಿದ್ದಾರೆ. ಅಧ್ಯಕ್ಷರು ತಮ್ಮ ಲೆಟರ್‌ಹೆಡ್‌ನಲ್ಲಿ ಪ್ರಸ್ತಾಪಿಸಿರುವ ವಾರ್ಡ್‌ಗಳ ಪಟ್ಟಿ ಇದರಲ್ಲಿದೆ. ಇವಕ್ಕೇ ಅನುಮೋದನೆ ದೊರೆತಿದೆ ಹಾಗೂ ಇದನ್ನು ಮಾಧ್ಯಮದ ಮುಂದಿಟ್ಟಿರುವುದರಿಂದ ನಮ್ಮ ವಾರ್ಡ್‌ಗಳ ಜನರಿಗೆ ನಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಲು ಕಾರಣವಾಗಿದೆ ಎಂದರು.ಇದಕ್ಕೆ ದನಿಗೂಡಿಸಿದ ಸದಸ್ಯ ಚಂದ್ರಶೇಖರ್, ಪತ್ರಕ್ಕೆ ಅಧ್ಯಕ್ಷರೇ ಸಹಿ ಹಾಕಿ ಕಳಿಸಿದ್ದಾರೆ. ಈಗ ಉತ್ತರ ಹೇಳಲು ತಡವರಿಸಿದರೆ ಹೇಗೆ ಎಂದು ಪ್ರಶ್ನಿಸಿದರು. ನಗರದಲ್ಲಿ ಒಳಚರಂಡಿ ಕಾಮಗಾರಿ ಮುಗಿಯದೇ ನಗರ ಸ್ಮಶಾನ ಸ್ವರೂಪಿಯಾಗಿದೆ. ಅಭಿವೃದ್ಧಿ ಕೆಲಸಗಳು ಸಾಕಷ್ಟಿವೆ. ಇವನ್ನೆಲ್ಲಾ ಅಧ್ಯಕ್ಷರು ಗಮನಿಸಬೇಕು. ಎಲ್ಲಾ ವಾರ್ಡ್‌ಗಳಿಗೆ ಅನುದಾನ ದೊರೆಯಬೇಕು ಎಂದು ಒತ್ತಾಯಿಸಿದರು.ಸದಸ್ಯ ಟಿ.ಎನ್.ಪ್ರಭುದೇವ್ ಮಾತನಾಡಿ, `ಬಯಾಪ~ದಿಂದ ದೇವನಹಳ್ಳಿಗೆ 13 ಕೋಟಿ ರೂಪಾಯಿ, ಯಲಹಂಕಕ್ಕೆ 23 ಕೋಟಿ ರೂಪಾಯಿ ಹರಿದು ಬಂದಿದೆ. ಇದರಲ್ಲಿ ನಗರಕ್ಕೆ ಬಂದಿರುವುದು ಮಾತ್ರ 7 ಕೋಟಿ ರೂಪಾಯಿ. ಇನ್ನು ಮುಂದೆ ನಗರದಲ್ಲಿ ಆಗಬೇಕಾದ ಕಾಮಗಾರಿಗಳಿಗೆ ಸಭೆಯಲ್ಲಿ ಸದಸ್ಯರಿಂದ ಠರಾವು ಅಂಗೀಕರಿಸಿ ಹೆಚ್ಚಿನ ಅನುದಾನಕ್ಕೆ ಒತ್ತಾಯಿಸಬೇಕಿದೆ ಎಂದು ಗಮನ ಸೆಳೆದರು.ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಸಭೆಯಲ್ಲಿ ಭಾಗವಹಿಸುವ ಮುನ್ನ ಸದಸ್ಯರ ಅಭಿಪ್ರಾಯ ಪಡೆಯಬೇಕಿರುವುದು ಅಧ್ಯಕ್ಷರ ಹೊಣೆ. ಆದರೆ ಅಧ್ಯಕ್ಷರು ಹಿಂದುಳಿದ ವಾರ್ಡ್‌ಗಳನ್ನು ನಿರ್ಲಕ್ಷಿಸಿ ಶ್ರೀಮಂತರು ಹೆಚ್ಚಾಗಿ ವಾಸ ಮಾಡುವ ಪ್ರದೇಶಗಳಿಗೆ ಕೋಟ್ಯಂತರ ರೂಪಾಯಿಗಳ ಕಾಮಗಾರಿಗಳನ್ನು ಒದಗಿಸಿದ್ದಾರೆ.

 

ಇದು ಸ್ವಜನ ಪಕ್ಷಪಾತದ ಸ್ಪಷ್ಟ ಉದಾಹರಣೆಯಾಗಿದೆ ಎಂದು ಕಿಡಿ ಕಾರಿದರು. ಅಧ್ಯಕ್ಷರು ಈ ಕೂಡಲೇ ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಹಿಂದುಳಿದ ಪ್ರದೇಶಗಳಿಗೆ ಆದ್ಯತೆ ನೀಡಬೇಕು ಎಂದು ಸದಸ್ಯೆ ಮಂಜುಳಾ ಒತ್ತಾಯಿಸಿದರು.ಈ ಕುರಿತು ಪ್ರತಿಕ್ರಿಯಿಸಿದ ಜಗದೀಶ್ ರೆಡ್ಡಿ, ದೊಡ್ಡಬಳ್ಳಾಪುರದ ರಸ್ತೆಗಳ ಅಭಿವೃದ್ಧಿಗಾಗಿ `ಬಯಾಪ~ದಿಂದ 5.5 ಕೋಟಿ ರೂಗಳ ಅನುದಾನ ಬಿಡುಗಡೆಯಾಗಲಿದೆ. ಇದಕ್ಕಾಗಿ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ ಎಂದರು.ನಮ್ಮ ವಾರ್ಡ್‌ಗಳಿಗೆ 80 ಲಕ್ಷ ರೂಪಾಯಿಗಳ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಆದರೆ ವಾಸ್ತವದಲ್ಲಿ ಗಾಂಧಿನಗರದ ವಾರ್ಡ್‌ಗೆ ನಗರದ ಹಳೇ ಬಸ್ ನಿಲ್ದಾಣವೂ ಸೇರುವುದರಿಂದ ಊರಿನ ಹಿತದೃಷ್ಟಿಯಿಂದ ಇಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಇದರಲ್ಲಿ ರಸ್ತೆ ಬದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕಾಗಿ ವ್ಯವಸ್ಥೆ, ಸಮರ್ಪಕ ಫುಟ್‌ಪಾತ್ ನಿರ್ಮಾಣ ಮತ್ತಿತರೆ ಕಾಮಗಾರಿಗಳು ಸೇರಿವೆ ಎಂದು ಸ್ಪಷ್ಟಪಡಿಸಿದರು.ನಮಗೆ ಊರಿನ ಹಿತದೃಷ್ಟಿ ಮುಖ್ಯ. ಯಾವುದೇ ವಾರ್ಡ್‌ಗಳನ್ನು ಕಡೆಗಣಿಸಿಲ್ಲ. ಯಾವುದೇ ಸ್ವಾರ್ಥ ಇಲ್ಲದೆ ಹಿಂದುಳಿದ ವಾರ್ಡ್‌ಗಳ ಅಭಿವೃದ್ಧಿಗೆ ಗಮನ ಹರಿಸಲಾಗುತ್ತಿದೆ. ತಮ್ಮ ವಾರ್ಡ್‌ಗಳಲ್ಲಿ ಆಗಬೇಕಾದ ಕಾಮಗಾರಿಗಳ ಬಗ್ಗೆ ಸದಸ್ಯರು ಗಮನಕ್ಕೆ ತಂದರೆ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.