ಉಳ್ಳವರ ಹೋರಾಟವಾದ ರಾಜಕೀಯ

7

ಉಳ್ಳವರ ಹೋರಾಟವಾದ ರಾಜಕೀಯ

Published:
Updated:

 

‘ರಾಜಕೀಯ’ ಎಂಬ ಪದ ಮತ್ತು ಪರಿಕಲ್ಪನೆಗೆ ಪ್ರಜಾಪ್ರಭುತ್ವದಲ್ಲಿ ಅರ್ಥಪೂರ್ಣ ಆಯಾಮ ಒದಗಬೇಕು. ಆದರೆ ನಮ್ಮ ನಾಡಿನಲ್ಲಿ ವ್ಯರ್ಥಪೂರ್ಣ ಆಯಾಮ ಒದಗುತ್ತಿದೆ. ರಾಜಕೀಯವನ್ನು ಕುರಿತು ಮಾತನಾಡುವುದೇ ವ್ಯರ್ಥವೆಂಬ ವಿಷಾದ ಮತ್ತು ಹೇಸಿಗೆಯೆಂಬ ಜುಗುಪ್ಸೆಯಲ್ಲಿ ಬಹುಪಾಲು ಜನರು ಪ್ರತಿಕ್ರಿಯಿಸುತ್ತಾರೆ; ಆದರೆ ಈ ‘ವ್ಯರ್ಥ’ ಮತ್ತು ‘ಹೇಸಿಗೆ’ಯ ಬಗ್ಗೆ ಮಾತಾಡುತ್ತಲೇ ಇರುತ್ತಾರೆ. ಇಂಥ ವಿಪರ್ಯಾಸಕ್ಕೆ ಒಂದು ಕಾರಣವೆಂದರೆ- ರಾಜಕೀಯವು ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿರುವುದು.ಪ್ರಜಾಪ್ರಭುತ್ವದಲ್ಲಿ ರಾಜಕೀಯವು ಪ್ರಜಾಪರವಾಗಿರಬೇಕು; ಪ್ರಜೆಗಳ ನ್ಯಾಯಪರ ಹೋರಾಟಗಳ ಕೇಂದ್ರ ಶಕ್ತಿಯಾಗಿರಬೇಕು. ಜನಮುಖಿಯಾದ ಎಲ್ಲ ಹೋರಾಟ ಮತ್ತು ಆಡಳಿತಗಳ ರಾಜಕೀಯದ ಸ್ವರೂಪವು ಸದಾ ಪ್ರಜಾಸತ್ತಾತ್ಮಕವಾಗಿಯೇ ಇರುತ್ತದೆ. ಆದರೆ ಪ್ರಜಾಸತ್ತಾತ್ಮಕ ಸಮಾಜದಲ್ಲಿ ಸರ್ಕಾರಗಳ ಸಾಮಾಜಿಕ-ಆರ್ಥಿಕ ನೀತಿಗಳು ಜನಸಾಮಾನ್ಯರ ಆಶಯಕ್ಕೆ ವಿರುದ್ಧವಾದಾಗ ಭೂರ್ಶ್ವಾ ದೃಷ್ಟಿಕೋನವೇ ಪ್ರಜಾಪ್ರಭುತ್ವವೆಂಬ ಹಣೆಪಟ್ಟಿಯಲ್ಲಿ ವಿಜೃಂಭಿಸುತ್ತದೆ. ‘ಭೂರ್ಶ್ವಾ ದೃಷ್ಟಿಕೋನವು ರಾಜಕೀಯವನ್ನು ಉಳ್ಳವರ ನಡುವಿನ ಹೋರಾಟವಾಗಿ ನೋಡುತ್ತದೆಯೇ ಹೊರತು ಉಳ್ಳವರು ಮತ್ತು ಬಡವರ ನಡುವಿನ ಹೋರಾಟವಾಗಿ ನೋಡುವುದಿಲ್ಲ’ ಎಂದು ಚಿಂತಕರೊಬ್ಬರು ವ್ಯಾಖ್ಯಾನಿಸಿದ್ದು ನಮ್ಮ ಸಂದರ್ಭಕ್ಕೆ ಚೆನ್ನಾಗಿ ಅನ್ವಯಿಸುತ್ತದೆ. ನಮ್ಮ ಸಮಾಜವು ಫ್ಯೂಡಲ್ ವ್ಯವಸ್ಥೆಯಿಂದ ಹೊರಬರುತ್ತಿದ್ದರೂ ರಾಜಕೀಯದಲ್ಲಿ ಫ್ಯೂಡಲ್ ಮನೋಧರ್ಮ ಮಾಯವಾಗಿಲ್ಲ. ಜಾಗತೀಕರಣದ ನಂತರ ಫ್ಯೂಡಲ್ ಮನೋಧರ್ಮದ ಜೊತೆಗೆ ಮಾರುಕಟ್ಟೆ ಮನೋಧರ್ಮವೂ ಸೇರಿಕೊಂಡಿದೆ.ಹೀಗಾಗಿ ಏಕಕಾಲದಲ್ಲಿ ಫ್ಯೂಡಲ್ ಮತ್ತು ಬಂಡವಾಳಶಾಹಿಯೆಂಬ ಎರಡು ಶಕ್ತಿಗಳು ಮತ್ತು ಮನೋಧರ್ಮಗಳು ನಿಯಂತ್ರಕ ಶಕ್ತಿಗಳಾಗುತ್ತಿವೆ. ಈ ಎರಡು ಶಕ್ತಿಗಳು ಗುಣಲಕ್ಷಣ ಮತ್ತು ಸ್ವರೂಪದಲ್ಲಿ ಬೇರೆಯಾಗಿದ್ದರೂ ಅಂತಿಮ ಪರಿಣಾಮದಲ್ಲಿ ಒಂದೇ ಆಗಿವೆ. ರಾಜಕೀಯವನ್ನೂ ಸೇರಿದಂತೆ ಸಮಾಜದ ಮುಖ್ಯ ಸ್ಥಾನಗಳಲ್ಲಿ ತಮ್ಮ ಆಶಯಗಳನ್ನು ಸ್ಥಾಪಿಸುತ್ತಿವೆ. ಫ್ಯೂಡಲ್ ಪದ್ಧತಿಯ ನಂತರ ಬಂಡವಾಳಶಾಹಿ ಪದ್ಧತಿ ಬರುತ್ತದೆಯೆಂಬ ಗ್ರಹಿಕೆ ನಿಜವಾಗಿದ್ದರೂ ಒಂದರ ಜೊತೆ ಇನ್ನೊಂದು ಅಥವಾ ಒಂದರೊಳಗೊಂದು ಸೇರಿಕೊಂಡಿರುವ ವೈರುಧ್ಯವೇ ವಾಸ್ತವ ಸ್ಥಿತಿಯಾಗಿದೆ. ಇದರ ಫಲವೇ ವಿಶಿಷ್ಟ ಬಿಕ್ಕಟ್ಟುಗಳು.ಉದಾಹರಣೆಗೆ ರೈತರ ಬಿಕ್ಕಟ್ಟನ್ನು ಗಮನಿಸಿ, ಜಾಗತೀಕರಣವೆಂಬ ಹೆಸರಿನಲ್ಲಿ ಬಂದ ಬಂಡವಾಳೀಕರಣದ ಫಲವಾಗಿ ನಮ್ಮ ಕೃಷಿ ಪ್ರಧಾನ ದೇಶವು ಉದ್ಯಮ ಪ್ರಧಾನ ದೇಶವಾಗಿ ರೂಪಾಂತರಗೊಳ್ಳುತ್ತಿದೆ. ಇದು ಕೈಗಾರಿಕೀಕರಣದ ರೂಪಾಂತರಕ್ಕಿಂತ ಭಿನ್ನವಾದುದು.ಕೈಗಾರಿಕೀಕರಣ ಬಂದಾಗ ಅದರ ಮುಖ್ಯ ನಿಯಂತ್ರಕ- ಸರ್ಕಾರವೇ ಆಗಿತ್ತು. ಸರ್ಕಾರದ ನೀತಿ ನಿಯಮಗಳನ್ನು ಬಂಡವಾಳಗಾರರು ಅನುಸರಿಸಬೇಕಾಗಿತ್ತು. ಆದರೆ ಜಾಗತೀಕರಣದಲ್ಲಿ ಬಂಡವಾಳಗಾರರ ನೀತಿ ನಿಯಮಗಳನ್ನು ಸರ್ಕಾರ ಅನುಸರಿಸಬೇಕಾಗಿದೆ. ಕೈಗಾರಿಕೀಕರಣದಲ್ಲಿ ಸಾಮೂಹಿಕ ಉತ್ಪಾದನೆಯ ವಿಧಾನ ಮೇಲುಗೈ ಪಡೆದ ಫಲವಾಗಿ ಕುಲಮೂಲ ಉತ್ಪಾದನಾ ವಿಧಾನ ಶಿಥಿಲಗೊಂಡಿತು. ಸಾಮೂಹಿಕ ಉತ್ಪಾದನೆಯಲ್ಲಿ ಸರ್ಕಾರದ ನೀತಿಗನುಗುಣವಾಗಿ ಮೀಸಲಾತಿಗೂ ಅವಕಾಶವಿತ್ತು. ವಿವಿಧ ವರ್ಗಗಳ ತೊಡಗುವಿಕೆಯಿತ್ತು.ಜಾಗತೀಕರಣದಲ್ಲಿ ಇದೆಲ್ಲ ಮಣ್ಣುಪಾಲು. ಕೈಗಾರಿಕೀಕರಣದ ಸಂದರ್ಭದಲ್ಲಿ ‘ಸಂಘಟನೆ’ಯ ಮನೋಧರ್ಮ ಮೇಲುಗೈ ಪಡೆದರೆ ಜಾಗತೀಕರಣದ ಸಂದರ್ಭದಲ್ಲಿ ‘ವಿಘಟನೆ’ಯೇ ಒಳನೋಟವಾಗಿಬಿಟ್ಟಿತು. ಸಮೂಹ ಪ್ರಜ್ಞೆಯ ಸ್ಥಾನವನ್ನು ಮತ್ತೊಮ್ಮೆ ವ್ಯಕ್ತಿಪ್ರಜ್ಞೆ ಆವರಿಸಿಕೊಳ್ಳತೊಡಗಿತು. ಫ್ಯೂಡಲ್ ಪದ್ಧತಿಯಲ್ಲೂ ಯಜಮಾನ ಸಂಸ್ಕೃತಿಯ ವ್ಯಕ್ತಿ ಪ್ರಜ್ಞೆಯೇ ಮುಖ್ಯವಾಗಿತ್ತು.ರಾಜಕೀಯವಾಗಿ ನೋಡುವುದಾದರೆ- ಕೈಗಾರಿಕೀಕರಣದ ಸಂದರ್ಭದಲ್ಲಿ ರೈತ-ಕಾರ್ಮಿಕ ಹೋರಾಟಗಳ ಆಯಾಮ ಜೀವಂತವಾಗಿತ್ತು. ಜಾಗತೀಕರಣದ ಸಂದರ್ಭದಲ್ಲಿ ಹೋರಾಟಗಳ ಆಯಾಮವನ್ನು ಹತ್ತಿಕ್ಕುವ ಮನಸ್ಥಿತಿಯೇ ಮುಂಚೂಣಿಯಲ್ಲಿದೆ. ಉದ್ಯಮ ಕೇಂದ್ರಿತ ಲಾಭಕೋರತನವೇ ಮುಖ್ಯವಾಗಿದೆ. ಹೀಗಾಗಿ ‘ಅನ್ನದಾತ’ನಾದ ರೈತ ‘ಉದ್ಯಮಿ’ಯಾಗುವ ಸ್ಥಿತ್ಯಂತರಕ್ಕೆ ಸಿಕ್ಕಿದ್ದಾನೆ.ಬಂಡವಾಳಶಾಹಿ ಉದ್ಯಮದ ನೀತಿಗಳಿಗೆ ಬಲಿಪಶುವಾಗುತ್ತಿದ್ದಾನೆ. ಕೃಷಿ ಮತ್ತು ಉದ್ಯಮದ ನಡುವಿನ ಮುಖಾಮುಖಿ ಮತ್ತು ಸ್ಥಿತ್ಯಂತರದ ಸಂಕಟವು ಹೊಸ ಬಿಕ್ಕಟ್ಟುಗಳನ್ನು ಸೃಷ್ಟಿಸಿದ್ದು ರೈತ ತತ್ತರಿಸಿದ್ದಾನೆ. ವೈರುಧ್ಯಗಳ ಹುತ್ತದಲ್ಲಿ ಹತ್ಯೆ ಮತ್ತು ಆತ್ಮಹತ್ಯೆಗಳಿಗೆ ಸಾಕ್ಷಿಯಾಗುತ್ತಿರುವ ಸಮಾಜದಲ್ಲಿ ರೈತನೂ ಸೇರಿದಂತೆ ನಾವೆಲ್ಲ ಬದುಕುತ್ತಿದ್ದೇವೆ.ನಿಜ; ಫ್ಯೂಡಲ್ ವ್ಯವಸ್ಥೆ ಮೊದಲಿನಂತಿಲ್ಲ; ಬಂಡವಾಳಶಾಹಿ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿಲ್ಲ. ಆದರೆ ರಾಜಕೀಯ ವಲಯದಲ್ಲಿ ಈ ಎರಡೂ ಶಕ್ತಿಗಳು ಕೆಲಸ ಮಾಡುತ್ತಿವೆ. ಫ್ಯೂಡಲ್‌ಗಳು ರಾಜಕಾರಣಿಗಳಾಗಿದ್ದಾರೆ; ಬಂಡವಾಳಗಾರರು ಇವರನ್ನು ನಿಯಂತ್ರಿಸುವಷ್ಟು ಬೆಳೆದಿದ್ದಾರೆ.ಅಮೆರಿಕದಿಂದ ಆಮದು ಮಾಡಿಕೊಂಡ ಮುಕ್ತ ಆರ್ಥಿಕ ನೀತಿಯನ್ನು ಮುಕ್ತವಾಗಿ ಅನುಷ್ಠಾನಗೊಳಿಸುವ ರಾಜಕೀಯವನ್ನು ಬಂಡವಾಳಗಾರರು ‘ಬೆಳೆಸುತ್ತಿದ್ದಾರೆ’; ವಿದೇಶಿ ಬಂಡವಾಳಕ್ಕೆ ಭಾರತೀಯರ ಬುದ್ಧಿ ಮತ್ತು ಬೆವರುಗಳನ್ನು ಒತ್ತೆಯಿಡುವ ಪದ್ಧತಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಇದನ್ನೇ ಪ್ರಜಾಪ್ರಭುತ್ವವೆಂದು ನಮ್ಮ ಸರ್ಕಾರಗಳು ಮುಕ್ತವಾಗಿ ಮಂತ್ರಪಠಣ ಮಾಡುತ್ತಿವೆ. ಜನತೆಯ ಹೋರಾಟಗಳನ್ನು ಪ್ರಜಾಪ್ರಭುತ್ವ ವಿರೋಧಿಯೆಂದು ಬಿಂಬಿಸುವ ಪ್ರವೃತ್ತಿ ಹೆಚ್ಚುತ್ತಿದೆ.ಜನತೆಯ ಹೋರಾಟಗಳು ಹಿನ್ನಡೆ ಅನುಭವಿಸಲು ಜಾಗತೀಕರಣದ ಫಲವಾಗಿ ಮೂಡಿದ ಕಾರ್ಪೊರೇಟ್ ಕಣ್ಣಿನ ದೃಷ್ಟಿ ಕಾರಣವಾದಂತೆ ಹೋರಾಟಗಾರರ ಮತ್ತು ಹೋರಾಟಗಳ ಸೀಮಿತ ದೃಷ್ಟಿಯಲ್ಲೂ ಕಾರಣವಾಗಿದೆ. ಅಂದರೆ ವಿವಿಧ ಚಾರಿತ್ರಿಕ ಸಂದರ್ಭಗಳಿಗನುಗುಣವಾಗಿ ಬದಲಾಗದೆ ಹೋದ ಕಾರ್ಯತಂತ್ರ ಮತ್ತು ವಿಶ್ವಾಸಾರ್ಹತೆಯ ಪ್ರಶ್ನೆಗಳೂ ಹೋರಾಟಗಳ ಹಿನ್ನಡೆಗೆ ಕಾರಣವಾಗಿವೆ. ಆದರೆ ಈ ಕಾರಣಕ್ಕಾಗಿ ಜನತೆಯ ಹೋರಾಟಗಳನ್ನೆಲ್ಲ ಅನುಮಾನಿಸುವುದು ಮತ್ತು ಹತ್ತಿಕ್ಕುವುದು ಸರಿಯಲ್ಲ. ಇಂಥ ಹೋರಾಟಗಳಿಂದ ಏನಾದೀತು ಎಂದು ನೈರಾಶ್ಯ ಬಿತ್ತುವುದೂ ಸೂಕ್ತವಲ್ಲ.ಇವತ್ತು ಏನಾಗಿದೆ ಎಂದರೆ-ಉಳ್ಳವರ ನಡುವಿನ ಹೋರಾಟಗಳಿಗೇ ಆದ್ಯತೆ ಸಿಗುತ್ತಿದೆ; ಅಗತ್ಯಕ್ಕಿಂತ ಹೆಚ್ಚು ಪ್ರಚಾರ ಸಿಗುತ್ತಿದೆ. ಮೀಸಲಾತಿಯಂತಹ ಕ್ರಮಗಳಿಂದ ಶಿಥಿಲಗೊಂಡ ಫ್ಯೂಡಲ್ ಪದ್ಧತಿಯಿಂದ ವಿವಿಧ ಸಾಮಾಜಿಕ ವಲಯಗಳು ರಾಜಕೀಯವನ್ನು ಪ್ರವೇಶ ಮಾಡಿದ ಆರೋಗ್ಯಕರ ಬೆಳವಣಿಗೆಯ ನಡುವೆಯೂ ಚುನಾವಣೆಗಳು ಉಳ್ಳವರ ನಿಯಂತ್ರಣದಲ್ಲಿವೆ.ಹಣ, ಜಾತಿ, ಮತ, ಮಠ-ಎಲ್ಲವೂ ವಿವಿಧ ಪ್ರಮಾಣದಲ್ಲಿ ಕೆಲಸ ಮಾಡುತ್ತಿವೆ. ತಳಮಟ್ಟದ ಹೋರಾಟ ಕಟ್ಟಿದ ಎಷ್ಟು ಜನರು ವಿಧಾನಸಭೆ, ಲೋಕಸಭೆಗಳಿಗೆ ಬರಲು ಸಾಧ್ಯವಾಗಿದೆ ಎಂಬ ಲೆಕ್ಕ ನೋಡಿದರೆ ಉಳ್ಳವರ ಹೂರಣ ಬಯಲಾಗುತ್ತದೆ. ಈಗ ಹೋರಾಟಗಳೆಂದರೆ ಉಳ್ಳವರ ನಡುವಿನ ಹೋರಾಟಗಳು ಎಂಬಂತೆ ಬಿಂಬಿಸಲಾಗುತ್ತಿದೆ.ಈ ಉಳ್ಳವರಲ್ಲಿ ಫ್ಯೂಡಲ್‌ಗಳೂ ಬಂಡವಾಳಗಾರರೂ ಒಟ್ಟಿಗೇ ಇದ್ದಾರೆ. ನನ್ನ ಮಾತಿಗೆ ಸಾಕ್ಷಿಯಾಗಿ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಪಡೆಯುವ ಅಂಬಾನಿಗಳ ಆಸ್ತಿ ‘ಹೋರಾಟ’ವನ್ನು ಗಮನಿಸಿ. ಟಾಟಾಗಳ ಕೌಟುಂಬಿಕ ಕಲಹವನ್ನು ನೋಡಿ-ಅಂತೆಯೇ ರಾಜಶಾಹಿ ಕಾಲದಲ್ಲಿ ನಡೆದ ರಾಜರ ನಡುವಿನ ಹೋರಾಟಗಳನ್ನು ವಿಜೃಂಭಿಸಲಿಲ್ಲವೆ? ಭೂಮಾಲಿಕರ ನಡುವಿನ ವೈಷಮ್ಯದ ಹೋರಾಟಗಳು ವೈಭವೀಕರಣಗೊಂಡಿಲ್ಲವೆ?ಇದೇ ಮಾದರಿಯಲ್ಲಿ ಇಂದಿನ ಉಳ್ಳವರ ಹೋರಾಟಗಳೂ ಆದ್ಯತೆ ಪಡೆಯುತ್ತಿವೆ; ರಾಜಕಾರಣಿಗಳ ನಡುವಿನ ಜಿದ್ದಾಜಿದ್ದಿ ಮತ್ತು ಸೇಡಿನ ಸಂಘರ್ಷಗಳೂ ಈ ಮಾತಿಗೆ ಪುಷ್ಟಿ ಕೊಡುತ್ತವೆ. ಫ್ಯೂಡಲ್‌ಗಳ ಹೋರಾಟದಂತೆ ಕಾಣುತ್ತದೆ.

 

ಕರ್ನಾಟಕದಲ್ಲಿ ಸುದ್ದಿ ಮಾಡಿರುವ ಭೂಹಗರಣಗಳನ್ನು ಗಮನಿಸಿ: ಜೆ.ಡಿ.ಎಸ್. ಮತ್ತು ಕಾಂಗ್ರೆಸ್‌ನವರು ಮುಖ್ಯಮಂತ್ರಿಗಳ ಹಗರಣಗಳನ್ನು ಬಯಲು ಮಾಡಿದಾಗ, ಮುಖ್ಯಮಂತ್ರಿಗಳು ‘ನಿಮ್ಮದೆಲ್ಲ ಬಿಚ್ಚಿಡುತ್ತೇನೆ’ ಎಂದು ಅಬ್ಬರಿಸುತ್ತಾರೆ.ಹಗರಣಗಳ ಸತ್ಯಾಸತ್ಯತೆ ಏನೇ ಇರಲಿ, ಎರಡೂ ಕಡೆಯಲ್ಲಿ ಫ್ಯೂಡಲ್ ಪರಿಭಾಷೆಯೇ ಪ್ರಧಾನವಾಗುತ್ತಿದೆ. ಮುಖ್ಯಮಂತ್ರಿಯವರನ್ನೂ ಒಳಗೊಂಡಂತೆ ಆಡಳಿತ ಮತ್ತು ವಿರೋಧಪಕ್ಷಗಳ ಕೆಲವರು ಏಕವಚನ ಪ್ರಯೋಗದಲ್ಲಿ ಸಂಭ್ರಮಿಸುತ್ತಿದ್ದಾರೆ. ಮುಖ್ಯವಾಗಿ, ಇವರಾರೂ ಜನತೆಯ ಹೋರಾಟವನ್ನು ಕಟ್ಟುತ್ತಿಲ್ಲ; ಮಾಧ್ಯಮಗಳ ಮೂಲಕ ‘ಹೋರಾಟ’ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಾದಯಾತ್ರೆ ಮತ್ತು ಜೆ.ಡಿ.ಎಸ್. ನೈಸ್ ವಿರೋಧ ಬಿಟ್ಟರೆ ಈ ಪಕ್ಷಗಳೂ ಜನತೆಯ ಹೋರಾಟದತ್ತ ಗಮನ ಕೊಡಲಿಲ್ಲ. ಹೀಗಾಗಿ ಭೂಹಗರಣವನ್ನೂ ಒಳಗೊಂಡಂತೆ ಆರೋಪ, ಪ್ರತ್ಯಾರೋಪಗಳು ಉಳ್ಳವರ ರಾಜಕೀಯವಾಗಿ ಕಾಣಿಸತೊಡಗಿವೆ; ಇದೊಂದು ವಿಪರ್ಯಾಸವೇ ಸರಿ.ಮತ್ತೊಮ್ಮೆ ಅನ್ನಿಸುತ್ತಿದೆ: ಇಂದಿನ ರಾಜಕೀಯವು ‘ಪ್ರಧಾನವಾಗಿ’ ಉಳ್ಳವರ ಆಸ್ತಿ, ಅಧಿಕಾರ ಮತ್ತು ಅಸ್ತಿತ್ವದ ಹೋರಾಟ; ಉಳ್ಳವರ ನಡುವಿನ ಹೋರಾಟ; ಇದು ನಮ್ಮ ಪ್ರಜಾಪ್ರಭುತ್ವದ ಪರಿಣತಿಯಲ್ಲ, ಪರಿಮಿತಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry