ಶನಿವಾರ, ಜನವರಿ 18, 2020
19 °C
ರೈತ ಸಂಘಟನೆ, ವರ್ತಕರ ತಿಕ್ಕಾಟದ ನಡುವೆ ಬಡವಾದ ಮಾರುಕಟ್ಟೆ

ಉಳ್ಳಾಗಡ್ಡಿ ವಹಿವಾಟು ಪುನಾರಂಭ ಇಂದು

ವೆಂಕಟೇಶ್ ಜಿ.ಎಚ್./ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಳ್ಳಾಗಡ್ಡಿ ವಹಿವಾಟು ಪುನಾರಂಭ ಇಂದು

ಹುಬ್ಬಳ್ಳಿ: ರೈತ ಸಂಘಟನೆ ಹಾಗೂ ವ್ಯಾಪಾರಸ್ಥರ ನಡುವಿನ ಶೀತಲ ಸಮರದಿಂದಾಗಿ ಇಲ್ಲಿನ ಅಮರ­ಗೋಳದ ಎಪಿಎಂಸಿ ಪ್ರಾಂಗಣದ ಉಳ್ಳಾಗಡ್ಡಿ ಮಾರು­ಕಟ್ಟೆ ಸೊರಗುತ್ತಿದ್ದು, ಕಳೆದ ಮೂರು ದಿನಗಳಿಂದ ವಹಿವಾಟು ಸಂಪೂರ್ಣ ಸ್ಥಗಿತ­ಗೊಂಡಿದೆ.ವಹಿವಾಟು ಬಂದ್ ಆಗಿರುವುದರಿಂದ ಬೆಳೆ­ಗಾರರು ಉಳ್ಳಾಗಡ್ಡಿಯನ್ನು ಬೆಳಗಾವಿ ಹಾಗೂ ಬೆಂಗಳೂರು ಮಾರುಕಟ್ಟೆಗೆ ಕೊಂಡೊ­ಯ್ದಿ­ದ್ದಾರೆ. ಹುಬ್ಬಳ್ಳಿ ಮಾರುಕಟ್ಟೆಗೆ ಬರಬೇಕಿದ್ದ 28 ಸಾವಿರ ಕ್ವಿಂಟಲ್ ನಷ್ಟು ಉಳ್ಳಾಗಡ್ಡಿ ಬೇರೆಡೆ ಸಾಗ­ಣೆಯಾಗಿದೆ. ಇದರಿಂದ ಅಮರಗೋಳ ಮಾರು­ಕಟ್ಟೆ ಪ್ರಾಂಗಣಕ್ಕೆ ₨56 ಸಾವಿರ ಆದಾಯ (ಸೆಸ್) ನಷ್ಟವಾಗಿದೆ ಎಂದು ತಿಳಿದುಬಂದಿದೆ.ಇಂದಿನಿಂದ ವಹಿವಾಟು ಆರಂಭ: ಎಪಿಎಂಸಿ­ಯಲ್ಲಿ ಸೋಮವಾರದಿಂದ ಉಳ್ಳಾಗಡ್ಡಿ ಮಾರಾಟ ಪುನರಾರಂಭವಾಗಲಿದೆ. ನವನಗರ ಪೊಲೀ­ಸರು ಹಾಗೂ ಎಪಿಎಂಸಿ ಆಡಳಿತ ವ್ಯಾಪಾರಸ್ಥರಿಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ವಹಿವಾಟು ಆರಂಭಿಸ­ಲಾಗುತ್ತಿದೆ ಎಂದು ಉಳ್ಳಾಗಡ್ಡಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಲೀಂ ಬ್ಯಾಹಟ್ಟಿ ತಿಳಿಸಿದರು.ಪ್ರತಿಭಟನೆ ಪೂರ್ವಯೋಜಿತ?: ಹಿಂದಿನ ಎರಡು ಪ್ರತಿಭಟನೆಗಳೂ ಪೂರ್ವಯೋಜಿತವೇ ಹೊರತು ಆಕಸ್ಮಿಕವಲ್ಲ. ಮಾರುಕಟ್ಟೆಗೆ ಬಂದಿದ್ದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲ. ಬದಲಿಗೆ ಹೊರಗಿನಿಂದ ವಾಹನಗಳಲ್ಲಿ ರೈತರನ್ನು ಕರೆತಂದು ಪ್ರತಿಭಟನೆ ಮಾಡಿಸಲಾಗಿದೆ. ಕಳೆದ ತಿಂಗಳು ಇಲ್ಲಿ ಪ್ರತಿಭಟನೆ ಆರಂಭಕ್ಕೆ ಮುನ್ನವೇ ಬೆಳಗಾವಿ ಅಧಿವೇಶನದಲ್ಲಿ ‘ಹುಬ್ಬಳ್ಳಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದೆ’ ಎಂದು ಪ್ರಸ್ತಾಪಿಸಲಾಗಿತ್ತು ಎಂಬುದು ಉಳ್ಳಾಗಡ್ಡಿ ವರ್ತಕರ ಸಂಘದ ಆರೋಪವಾಗಿದೆ.ಇದಕ್ಕೆ ಪೂರಕವಾಗಿ ಹಿಂದಿನ ವಾರ ಉಳ್ಳಾ­ಗಡ್ಡಿ ಮಾದರಿ ಬೆಲೆ ಕ್ವಿಂಟಲ್ ಗೆ ₨900 ಆಗಿತ್ತು. ಆಗ ಯಾವುದೇ ಪ್ರತಿಭಟನೆ ನಡೆದಿರಲಿಲ್ಲ. ಡಿಸೆಂಬರ್ 9 ಮತ್ತು 10ರಂದು ಕ್ವಿಂಟಲ್ ಉಳ್ಳಾಗಡ್ಡಿಗೆ ಮಾದರಿ ಬೆಲೆ ₨1100ರಿಂದ 1200 ಇದ್ದರೂ ಪ್ರತಿಭಟನೆ ಮಾಡಿದ್ದೇಕೆ? ಎಂದು ಸಲೀಂ ಬ್ಯಾಹಟ್ಟಿ ಪ್ರಶ್ನಿಸುತ್ತಾರೆ. ‘ಕಳೆದ ಮಂಗಳವಾರ ಟೆಂಡರ್ ಆಗಿ ಉಳ್ಳಾಗಡ್ಡಿ ಖರೀದಿ ಆಗುವವರೆಗೂ ಯಾವುದೇ ಪ್ರತಿಭಟನೆ ಇರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನಗರಕ್ಕೆ ಬರುವ ಸುದ್ದಿ ತಿಳಿದು ಮಧ್ಯಾಹ್ನದ ನಂತರ ರಸ್ತೆಗಿಳಿದು ಪ್ರತಿಭಟನೆ ನಡೆಸಲಾಯಿತು’ ಎಂದು ಅವರು ಆರೋಪಿಸುತ್ತಾರೆ.ಪ್ರತಿಭಟನೆ ರಾಜಕೀಯ ಪ್ರೇರಿತವಲ್ಲ: ‘ನಮ್ಮದು ಪಕ್ಷಾತೀತ ರೈತ ಹೋರಾಟ ಸಮಿತಿ ಆದ್ದರಿಂದ ಇಲ್ಲಿ ರಾಜಕೀಯದ ಪ್ರಶ್ನೆಯೇ ಇಲ್ಲ’ ಎನ್ನುತ್ತಾರೆ ಈರುಳ್ಳಿ ಬೆಲೆ ಕುಸಿತ ವಿರೋಧಿಸಿ ಅಮರಗೋಳದಲ್ಲಿ ಪ್ರತಿಭಟನೆ ಸಂಘಟಿಸಿದ್ದ ಸಮಿತಿ ಅಧ್ಯಕ್ಷ ಬಿ.ಎಂ.ಹನಸಿ ಹೇಳುತ್ತಾರೆ.

ರೈತರ ಸಂಘಟನೆ ಒಡೆಯಲು ವ್ಯಾಪಾರಸ್ಥರು ಸುಳ್ಳು ಆರೋಪ ಮಾಡುತ್ತಿದ್ದಾರೆ. ವಾಸ್ತವ­ವಾಗಿ ಪ್ರತಿಭಟನೆಗೆ ಬೆಂಬಲ ನೀಡುವಂತೆ ನಾವು ಎಲ್ಲಾ ಪಕ್ಷದವರನ್ನು ಕೇಳಿದ್ದೆವು. ನೆಪ ಹೇಳಿ ಎಲ್ಲರೂ ತಪ್ಪಿಸಿಕೊಂಡರು ಎನ್ನುವ ಹನಸಿ, ಮೊರಬ­ದಿಂದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಉಳ್ಳಾಗಡ್ಡಿ ಬೆಳೆಗಾರರು ವಾಹನ ಮಾಡಿ­ಕೊಂಡು ಬಂದಿದ್ದರು. ನಾವಾಗಿಯೇ ಯಾರನ್ನೂ ಕರೆಸಿರಲಿಲ್ಲ ಎನ್ನುತ್ತಾರೆ. ತಹಶಿೀ­ಲ್ದಾರ್ ಮಧ್ಯ­ಸ್ಥಿಕೆ­ಯಲ್ಲಿ ನಡೆದ ಸಂಧಾನದಂತೆ ವ್ಯಾಪಾ­ರಸ್ಥರು ನಡೆದುಕೊಳ್ಳುತ್ತಿಲ್ಲ ಎಂದು  ಆರೋಪಿಸುತ್ತಾರೆ.ಮಾರುಕಟ್ಟೆ ಬೆಳವಣಿಗೆಗೆ ತೊಂದರೆ: ಅಪ್ಪ–ಅವ್ವನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ರೈತ ಸಂಘಟನೆ ಹಾಗೂ ವರ್ತಕರ ನಡುವಿನ ಜಗಳದಲ್ಲಿ ನಮ್ಮ ಮಾರುಕಟ್ಟೆಯ ವಹಿ­­­­­­­ವಾಟಿಗೆ ತೊಂದರೆಯಾಗಿದೆ ಎಂದು ಹುಬ್ಬಳ್ಳಿ ಎಪಿಎಂಸಿ ಕಾರ್ಯದರ್ಶಿ ಕೆ.ಕೆ.ಎಸ್.ವಿ. ಪ್ರಸಾದ್ ಅಲವತ್ತುಕೊಳ್ಳುತ್ತಾರೆ. ‘90ರ ದಶಕ­ದಲ್ಲಿ ಗದಗ ಮಾರುಕಟ್ಟೆಯಲ್ಲಿ ಇದೇ ಕಾರಣಕ್ಕೆ 15 ದಿನ ವಹಿವಾಟು ಬಂದ್ ಆಗಿದ್ದ­ರಿಂದ ಲಕ್ಷ್ಮೇ­ಶ್ವರ, ಸವ­ಣೂರು ಮಾರು­ಕಟ್ಟೆಗಳು ಏಕಾಏಕಿ ಮುಂಚೂ­ಣಿಗೆ ಬಂದವು. ಆಗಿನ ನಷ್ಟದಿಂದ ಗದಗ ಮಾರುಕಟ್ಟೆ ಇನ್ನೂ ಚೇತ­ರಿ­ಸಿ­ಕೊಂಡಿಲ್ಲ. ಆ ಪರಿಸ್ಥಿತಿ ನಮ್ಮ ಮಾರುಕ­ಟ್ಟೆಗೆ ಬಾರದಿರಲಿ. ಏನೇ ಸಮಸ್ಯೆಗಳಿದ್ದರೂ ರೈತ ಮುಖಂಡರು, ವರ್ತಕರು ಕುಳಿತು ಸಂಧಾನದ ಮೂಲಕ ಪರಿ­ಹರಿಸಿಕೊಳ್ಳಲಿ’ ಎಂದು ಪ್ರಸಾದ್ ಹೇಳುತ್ತಾರೆ.ಇನ್ನೂ 15 ದಿನ ವಹಿವಾಟು ಬೇಡ: ಹನಸಿ

ಎಪಿಎಂಸಿಯಲ್ಲಿ ಇನ್ನೂ 15ದಿನ ಉಳ್ಳಾಗಡ್ಡಿ ವಹಿವಾಟು ಆರಂಭಿಸದಂತೆ ರಾಜ್ಯ ಪಕ್ಷಾತೀತ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಿ.ಎಂ.ಹನಸಿ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

ಎಪಿಎಂಸಿ ಹೊರತಾಗಿ ಪರ್ಯಾಯ ಮಾರಾಟದ ಬಗ್ಗೆ ರೈತ ಸಂಘಟನೆಗಳೊಂದಿಗೆ ಜಿಲ್ಲಾಡಳಿತ ಚರ್ಚಿಸಿ ತೀರ್ಮಾನ ಕೈಗೊಳ್ಳಲಿ ಎಂದು ಒತ್ತಾಯಿಸಿರುವ ಅವರು, ರೈತರು ತುರ್ತಾಗಿ ಉಳ್ಳಾಗಡ್ಡಿ ಮಾರುವಂತಿದ್ದರೆ 5ರಿಂದ 10 ಚೀಲ ತಂದು ಹುಬ್ಬಳ್ಳಿಯ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತು ಚಿಲ್ಲರೆಯಾಗಿ ಮಾರಾಟ ಮಾಡಲಿ ಎಂದು ಸಲಹೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)