ಶನಿವಾರ, ನವೆಂಬರ್ 16, 2019
21 °C
ಸ್ವಸ್ಥ ಬದುಕು

ಉಸಿರಾಡಿ ಹಗುರಾಗಿ!

Published:
Updated:
ಉಸಿರಾಡಿ ಹಗುರಾಗಿ!

ಮ್ಮ ಉಸಿರಾಟ ನಿಂತಾಗ ನಾವು ಸ್ತಬ್ಧರಾಗುತ್ತೇವೆ. ಉಚ್ಛ್ವಾಸ, ನಿಶ್ವಾಸ ನಿಂತುಹೋದ ಮರುಕ್ಷಣವೇ ನಾವು ಇರುವುದಿಲ್ಲ. ದೇಹ ನಿಶ್ಚಲವಾಗುತ್ತದೆ. ನಾವು ಹೆಣವಾಗಿ ಮಲಗಿರುತ್ತೇವೆ. ಅದಕ್ಕಾಗಿಯೇ ಉಸಿರಾಟ ಅತ್ಯಂತ ಮಹತ್ವದ್ದು.ನಾವು ಉಸಿರಾಡುವಾಗ ಕೇವಲ ಗಾಳಿಯನ್ನಷ್ಟೇ ಒಳಗೆ ಎಳೆದುಕೊಳ್ಳುವುದಿಲ್ಲ. ಗಾಳಿಗಿಂತ ಸೂಕ್ಷ್ಮವಾದ ಬಲವನ್ನು ತೆಗೆದುಕೊಳ್ಳುತ್ತೇವೆ. ಉಸಿರನ್ನು ಒಳಗೆ ಎಳೆದುಕೊಂಡಾಗ ಶಕ್ತಿ, ಬಲ, ಧೈರ್ಯ ಎಲ್ಲವೂ ನಮ್ಮಳಗೆ ಹುಟ್ಟುತ್ತದೆ. ನಮ್ಮ ದೇಹದೊಳಗೆ ಪ್ರೀತಿ ಮತ್ತು ಆರೋಗ್ಯಕರ ಭಾವನೆ ತುಂಬಿಕೊಳ್ಳುತ್ತದೆ. `ನಾನು ಬದುಕಿದ್ದೇನೆ' ಎಂಬ ಸಂತಸದಾಯಕ ಅರಿವು ಹುಟ್ಟುತ್ತದೆ. ಉಸಿರಾಟ ಅಂದರೆ ನಮ್ಮಳಗೆ ಪ್ರಾಣದ ಹರಿವು, ಬದುಕಿನ ಹರಿವು.ನಾವು ನೊಂದುಕೊಂಡಾಗ, ಭಾವನಾತ್ಮಕ ತೊಂದರೆ ಅನುಭವಿಸುತ್ತಿದ್ದಾಗ ಯದ್ವಾತದ್ವಾ ಉಸಿರಾಡುತ್ತೇವೆ. ಇದು ನಮ್ಮ ದೇಹದೊಳಗೆ ಪ್ರಾಣಿಕ್ ಶಕ್ತಿಯ ಹರಿವಿಗೆ ತಡೆಯೊಡ್ಡುತ್ತದೆ. ನಮ್ಮ ಆರೋಗ್ಯ ಹದಗೆಡುತ್ತದೆ. ನಾವು ಆಳವಾಗಿ ಉಸಿರು ಹೊರ ಹಾಕಿದಾಗ ಕೇವಲ ಇಂಗಾಲದ ಡೈಆಕ್ಸೈಡ್ ಹೊರಗೆ ಹಾಕುವುದಿಲ್ಲ. ನಮ್ಮ ಹತಾಶೆ, ನೋವು, ಭಯ ಎಲ್ಲವನ್ನೂ ಹೊರ ಹಾಕುತ್ತೇವೆ. ಅತಿ ವೇಗವಾಗಿ ನಿಶ್ವಾಸ ಮಾಡುವುದರಿಂದ ಈ ಮಾಲಿನ್ಯ ನಮ್ಮಳಗೆ ಉಳಿದುಕೊಳ್ಳುತ್ತದೆ.ಆಳವಾಗಿ, ಲಯಬದ್ಧವಾಗಿ ಉಸಿರಾಡುವುದರಿಂದ ನಮ್ಮಳಗೆ ಹುಟ್ಟುವ ನಕಾರಾತ್ಮಕ ಭಾವನೆಗಳನ್ನು ನಿಯಂತ್ರಿಸಬಹುದು. ಆಗಲೂ ಮೂಗಿನ ಮೂಲಕವೇ ನಾವು ಉಸಿರಾಡಬೇಕು. ಮೂಗಿನ ಹೊಳ್ಳೆಗಳಲ್ಲಿ ಇರುವ ಸೂಕ್ಷ್ಮ ರೋಮಗಳು ಗಾಳಿಯಲ್ಲಿರುವ ದೂಳಿನ ಕಣಗಳನ್ನು ಹೊರಗಿಟ್ಟು ಶ್ವಾಸಕೋಶಗಳನ್ನು ಶುದ್ಧವಾಗಿಡುತ್ತವೆ. ಅಲ್ಲದೆ ಮೂಗಿನ ಮೂಲಕ ಉಸಿರಾಟ ಮಾಡಿದಾಗ ಆ ಗಾಳಿ ಮೆದುಳನ್ನು ತಂಪಾಗಿರಿಸುತ್ತದೆ ಹಾಗೂ ಆಲೋಚನೆಗಳನ್ನು ಸ್ಪಷ್ಟವಾಗಿರಿಸುತ್ತದೆ. ಅದೇ ಬಾಯಿಯ ಮೂಲಕ ಉಸಿರಾಡಿದಾಗ ನಾವು ಮಂಕಾಗುತ್ತೇವೆ.ಉಸಿರಾಟದ ವ್ಯಾಯಾಮ ಮಾಡಿ

ಬೆನ್ನುಮೂಳೆ ನೆಟ್ಟಗಿರುವಂತೆ ನೇರವಾಗಿ ಕುಳಿತುಕೊಳ್ಳಿ. ಕಣ್ಣು ಮುಚ್ಚಿಕೊಳ್ಳಿ. ನಿಧಾನವಾಗಿ, ಆಳವಾಗಿ ಉಸಿರು ಎಳೆದುಕೊಳ್ಳಿ. ನಿಮ್ಮ ಹೊಟ್ಟೆಯೂ ಆಗ ಉಬ್ಬುತ್ತದೆ. ಗಾಳಿಯ ಜತೆ ನೀವು ಸಂತಸ, ಶಾಂತಿ, ಶಕ್ತಿ, ಸ್ಥೈರ್ಯ ಎಲ್ಲವನ್ನೂ ಒಳಗೆ ಎಳೆದುಕೊಳ್ಳುತ್ತೀರಿ. ಈ ಆರೋಗ್ಯಕರ ಉಸಿರು ನಿಮ್ಮ ಮೆದುಳಿನಿಂದ ಪಾದದವರೆಗೆ ಸಂತಸವನ್ನು ಹರಡುತ್ತಿದೆ ಅಂದುಕೊಳ್ಳಿ. ನಿಮ್ಮ ಮಾಂತ್ರಿಕ ಉಸಿರು ಎಲ್ಲ ನಕಾರಾತ್ಮಕ ಭಾವನೆಗಳನ್ನು ಸುಟ್ಟುಹಾಕಿ ಸಕಾರಾತ್ಮಕ ಭಾವನೆಗಳಿಗೆ ಜಾಗ ಮಾಡಿಕೊಡುತ್ತದೆ ಎಂದು ಊಹಿಸಿಕೊಳ್ಳಿ.ನಂತರ ಜೋರಾಗಿ ಶ್ವಾಸ ಹೊರಹಾಕಿ. ನಿಮ್ಮಳಗಿನ ದೌರ್ಬಲ್ಯ, ಖಿನ್ನತೆ, ಉದ್ವೇಗ, ಏಕಾಗ್ರತೆಯ ಕೊರತೆ ಎಲ್ಲವನ್ನೂ ಈ ಗಾಳಿಯ ಮೂಲಕ ಹೊರಹಾಕುತ್ತೀರಿ. ಮನಸ್ಸಿನ ಎಲ್ಲ ಮಾಲಿನ್ಯವನ್ನೂ ಹೊರಹಾಕಿದ ನಂತರ ನಿಮ್ಮ ಹೊಟ್ಟೆಯೂ ಚಪ್ಪಟೆಯಾಗುತ್ತದೆ. ಕನಿಷ್ಠ 12 ಸಲ ಈ ಉಸಿರಾಟದ ವ್ಯಾಯಾಮ ಮಾಡಿ. ನಿಮ್ಮ ಮನಸ್ಸಿನಿಂದ ಎಲ್ಲ ಕೊಳಕು ಹೊರಹೋಗುವವರೆಗೆ ಈ ವ್ಯಾಯಾಮ ಮಾಡಬಹುದು. ನಿಮ್ಮ ಮನಸ್ಸು ಆಗ ಜಲಧಾರೆಯ ಕೆಳಗೆ ನಿಂತಂತೆ ತಂಪಾಗಿರುತ್ತದೆ.ನಾವು ದೊಡ್ಡವರಾಗುತ್ತಿದ್ದಂತೆ ಹಲವು ಅನುಭವಗಳನ್ನು ಪಡೆಯುತ್ತೇವೆ. ನಮ್ಮ ಉಸಿರಾಟದತ್ತ ಗಮನ ನೀಡದೇ ಇದ್ದಲ್ಲಿ ನಮಗಾದ ನಿರಾಸೆ, ಅನ್ಯಾಯಗಳೆಲ್ಲ ಮನದಲ್ಲಿ ಹೆಪ್ಪುಗಟ್ಟುತ್ತವೆ. ನಾವು ದಣಿಯುತ್ತೇವೆ. ನಮ್ಮ ಹೃದಯ ಭಾರವಾಗುತ್ತದೆ. ಹಾಗೆಂದು ಜೀವನದಲ್ಲಿ ಅತಿಯಾದ ಎಚ್ಚರಿಕೆ ವಹಿಸುವುದು ಸಲ್ಲ. ಆಗಷ್ಟೇ ಪುಟ್ಟ, ಪುಟ್ಟ ಹೆಜ್ಜೆ ಇಡಲು ಆರಂಭಿಸಿರುವ ಮಗುವನ್ನು ನೋಡಿ. ಬೀಳುತ್ತೇನೆ ಎಂದು ಅದು ಸುಮ್ಮನೆ ಕೂಡುವುದಿಲ್ಲ. ಬಿದ್ದ ಮರುಕ್ಷಣವೇ ಮತ್ತೆ ಅದೇ ಉತ್ಸಾಹದಿಂದ ಎದ್ದು ನಡೆಯಲು ಆರಂಭಿಸುತ್ತದೆ.ಮಗುವನ್ನು ನೋಡಿ ಕಲಿಯಿರಿ. ಒಮ್ಮಮ್ಮೆ ನಾವು ಮತ್ತೆ, ಮತ್ತೆ ಮೇಲಕ್ಕೆ ಏರಲೆಂದೇ ಕೆಳಕ್ಕೆ ಬೀಳುತ್ತೇವೆ. ಮಾಡುವ ಪ್ರತಿ ಕೆಲಸದಲ್ಲಿ ಆಸಕ್ತಿ, ಉತ್ಸಾಹ ಬೆಳೆಸಿಕೊಳ್ಳಿ. ಎಲ್ಲರನ್ನೂ ಪ್ರೀತಿಸುವ ಒಳ್ಳೆಯತನ, ಬುದ್ಧಿಮತ್ತೆಯನ್ನು ಹೊಂದಿದ ಉದಾರ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಳ್ಳಿ. ಏಸು ಹೇಳಿದಂತೆ ಹೊಸ ಹೃದಯ ಹಾಗೂ ಚೈತನ್ಯದೊಂದಿಗೆ ಹೊಸ ವ್ಯಕ್ತಿಯಾಗಿ.ಸಂತರು ಹೇಳಿದ ಈ ಮಾತನ್ನು ನೆನಪಿಟ್ಟುಕೊಳ್ಳಿ. ನೀವು ಯಾರ ಕುರಿತಾದರೂ ದೂರಿದಾಗ, ಸ್ಪರ್ಧೆಗೆ ಹೊರಟಾಗ, ಸಿನಿಕರಂತೆ ವರ್ತಿಸಿದಾಗ ನಿಮ್ಮ ತಿಳಿವಳಿಕೆಯಿಂದ ಹೀಗೆ ಮಾಡುತ್ತಿಲ್ಲ, ನಿಮಗಿರುವ ಅಜ್ಞಾನದಿಂದ ಹೀಗೆ ವರ್ತಿಸುತ್ತೀರಿ. ನಿಮ್ಮಳಗಿನ ಅತೃಪ್ತಿ, ಅರ್ಥಪೂರ್ಣ ಸಂಗತಿಗಳಿಗಾಗಿ ಹಾತೊರೆಯುತ್ತಿರುವ ಮನಸ್ಸು ಹೀಗೆ ಮಾಡಿಸುತ್ತದೆ.ಅಂತಹ ಭಾವನೆ ನಿಮ್ಮಳಗೆ ಹುಟ್ಟಿದ ತಕ್ಷಣ ಪ್ರಜ್ಞಾಪೂರ್ವಕವಾಗಿ ಪ್ರಶ್ನಿಸಿಕೊಳ್ಳಿ. ನಾನು ಯಾವುದಕ್ಕಾಗಿ ಹುಡುಕಾಟ ನಡೆಸಿದ್ದೇನೆ ಎಂದು ಕೇಳಿಕೊಳ್ಳಿ. ನಿಮ್ಮ ಉಸಿರಿನಲ್ಲಿ ಎಲ್ಲದಕ್ಕೂ ಉತ್ತರ ಅಡಗಿರುತ್ತದೆ. ಇಂತಹ ಪ್ರಶ್ನೆಗಳನ್ನು ಕೇಳಿಕೊಂಡ ಬಳಿಕ ಪ್ರಜ್ಞಾಪೂರ್ವಕವಾಗಿ ಉಸಿರಾಟ ನಡೆಸಿ. ನಿಮ್ಮ ಗೊಣಗಾಟ, ಸಿನಿಕತನ, ಮತ್ತೊಬ್ಬರಿಗಿಂತ ಮೇಲಕ್ಕೆ ಏರಬೇಕು ಎಂಬ ಹಪಾಹಪಿ ಎಲ್ಲವೂ ಸತ್ತುಹೋಗುತ್ತದೆ. ಹಾಗೆಯೇ ಉತ್ತರಕ್ಕಾಗಿ ತಡಕಾಡಬೇಡಿ. ಕ್ರಮಬದ್ಧ ಉಸಿರಾಟದಿಂದ ಸಂತಸದ ಅಲೆ ತಂಗಾಳಿಯಂತೆ ನಿಮ್ಮನ್ನು ಸೋಕಿದಲ್ಲಿ ಅದನ್ನು ಅನುಭವಿಸಿ.ನೀವು ಅಂದರೆ ಸಂತಸ ಎಂಬುದನ್ನು ಅರಿತುಕೊಳ್ಳಿ. ನಿಮ್ಮ ಉಸಿರಾಟವೇ ಪ್ರಾಣದ ಹರಿವಿಗೆ, ಈ ಅನನ್ಯ ಸಂತಸಕ್ಕೆ ರಹದಾರಿ. ದಿನಗಳು, ವಾರಗಳು ಉರುಳಿದಂತೆ ನೀವು ಮತ್ತಷ್ಟು ಸಂತಸ, ಘನತೆಯಿಂದ ಎರಡು ಜಗತ್ತುಗಳಲ್ಲಿ ಬದುಕತೊಡಗುತ್ತೀರಿ. ಒಂದು, ಪರಿಶುದ್ಧ ಸಂತಸದ ಜಗತ್ತು. ಮತ್ತೊಂದು ಲೌಕಿಕ ಜಗತ್ತು. ಆಗ ನಿಮಗೆ ಬದುಕಿನ ಅರ್ಥ ಹೊಳೆಯುತ್ತದೆ. ಮನಸ್ಸು, ಹೃದಯ ಮತ್ತಷ್ಟು ವಿಶಾಲವಾಗುತ್ತವೆ. ನಿಮ್ಮ ದೇಹವೂ  ಆರೋಗ್ಯದಿಂದ ನಳನಳಿಸುತ್ತದೆ.

ಪ್ರತಿಕ್ರಿಯಿಸಿ (+)