ಉಸಿರುಗಟ್ಟಿಸಿ ಒಂಟಿ ವೃದ್ಧೆಯ ಕೊಲೆ

7

ಉಸಿರುಗಟ್ಟಿಸಿ ಒಂಟಿ ವೃದ್ಧೆಯ ಕೊಲೆ

Published:
Updated:
ಉಸಿರುಗಟ್ಟಿಸಿ ಒಂಟಿ ವೃದ್ಧೆಯ ಕೊಲೆ

ಬೆಂಗಳೂರು: ದುಷ್ಕರ್ಮಿಗಳು ವೃದ್ಧೆಯ ಕೈ ಕಾಲು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ವಿಜಯನಗರ ಸಮೀಪದ ಆರ್‌ಪಿಸಿ ಲೇಔಟ್‌ನಲ್ಲಿ ಭಾನುವಾರ ನಡೆದಿದೆ.

ಆರ್‌ಪಿಸಿ ಲೇಔಟ್‌ನ ಸರ್ವಿಸ್ ರಸ್ತೆ ನಿವಾಸಿ ಪ್ರೇಮಾ ನಾಯ್ಡು (81) ಕೊಲೆಯಾದವರು. ಅವರ ಪತಿ ವೇಣುಗೋಪಾಲನಾಯ್ಡು ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವೇಣುಗೋಪಾಲನಾಯ್ಡು, ಒಂಬತ್ತು ವರ್ಷಗಳ ಹಿಂದೆ ಮೃತಪಟ್ಟಿದ್ದರು. ದಂಪತಿಗೆ ಮಕ್ಕಳಿರಲಿಲ್ಲ.

ದುಷ್ಕರ್ಮಿಗಳು ಭಾನುವಾರ ಸಂಜೆ ಪ್ರೇಮಾ ಅವರ ಮನೆಗೆ ಬಂದು ಕೈ ಕಾಲುಗಳನ್ನು ಕಟ್ಟಿ ಹಾಕಿ ಮತ್ತು ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಅವರ ಮನೆಯ ಕೆಲಸದ ಮಹಿಳೆ ಗೌರಮ್ಮ ಅವರು ಸೋಮವಾರ ಬೆಳಿಗ್ಗೆ ಕೆಲಸಕ್ಕೆ ಬಂದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

`ಪ್ರೇಮಾ ಅವರು ತಮ್ಮ ತಂಗಿಯ ಮಗ ಸತೀಶ್ ಎಂಬುವರನ್ನು ದತ್ತು ತೆಗೆದುಕೊಂಡಿದ್ದರು. ಮದುವೆಯ ನಂತರ ಸತೀಶ್ ಪತ್ನಿಯ ಜತೆ ಗಿರಿನಗರದಲ್ಲಿ ವಾಸವಿದ್ದಾರೆ. ಮನೆಯಲ್ಲಿ ಪ್ರೇಮಾ ಅವರೊಬ್ಬರೇ ವಾಸವಿದ್ದರು. ಹತ್ತಿರದ ಸಂಬಂಧಿ ಮುರಳಿ ಮತ್ತು ಕುಟುಂಬದವರು ಅವರ ಮನೆಯ ಹಿಂಭಾಗದ ಮನೆಯಲ್ಲಿ (ಔಟ್ ಹೌಸ್) ನೆಲೆಸಿದ್ದಾರೆ. ಸೋಮವಾರ ಬೆಳಿಗ್ಗೆ ಪ್ರೇಮಾ ಅವರ ಸಾವಿನ ವಿಷಯ ತಿಳಿದಾಗ, ಅವರಿಗೆ ಎಂಬತ್ತು ವರ್ಷ ದಾಟಿದ್ದರಿಂದ ಸ್ವಾಭಾವಿಕವಾಗಿ ಮೃತಪಟ್ಟಿರಬಹುದು ಎಂದುಕೊಂಡೆ. ಆದರೆ, ಮನೆಗೆ ಹೋಗಿ ನೋಡಿದಾಗ ಕೊಲೆಯಾಗಿರುವುದು ಗೊತ್ತಾಯಿತು~ ಎಂದು ಪ್ರೇಮಾ ಅವರ ಸಂಬಂಧಿಕ ಮತ್ತು ಹೈಕೋರ್ಟ್ ಭದ್ರತಾ ವಿಭಾಗದ ಎಸಿಪಿ ಕೆ.ರಮೇಶ್‌ಬಾಬು `ಪ್ರಜಾವಾಣಿ~ಗೆ ತಿಳಿಸಿದರು.

`ಭಾನುವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಪ್ರೇಮಾ ಅವರ ಮನೆಯ ದೀಪ ಆರಿತ್ತು. ಅವರು ಮಲಗಿರಬಹುದು ಎಂದುಕೊಂಡಿದ್ದೆವು. ಅವರ ಮನೆಯ ಕೆಲಸದಾಕೆ ಗೌರಮ್ಮ, ಪ್ರತಿನಿತ್ಯದಂತೆ ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಕೆಲಸಕ್ಕೆ ಬಂದರು. ಅವರು ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದರಿಂದ ಅನುಮಾನಗೊಂಡು ಗೌರಮ್ಮ ನನಗೆ ವಿಷಯ ತಿಳಿಸಿದರು. ಕೂಡಲೇ ಮನೆಯ ಕಿಟಕಿ ಬಳಿ ಹೋಗಿ ನೋಡಿದಾಗ ಪ್ರೇಮಾ ಅವರು ನಡುಮನೆಯಲ್ಲಿ ಬಿದ್ದಿರುವುದು ಗೊತ್ತಾಯಿತು. ನಂತರ ರಮೇಶ್‌ಬಾಬು ಅವರು ಮೊಬೈಲ್‌ಗೆ ಕರೆ ಮಾಡಿ ವಿಷಯ ತಿಳಿಸಿದೆ~ ಎಂದು ಮುರಳಿ ಹೇಳಿದರು.

ಪರಿಚಿತರಿಂದಲೇ ಕೃತ್ಯ: `ದುಷ್ಕರ್ಮಿಗಳು ಬಲವಂತವಾಗಿ ಬಾಗಿಲು ತೆರೆಸಿ ಮನೆಯೊಳಗೆ ಹೋಗಿಲ್ಲ. ಆದ್ದರಿಂದ ಪರಿಚಿತ ವ್ಯಕ್ತಿಗಳೇ ಈ ಕೃತ್ಯ ಎಸಗಿರುವ ಶಂಕೆ ಇದೆ. ಪ್ರೇಮಾ ಅವರ ಚಿನ್ನದ ಸರ ಮತ್ತು ಬಳೆಯನ್ನು ದುಷ್ಕರ್ಮಿಗಳು ತೆಗೆದುಕೊಂಡು ಹೋಗಿದ್ದಾರೆ ಎಂದು ಸಂಬಂಧಿಕರು ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ. ಅವರ ಮನೆಯ ಅಲ್ಮೇರಾದ ಬಾಗಿಲು ತೆರೆದು ನೋಡಿರುವ ದುಷ್ಕರ್ಮಿಗಳು, ಅದರಲ್ಲಿದ್ದ ಚಿನ್ನದ 12 ಬಳೆಗಳು ಹಾಗೂ 50 ಸಾವಿರ ರೂಪಾಯಿ ಹಣವನ್ನು ತೆಗೆದುಕೊಂಡು ಹೋಗಿಲ್ಲ~ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ಧರಾಮಪ್ಪ ತಿಳಿಸಿದರು.

ಆಸ್ತಿ ವಿವಾದ ಕಾರಣ: `ಆರ್‌ಪಿಸಿ ಲೇಔಟ್‌ನ ಬಂಟರ ಸಂಘದ ಸಮೀಪ ಇರುವ ಪ್ರೇಮಾ ಅವರ ಮನೆಯ ಮಾರುಕಟ್ಟೆ ಮೌಲ್ಯ ಸುಮಾರು ಏಳೆಂಟು ಕೋಟಿ ರೂಪಾಯಿ ಆಗುತ್ತದೆ. ಅವರು ಆ ಮನೆಯನ್ನು, ದತ್ತು ಪುತ್ರ ಸತೀಶ್ ಹೆಸರಿಗೆ ಉಯಿಲು (ವಿಲ್) ಬರೆದಿದ್ದರು. ಸತೀಶ್ ಬದುಕಿರುವಷ್ಟು ದಿನ ಮನೆ ಆತನ ಸುಪರ್ದಿನಲ್ಲಿರುತ್ತದೆ. ಆ ನಂತರ ಆಸ್ತಿಯು ಬಸವನಗುಡಿಯ ರಾಮಕೃಷ್ಣ ಆಶ್ರಮಕ್ಕೆ ಸೇರುತ್ತದೆ ಎಂದು ಉಯಿಲಿನಲ್ಲಿ ತಿಳಿಸಿದ್ದರು. ಈ ವಿಷಯವಾಗಿ ಅಸಮಾಧಾನಗೊಂಡಿದ್ದ ಸಂಬಂಧಿಕರೇ, ಅವರನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಅಲ್ಲದೇ, ಅಲ್ಮೇರಾದಲ್ಲಿದ್ದ ಮನೆಯ ದಾಖಲೆ ಪತ್ರಗಳು ಸಹ ಕಾಣೆಯಾಗಿವೆ~ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯ ಮುದ್ದಿನ ಬೇಬಿ

`ಪ್ರೇಮಾ ಅವರನ್ನು ಮನೆಯಲ್ಲಿ ಬೇಬಿ ಎಂದೇ ಕರೆಯುತ್ತಿದ್ದೆವು. ಅವರು ಎಂಬತ್ತು ವರ್ಷ ದಾಟಿದ್ದರೂ ಮನೆ ಮಂದಿಗೆಲ್ಲಾ ಬೇಬಿಯೇ ಆಗಿದ್ದರು~ ಎಂದು ಎಸಿಪಿ ಕೆ.ರಮೇಶ್‌ಬಾಬು ತಿಳಿಸಿದ್ದಾರೆ.

`ಅವರು ಒಂಟಿಯಾಗಿದ್ದರೂ ಧೈರ್ಯವಂತೆಯಾಗಿದ್ದರು. ಪತಿಯ ಮರಣಾನಂತರ ಒಂಟಿಯಾಗಿ ಬದುಕಲು ಅವರು ಹೆಚ್ಚು ಇಷ್ಟಪಡುತ್ತಿದ್ದರು~ ಎಂದು ಅವರು ಹೇಳಿದ್ದಾರೆ.

ಪ್ರೇಮಾ ಅವರ ತಂದೆ ಮೇಜರ್ ಪಿ.ಎಂ.ಕನ್ನಯ್ಯ ಅವರು ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‌ನಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ಅವರು ಬಳೇಪೇಟೆಯ ರಂಗಸ್ವಾಮಿ ದೇವಾಲಯ ರಸ್ತೆಯಲ್ಲಿ ವಾಸವಿದ್ದರು. ಕೆನಡಾದ ಟೊರಂಟೊದಲ್ಲಿ ಆಟೊಮೊಬೈಲ್ ಎಂಜಿನಿಯರ್ ಆಗಿದ್ದ ವೇಣುಗೋಪಾಲನಾಯ್ಡು ಅವರೊಂದಿಗೆ ಪ್ರೇಮಾ ಅವರ ವಿವಾಹವಾಗಿತ್ತು. ಆ ನಂತರ ಅವರು ಕೆಲ ಕಾಲ ಪತಿಯೊಂದಿಗೆ ಕೆನಡಾದಲ್ಲಿ ವಾಸವಿದ್ದರು.

ಭಾರತಕ್ಕೆ ಹಿಂದಿರುಗಿದ ನಂತರ ವೇಣುಗೋಪಾಲನಾಯ್ಡು ಅವರು ಸಾರಿಗೆ ಇಲಾಖೆಯಲ್ಲಿ ಸೇವೆಗೆ ಸೇರಿದ್ದರು.

ಪ್ರೇಮಾ ಅವರು ಯೌವನದ ದಿನಗಳಲ್ಲಿ ಕರ್ನಾಟಕ ಸಂಗೀತ ಪ್ರಕಾರದ ಗಾಯಕಿಯಾಗಿದ್ದರು. ಇಳಿವಯಸ್ಸಿನಲ್ಲಿ ಅಧ್ಯಾತ್ಮದ ಕಡೆಗೆ ಒಲವು ಹೊಂದಿದ್ದ ಅವರು ರಾಮಕೃಷ್ಣ ಆಶ್ರಮದ ಭಕ್ತೆಯಾಗಿದ್ದರು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry