ಬುಧವಾರ, ನವೆಂಬರ್ 20, 2019
21 °C
ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿವಾದ

ಉಸ್ತುವಾರಿ ಮುಂದೆ ವಾಗ್ವಾದ, ತಳ್ಳಾಟ

Published:
Updated:

ಕೋಲಾರ: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿವಾದ ಜಿಲ್ಲೆಯಲ್ಲಿ ತೀವ್ರಗೊಂಡಿದೆ. ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ ಕೇಂದ್ರ ಕಾರ್ಮಿಕ ಖಾತೆಯ ರಾಜ್ಯ ಸಚಿವ ಕೊಡಿಕುನ್ನಿ ಸುರೇಶ್ ಅವರ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ವಾಗ್ವಾದ, ತಳ್ಳಾಟ ನಡೆಸಿದ ಘಟನೆ ಯುಗಾದಿಯ ದಿನವಾದ ಗುರುವಾರ ಕೋಲಾರ, ಮಾಲೂರು, ಕೆಜಿಎಫ್ ಮತ್ತು ಮುಳಬಾಗಲಿನಲ್ಲಿ ನಡೆದಿದೆ. ಸ್ಥಳೀಯರಿಗೆ, ತಾವು ಹೇಳಿದವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ ಕಾರ್ಯಕರ್ತರ ವರ್ತನೆಗೆ ಬೇಸರಗೊಂಡ ಸಚಿವರು ಕೆಲವರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ಇದೇ ವೇಳೆ ನಡೆದಿದೆ.ಮುಳಬಾಗಲು ವರದಿ: ಅಕ್ರಮವಾಗಿ ಜಮೀನು ಮಾರಾಟ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಶಾಸಕ ಅಮರೇಶ್ ಅವರ ಪರವಾದ ಗುಂಪು ಮತ್ತು ಆವಣಿ ಮತ್ತು ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ.ರಾಮಲಿಂಗಾರೆಡ್ಡಿ, ಷಹಬಾಜ್‌ಖಾನ್ ಪರವಾದ ಗುಂಪುಗಳು ಸುರೇಶ್ ಅವರ ಮುಂದ ಪರಸ್ಪರ ಕಿತ್ತಾಟಕ್ಕೂ ಮುಂದಾದರು. ಪರಸ್ಪರ ಬೈಗುಳದಲ್ಲಿ ತೊಡಗಿದ್ದ ಗುಂಪುಗಳನ್ನು ನೋಡಿ ಬೇಸರವಾದ ಅವರು, ತಾವು ಯಾರಿಗೇ ಆಗಲಿ ಟೆಕೆಟ್ ನೀಡಲು ಅಥವಾ ನೀಡದಿರಲು ಇಲ್ಲಿಗೆ ಬಂದಿಲ್ಲ. ಹೈಕಮಾಂಡ್ ಸೂಚಿಸಿದವರ ಪರವಾಗಿ ಕೆಲಸ ಮಾಡುವಂತೆ ಸೂಚಿಸಲು ಬಂದಿರುವುದಾಗಿ ಪದೇಪದೇ ಹೇಳಿದರು.

ಆದರೂ ಕಾರ್ಯಕರ್ತರು ಅವರ ಮಾತನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಸುರೇಶ್ ಹೆಚ್ಚು ಸಮಯ ಅಲ್ಲಿ ನಿಲ್ಲದೆ ನಿರ್ಗಮಿಸಿದರು.ಕೆಜಿಎಫ್ ವರದಿ: ಸಚಿವ ಕೊಡಿಕುನ್ನಿ ಸುರೇಶ್ ಕಾರ್ಯಕರ್ತರ ಅಭಿಪ್ರಾಯ ಪಡೆದು ಹೈಕಮಾಂಡಿಗೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಮೂರು ಗುಂಪುಗಳು ಪ್ರತ್ಯೇಕವಾಗಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ತಮ್ಮ ನಾಯಕರ ಪರವಾಗಿ ಜೈಕಾರವನ್ನೂ ಹಾಕುತ್ತಿದ್ದರು.

ಅದಕ್ಕೆ ಆಕ್ಷೇಪಿಸಿದ ಅವರು, ತಮಗೂ ಸೇರಿದಂತೆ ಯಾರಿಗೂ ಜೈಕಾರ ಹಾಕುವ ಅಗತ್ಯವಿಲ್ಲ. ನಾನಿಲ್ಲಿ ಉಸ್ತುವಾರಿಯಾಗಿ ಕೆಲಸ ಮಾಡಲು ಬಂದಿರುವೆ. ಎಲ್ಲರ ಸಹಕಾರ ಬೇಕಷ್ಟೆ ಎಂದು ಖಾರವಾಗಿ ಹೇಳಿದರು.ಮಾಲೂರು ವರದಿ: ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಕಾಂಗ್ರೆಸ್ ಮುಖಂಡ ಸಿ.ಪಿ.ವೆಂಕಟೇಶ್ ಮನೆಗೆ ಭೇಟಿ ನೀಡುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯರ್ತರು ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ ಘಟನೆ ನಡೆಯಿತು. ಆಗ ಸುರೇಶ್, ಇಂಥವರಿಗೇ ಟಿಕೆಟ್ ನೀಡಬೇಕು ಎಂದು ಆಗ್ರಹಿಸುವಂತಿಲ್ಲ. ಆದರೆ ಕ್ಷೇತ್ರದ ಪರಿಸ್ಥಿಯನ್ನು ವರಿಷ್ಠರಿಗೆ ಮನವರಿಕೆ ಮಾಡಲಾಗುವುದು. ಜಿಲ್ಲಾ ಕಾಂಗ್ರೆಸ್ ಸಂಕಷ್ಟದಲ್ಲಿದೆ. ಅದನ್ನು ಬಲಪಡಿಸಲು ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೋ ಅವರ ಪರವಾಗಿ ಪ್ರತಿಯೊಬ್ಬರೂ ದುಡಿಯಬೇಕು ಎಂದು ಸೂಚಿಸಿದರು.

ಪ್ರತಿಕ್ರಿಯಿಸಿ (+)