ಉಸ್ತುವಾರಿ ಸಚಿವರಿಂದ ಪರಿಶೀಲನೆ

7

ಉಸ್ತುವಾರಿ ಸಚಿವರಿಂದ ಪರಿಶೀಲನೆ

Published:
Updated:
ಉಸ್ತುವಾರಿ ಸಚಿವರಿಂದ ಪರಿಶೀಲನೆ

ಬೀದರ್: ನಗರದಲ್ಲಿ ಏಪ್ರಿಲ್ 22 ರಿಂದ 25 ರವರೆಗೆ ನಡೆಯಲಿರುವ ಅಖಿಲ ಭಾರತ ಜಾನಪದ ಸಮ್ಮೇಳನದ ಸಿದ್ಧತೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ರೇವು ನಾಯಕ್ ಬೆಳಮಗಿ ಗುರುವಾರ ಪರಿಶೀಲಿಸಿದರು.ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಇಂಥ ಸಮ್ಮೇಳನ ನಡೆಯುತ್ತಿದ್ದು, ಅಚ್ಚುಕಟ್ಟಾಗಿ ನಡೆಯಲು ಎಲ್ಲರೂ ಸಹಕರಿಸಬೇಕು. ಸಮ್ಮೇಳನದ ಯಶಸ್ಸಿನಿಂದ ಜಿಲ್ಲೆಗೆ ಮಾತ್ರವಲ್ಲದೇ ರಾಜ್ಯಕ್ಕೂ ಕೀರ್ತಿ ಬರುತ್ತದೆ. ನಶಿಸುತ್ತಿರುವ ಜಾನಪದ ಸಂಸ್ಕತಿಯನ್ನು ಕಾಪಾಡಲು ಸಮ್ಮೇಳನ ಪೂರಕವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಸಮ್ಮೇಳನದ ಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅವರು ಮಾಹಿತಿ ನೀಡಿದರು. ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡಲು ಸ್ಥಳೀಯ ಕಲಾವಿದರಿಗೂ ಅವಕಾಶ ನೀಡಲಾಗುವುದು. ತಾಲ್ಲೂಕು ಮಟ್ಟದಲ್ಲಿ ಸ್ಫರ್ಧೆಗಳನ್ನು ಆಯೋಜಿಸಿ ತಂಡಗಳನ್ನು ಆಯ್ಕೆ ಮಾಡಲಾಗುವುದು. ಜಿಲ್ಲೆಯ ಹೊರಗಿನಿಂದ ಬರುವ ಕಲಾವಿದರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗುವುದು. ಬೀದರ್ ಮೆಡಿಕಲ್ ಕಾಲೇಜು ಹಾಸ್ಟೆಲ್‌ನಲ್ಲಿ ಸುಮಾರು 3 ಸಾವಿರ ಕಲಾವಿದರಿಗೆ ತಂಗುವ ವ್ಯವಸ್ಥೆ ಮಾಡಬಹುದಾಗಿದೆ. ಮಧ್ಯಾಹ್ನ ಗೋಷ್ಠಿಗಳಲ್ಲಿ ಭಾಗವಹಿಸುವವರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಸಮ್ಮೇಳನದ ಸಂದರ್ಭದಲ್ಲಿ ನಗರದ ಹೊಟೇಲ್‌ಗಳಲ್ಲಿ ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಮಾತನಾಡಿ, ಸಮ್ಮೇಳನದ ಯಶಸ್ವಿ ಆಯೋಜನೆಗೆ ಎಲ್ಲರ ಸಹಕಾರ ಅಗತ್ಯ. ಹೊರಗಿನಿಂದ ಬರುವವರಿಗೆ ಎಲ್ಲರೂ ಉತ್ತಮ ಆತಿಥ್ಯ ಒದಗಿಸಬೇಕಾಗಿದೆ. ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ಉತ್ಸವದ ಸಂದರ್ಭದಲ್ಲಿ ಬೀದರ್‌ನಲ್ಲಿ ಎರಡು ದಿನಗಳ ಕಾಲ ವಿಶೇಷ ಜಾನಪದ ಜಾತ್ರೆ ಆಯೋಜಿಸಲು ನಿರ್ಧರಿಸಲಾಗಿದೆ. ಇದು ಸಮ್ಮೇಳನಕ್ಕೆ ವಿಶೇಷ ಮೆರುಗು ನೀಡಲಿದೆ ಎಂದು ತಿಳಿಸಿದರು.ಪುಸ್ತಕ ಮಳಿಗೆ ಹಾಗೂ ವಸ್ತು ಪ್ರದರ್ಶನ ಮಳಿಗೆಗಳನ್ನು ಹಾಕಲಾಗುವುದು ಎಂದು ಹೇಳಿದರು.ಸಮ್ಮೇಳನದ ಸ್ಮರಣಾರ್ಥ ಸ್ಮರಣ ಸಂಚಿಕೆ ಹಾಗೂ ಜಾನಪದಕ್ಕೆ ಸಂಬಂಧಿಸಿದ 8 ಕೃತಿಗಳನ್ನು ಹೊರತರಲು ನಿರ್ಧರಿಸಲಾಗಿದೆ. ಸಮ್ಮೇಳನದ ನೆನಪಿಗಾಗಿ ಈ ಭಾಗದಲ್ಲಿ ಜಾನಪದ ಅಧ್ಯಯನ ಕೇಂದ್ರ ಸ್ಥಾಪಿಸುವ ಆಶಯ ವ್ಯಕ್ತಪಡಿಸಿದರು.ಸಮ್ಮೇಳನಕ್ಕೆ 90 ಲಕ್ಷ ರೂಪಾಯಿ ಖರ್ಚು ಬರಲಿದೆ. ಈಗಾಗಲೇ ರಾಜ್ಯ ಸರ್ಕಾರದಿಂದ 25 ಲಕ್ಷ ಹಾಗೂ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ 10 ಲಕ್ಷ ರೂಪಾಯಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.ಬಾಬು ಜಗಜೀವನರಾಂ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೇಂದ್ರ ವರ್ಮಾ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಕುಶಾಲ ಪಾಟೀಲ್ ಗಾದಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಸತೀಶಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿತೇಂದ್ರ ನಾಯಕ್, ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry