ಉಸ್ತುವಾರಿ ಸಚಿವರು ದೂರ.. ದೂರ...

ಬುಧವಾರ, ಜೂಲೈ 17, 2019
30 °C

ಉಸ್ತುವಾರಿ ಸಚಿವರು ದೂರ.. ದೂರ...

Published:
Updated:

ತುಮಕೂರು: ಜಿಲ್ಲೆಗೆ ಸರಿಯಾದ `ಉಸ್ತುವಾರಿ~ ಇಲ್ಲದೆ ಹೆಚ್ಚು ಕಡಿಮೆ ವರ್ಷ ಕಳೆದಿದೆ. ವಸತಿ ಸಚಿವ ವಿ.ಸೋಮಣ್ಣ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ. ಆದರೆ ಇಲ್ಲಿಗೆ ಬಂದು ಸಮಸ್ಯೆ ಕೇಳದೆ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಒಮ್ಮೆ ಜಿಲ್ಲಾ ಪಂಚಾಯತಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಇದು ಅಧಿಕಾರಿಗಳನ್ನು ಪರಿಚಯಿಸಿಕೊಳ್ಳುವ ಸಭೆ, ಮುಂದಿನ ತಿಂಗಳು ಬಂದು ಪ್ರಗತಿ ಪರಿಶೀಲನೆ ನಡೆಸಿ ಅಭಿವೃದ್ಧಿ ಕಾರ್ಯಗಳಿಗೆ ಚುರುಕುಮುಟ್ಟಿಸಲಾಗುವುದು ಎಂದು ಹೇಳಿಹೋಗಿ ಏಳೆಂಟು ತಿಂಗಳು ಕಳೆದಿದೆ. ಕೊನೆಗೆ ಏಪ್ರಿಲ್ 11ರಂದು ಪ್ರಗತಿ ಪರಿಶೀಲನೆ ನಡೆಸುವುದಾಗಿ ಹೇಳಿ ಎರಡು ತಿಂಗಳು ಕಳೆದರೂ ಸಚಿವರು ಇತ್ತ ಮುಖಮಾಡಿಲ್ಲ.ಪದೇ-ಪದೇ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡುತ್ತಿರುವುದು ಸಮಸ್ಯೆಗೆ ಮೂಲ ಕಾರಣ. ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಅವರನ್ನು ಜಿಲ್ಲಾ ಉಸ್ತುವಾರಿಯಿಂದ ಕೈಬಿಡಲಾಯಿತು. ನಂತರ ಶೋಭಾ ಕರಂದ್ಲಾಜೆ ಅವರಿಗೆ ಜಿಲ್ಲಾ ಉಸ್ತುವಾರಿ ವಹಿಸಲಾಯಿತು. ಶೋಭಾ ಸಿದ್ದಗಂಗಾ ಮಠಕ್ಕೆ ಬಂದು ಸ್ವಾಮೀಜಿ ಆಶೀರ್ವಾದ ಪಡೆದು ಜಿಲ್ಲೆಯ ಉಸ್ತುವಾರಿಯಿಂದ ದೂರ ಉಳಿಯುವುದಾಗಿ ಹೇಳಿದರು. ನಂತರ ವಿ.ಸೋಮಣ್ಣ ಅವರಿಗೆ ಜವಾಬ್ದಾರಿ ನೀಡಲಾಯಿತು. ತುಮಕೂರು ಜಿಲ್ಲೆಯ ಜತೆಗೆ ಹಾಸನ ಜಿಲ್ಲೆಯ ಜವಾಬ್ದಾರಿಯನ್ನೂ ವಹಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಶಿವಕುಮಾರ ಸ್ವಾಮೀಜಿ ಆಶೀರ್ವಾದ ಪಡೆದರು. ಜಿಲ್ಲಾ ಪಂಚಾಯತಿಗೆ ಬಂದು ಅಧಿಕಾರಿಗಳನ್ನು ಪರಿಚಯಿಸಿಕೊಂಡು ತೆರಳಿದವರು ಈವರೆಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿಲ್ಲ. ಪ್ರಗತಿ ಪರಿಶೀಲನೆ ನಡೆಸಿ ಅಭಿವೃದ್ಧಿಗೆ ಚುರುಕು ಮುಟ್ಟಿಸುವ ಪ್ರಯತ್ನವಂತೂ ನಡೆದಿಲ್ಲ.ಸಿದ್ದಗಂಗಾ ಮಠಕ್ಕೆ ಸಾಕಷ್ಟು ಬಾರಿ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದಿದ್ದಾರೆ. ಪಾವಗಡಕ್ಕೆ ಭೇಟಿನೀಡಿ ಪ್ರಗತಿ ಪರಿಶೀಲನೆ ನಡೆಸಿ, ಗುಡಿಸಲು ರಹಿತ ತಾಲ್ಲೂಕು ಮಾಡುವುದಾಗಿ ಭರವಸೆ ನೀಡಿದ್ದಾರೆ.

 

ಕುಣಿಗಲ್ ಮಾರ್ಗವಾಗಿ ತಿಪಟೂರಿಗೂ ಹಲವು ಬಾರಿ ಭೇಟಿಕೊಟ್ಟಿದ್ದಾರೆ. ಹಾಸನ ಜಿಲ್ಲೆಗೆ ಕುಣಿಗಲ್ ಮಾರ್ಗದಲ್ಲೇ ತೆರಳುತ್ತಾರೆ. ವಿಧಾನಸೌಧದಲ್ಲಿ ಕುಳಿತು ಪಾವಗಡದ ಪ್ರಗತಿ ಚರ್ಚೆಯಾಗುತ್ತದೆ. ಆದರೆ ಜಿಲ್ಲಾ ಕೇಂದ್ರವಾದ ತುಮಕೂರು ನಗರಕ್ಕೆ ಮಾತ್ರ ಕಾಲಿಡುತ್ತಿಲ್ಲ. ಮಠಕ್ಕೆ ಬಂದವರು ನಗರದ ವರೆಗೂ ಹೆಜ್ಜೆ ಹಾಕಿಲ್ಲ. ಸಚಿವರು ಜಿಲ್ಲಾ ಕೇಂದ್ರಕ್ಕೆ ಬರದಿರುವುದು ಚರ್ಚೆಗೆ ಗ್ರಾಸವಾಗಿದೆ, ಜತೆಗೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಯಾರ ಭಯದಿಂದ ಇಲ್ಲಿಗೆ ಬರುತ್ತಿಲ್ಲ ಎಂಬುದು ಹಲವರ ಪ್ರಶ್ನೆಯಾಗಿದೆ.ತಾಲ್ಲೂಕು ಕೇಂದ್ರಗಳಿಗೆ ಭೇಟಿನೀಡುವುದು ಎಷ್ಟು ಮುಖ್ಯವೊ, ಅಭಿವೃದ್ಧಿಯತ್ತ ಸಾಗಲು ಜಿಲ್ಲಾ ಮಟ್ಟದಲ್ಲಿ ಇರುವ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸವೂ ಅಷ್ಟೇ ಮುಖ್ಯ. ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿ, ಇರುವ ಸಮಸ್ಯೆಗಳನ್ನು ಬಗೆಹರಿಸಿ, ಅನುದಾನದ ನೆರವು ಕೊಡಿಸಿ ಪ್ರಗತಿಯತ್ತ ಕೊಂಡೊಯ್ಯುವ ಬಹುತರ ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆ. ಆದರೆ ಒಂದು ವರ್ಷದಿಂದ ಪ್ರಗತಿ ಪರಿಶೀಲನೆ ನಡೆಯದೆ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಂಡಿದೆ. ಇದೇ ಮಾರ್ಗದಲ್ಲಿ ಸಾಗಿದರೆ ಅಭಿವೃದ್ಧಿಯಲ್ಲಿ ಜಿಲ್ಲೆ ಮತ್ತಷ್ಟು ಹಿಂದಕ್ಕೆ ಸರಿಯಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.ಕಳೆದ ಒಂದು ವರ್ಷದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೂರ‌್ನಾಲ್ಕು ಬಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ಮುಖ್ಯ ಕಾರ್ಯದರ್ಶಿ ಒಮ್ಮೆ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ಇಷ್ಟನ್ನು ಬಿಟ್ಟರೆ ಅಭಿವೃದ್ಧಿ ವಿಚಾರದಲ್ಲಿ ಹೆಚ್ಚು ಚರ್ಚೆಗಳು, ಪರಿಶೀಲನೆ ನಡೆದಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳು ಕಾಡುತ್ತಿವೆ, ಅಭಿವೃದ್ಧಿ ಕಾರ್ಯಗಳಿಗೂ ಹಲವು ಸಮಸ್ಯೆಗಳು ಎದುರಾಗಿವೆ. ಅವುಗಳೆಲ್ಲವನ್ನೂ ಸರಿಪಡಿಸಿ ಪ್ರಗತಿಯತ್ತ ಕೊಂಡೊಯ್ಯುವ ಕೆಲಸ ಆಗಬೇಕು. ಎರಡು ಜಿಲ್ಲೆ ಜವಾಬ್ದಾರಿ ನಿರ್ವಹಿಸಲು ಸಚಿವರಿಗೆ ಸಾಧ್ಯವಾಗದಿದ್ದರೆ ಬದಲಿಸಿ ಮತ್ತೊಬ್ಬರನ್ನು ನೇಮಿಸಬೇಕು. ಇಲ್ಲವೆ ಇರುವ ಸಚಿವರಾದರೂ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಆಗಬೇಕು ಎಂಬುದು ಜನರ ಒತ್ತಾಯವಾಗಿದೆ.ಇವರು ಏನಂತಾರೇ ?

ಕೆಲಸ ಜಾಸ್ತಿ

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತುಮಕೂರು, ಹಾಸನ ಎರಡು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಜಿಲ್ಲೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಎರಡು ಜಿಲ್ಲೆ ಉಸ್ತುವಾರಿ ಇರುವುದರಿಂದ ಜಿಲ್ಲೆಗೆ ಭೇಟಿ ನೀಡಲು ಆಗುತ್ತಿಲ್ಲ. ಈ ಬಗ್ಗೆ ಸಚಿವರೊಂದಿಗೆ ಮಾತಾಡಿದ್ದೇನೆ. ಅಧಿಕಾರಿಗಳ ಸಭೆ ನಡೆಸಿ ಎಂದು ಮನವಿ ಮಾಡಿದ್ದೇವೆ. ಜನರ ಅಪೇಕ್ಷೆಗೆ ತಕ್ಕ ಹಾಗೆ ಸಚಿವರು ಬರಬೇಕು.

-ಶಿವಪ್ರಸಾದ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷಸಚಿವರನ್ನು ಬದಲಿಸಬೇಕು

ಸರ್ಕಾರ ಮತ್ತು ಜಿಲ್ಲಾಡಳಿತದ ನಡುವೆ ಸಹಕಾರ ಇಲ್ಲದಂತಾಗಿದೆ. ಉಸ್ತುವಾರಿ ಸಚಿವರು ಕೆಡಿಪಿ ಸಭೆ ನಡೆಸದ ಕಾರಣ ಜಿಲ್ಲಾಡಳಿತ ಕುಸಿದುಬಿದ್ದಿದೆ. ಆದಾಯ ಕೂಡ ಕ್ಷೀಣಿಸಿದೆ. ಅಲ್ಲದೆ ಸಚಿವರ ಮೇಲೆ ಅಕ್ರಮ ಗಣಿಗಾರಿಕೆ ಆರೋಪ ಇರುವುದರಿಂದ ಅವರನ್ನು ಬದಲಿಸಬೇಕು.

-ಷಫೀ ಅಹಮ್ಮದ್, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ

ಉದಾಸೀನ ಏಕೆ?

ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಜಿಲ್ಲೆಯ ಪ್ರಗತಿ, ಸಮಸ್ಯೆಗಳ ಮೇಲೆ ಕಾಳಜಿ ತೋರಬೇಕಾದದ್ದು ಅವರ ಕರ್ತವ್ಯ. ಉದಾಸೀನದಿಂದ ನಡೆದುಕೊಂಡು ಬರುತ್ತಿರುವುದು ಜಿಲ್ಲೆಯ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದೆ. ಇನ್ನಾದರೂ ಅವರು ಕೆಲಸ ಮಾಡಲಿ.

-ನಿಂಗಪ್ಪ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷಮಠದಲ್ಲೆ ಕಾಲ, ಎಲ್ಲಿ ಸಮಯ !

ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ನಗರಕ್ಕೆ ಭೇಟಿ ನೀಡಿದ್ದೆ ಇಲ್ಲ. ಜಿಲ್ಲೆಗೆ ಬಂದರೂ ಸಿದ್ದಗಂಗಾ ಮಠದಲ್ಲೆ ಕಾಲ ಕಳೆಯುತ್ತಾರೆ. ಜನರಿಗೆ ಸಿಗುತ್ತಿಲ್ಲ. ಸಮಸ್ಯೆಗಳಿಗೆ ಸರಿಯಾದ ಸ್ಪಂದನೆ ಇಲ್ಲ. ಅಧಿಕಾರಿಗಳಿಂದ ಕೆಲಸ ತೆಗೆಸುವ ಪ್ರಯತ್ನ ಕೂಡ ನಡೆದಿಲ್ಲ.  ಜಿಲ್ಲೆಯಲ್ಲಿ ಹೆಚ್ಚು ಬಿಜೆಪಿ ಶಾಸಕರನ್ನು ಆಯ್ಕೆಮಾಡಿಲ್ಲ ಎಂದು ತುಮಕೂರಿನ ಜನರ ಜೊತೆ ಸೇಡಿನಿಂದ ವರ್ತಿಸುತ್ತಾ ಇರಬಹುದೆಂಬ ಸಂಶಯ ಮೂಡುತ್ತಿದೆ.  ಮಳೆಗಾಲ ಆರಂಭ ಆಗ್ತಾ ಇದೆ. ರೈತರ ಸಮಸ್ಯೆಗಳಿವೆ. ಆದರೂ ಉಸ್ತುವಾರಿ ಸಚಿವರು ಗಮನ ಹರಿಸುತ್ತಿಲ್ಲ.

-ಸಯ್ಯದ್ ಮುಜೀಬ್, ಸಿಪಿಎಂ ಘಟಕದ ಕಾರ್ಯದರ್ಶಿ

ನಿರ್ಗಮಿಸುವುದು ಸೂಕ್ತ

ಜಿಲ್ಲೆಯಲ್ಲಿ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಸುರೇಶ್‌ಕುಮಾರ್ ಉಸ್ತುವಾರಿ ಇದ್ದಾಗ ಒಂದಿಷ್ಟು ಸಭೆಗಳು ನಡೆಯುತ್ತಿದ್ದವು. ನಾನು ಜಿಲ್ಲಾ ಮಂತ್ರಿಯಾಗಿದ್ದೆ, ಪ್ರತಿದಿನ ಜಿಲ್ಲಾ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೆ. ಮಂಡ್ಯ ಉಸ್ತುವಾರಿ ಸಚಿವನಾಗಿದ್ದಾಗ ವಾರಕ್ಕೆ ಒಂದು ದಿನ ಭೇಟಿ ನೀಡುತ್ತಿದ್ದೆ. ಸಚಿವ ಸೋಮಣ್ಣ ಪುತ್ರರ ಮೇಲೆ ಅಕ್ರಮ ಗಣಿಗಾರಿಕೆ ಆರೋಪವಿದೆ. ಆದ್ದರಿಂದ ಅವರು ಈಗ ಜಿಲ್ಲೆಯಲ್ಲಿ ಮುಂದುವರಿಯುವುದು ಸೂಕ್ತವಲ್ಲ. ರಾಜಕೀಯ ಅಜೆಂಡಾ ಏನೇ ಇರಲಿ. ಜಿಲ್ಲೆ ಬಂದಾಗ ಅಭಿವೃದ್ಧಿಯೇ ಅಜೆಂಡಾ ಆಗಬೇಕು.

- ಟಿ.ಬಿ.ಜಯಚಂದ್ರ, ಶಾಸಕತೃಪ್ತಿ ಇದೆ

ಜಿಲ್ಲೆಯ ಬೇರೆ, ಬೇರೆ ತಾಲ್ಲೂಕುಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರ ಕೆಲಸದ ಬಗ್ಗೆ ತೃಪ್ತಿ ಇದೆ.

-ಎಸ್.ಶಿವಣ್ಣ, ಶಾಸಕ

ಬರಿ ಶೂನ್ಯ

ಏನು ಕೆಲಸ ಮಾಡುತ್ತಿಲ್ಲ. ಅವರನ್ನು ನಾವು ನೋಡೇ ಇಲ್ಲ. ಬದಲಿಸುವುದೇ ವಾಸಿ. ಜಿಲ್ಲೆಯಲ್ಲಿ ಏನಾದ್ರು ಕೆಲಸ ಮಾಡ್ತಾರೆ ಅಂದ್ಕೊಂಡಿದ್ದೆವು. ಜಿಲ್ಲೆಗೆ ಏನು ಆಗಿಲ್ಲ. ಬರೀ ಶೂನ್ಯ. -ರಾಮಕೃಷ್ಣ, ಕೃಷಿಕ,

- ಸಿ.ಎಸ್.ಪುರ

ವಿ.ಸೋಮಣ್ಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry