ಉಸ್ತುವಾರಿ ಸಚಿವರ ಕಚೇರಿಗೆ ರೈತರ ಮುತ್ತಿಗೆ

7

ಉಸ್ತುವಾರಿ ಸಚಿವರ ಕಚೇರಿಗೆ ರೈತರ ಮುತ್ತಿಗೆ

Published:
Updated:

ದಾವಣಗೆರೆ: ನಗರದ ಹೊರವಲಯದ ಕರೂರು ಕೈಗಾರಿಕಾ ಪ್ರದೇಶದಲ್ಲಿ ಜವಳಿ ಪಾರ್ಕ್‌ನ ನಿವೇಶನವನ್ನು ರೈತರಿಗೆ ಹಿಂದಿರುಗಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಸೋಮವಾರ ತೀವ್ರಗೊಂಡಿದ್ದು, ರೈತರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಅವರ ಜನಸಂಪರ್ಕ ಕಚೇರಿಗೆ ಮುತ್ತಿಗೆ ಹಾಕಿದರು.ಬೇಡಿಕೆ ಈಡೇರುವವರೆಗೂ ನಿರಂತರ ಪ್ರತಿಭಟನೆ ನಡೆಸುವುದಾಗಿ ಹೇಳಿದ ರೈತರು, ಜಿಲ್ಲಾಧಿಕಾರಿ ಮನವಿಗೂ ಕಿವಿಗೊಡದೆ ಸಂಜೆವರೆಗೂ ಧರಣಿ ನಡೆಸಿದರು. ಕರೂರಿನ ಕೈಗಾರಿಕಾ ಪ್ರದೇಶದಲ್ಲಿ (ಜಿಲ್ಲಾಧಿಕಾರಿ ನೂತನ ಕಚೇರಿ ಸಮೀಪ) ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರು ಇಂದು ನಗರಕ್ಕೆ ಆಗಮಿಸಿ ಪುಣೆ-ಬೆಂಗಳೂರು ಮಾರ್ಗದಲ್ಲಿ ರಸ್ತೆತಡೆ ಮಾಡಿದರು.ಸರ್ಕಾರ ಕೈಗಾರಿಕಾ ಪ್ರದೇಶದಲ್ಲಿ ಜವಳಿ ಪಾರ್ಕ್‌ಗೆ ಜಮೀನು ಸ್ವಾಧೀನಪಡಿಸಿಕೊಂಡಿದೆ. ಆದರೆ, ಆ ಜಮೀನು ನಿರ್ದಿಷ್ಟ ಉದ್ದೇಶಕ್ಕೆ ಬಳಕೆಯಾಗಿಲ್ಲ. ಅಲ್ಲದೇ, ಕೆಲವು ಪ್ರದೇಶ ಖಾಸಗಿಯವರ ಪಾಲಾಗಿದೆ. ಅತ್ತ ಜಮೀನು ಪಾರ್ಕ್‌ಗೆ ಬಳಕೆಯೂ ಆಗಿಲ್ಲ. ಇತ್ತ ರೈತರಿಗೆ ಸೂಕ್ತ ಪರಿಹಾರವನ್ನೂ ನೀಡಿಲ್ಲ ಎಂದು ಆರೋಪಿಸಿದರು.ಕೂಡಲೇ ಜಮೀನನ್ನು ವಾಪಸ್ ಕೊಡಬೇಕು. ಈಗಾಗಲೇ ಘಟಕ ಆರಂಭಿಸಿರುವ ಪ್ರದೇಶಗಳ ಈ ಹಿಂದಿನ ಭೂಮಾಲೀಕರಿಗೆ ಇಂದಿನ ಮಾರುಕಟ್ಟೆ ದರದ ಪರಿಹಾರ ನೀಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಅವರು, ಈ ಬಗ್ಗೆ ಕೈಗಾರಿಕಾ ಸಚಿವರ ಗಮನಕ್ಕೆ ತಂದು ಮಾತುಕತೆಗೆ ದಿನಾಂಕ ನಿಗದಿಪಡಿಸುವುದಾಗಿ ತಿಳಿಸಿದರು.ದಿನಾಂಕ ನಿಗದಿಪಡಿಸಿದ ಬಗ್ಗೆ ತಮಗೆ ಲಿಖಿತವಾಗಿ ತಿಳಿಸಬೇಕು ಎಂದು ರೈತರು ಪಟ್ಟು ಹಿಡಿದರು.

ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಯಬಿಟ್ಟಿರುವುದನ್ನು ಇನ್ನಾದರೂ ನಿಲ್ಲಿಸಬೇಕು ಎಂದು ಇದೇ ಸಂದರ್ಭ ಒತ್ತಾಯಿಸಿದರು.ರೈತ ಮುಖಂಡರಾದ ತೇಜಸ್ವಿ ಪಟೇಲ್, ಮರಡಿ ನಾಗಪ್ಪ, ಎಚ್. ಓಂಕಾರಪ್ಪ, ಪ್ರಭುಗೌಡ, ನಯಾಜ್, ಪೂಜಾರ್ ಆಂಜಿನಪ್ಪ ನೇತೃತ್ವ ವಹಿಸಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry