ಭಾನುವಾರ, ಮೇ 16, 2021
27 °C
ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ ನೇತೃತ್ವದ ಸಮಿತಿ ನಿರ್ಧಾರ

ಉಸ್ತುವಾರಿ ಸಮಿತಿ ಹಿಡಿತಕ್ಕೆ ಕಾವೇರಿ ಜಲಾಶಯಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸುಪ್ರೀಂಕೋರ್ಟ್ ಆದೇಶದ ಅನ್ವಯ ಅಸ್ತಿತ್ವಕ್ಕೆ ಬಂದಿರುವ ಜಲ ಸಂಪನ್ಮೂಲ ಕಾರ್ಯದರ್ಶಿ ನೇತೃತ್ವದ `ಉಸ್ತುವಾರಿ ಸಮಿತಿ' ರಾಜ್ಯದ ತೀವ್ರ ವಿರೋಧದ ನಡುವೆ ಕಾವೇರಿ ಜಲಾಶಯಗಳನ್ನು ಪರೋಕ್ಷವಾಗಿ ತನ್ನ ಹತೋಟಿಗೆ ತೆಗೆದುಕೊಳ್ಳಲು ಶನಿವಾರ ತೀರ್ಮಾನಿಸಿತು.ಜಲ ಸಂಪನ್ಮೂಲ ಕಾರ್ಯದರ್ಶಿ ಡಾ.ಎಸ್.ಕೆ. ಸರ್ಕಾರ್ ಅಧ್ಯಕ್ಷತೆಯಲ್ಲಿ ಸೇರಿದ್ದ ಉಸ್ತುವಾರಿ ಸಮಿತಿಯ ಮೊದಲ ಸಭೆಯಲ್ಲಿ, ಕಾವೇರಿ ನ್ಯಾಯಮಂಡಳಿ ತನ್ನ ತೀರ್ಪು ಜಾರಿಗೆ ಶಿಫಾರಸು ಮಾಡಿರುವ `ನೀರು ನಿರ್ವಹಣಾ ಮಂಡಳಿ'ಯ ಮಾರ್ಗಸೂಚಿಗಳನ್ನು ಕುರಿತು ಚರ್ಚಿಸಿ, ಅಳವಡಿಸಿಕೊಳ್ಳುವ ಮಹತ್ವದ ತೀರ್ಮಾನ ಕೈಗೊಂಡಿತು. ನಿರ್ವಹಣಾ ಮಂಡಳಿ ಅಸ್ತಿತ್ವಕ್ಕೆ ಬರುವವರೆಗೂ ತಾತ್ಕಾಲಿಕ ಕ್ರಮವಾಗಿ ಉಸ್ತುವಾರಿ ಸಮಿತಿ ಜಾರಿಯಲ್ಲಿರುತ್ತದೆ.ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪಿನ ಸಂಪುಟ 5- ಅಧ್ಯಾಯ 8ರಲ್ಲಿ ನೀರು ನಿರ್ವಹಣಾ ಮಂಡಳಿ ಕುರಿತು ಪ್ರಸ್ತಾಪಿಸಿದೆ.

ನ್ಯಾಯಮಂಡಳಿ ತೀರ್ಪನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಹೊಣೆ ನಿರ್ವಹಣಾ ಮಂಡಳಿ ಮೇಲಿದೆ. ಇದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.ಆದರೆ, ನಿರ್ವಹಣಾ ಮಂಡಳಿ ರಚನೆಗೆ ಕಾಲಾವಕಾಶ ಹಿಡಿಯಲಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಈ ಉಸ್ತುವಾರಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ನಿರ್ವಹಣಾ ಮಂಡಳಿಯ ಎಲ್ಲ ಅಧಿಕಾರಗಳು ಉಸ್ತುವಾರಿ ಸಮಿತಿಗೂ ದತ್ತವಾಗಲಿದೆ.ನ್ಯಾಯಮಂಡಳಿ ತೀರ್ಪು ಜಾರಿಗೆ ತ್ವರಿತವಾಗಿ ನಿರ್ವಹಣಾ ಮಂಡಳಿ ರಚಿಸುವಂತೆ ತಮಿಳುನಾಡು ಉಸ್ತುವಾರಿ ಸಮಿತಿ ಸಭೆಯಲ್ಲಿ ಆಗ್ರಹಿಸಿತು.ಸಮಿತಿ ಅಧ್ಯಕ್ಷರು ನಿರ್ವಹಣಾ ಮಂಡಳಿಗಾಗಿ ರೂಪಿಸಲಾಗಿರುವ ಮಾರ್ಗಸೂಚಿಗಳನ್ನು ಉಸ್ತುವಾರಿ ಸಮಿತಿ ತಪ್ಪದೆ ಪಾಲಿಸುತ್ತದೆ ಎಂದು ಹೇಳಿದರು. ಕರ್ನಾಟಕ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತು. ವಿರೋಧವನ್ನು ಲೆಕ್ಕಿಸದೆ ಸಮಿತಿ ತೀರ್ಮಾನ ಕೈಗೊಂಡಿತು. ರಾಜ್ಯ ಸರ್ಕಾರ ಒಂದೆರಡು ದಿನದಲ್ಲಿ ಲಿಖಿತವಾಗಿ ತನ್ನ ಪ್ರತಿಭಟನೆ ದಾಖಲಿಸಲಿದೆ.ಸಮಿತಿ ಸಭೆಗೆ ಅಗತ್ಯವಿರುವ ಕೋರಂ ಹಾಗೂ ಬಹುಮತದ ಆಧಾರದ ಮೇಲೆ ತೀರ್ಮಾನ ಮಾಡುವುದಕ್ಕೆ ಅವಕಾಶ ಕೊಡುವ ಅಂಶಗಳನ್ನು ತೆಗೆದುಹಾಕಬೇಕು ಎಂದು ತಮಿಳುನಾಡು ಆಗ್ರಹಿಸಿತು. ಆದರೆ, ಈ ಸಂಬಂಧದ ತೀರ್ಮಾನವನ್ನು ಸಮಿತಿ ಸಭೆ ಮುಂದಕ್ಕೆ ಹಾಕಿದೆ. ಕರ್ನಾಟಕ, ತಮಿಳುನಾಡು ಹಾಗೂ ಕೇರಳದ ಅಧೀನದಲ್ಲಿರುವ ಜಲಾಶಯಗಳ ನೀರಿನ ಮಾಹಿತಿಯನ್ನು ಆಯಾಯ ರಾಜ್ಯಗಳೇ ಜಲ ಆಯೋಗಕ್ಕೆ ಪೂರೈಕೆ ಮಾಡಬೇಕು.ಇದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು. ಪ್ರತಿನಿತ್ಯ ಮಾಹಿತಿ ಕೊಡಬೇಕು. ಸ್ವಯಂಚಾಲಿತ ಮಾಪಕ ಯಂತ್ರಗಳನ್ನು ಅಳವಡಿಸಬೇಕೆಂದು ಸಭೆ ರಾಜ್ಯಗಳಿಗೆ ಸೂಚಿಸಿತು.ಕುಡಿಯುವ ಹಾಗೂ ಕೈಗಾರಿಕಾ ಉದ್ದೇಶಗಳಿಗೆ ಅಗತ್ಯವಿರುವ ನೀರನ್ನು ರಾಜ್ಯಗಳು ತಮಗೆ ನಿಗದಿ ಆಗಿರುವ ಕೋಟಾದಿಂದಲೇ ಪೂರೈಸಬೇಕು. ಕುಡಿಯುವ ನೀರಿಗೆ ಮೊದಲ ಆದ್ಯತೆ ಎಂದು ಉಸ್ತುವಾರಿ ಸಮಿತಿ ರಾಜ್ಯಗಳಿಗೆ ಸೂಚನೆ ನೀಡಿದೆ.ಸಾಧಾರಣ ಮಳೆ ವರ್ಷ ಹಾಗೂ ಸಂಕಷ್ಟದ ಕಾಲದ ಬಗ್ಗೆ ಚರ್ಚಿಸಿರುವ ಸಮಿತಿ ಮಳೆ ಕಡಿಮೆಯಾದ ಸಂದರ್ಭದಲ್ಲಿ ಅಭಾವದ ಅನುಪಾತಕ್ಕೆ ಅನುಗುಣವಾಗಿ ಎಲ್ಲ ಸಂಬಂಧಪಟ್ಟ ರಾಜ್ಯಗಳು ಲಭ್ಯವಿರುವ ನೀರನ್ನು ಹಂಚಿಕೊಳ್ಳಬೇಕು ಎಂದು ಉಸ್ತುವಾರಿ ಸಮಿತಿ ಹೇಳಿದೆ.ಕಾವೇರಿ ಜಲಾಶಯದ ನೀರಿನ ಒಟ್ಟಾರೆ ಲಭ್ಯತೆಯನ್ನು ನ್ಯಾಯಮಂಡಳಿ 740 ಟಿಎಂಸಿ ಅಂದಾಜಿಸಿದೆ. ಇಷ್ಟು ನೀರು ಲಭ್ಯವಾದರೆ ಸಾಧಾರಣ ಮಳೆಯ ವರ್ಷ ಎಂದು ಪರಿಗಣಿಸಬಹುದು.ಜೂನ್‌ನಿಂದ ಮೇ ಅಂತ್ಯದವರೆಗಿನ ಅವಧಿಯನ್ನು ಮಳೆಯ ವರ್ಷ ಎಂದು ಪರಿಗಣಿಸಬೇಕು. ಈ ಅವಧಿಯಲ್ಲಿ ಲಭ್ಯವಿರುವ ನೀರನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕೆಂದು ಸಮಿತಿ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.