ಬುಧವಾರ, ಮೇ 18, 2022
25 °C

ಉಹೂಂ, ಸೇಡು ಇನ್ನೂ ತೀರಿಲ್ಲ...

ಪ್ರಜಾವಾಣಿ ವಾರ್ತೆ / ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಮುಂಬೈ: ಸೇಡಿನ ಸರಣಿಯಲ್ಲಿ ಯಶಸ್ಸಿನ ಸಿಂಚನವಾಗಿರಬಹುದು. ಆದರೆ ಆ ಸೇಡು ಇನ್ನೂ ಪೂರ್ಣವಾಗಿ ತೀರಿಲ್ಲ. ಆ ಹೀನಾಯ ಸೋಲಿನ ನೋವು ಆಟಗಾರರ ಎದೆಯಲ್ಲಿ ಇನ್ನೂ ಕುದಿಯುತ್ತಿದೆ. ಅಭಿಮಾನಿಗಳ ಮನಸ್ಸಿನಲ್ಲೂ ಆ ನಿರಾಶೆಯ ಕಾರ್ಮೋಡ ಕವಿದಿದೆ.

ಆ ನೋವು, ನಿರಾಶೆ ಕೊಂಚವಾದರೂ ದೂರವಾಗಬೇಕು ಎಂದರೆ ಸರಣಿಯ ಎಲ್ಲಾ ಪಂದ್ಯಗಳಲ್ಲಿ ಗೆಲ್ಲಬೇಕು. ಅದು ಭಾರತದ ಕ್ರಿಕೆಟ್ ಪ್ರೇಮಿಗಳ ಪ್ರಾರ್ಥನೆ! 28 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲಲು ವೇದಿಕೆಯಾಗಿದ್ದ ವಾಂಖೇಡೆ ಕ್ರೀಡಾಂಗಣದಲ್ಲಿ ಶನಿವಾರ ಅಭ್ಯಾಸ ನಡೆಸುತ್ತಿದ್ದ ದೋನಿ ಬಳಗದಲ್ಲಿ ಇದ್ದಿದ್ದು ಕೂಡ ಅಂತಹದ್ದೇ ಕೆಚ್ಚು.

ತಂಡದಲ್ಲಿ ಸರಣಿ ಗೆದ್ದ ಖುಷಿಯಿದೆ ನಿಜ, ಆದರೆ 5-0ರಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಮೇಲಷ್ಟೇ ಅದಕ್ಕೊಂದು ನಿಜವಾದ ಅರ್ಥ ಬರಲಿದೆ. ಹಾಗಾಗಿಯೇ ಭಾರತ-ಇಂಗ್ಲೆಂಡ್ ನಡುವೆ ಭಾನುವಾರ ನಡೆಯಲಿರುವ ಏಕದಿನ ಸರಣಿಯ ನಾಲ್ಕನೇ ಪಂದ್ಯ ಮಹತ್ವ ಪಡೆದುಕೊಂಡಿದೆ. ಇಂಗ್ಲೆಂಡ್ ಪ್ರವಾಸದ ವೇಳೆ ಭಾರತಕ್ಕೆ ಒಂದೂ ಪಂದ್ಯ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಇಲ್ಲಿ ಭಾರತ 3-0ರಲ್ಲಿ ಮುನ್ನಡೆ ಸಾಧಿಸಿ ಗೆಲುವಿನ ಯಾತ್ರೆ ಕೈಗೊಂಡಿದೆ.

`ಕ್ರೀಡೆಯಲ್ಲಿ ಸೇಡು ತೀರಿಸಿಕೊಳ್ಳುವುದು ಎಂಬ ಮಾತನ್ನು ಬಳಸಬಾರದು. ಅದು ಕ್ರೀಡಾ ಮನೋಭಾವಕ್ಕೆ ವಿರುದ್ಧವಾದುದು~ ಎಂದು ನಾಯಕ ದೋನಿ ಹೇಳಿರಬಹುದು. ಆದರೆ ಇಂಗ್ಲೆಂಡ್ ಪ್ರವಾಸದಲ್ಲಿನ ಹೀನಾಯ ಸೋಲಿನ ನೋವು ಅವರ ಮನಸ್ಸನ್ನು ಆವರಿಸಿರುವುದು ಮಾತ್ರ ನಿಜ.

ವಿಶ್ವಕಪ್ ಗೆದ್ದ ಖುಷಿ ಮಹಾನಗರಿಯ ಕ್ರಿಕೆಟ್ ಅಭಿಮಾನಿಗಳಲ್ಲಿ ಇನ್ನೂ ಕಣ್ಣ ಮುಂದೆಯೇ ಇದೆ. ಈ ಕಾರಣ ಪ್ರತಿಯೊಬ್ಬರೂ ಅತ್ಯುತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ ಭಾರತ ಈಗಾಗಲೇ ಸರಣಿ ಜಯಿಸಿರುವುದರಿಂದ ಈ ಪಂದ್ಯಕ್ಕೆ ಅಷ್ಟೇನು ಮಹತ್ವ ಇಲ್ಲ ಎಂದು ಹೇಳುವಂತಿಲ್ಲ.

ಆದರೆ 15 ದಿನಗಳ ಹಿಂದೆಯಷ್ಟೇ ಎದೆಯುಬ್ಬಿಸಿಕೊಂಡು ಭಾರತಕ್ಕೆ ಕಾಲಿರಿಸಿದ್ದ ಇಂಗ್ಲೆಂಡ್ ಆಟಗಾರರಿಗೆ ಈಗ ಏನಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಹ್ಯಾಟ್ರಿಕ್ ಸೋಲುಗಳು ಮನದ ದಡಕ್ಕೆ ಬಂದಪ್ಪಳಿಸಿರುವುದೇ ಅದಕ್ಕೆ ಸಾಕ್ಷಿ.

ಬೌಲರ್‌ಗಳು ಹಳಿ ತಪ್ಪಿದ ರೈಲಿನಂತಾಗಿದ್ದಾರೆ. ಮೊಹಾಲಿ ಪಂದ್ಯದ ಕೊನೆಯ ಎರಡು ಓವರ್‌ಗಳು ಅದಕ್ಕೆ ಉದಾಹರಣೆ. ಆಟದ ವೇಳೆ ವೇಗಿ ಜೇಡ್ ಡೆನ್‌ಬ್ಯಾಚ್ ಎಷ್ಟು ಹತಾಶರಾಗಿದ್ದರೆಂದರೆ ಸಹ ಆಟಗಾರರತ್ತಲೇ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕೋಚ್ ಆ್ಯಂಡಿ ಫ್ಲವರ್ ಕೂಡ ಆತಂಕಗೊಂಡಿದ್ದಾರೆ. ಡೆನ್‌ಬ್ಯಾಚ್‌ಗೆ ತಂಡದ ಆಡಳಿತ ಎಚ್ಚರಿಕೆ ಕೂಡ ನೀಡಿದೆ.

ಈ ಪಂದ್ಯಕ್ಕೆ ಡೆನ್‌ಬ್ಯಾಚ್ ಬದಲಿಗೆ ಆನಿಯನ್ಸ್ ಸ್ಥಾನ ಪಡೆದರೂ ಅಚ್ಚರಿ ಇಲ್ಲ. ಒಂದು ಸಮಾಧಾನವೆಂದರೆ ಮೂರನೇ ಪಂದ್ಯದಲ್ಲಿ ಈ ತಂಡದ ಬ್ಯಾಟಿಂಗ್ ಕ್ಲಿಕ್ ಆಗಿತ್ತು. ಟ್ರಾಟ್ ಹಾಗೂ ಪೀಟರ್ಸನ್ ಫಾರ್ಮ್‌ಗೆ ಮರಳಿರುವುದು ಹೊಸ ಭರವಸೆ ನೀಡಿದೆ. ಆದರೆ 2008ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗ 5-0ರಲ್ಲಿ ಸರಣಿ ಸೋತಿದ್ದ ರೀತಿಯ ಭಯ ಈಗ ಮತ್ತೊಮ್ಮೆ ಕಾಡುತ್ತಿದೆ.

ದೋನಿ ಬಳಗ ಈ ಸರಣಿಯಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದೆ. ಆ ಯಶಸ್ಸಿನ ಟ್ರ್ಯಾಕ್‌ನಲ್ಲಿಯೇ ಮುಂದುವರಿಯುವ ಸವಾಲು ಮುಂದಿದೆ. ಯುವ ಆಟಗಾರರಿಂದ ಕೂಡಿರುವ ತಂಡದಲ್ಲಿ ಉತ್ಸಾಹ ಪುಟಿದೇಳುತ್ತಿದೆ. ಈ ತಂಡದ ಆಟಗಾರರ ಸರಾಸರಿ ವಯಸ್ಸು 26.

ಗಾಯಗೊಂಡಿರುವ ವೇಗಿ ಉಮೇಶ್ ಯಾದವ್ ಬದಲಿಗೆ ಜಾರ್ಖಂಡ್‌ನ ವರುಣ್ ಆ್ಯರೋನ್ ಅಥವಾ ಕರ್ನಾಟಕದ ಎಸ್.ಅರವಿಂದ್ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಆದರೆ ತಂಡ ಸರಣಿ ಜಯಿಸಿದ್ದರೂ ಹೆಚ್ಚಿನ ಬದಲಾವಣೆ ಸಾಧ್ಯತೆ ಕಡಿಮೆ.

ಕಾರಣ ಈಗ ಆಡುತ್ತಿರುವ ಆಟಗಾರರು ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಹೆಚ್ಚಿನ ಪಂದ್ಯಗಳಲ್ಲಿ ಅವಕಾಶ ನೀಡುವ ಇಂಗಿತವನ್ನು ದೋನಿ ವ್ಯಕ್ತಪಡಿಸಿದ್ದಾರೆ. ಹಾಗಾದಲ್ಲಿ ತಂಡದಲ್ಲಿರುವ ರಾಹುಲ್ ಶರ್ಮ, ಮನೋಜ್ ತಿವಾರಿ ಮತ್ತಷ್ಟು ದಿನ ಬೆಂಚ್ ಕಾಯಿಸಬೇಕಾಗುತ್ತದೆ.

ಪ್ರಭಾವಿ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಆರ್.ವಿನಯ್ ಕುಮಾರ್ ಹಿರಿಯ ವೇಗಿಗಳ ಅನುಪಸ್ಥಿತಿಯನ್ನು ಮರೆಸಿದ್ದಾರೆ. ಕರ್ನಾಟಕದ ತ್ರಿವಳಿ ವೇಗಿಗಳಾದ ವಿನಯ್, ಅರವಿಂದ್ ಹಾಗೂ ಮಿಥುನ್ ಒಟ್ಟಿಗೆ ಅಭ್ಯಾಸ ನಡೆಸಿದರು.

ಪಂದ್ಯ ಆರಂಭ: ಮಧ್ಯಾಹ್ನ 2.30. ನೇರಪ್ರಸಾರ: ನಿಯೋ ಕ್ರಿಕೆಟ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.