ಊಟಕ್ಕೆ ಪರದಾಡಿ ಹೋಟೆಲ್‌ಗಳತ್ತ ನಡೆದರು...

7

ಊಟಕ್ಕೆ ಪರದಾಡಿ ಹೋಟೆಲ್‌ಗಳತ್ತ ನಡೆದರು...

Published:
Updated:

ಬೆಂಗಳೂರು:  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಬಾರಿಯೂ ಸಾಹಿತ್ಯಾಸಕ್ತರು ಊಟಕ್ಕಾಗಿ ಪರದಾಡಿದರು. ಪರಿಷತ್‌ನ ಪದಾಧಿಕಾರಿಗಳು ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ದೂರದ ಊರುಗಳಿಂದ ಬಂದವರು ಮೊದಲ ದಿನವೇ ಹಸಿದ ಹೊಟ್ಟೆಯಲ್ಲಿ ಹೋಟೆಲ್‌ಗಳತ್ತ ಮುಖ ಮಾಡುವಂತಾಗಿತ್ತು.ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಉದ್ಘಾಟನಾ ಸಮಾರಂಭ ಆರಂಭವಾಗುತ್ತಿದ್ದಂತೆ ಇತ್ತ ಭೋಜನಾಲಯಗಳತ್ತ ಜನರು ಪ್ರವಾಹೋಪಾದಿಯಲ್ಲಿ ಬರಲಾರಂಭಿಸಿದರು. ಈ ದೊಡ್ಡ ಸಮೂಹವನ್ನು ವಿವಿಧ ಭೋಜನಾಲಯಗಳ ಕಡೆಗೆ ಕಳುಹಿಸುವ ಕೆಲಸ ಸಮರ್ಪಕವಾಗಿ ಆಗಲಿಲ್ಲ. ಹಾಗಾಗಿ ಸಾವಿರಾರು ಮಂದಿ ಊಟಕ್ಕೆ ಪರದಾಡಿದರು.ಬಸವನಗುಡಿ ರಸ್ತೆಯಲ್ಲಿನ ಉದಯಭಾನು ಕಲಾ ಸಂಘದ ಆಟದ ಮೈದಾನ ಹಾಗೂ ಮಕ್ಕಳ ಕೂಟ ಬಳಿಯಿರುವ ಕೋಟೆ ಪ್ರೌಢಶಾಲೆಯ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಹಾಗೆಯೇ ಕೆ.ಆರ್.ರಸ್ತೆಯ ಮಹಿಳಾ ಸೇವಾ ಸಮಾಜದ ಆವರಣದಲ್ಲಿ ಅತಿ ಗಣ್ಯರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.ಆದರೆ ಈ ಬಗ್ಗೆ ಮಾಹಿತಿ ನೀಡುವ ಸೂಚನಾ ಫಲಕಗಳನ್ನು ಎಲ್ಲಿಯೂ ಅಳವಡಿಸಿರಲಿಲ್ಲ. ಧ್ವನಿವರ್ಧಕಗಳ ಮೂಲಕ ಮಾಹಿತಿ ನೀಡುವ ಕನಿಷ್ಠ ಪ್ರಯತ್ನ ಕೂಡ ಮಾಡಲಿಲ್ಲ. ಹಾಗಾಗಿ ಬಹುಪಾಲು ಮಂದಿ ಸಾರ್ವಜನಿಕರ ಬಳಿ ವಿಳಾಸ ಕೇಳುತ್ತಾ ಅಲೆದಾಡುವಂತಾಗಿತ್ತು. ಇಲ್ಲವೇ ಪೊಲೀಸರ ಬಳಿ ವಿಳಾಸ ಕೇಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಸ್ವಲ್ಪ ಹೊತ್ತಿನಲ್ಲೇ ಊಟ ಖಾಲಿ: ಪ್ರಧಾನ ವೇದಿಕೆಯ ಸಮೀಪದಲ್ಲೇ ಇರುವ ಮಹಿಳಾ ಸೇವಾ ಸಮಾಜದ ಆವರಣದಲ್ಲಿ ಗಣ್ಯರಿಗಷ್ಟೇ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಿರ್ವಹಣೆಗೆ ಹೆಚ್ಚಿನ ಕಾರ್ಯಕರ್ತರನ್ನು ನಿಯೋಜಿಸಿರಲಿಲ್ಲ.ಎಲ್ಲರಿಗೂ ಪ್ರವೇಶ ನೀಡಿದ್ದರಿಂದ ಊಟ ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಖಾಲಿಯಾಗಿತ್ತು. ಇಲ್ಲಿಗೆ ಬಂದವರನ್ನು ಪೊಲೀಸರು ಕೋಟೆ ಹೈಸ್ಕೂಲ್ ಮೈದಾನದ ಕಡೆಗೆ ಹೋಗುವಂತೆ ಸೂಚಿಸುತ್ತಿದ್ದರು. ಪರಿಣಾಮವಾಗಿ ಕೋಟೆ ಮೈದಾನದತ್ತ ಜನ ಮುಖ ಮಾಡಿದರು. ಕೋಟೆ ಮೈದಾನದಲ್ಲಿ ಮ. 2 ಗಂಟೆವರೆಗೂ ಊಟ ವಿತರಣೆ ವ್ಯವಸ್ಥಿತವಾಗಿಯೇ ಇತ್ತು. ಆದರೆ ನಿಮಿಷಗಳು ಕಳೆದಂತೆ ಜನರ ಸಂಖ್ಯೆ ಹೆಚ್ಚಾಯಿತು. ಇತ್ತ ಕೌಂಟರ್‌ಗಳ ಬಳಿ ಸಾಲುಗಳು ಬೆಳೆಯುತ್ತಾ ಹೋಯಿತು. ಪರಿಣಾಮ ಊಟದ ಹಂಚಿಕೆ ಕೂಡ ವಿಳಂಬವಾಯಿತು.ಮುಗಿಬಿದ್ದ ಜನತೆ: ಸಾಕಷ್ಟು ಕೌಂಟರ್‌ಗಳಿದ್ದರೂ ಸಾವಿರಾರು ಮಂದಿ ಒಮ್ಮೆಗೆ ಊಟಕ್ಕೆ ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು. ಜನರು ಕುಡಿಯುವ ನೀರಿಗಾಗಿ ಪರದಾಡಿದರು. ಧ್ವನಿವರ್ಧಕಗಳಲ್ಲಿ ಮಾಹಿತಿ ನೀಡುತ್ತಿದ್ದರೂ ಕೇಳುವ ತಾಳ್ಮೆ ಯಾರಿಗೂ ಇರಲಿಲ್ಲ. ಆಗಲೇ ಅಸಹನೆ ತೀವ್ರವಾಗಿತ್ತು.ಸಂಜೆ 4 ಗಂಟೆಯಾದರೂ ಜನ ಬರುತ್ತಲೇ ಇದ್ದರು. ಅಷ್ಟರ ಹೊತ್ತಿಗೆ ಊಟ ಖಾಲಿಯಾಗಿತ್ತು. ಹಸಿದು ಬಂದ ಜನರು ಊಟ ಖಾಲಿಯಾಗಿರುವುದು ತಿಳಿಯುತ್ತಿದ್ದಂತೆ ಅಸಮಾಧಾನ ವ್ಯಕ್ತಪಡಿಸಿದರು. ಕೆಲವರು ಊಟದ ತಟ್ಟೆಗಳನ್ನೇ ಎಸೆದಾಡಿದರು.ಕೆಲವರಿಗೆ ಅನ್ನ ಸಿಕ್ಕರೆ ಇನ್ನೂ ಕೆಲವರಿಗೆ ಸಾಂಬಾರು ಸಿಗಲಿಲ್ಲ. ಹಲವರಿಗೆ ಏನೂ ಸಿಗದ ಕಾರಣ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೈದಾನದ ಸುತ್ತಮುತ್ತ ಉತ್ತಮ ಹೋಟೆಲ್‌ಗಳು ಇಲ್ಲದ ಕಾರಣ ಸಾಹಿತ್ಯಾಸಕ್ತರು ಕಿರಿಕಿರಿ ಅನುಭವಿಸಿದರು.ಒಂದು ಕಡೆ ಉತ್ತಮ ವ್ಯವಸ್ಥೆ: ಬಸವನಗುಡಿ ರಸ್ತೆಯ ಉದಯಭಾನು ಕಲಾಸಂಘದ ಆಟದ ಮೈದಾನದಲ್ಲಿ ಊಟದ ವ್ಯವಸ್ಥೆ ಉತ್ತಮವಾಗಿತ್ತು. ಸಾಕಷ್ಟು ಕೌಂಟರ್‌ಗಳಿದ್ದು, ಜನರು ಕೂಡ ಕಡಿಮೆ ಸಂಖ್ಯೆಯಲ್ಲಿದ್ದ ಕಾರಣ ನೂಕುನುಗ್ಗಲು ಉಂಟಾಗಲಿಲ್ಲ. ಅಲ್ಲದೇ ಸ್ವಯಂ ಸೇವಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರಿಂದ ಜನರು ಸಾವಕಾಶವಾಗಿ  ಊಟ ಸೇವಿಸಿದರು.ದೂಳುಮಯ ವಾತಾವರಣ: ಕೋಟೆ ಹೈಸ್ಕೂಲ್ ಮೈದಾನ ಹಾಗೂ ಉದಯಭಾನು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಭೋಜನಾಲಯದಲ್ಲಿ ಸಾಕಷ್ಟು ದೂಳು ಏಳುತ್ತಿತ್ತು. ದೂಳಿನ ನಡುವೆಯೇ ಊಟ ಸೇವಿಸುವಂತಾಗಿದ್ದರಿಂದ ಮುಜುಗರಪಡುವಂತಾಗಿತ್ತು. ಮಹಿಳೆಯರು ಹಾಗೂ ವೃದ್ಧರಿಗೆ ಪ್ರತ್ಯೇಕ ಕೌಂಟರ್‌ಗಳಿಲ್ಲದ ಕಾರಣ ಅವರು ಉದ್ದದ ಸಾಲುಗಳಲ್ಲಿ ಹಲವು ಹೊತ್ತು ನಿಲ್ಲುವಂತಾಯಿತು.‘ಪ್ರತಿನಿಧಿಗಳಿಗೆ ಪ್ರತ್ಯೇಕ ಗುರುತಿನ ಚೀಟಿ ನೀಡದ ಕಾರಣ ಸಾರ್ವಜನಿಕರ ನಡುವೆ ಅವರನ್ನು ಗುರುತಿಸುವುದೇ ಕಷ್ಟವಾಗಿತ್ತು. ಅಲ್ಲದೇ ಉದಯಭಾನು ಮೈದಾನದಲ್ಲಿ ಊಟದ ವ್ಯವಸ್ಥೆ ಇರುವ ಬಗ್ಗೆ ಯಾರೊಬ್ಬರು ಮಾಹಿತಿ ನೀಡದ ಕಾರಣ ಸಾವಿರಾರು ಮಂದಿ ಒಮ್ಮೆಗೆ ಕೋಟೆ ಮೈದಾನಕ್ಕೆ ಆಗಮಿಸಿದರು’ ಎಂದು ಊಟದ ಸಮಿತಿ ಸದಸ್ಯ ಎನ್.ಆರ್.ರಮೇಶ್ ಹೇಳಿದರು. ‘ಸಮ್ಮೇಳನಕ್ಕೆ ಆಗಮಿಸಿದ ಪ್ರತಿನಿಧಿಗಳಿಗೆ  ಪ್ರತ್ಯೇಕ ಬ್ಯಾಡ್ಜ್ ನೀಡದ ಕಾರಣ ಅವರಿಗೆ ಆದ್ಯತೆ ನೀಡಲು ಸಾಧ್ಯವಾಗಿಲ್ಲ.ಶುಕ್ರವಾರ ಮಧ್ಯಾಹ್ನ 50,000 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಜನತೆ ಆಗಮಿಸಿದ್ದರಿಂದ ಕೂಡಲೇ 15,000 ಮಂದಿಗೆ ಹೆಚ್ಚುವರಿಯಾಗಿ ಊಟ ಸಿದ್ಧಪಡಿಸಿ ವಿತರಿಸಲಾಯಿತು. ಆದರೂ ಸಾಕಷ್ಟು ಮಂದಿಗೆ ಊಟ ಸಿಗದಂತಾಯಿತು’ ಎಂದು ಊಟದ ಸಮಿತಿ ಅಧ್ಯಕ್ಷ ಎಸ್.ಹರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.‘ಶನಿವಾರ ಬೆಳಿಗ್ಗೆ 6 ಗಂಟೆಯಿಂದಲೇ ಪ್ರತಿನಿಧಿಗಳ ನೋಂದಣಿ ಆರಂಭಿಸಿ ಬ್ಯಾಡ್ಜ್ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಪರಿಷತ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ. ಪ್ರತಿನಿಧಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಆ ನಂತರ ಸಾರ್ವಜನಿಕರಿಗೆ ಊಟ ವಿತರಿಸಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry