ಊಟದಲ್ಲಿ ಹುಳು; ಬೀದಿಗಿಳಿದ ವಿದ್ಯಾರ್ಥಿಗಳು

7

ಊಟದಲ್ಲಿ ಹುಳು; ಬೀದಿಗಿಳಿದ ವಿದ್ಯಾರ್ಥಿಗಳು

Published:
Updated:

ತುಮಕೂರು: ಕಳಪೆ ಊಟ, ಹುಳು ಬಿದ್ದ ಅಕ್ಕಿ, ಗೋಧಿ, ಅವ್ಯವಸ್ಥಿತ ಆಡಳಿತದಿಂದ ಬೇಸತ್ತ ನಗರದ ಹನುಮಂತಪುರದ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.ವಿದ್ಯಾರ್ಥಿ ನಿಲಯ ಅವ್ಯವಸ್ಥಿತವಾಗಿದ್ದರೂ ಮೇಲ್ವಿಚಾರಕರು ಹಾಸ್ಟೆಲ್‌ಗೆ ಭೇಟಿ ನೀಡುವುದಿಲ್ಲ. ಹಾಸ್ಟೆಲ್‌ನ ಸಂಪೂರ್ಣ ಹಿಡಿತ ಲೆಕ್ಕಾಧಿಕಾರಿ ಅವರಲ್ಲಿದ್ದು, ವಿದ್ಯಾರ್ಥಿಗಳನ್ನು ಇನ್ನಿಲ್ಲದಂತೆ ಶೋಷಣೆ ಮಾಡುತ್ತಿದ್ದಾರೆ.ಊಟ, ಅವ್ಯವಸ್ಥೆ ಕುರಿತು ಪ್ರಶ್ನಿಸಿದರೆ ಸಮೀಪದ ಬಡಾವಣೆಯಿಂದ ರೌಡಿಗಳನ್ನು ಕರೆತಂದು ಹಲ್ಲೆ ಮಾಡಿಸುತ್ತಿದ್ದಾರೆ. ವ್ಯವಸ್ಥೆಯನ್ನು ಪ್ರಶ್ನಿಸುವ ವಿದ್ಯಾರ್ಥಿಗಳಿಗೆ ಪ್ರಾಣ ಬೆದರಿಕೆ ಇದೆ. ವಿದ್ಯಾರ್ಥಿ ಮುಖಂಡರ ಪ್ರಾಣಕ್ಕೆ ರಕ್ಷಣೆ ಕೊಡಬೇಕೆಂದು ಧರಣಿ ನಿರತ ವಿದ್ಯಾರ್ಥಿಗಳು ಆಗ್ರಹಿಸಿದರು.ಊಟದ ಕೋಣೆಯಲ್ಲಿ ಅಡುಗೆ ಸಿಬ್ಬಂದಿಯ ಅಶ್ಲೀಲ ಪದ ಪ್ರಯೋಗದಿಂದ ಕಿರಿಕಿರಿಯಾಗುತ್ತದೆ. ಮಧ್ಯಾಹ್ನದ ಊಟ ಪ್ರಾಣಿಗಳು ಸಹ ತಿನ್ನದಂಥ ಸ್ಥಿತಿಯಲ್ಲಿರುತ್ತದೆ. ಹೀಗಾಗಿ ಸಾಕಷ್ಟು ವಿದ್ಯಾರ್ಥಿಗಳು ಮಧ್ಯಾಹ್ನ ಊಟವನ್ನೇ ಮಾಡುತ್ತಿಲ್ಲ. ಶುಚಿತ್ವ ಇಲ್ಲದೆ ಊಟದ ಕೋಣೆಗೆ ಕಾಲಿಡಲು ಮನಸ್ಸಾಗುವುದಿಲ್ಲ ಎಂದು ದೂರಿದರು.ವಿದ್ಯಾರ್ಥಿಗಳಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಆರ್.ಕೆ.ರಾಜು, ಮೂರು ದಿನದಲ್ಲಿ ಅವ್ಯವಸ್ಥೆ ಸರಿಪಡಿಸುವ ಭರವಸೆ  ನೀಡಿದರು. ಲೆಕ್ಕಾಧಿಕಾರಿ, ಮೇಲ್ವಿಚಾರಕರನ್ನು ಬದಲಿಸುವುದಾಗಿ ಹೇಳಿದರು. ಪ್ರಾಣ ಬೆದರಿಕೆ ಇದ್ದು ಮುಂದೆ ತೊಂದರೆಯಾದರೆ ಅದಕ್ಕೆ ಲೆಕ್ಕಾಧಿಕಾರಿ ಹೊಣೆ ಎಂಬ ದೂರನ್ನು ಜಿಲ್ಲಾಧಿಕಾರಿ ಮೂಲಕ ಪೊಲೀಸರಿಗೆ ವಿದ್ಯಾರ್ಥಿಗಳು ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry