ಮಂಗಳವಾರ, ನವೆಂಬರ್ 19, 2019
29 °C
ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳ ಪ್ರತಿಭಟನೆ

ಊಟದ ಭತ್ಯೆ ನೀಡಲು ಒತ್ತಾಯ

Published:
Updated:

ಹಾವೇರಿ: ಕರ್ನಾಟಕ ವಿಶ್ವವಿದ್ಯಾಲಯದ ರಾಜೀವಗಾಂಧಿ ಸ್ನಾತಕೋತ್ತರ ಕೇಂದ್ರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಊಟದ ಭತ್ಯೆಯನ್ನು ನೀಡದಿರುವುದನ್ನು ಖಂಡಿಸಿ ಹಾಗೂ ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಸ್ನಾತಕೋತ್ತರ ಕೇಂದ್ರಕ್ಕೆ ಬೀಗ ಜಡಿದು ಸೋಮವಾರ ಪ್ರತಿಭಟನೆ ನಡೆಸಿದರು.ವಸತಿ ನಿಲಯ ಆರಂಭವಾಗಿ ಐದು ತಿಂಗಳು ಗತಿಸಿದರೂ, ವಸತಿ ನಿಲಯದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಊಟದ ಭತ್ಯೆ ಸೇರಿದಂತೆ ಯಾವುದೇ ಸೌಲಭ್ಯ ನೀಡಿಲ್ಲ. ಈ ಬಗ್ಗೆ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಡಾ.ಟಿ.ಎಂ.ಭಾಸ್ಕರ್ ಅವರನ್ನು ಕೇಳಿದರೆ, `ಊಟವನ್ನಾದರೂ ಮಾಡಿ ಇಲ್ಲವೇ ಸತ್ತು ಹೋಗಿ. ನಿಮಗೆ ಯಾವುದೇ ಸೌಲಭ್ಯ ಕೊಡಿಸುವುದಿಲ್ಲ' ಎಂದು ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡ ಪ್ರಮೋದ ಹರಿಕಾಂತ ಮಾತನಾಡಿ, ಕೇಂದ್ರದ ಆವರಣದಲ್ಲಿ ವಸತಿ ನಿಲಯ ಪ್ರಾರಂಭವಾಗಿ ಸುಮಾರು ಐದು ತಿಂಗಳು ಗತಿಸಿವೆ. ಅಲ್ಲಿನ ವಿದ್ಯಾರ್ಥಿಗಳಿಗೆ ಈವರೆಗೆ ಊಟದ ಭತ್ಯೆ ನೀಡದಿರುವುದರಿಂದ ವಿದ್ಯಾರ್ಥಿಗಳು ಊಟಕ್ಕೆ ತುಂಬಾ ತೊಂದರೆ ಅನುಭವಿಸುವಂತಾಗಿದೆ ಎಂದು ಹೇಳಿದರು.ವಸತಿ ನಿಲಯದಲ್ಲಿ ಶುದ್ಧ ಕುಡಿಯುವ ನೀರಿಲ್ಲ. ಇದ್ದ ನೀರು ಪ್ಲೋರಿನ್‌ಯುಕ್ತವಾಗಿದೆ. ಇದರಿಂದ ಕುಡಿಯಲು ಯೋಗ್ಯವಾಗಿಲ್ಲ. ಆ ನೀರು ಕುಡಿದರೆ ಮೈಕೈ ನೋವು ಬರುತ್ತಿವೆ. ವಸತಿ ನಿಲಯಕ್ಕೆ ಯಾವುದೇ ದಿನಪತ್ರಿಕೆ ಹಾಗೂ ವಾರಪತ್ರಿಕೆಗಳು ಬರುವುದಿಲ್ಲ. ಈ ಬಗ್ಗೆ ವಸತಿ ನಿಲಯದ ಮೇಲ್ವಿಚಾರಕ ಡಾ.ನಿಂಗಪ್ಪ ಮುದೇನೂರ ಅವರಿಗೂ ತಿಳಿಸಿದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಆಪಾದಿಸಿದರು.

ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸುಡು ಬಿಸಿಲಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿ ದ್ದರು.ಆದರೆ, ಆಡಳಿತಾಧಿಕಾರಿಗಳು ಮಾತ್ರ ತಮ್ಮ ಕಚೇರಿಯಲ್ಲಿದ್ದರೂ ವಿದ್ಯಾರ್ಥಿಗಳ ಸಮಸ್ಯೆ ಆಲಿಸಲು ಆಗಮಿಸಲಿಲ್ಲ. ಇದರಿಂದ ತೀವ್ರ ಆಕ್ರೋಶ ವ್ಯಕ್ತಪ ಡಿಸಿದ ವಿದ್ಯಾರ್ಥಿಗಳು ಆಡಳಿತಾಧಿಕಾರಿ ಹಾಗೂ ಕುಲಸಚಿವರ ವಿರುದ್ಧ ಘೋಷಣೆ ಕೂಗಿದರು.ಪ್ರತಿಭಟನೆಯಲ್ಲಿ ದಾವೂದ್ ನದಾಫ್, ಶರಣು ಚಿಲಝರಿ, ಚಂದ್ರು, ವಾಸುದೇವ ಗೌಡ, ಯಗ್ಗಪ್ಪ ಲಮಾಣಿ, ಬಸವರಾಜ ಪೂಜಾರ, ರೇಣುಕಾ ಕಹಾರ, ನಿರಂಜನ ಲಮಾಣಿ, ದೇವೇಂದ್ರಪ್ಪ ಮನ್ನಾಪುರ, ಲೋಕೇಶ ರಾಠೋಡ, ಮಂಜುನಾಥ ಹಳ್ಳದ, ಮಂಜುನಾಥ ಕಬ್ಬೂರ, ಆನಂದ, ಶ್ರೀನಿವಾಸ, ರವಿ ಸೇರಿದಂತೆ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)