ಊಟ, ಉಪಾಹಾರಕ್ಕೆ ತಾತ್ಕಾಲಿಕ ವ್ಯವಸ್ಥೆ

7

ಊಟ, ಉಪಾಹಾರಕ್ಕೆ ತಾತ್ಕಾಲಿಕ ವ್ಯವಸ್ಥೆ

Published:
Updated:

ಹುಣಸೂರು: ಇಲ್ಲಿನ ಪರಿಶಿಷ್ಟ ಜಾತಿ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ತಿಂಡಿ ಮತ್ತು ಊಟದ ವ್ಯವಸ್ಥೆ ನಿಲ್ಲಿಸಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ನಿಲಯದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಮಣಿದ ಅಧಿಕಾರಿಗಳು ಭಾನುವಾರ ರಾತ್ರಿಯಿಂದಲೇ ಎಲ್ಲ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಿದರು.ವಸತಿನಿಲಯದಲ್ಲಿ 100ಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಾರ್ಷಿಕ ಪರೀಕ್ಷೆ ನಡೆಯುತ್ತಿವೆ. ಈ ಸಮಯದಲ್ಲಿ ಊಟ, ಉಪಾಹಾರ ಸ್ಥಗಿತಗೊಳಿಸಲಾಗಿದೆ. ಹೀಗಾದರೆ ತಾವು ಎಲ್ಲಿ ಹೋಗಬೇಕು ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹೊನ್ನೇಗೌಡ ಮಾತನಾಡಿ, ನಿಲಯದ ನಿಯಮಾನುಸಾರ ಮೇ 31ಕ್ಕೆ ವಸತಿನಿಲಯ ಮುಕ್ತಾಯವಾಗಲಿದೆ. ಅದರಂತೆ ಕ್ರಮ ತೆಗೆದುಕೊಳ್ಳಬೇಕಾಗಿದೆ.ಕಳೆದ ವರ್ಷವೂ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಹೆಚ್ಚುವರಿ 45 ದಿನಗಳು ನಿಲಯವನ್ನು ತೆರೆಯಲಾಗಿ ರೂ. 1.50 ಲಕ್ಷ ಹೊರೆ ಬಂದಿದೆ. ಈ ಹಣವನ್ನು ಇಲಾಖೆ ಪಾವತಿಸಿಲ್ಲ. ಪ್ರತಿ ವರ್ಷವೂ ಹೆಚ್ಚುವರಿ ವ್ಯವಸ್ಥೆ ಕಲ್ಪಿಸಲು ಆಗುವುದಿಲ್ಲ. ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಸಬೇಕಾಗಿದ್ದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ, ತಹಶೀಲ್ದಾರ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಹೆಚ್ಚುವರಿ ಅನುದಾನ ಕೊಡಿಸಬೇಕು. ಈ ಜವಾಬ್ದಾರಿ ತೆಗೆದುಕೊಂಡಲ್ಲಿ ಹೆಚ್ಚು ದಿನ ನಿಲಯದಲ್ಲಿ ಊಟ ಮತ್ತು ತಿಂಡಿ ವ್ಯವಸ್ಥೆ ಕಲ್ಪಿಸಲು ಸಿದ್ಧ ಎಂದರು.ತಾತ್ಕಾಲಿಕ ವ್ಯವಸ್ಥೆ:

ಈ ವೇಳೆ ಮಾತನಾಡಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹದೇವಸ್ವಾಮಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯದಲ್ಲಿ ತೊಂದರೆ ಆಗದಂತೆ ತಾತ್ಕಾಲಿಕ ವ್ಯವಸ್ಥೆ ಕಲ್ಪಸಲಾಗುವುದು. ಜಿಲ್ಲಾ ಪಂಚಾಯಿತಿ ಮುಖ್ಯ  ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದು ನಿಲಯಕ್ಕೆ ಹೆಚ್ಚುವರಿ ಅನುದಾನ ಕೊಡಿಸುವ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಇದಕ್ಕೆ ತಹಶೀಲ್ದಾರ್ ಲೋಕನಾಥ್ ಕೂಡ ಸಹಮತ ವ್ಯಕ್ತಪಡಿಸಿದರು.ಮೂಲಭೂತ ಸೌಲಭ್ಯ:

ವಸತಿನಿಲಯದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಮೂಲಭೂತ ವ್ಯವಸ್ಥೆ ಇಲ್ಲದೆ ತೊಂದರೆ ಎದುರಾಗಿದೆ. ಶೌಚಾಲಯ ದುರಸ್ತಿಗೊಳ್ಳಬೇಕಿದೆ. ರಾತ್ರಿ ವಿದ್ಯುತ್ ಇಲ್ಲದೇ ಓದಲು ತೊಂದರೆಯಾಗಿದೆ. ನಿಲಯಕ್ಕೆ ರಸ್ತೆ ಕೂಡ ಸಮರ್ಪಕವಾಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹೊನ್ನೇಗೌಡ ಮಾತನಾಡಿ, ನಿಲಯವನ್ನು ಮೇಲ್ದರ್ಜೆಗೇರಿಸಲು ಈಗಾಗಲೇ 70 ಲಕ್ಷ ಅಂದಾಜು ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಪ್ರಸ್ತಾವನೆ ಕಳುಹಿಸಲಾಗಿದೆ. ಅನುಮೋದನೆ ಸಿಕ್ಕ ಬಳಿಕ ಕಟ್ಟಡ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.ನಿಲಯದ ವಿದ್ಯಾರ್ಥಿಗಳಿಗೆ ಭಾನುವಾರ ರಾತ್ರಿಯಿಂದಲೇ ಭೋಜನ ವ್ಯವಸ್ಥೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry