ಸೋಮವಾರ, ಜೂನ್ 14, 2021
22 °C

ಊಟ ಬಲ್ಲವರ ನಿಲ್ದಾಣ ಐಟಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೋಚಂಪಲ್ಲಿ ಸೀರೆಯುಟ್ಟ ಸುಂದರಿ  ರಿಶಾ ನಗುಮೊಗದಿಂದಲೇ ಸ್ವಾಗತಿಸುತ್ತಾರೆ. ಘಟಂ ಹಾಗೂ ವಯೋಲಿನ್ ವಾದನ ಕಿವಿಗೆ ನಾದನದಿಯ ಝೇಂಕಾರ ಮುಟ್ಟಿಸುತ್ತದೆ. ಆಗಲೇ ಮತ್ತೆ ರಿಶಾ ಮೈಸೂರು ಮಲ್ಲಿಗೆಯ ಮಾಲೆಯೊಂದಿಗೆ ಬರುತ್ತಾರೆ. ಮುಡಿಯಲು ಪಿನ್ ಸಹ ಕೊಡುತ್ತಾರೆ.ಇದು ಐಟಿಸಿ ವಿಂಡ್ಸರ್‌ನ `ದಕ್ಷಿಣ್~ನಲ್ಲಿ ಅತಿಥಿಗಳಿಗೆ ನೀಡುವ ಸ್ವಾಗತ. ಇಲ್ಲೆಗ ಆಂಧ್ರ ಉತ್ಸವ ನಡೆಯುತ್ತಿದೆ. ದಕ್ಷಿಣ್‌ನಲ್ಲಿ ಪ್ರವಾಸಿಗರಿಗೆ ದಕ್ಷಿಣ ಪ್ರಾಂತೀಯ ಆಹಾರ ಸಂಸ್ಕೃತಿಯನ್ನು  ಪರಿಚಯಿಸುವ ಪ್ರಯತ್ನ ಮಾಡುತ್ತಿದೆ ಎಂದು ಹಿರಿಯ ಬಾಣಸಿಗ ಜಾರ್ಜ್ ಜಯಸೂರ್ಯ ವಿವರಿಸಿದರು.ಆಂಧ್ರ ಶೈಲಿಯ ಊಟದ ಮುಖ್ಯ ಆಕರ್ಷಣೆ ಎಂದರೆ ಚಟ್ನಿಪುಡಿಗಳು, ಉಪ್ಪಿನಕಾಯಿ ಹಾಗೂ ಚಟ್ನಿಗಳು. ಊಟದ ತಟ್ಟೆಗೆ ಒಂದೊಂದಾಗಿ ಬಡಿಸಲು ಆರಂಭಿಸಿದರೆ ಜಿಹ್ವಾಚಾಪಲ್ಯ ಜಾಗೃತಗೊಳ್ಳುತ್ತದೆ.ಮೊದಲಿಗೆ ಬಾಳೆಯ ಸಿಹಿದೋಸೆ ಹಾಗೂ ಬೇಳೆ ದೋಸೆಯೊಂದಿಗೆ ಊಟ ಆರಂಭವಾಗುತ್ತದೆ.

ಟೊಮೆಟೊ ಚಟ್ನಿ, ಹುಣಸೆ ಚಟ್ನಿ ಸವಿದಾಗ ನಾಲಗೆ ಚಪ್ಪರಿಸಿ, ನಟಿಕೆ ಶಬ್ದ ಹೊರಡಿಸದೇ ಇರಲಾರಿರಿ. ಗೊಂಗುರಾದ ಹುಳಿ, ಬೆಳ್ಳುಳ್ಳಿ ಉಪ್ಪಿನಕಾಯಿಯ ಖಾರ ಇವೆರಡೂ ಮುಖದ ಸ್ನಾಯುಗಳಿಗೆ ಉತ್ತಮ ವ್ಯಾಯಾಮವನ್ನೂ ನೀಡುವಂತಿವೆ. ಮುಖ ಕಿವುಚಿ ಆಸ್ವಾದಿಸುವ ಸುಖವೇ ಬೇರೆ.ಗೊಂಗುರಾ ದಾಲ್, ಎಲ್ಲ ತರಕಾರಿಗಳ ಮಿಶ್ರಣದ ವ್ಯಂಜನ ಜೊತೆಗೆ ಮಜ್ಜಿಗೆ ಹುಳಿ ಮುಂತಾದವುಗಳನ್ನು ಒಂದಾದ ನಂತರ ಒಂದರಂತೆ ನೀಡಲಾಗುತ್ತದೆ. ಜೊತೆಗೆ ಮಲ್‌ಬಾರ್ ಪರಾಠಾ, ಅಪ್ಪಂ, ಇಡಿಯಪ್ಪಂ ಮುಂತಾದವುಗಳನ್ನೂ ತೆಗೆದುಕೊಳ್ಳಬಹುದು.ಆಂಧ್ರ ಅಹಾರ ಉತ್ಸವದಲ್ಲಿ ಶುಭ್ರಶ್ವೇತ ಮಲ್ಲಿಗೆ ಮೃದು ಅನ್ನಕ್ಕೆ, ಘಂ ಎನ್ನುವ ತುಪ್ಪ, ಜೊತೆಗೆ ಚಟ್ನಿಪುಡಿಗಳೊಂದಿಗೆ ಹಪ್ಪಳಗಳನ್ನು ಸವಿದರೆ ಅಮ್ಮನ ಕೈ ಅಡುಗೆ ನೆನಪಾಗದೇ ಇರದು.

ಚಿಕನ್ ಪ್ರಿಯರಿಗಾಗಿ ಈ ಉತ್ಸವಕ್ಕೆಂದೇ ವಿಶೇಷವಾಗಿ ನಾಟಿ ಕೋಳಿ ಖಾದ್ಯವನ್ನು ತಯಾರಿಸಲಾಗಿದೆ.

 

ಸೀಗಡಿ ಪ್ರಿಯರಿಗಂತೂ ಗರಿಗರಿಯಾದ ಸೀಗಡಿ ದೊರೆಯುತ್ತದೆ. ಬಾಯಿಗಿಟ್ಟರೆ ಕರಗುವ, ಕುರುಕಲಿನ ಲೇಪನವಿರುವ ಸೀಗಡಿ ಕೊಬ್ಬರಿಯಷ್ಟೇ ಸ್ವಾದಿಷ್ಟವೆನಿಸುತ್ತದೆ.ಸಾಮಾನ್ಯವಾಗಿ ಸೀಗಡಿಯನ್ನು ಸಹಜ ರೀತಿಯಲ್ಲಿ ಸಂರಕ್ಷಿಸದಿದ್ದರೆ ಅದು ನಾರುನಾರೆನಿಸುತ್ತದೆ. ತಿನ್ನುವಾಗ ರಬ್ಬರ್‌ನಂತೆ ಎಳೆದಾಡಬೇಕಾಗುತ್ತದೆ. ಆದರೆ ಐಟಿಸಿ ಸಮೂಹ ಸಮುದ್ರದಿಂದಲೇ ಸಂರಕ್ಷಣೆ ಹಾಗೂ ಸಂಗ್ರಹಕ್ಕೆ ವಿಶೇಷ ತಂತ್ರಜ್ಞಾನವನ್ನು ಬಳಸುತ್ತದೆ. ತಾಜಾ ಸೀಗಡಿ ಒದಗಿಸುವಲ್ಲಿ ಐಟಿಸಿ ಯಾವತ್ತಿಗೂ ಮುಂದಿದೆ ಎನ್ನುತ್ತಾರೆ ಜಾರ್ಜ್.ಆಂಧ್ರ ಉತ್ಸವದ ಪ್ರಯುಕ್ತ ವಿಶೇಷವಾಗಿ ಹೈದರಾಬಾದ್‌ನ ಐಟಿಸಿ `ಕಾಕತೇಯ~ದಿಂದ `ಪೂತರೇಕು~ ಸಿಹಿಯನ್ನು ತರಿಸಲಾಗಿದೆ. ಬಾಯೊಳಗಿಟ್ಟರೆ ಕರಗುವ ಪೇಪರ್‌ನಂತೆ ಕಾಣಿಸುವ ಇದು ಅಪ್ಪಟ ಅಕ್ಕಿ ಗಂಜಿಯ ಖಾದ್ಯ. ಅಕ್ಕಿ ಗಂಜಿಯನ್ನು ಕೆಂಡದ ಮೇಲೆ ತಲೆ ಕೆಳಗಾಗಿಟ್ಟ ಬಾಣಲೆಯ ಮೇಲೆ ತೆಳುವಾಗಿ ಹರಡಿ ಬೇಯಿಸಲಾಗುತ್ತದೆ.ಇದು ಪೇಪರ್‌ಗಿಂತಲೂ ತೆಳುವಾಗಿರುತ್ತದೆ. ಅದರ ಮೇಲೆ ತುಪ್ಪ ಹಾಗೂ ಏಲಕ್ಕಿ ಮಿಶ್ರಿತ ಸಕ್ಕರೆಯನ್ನುದುರಿಸಲಾಗುತ್ತದೆ. ಬಾಯಿಗಿಟ್ಟರೆ ಸುಲಭವಾಗಿ ಕರಗುವ ಈ ಸಿಹಿತಿನಿಸು ಮಾಡುವುದು ಮಾತ್ರ ಅತಿ ಕಷ್ಟದ ಕೆಲಸ.ಆಂಧ್ರ ಎಂದರೆ ಸಾಕು `ಖಾರ~, `ಮಸಾಲೆ~ ಎಂಬ ನಂಬಿಕೆಯೊಂದು ಬೆಳೆದು ಬಂದಿದೆ. ಆದರೆ ಅಹಾರ ಸಂಸ್ಕೃತಿಯಲ್ಲಿ ಸಂಯೋಜನೆಯ ಪಾತ್ರ ಹಿರಿದು. ಖಾರದ ಚಟ್ನಿಪುಡಿಗೆ ತುಪ್ಪದ ಜೊತೆ ಹೇಗೋ ಮಸಾಲೆ ಬಿರಿಯಾನಿಗೆ ಮೊಸರು ಬಜ್ಜಿ ಹಾಗೆ. ಹೀಗೆ ಪ್ರತಿಯೊಂದಕ್ಕೂ `ತೋಡ್~ ಇದೆ ಎನ್ನುತ್ತಾರೆ ಜಾರ್ಜ್.ಸದ್ಯಕ್ಕೆ ಆಂಧ್ರ ಉತ್ಸವದಲ್ಲಿ ಆಂಧ್ರದ ಖಾದ್ಯಗಳನ್ನು ಪರಿಚಯಿಸುತ್ತಿರುವ ಈ ಉತ್ಸವವನ್ನು 9ರಿಂದ 18ರವರೆಗೆ ಎಂದು ಯೋಜಿಸಲಾಗಿತ್ತು. ಆದರೆ ಪ್ರವಾಸಿಗರಿಂದ ಹಾಗೂ ಸ್ಥಳೀಯರಿಂದ ದೊರೆತ ಪ್ರತಿಕ್ರಿಯೆ ನೋಡಿ, 25ರವರೆಗೆ ಈ ಉತ್ಸವವನ್ನು ಮುಂದುವರಿಸಲಾಗಿದೆ ಎಂದು ಹೆಮ್ಮೆಯ ನಗುವಿನೊಂದಿಗೆ ಹೇಳುತ್ತಾರೆ ಜಾರ್ಜ್.ಕಮಲಹಾಸನ್ ನೆನಪು

ಎರಡು ತಿಂಗಳು... ಅವರಿಲ್ಲಿ ಇದ್ರು. ಅವರಿಗಾಗ ಒಂದು ಪುಟ್ಟ ಮಗು ಇತ್ತು. ಟ್ರಾಲಿ ಎತ್ಕೊಂಡು ಓಡಾಡೋರು... ಹೀಗೆ ಜಾರ್ಜ್ ನೆನಪು ಬಿಚ್ಚಿಕೊಂಡಿತು. ಕಮಲಹಾಸನ್ ಆ ನೆನಪಿನ ಹೀರೋ.

 `ಪುಷ್ಪಕ ವಿಮಾನ~ ಚಿತ್ರೀಕರಣದ ಅವಧಿ ಅದು. ಪ್ರತಿದಿನವೂ ಊಟದ ನಂತರ ಯಾವುದು ಚೆನ್ನಾಗಿತ್ತು ಅಂತ ಹೇಳುತ್ತಿದ್ದರು.

 

ಒಂದು ದಿನ ಬಿಡುವಿನ ವೇಳೆ ಕ್ಯಾಂಟೀನ್ ಹುಡುಗರೆಲ್ಲ ಸೇರಿ ಕ್ರಿಕೆಟ್ ಆಡುತ್ತಿದ್ದರು. ನಾವೂ ಸೇರಿಕೊಂಡಿದ್ದೆವು. ಸ್ನೇಹಮಯ ವಾತಾವರಣ ಐಟಿಸಿಯಲ್ಲಿ ಮೊದಲಿನಿಂದಲೂ ಇದೆ. ಕಮಲ್ ದೂರ ನಿಂತು ನೋಡುತ್ತಿದ್ದರು. `ಹೀರೊ~ ನಿಂತು ನೋಡ್ತಾರೆ ಎಂಬ ಪರಿವೆಯೂ ಇರಲಿಲ್ಲ.ಆದರೆ ಇದ್ದಕ್ಕಿದ್ದಂತೆ ಅವರು ಟ್ರಾಲಿಯನ್ನು ಮರದ ಕೆಳಗೆ ನಿಲ್ಲಿಸಿದವರೇ ಆಟಕ್ಕೆ ಬಂದರು. ಎರಡೂವರೆ ಗಂಟೆ ಆಡಿದರು. ಮಹಾನ್ ಕಲಾವಿದ. ಒಂಚೂರು ಅಹಂಕಾರವೇ ಇಲ್ಲ ಎನ್ನುತ್ತಾರೆ ಜಾರ್ಜ್.31 ವರ್ಷಗಳಿಂದ ಐಟಿಸಿಯೊಂದಿಗೆ ಬಾಂಧವ್ಯ ಹೊಂದಿರುವ ಜಾರ್ಜ್ ಬತ್ತಳಿಕೆಯಲ್ಲಿ ಇಂಥ ಹಲವಾರು ನೆನಪುಗಳಿವೆ. ಕಮಲ್‌ಹಾಸನ್ ನಂತರ ಅತಿಯಾಗಿ ಮೆಚ್ಚುವ ಇನ್ನೊಬ್ಬ ವ್ಯಕ್ತಿ ಎಂದರೆ ಇನ್ಫೋಸಿಸ್‌ನ ನಾರಾಯಣಮೂರ್ತಿ. ಅವರು ಬಂದರೆ ಜಾರ್ಜ್ ಅವರೊಂದಿಗೆ ಮಾತಾಡುತ್ತಾರೆ. `ಸರ್~ ಎಂದೇ ಸಂಬೋಧಿಸುತ್ತಾರೆ.

 

ಅವರ ಸರಳತನವನ್ನು ಎಲ್ಲರೂ ಕಲಿಯಬೇಕಿದೆ ಎನ್ನುವ ಜಾರ್ಜ್‌ಗೆ ಈ ವೃತ್ತಿಯೆಂದರೆ ಇನ್ನಿಲ್ಲದ ಪ್ರೀತಿ.ಹಣ ಕೊಟ್ಟವ ಮರೆಯುತ್ತಾನೆ. ಹಣ ಪಡೆದವನೂ ಮರೆಯುತ್ತಾನೆ. ಆದರೆ ಕೊನೆಯವರೆಗೂ ನೆನಪಿರುವುದು ಕೈರುಚಿ ಮಾತ್ರ.ರುಚಿಕಟ್ಟಾದ ಅಡುಗೆ ಮಾಡುವ, ಊಟ ನೀಡುವ ಈ ಕೆಲಸವೆಂದರೆ ಅತಿಯಾದ ಪ್ರೀತಿ ಎನ್ನುತ್ತಾರೆ ಅವರು.ಆರ್ದ್ರ ಹಾಗೂ ಆಪ್ತ ಆತಿಥ್ಯಕ್ಕೆ ಐಟಿಸಿ ವಿಂಡ್ಸರ್ `ದಕ್ಷಿಣ್~ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ ಮತ್ತು ಮುಂಗಡ ಕಾಯ್ದಿರಿಸಲು: 2226 9898. 

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.