ಬುಧವಾರ, ಜೂನ್ 23, 2021
28 °C

ಊಟ ಸ್ಥಗಿತ: ವಿದ್ಯಾರ್ಥಿಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔರಾದ್: ಊಟ ಹಾಕದಿರುವುದನ್ನು ವಿರೋಧಿಸಿ ಇಲ್ಲಿಯ ಹಿಂದುಳಿದ ವರ್ಗದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ವಿದ್ಯಾರ್ಥಿಗಳು ಸೋಮವಾರ ಮಿಂಚಿನ ಪ್ರತಿಭಟನೆ ನಡೆಸಿದರು.ಇಲ್ಲಿ 150 ವಿದ್ಯಾರ್ಥಿಗಳಿದ್ದು, ಬೆಳಿಗ್ಗೆ ಕೆಲ ವಿದ್ಯಾರ್ಥಿಗಳಿಗೆ ಸಾಕಾಗುವಷ್ಟು ಮಾತ್ರ ಉಪಹಾರ ತಯಾರಿಸಲಾಗಿದೆ. ಈ ನಡುವೆ ಮಧ್ಯಾಹ್ನ 3 ಗಂಟೆಯಾದರೂ ಅಡುಗೆ ತಯಾರಿಸಿ ಊಟ ಬಡಿಸದಿರುವುದರಿಂದ ಕೆರಳಿದ ವಿದ್ಯಾರ್ಥಿಗಳು ವಸತಿ ನಿಲಯ ಆವರಣದಲ್ಲೇ ಪ್ರತಿಭಟನೆ ನಡೆಸಿದರು. ನಮಗೆ ಬೆಳಿಗ್ಗೆ ಉಪಹಾರ ಸಿಕ್ಕಿಲ್ಲ. ಮಧ್ಯಾಹ್ನದ ಊಟವೂ ಸಿಗದೆ ನಮ್ಮ ತಲೆ ಸುತ್ತುತ್ತಿದೆ ಎಂದು ಹಾಸ್ಟೆಲ್ ಅವ್ಯವಸ್ಥೆ ವಿರುದ್ಧ ವಿದ್ಯಾರ್ಥಿಗಳು ಹಿಡಿಶಾಪ ಹಾಕಿದರು.ನಿತ್ಯ ಸಮಯಕ್ಕೆ ಸರಿಯಾಗಿ ಊಟ ಬಡಿಸುವುದಿಲ್ಲ. ಬಡಿಸಿದರೂ ಅದು ಗುಣಮಟ್ಟದ ಊಟ ಇರುವುದಿಲ್ಲ. ತಟ್ಟೆ ಇಲ್ಲದೆ ಪೇಪರ್ ಮೇಲೆ ಊಟ ಮಾಡಬೇಕಾಗಿದೆ. ಗ್ಲಾಸ್ ಇಲ್ಲದೆ ಶೌಚಾಲಯದಲ್ಲಿ ಬಳಸುವ ಲೋಟದಿಂದ ನೀರು ಕುಡಿಯಬೇಕಾಗಿದೆ. ವಸತಿ ನಿಲಯ ಮೇಲ್ವಿಚಾರಕರು ನಾಲ್ಕೈದು ದಿನಕ್ಕೊಮ್ಮೆ ಬರುತ್ತಾರೆ. ಈ ವಿಷಯ ಸಂಬಂಧಿತ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಇಲಾಖೆ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶ್ರೀರಂಗ ಪರಿಹಾರ, ಮುಖ್ಯಾಧಿಕಾರಿ ಅಶೋಕ ಕಾಳಗಿ ಮೇಲ್ವಿಚಾರಕ ವಿಶ್ವನಾಥ ಅವರನ್ನು ತರಾಟೆಗೆ ತೆಗೆದುಕೊಂಡರು. ಬೇಸಿಗೆ ಬಿಸಿಲಲ್ಲಿ ವಿದ್ಯಾರ್ಥಿಗಳು ಉಪವಾಸ ಉಳಿದು ಏನಾದರೂ ಅವಘಡ ಸಂಭವಿಸಿದರೆ ಯಾರು ಜವಾಬ್ದಾರರು ಎಂದು ಅವ್ಯವಸ್ಥೆ ವಿರುದ್ಧ ಕಿಡಿ ಕಾರಿದರು.

ಮೇಲ್ವಿಚಾರಕ ವಿಶ್ವನಾಥ ಅವರನ್ನು ತಕ್ಷಣ ಇಲ್ಲಿಂದ ಬಿಡುಗಡೆ ಮಾಡುವಂತೆ ತಾಲ್ಲೂಕು ಪಂಚಾಯ್ತಿ ಮುಖ್ಯಾಧಿಕಾರಿಗಳು ಆದೇಶ ಮಾಡಿದರು. ಮತ್ತು ಠಾಣಾಕುಶನೂರ ವಸತಿ ನಿಲಯ ಮೇಲ್ವಿಚಾರಕ ಗದಗೆಪ್ಪ ಅವರಿಗೆ ಸದ್ಯದ ಕಾರ್ಯಭಾರ ವಹಿಸಿಕೊಟ್ಟು ವಿದ್ಯಾರ್ಥಿಗಳಿಗೆ ತಕ್ಷಣ ಊಟದ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.